ಸೆಕೆಂಡ್ ಇನ್ನಿಂಗ್ಸು
ಮೊದಲ ಪ್ರೇಮದ ಕುರುಹುಗಳ
ಎದೆಯಿಂದ ಅಳಿಸಬಹುದೇ?
ನಿತ್ಯ ನೈಟಿನಲಿ ನಿದಿರೆ ಕದಿಯುವ
ಆ ಹುಚ್ಚು ನೆನಪುಗಳ
ಸೆರೆಮನೆಗೆ ಕಳಿಸಬಹುದೇ?
ಅಂದು ರಕ್ಷಾ ಬಂಧನ -
ಎಷ್ಟೋ ಲವ್ ಸ್ಟೋರಿಗಳಿಗೆ
ರಾಖಿ ಹಾಕಿತ್ತು ಚೂರಿ
ಎದೆಯೆ ಆಗಿತ್ತು ಗೋರಿ
ಕೈಗಳಾದಾಗ ರಕ್ಷೆಯಲಿ ಬಂಧಿ.
ಆದರೆ ಸಖತ್ ಡಿಫರೆಂಟ್ ರೀ

ರಾಖಿಯೇ ಹಾಡಿತ್ತು ಪ್ರೇಮಕ್ಕೆ ನಾಂದಿ.
ಕೈಗಳನು ಮುಂದೆ ಚಾಚಿ
ಕಟ್ಟಿಸಿಕೊಳ್ಳುತ್ತಿದ್ದೆ ರಾಖಿ
ಕಣ್ಣುಗಳು ಬೆರೆತವು, ಕರೆಂಟು ಹೊಡೆಯಿತು
ಅವಳ ಕೈಗೆ ಕೈ ತಾಕಿ.
ರಾಖಿ ಕಟ್ಟಿದ ಅವಳಿಗೆ
ನಾನಾಗಬೇಕಿತ್ತು ಬ್ರದರ್ರು
ಆದರೆ ಎದೆಯಲ್ಲಿದ್ದ ಕಾಮನೆಗಳ
ಕಾಮನಬಿಲ್ಲಿಗೆ ಅವಳು ಹಚ್ಚಿದ್ದಳು
ಕೋಟಿ ಕೋಟಿ ಕಲರ್ರು.
ಮನಸ್ಸಿನ ಕೊಳದಲ್ಲಿ ಇಳಿದ
ಅವಳೊಂದು ಬಣ್ಣದ ಮೀನು
ಮೀನ ಹಿಡಿಯಲು ಗಾಳ ಇಳಿಸಿದ
ನನಗಿನ್ನು ಏಜು ತರ್ಟೀನು..!
ಮುಖದಲ್ಲಿ ಮೀಸೆ ಮೂಡುವ ಮೊದಲೇ
ಎದೆಯಲ್ಲಿ ಆಸೆ ಮಾಡಿತ್ತು ತರಲೆ
ನನ್ನೊಳಗೆ ನನಗೆ ತಿಳಿಯದೆ
ಕಟ್ಟಿದ ಕನಸುಗಳು ನೂರಾರು
ನನಗೆ ಇಂದಿಗೂ ತಿಳಿಯದು
ಅದಕ್ಕೆಲ್ಲ ಹೊಣೆಯಾರು??
ಪ್ರಾಯದ ಹೊಸ್ತಿಲಲ್ಲೇ ಆಗಿತ್ತು
ನನಗೂ ವಿರಹ ವೇದನೆ
ತಡೆಯಲಾರದೆ ನಾ ಮಾಡಿದ್ದೆ
ನನ್ನ ಪ್ರೇಮ ನಿವೇದನೆ
ನನ್ನ ಪ್ರಪೋಸಲ್ಲು ಅವಳಿಗೆ
ತಂದಿತ್ತು ಭರಿಸಲಾಗದ ಅಚ್ಚರಿ

ನಾ ಯೋಚಿಸುವ ಮೊದಲು ಬೇರೆ ದಾರಿ
ವೀಕಾಗಿ ಹೋಯ್ತು ನನ್ನೆದೆಯ ಬ್ಯಾಟರಿ
ಹೊತ್ತಿಕೊಂಡಿತು ಎದೆಯಾಳದಲ್ಲಿ
ಧಗಧಗನೇ ಉರಿವ ಉರಿ.
ನನ್ನದೂ ಅದೇ ಕಥೆಯಾಯ್ತು
ಮತ್ತೆ ತಂದಳು ರಾಖಿ ಎಂಬ ವೆಪನ್ನು
ಈ ಬಾರಿ ಮಾಡಿದ್ದಳು ಪ್ರೀತಿಯ ದಫನು.
ಮೊದಲ ರಾಖಿಯಿಂದ ಲವ್ವು
ಬೀರಿತ್ತು ಒಲವಿನ ನಗೆ
ಈ ರಾಖಿ ಹಾಕಿತ್ತು ಆ ಲವ್ವಿಗೆ ಹೊಗೆ.
ದೊಡ್ಡವರು ಸುಮ್ಮನೇ ಹೇಳಿಲ್ಲ
ಒಳ್ಳೆಯದಕ್ಕಾಗಿಯೇ ಆಗುವುದೆಲ್ಲ
ಮನದಲ್ಲಿ ಮೂಡಿತ್ತು ಹೊಸದೊಂದು ಕನಸು
ಶುರುವಾಗುವುದಿತ್ತು ಸೆಕೆಂಡ್ ಇನ್ನಿಂಗ್ಸು.
ಜಾಸ್ತಿ ದಿನ ಇಟ್ಟುಕೊಳ್ಳಬಾರದಂತೆ
ಖಾಲಿ ಹೊಡೆಯುತ್ತಿರುವ ಹಾರ್ಟು
ಅದಕೆಂದೆ ಕರೆಸಿದ್ದೆ ಮತ್ತೊಬ್ಬಳನು
ಮಾಡಲು ಪ್ರೇಯಸಿಯ ಪಾರ್ಟು.
ಬಾಡಿಯಲೇ ಕೊಳೆಯುತ್ತಿದ್ದ ಹಾರ್ಟಿಗೆ
ಬಾಡಿಗೆಗೆ ಎಂದು ಬಂದಳು
ಬಾಡಿ ಹೋಗುತ್ತಿದ್ದ ಪ್ರೀತಿಗೆ
ಮಳೆನೀರ ತಂದಳು.
ಬಾಡಿಗೆ ಮನೆ ಅವಳಿಗೆ ಸ್ವಂತವಾಯ್ತು
ಅಂದಿಗೆ ನನ್ನ ನೋವೆಲ್ಲ ಅಂತ್ಯವಾಯ್ತು.
ಪ್ರೀತಿಯ ಹೂ ಅರಳಿ ನಿಂತಿದೆ
ಇದು ಅವಳ ಕೊಡುಗೆ
ನೀವೇನು ಹೇಳುವಿರಿ? ಸೇರಬೇಕು ತಾನೆ
ಈ ಹೂ ಅವಳ ಮುಡಿಗೆ?
-ತ್ರಿವಿಕ್ರಮ