Saturday, March 16, 2013

ಚಂದ್ರಗನ್ನಡಿ

 ಚಂದ್ರಗನ್ನಡಿ

ಟೆರೆಸಿನ ಮೇಲೆ ಕುಳಿತು
ಕತ್ತೆತ್ತಿದರೆ ಕಾಣುತ್ತಿದ್ದ ಚಂದಿರ
ಆಕಾಶವೇ ಆಗಿರಲು ಬಿಳಿಯ ಹಾಳೆ
ಪೆನ್ನಿದ್ದರೆ ಬರೆಯಬಹುದಿತ್ತು ಚುಕ್ಕಿಗಳಿಗೊಂದು ಓಲೆ
ಹಬ್ಬಿರಲು ಹಾಳು ಬೆಳದಿಂಗಳು ದೂರ ದಿಗಂತದವರೆಗೆ
ಹೋಗುತ್ತಿತ್ತು ಕರೆನ್ಸಿ ನಾ ಮಾಡಿದ್ದ ಪೋನ್ ಕರೆಗೆ..!

ನನ್ನವಳನ್ನು ಕೇಳಿದೆ - "ಹುಣ್ಣಿಮೆಯೇನೇ ಇಂದು?
ನಗುತ್ತಿರುವನು ಚಂದಿರ, ನೋಡೆಯಾ ಹೊರಬಂದು?"
ಅವಳೆಂದು ಕೊಟ್ಟಿದ್ದು ಕಾಣೆ ನೇರವಾಗಿ ಉತ್ತರ
ಪ್ರಶ್ನೆಗೊಂದು ಪ್ರಶ್ನೆ ಹಾಕಿ
ಹರಿಸುವಳು ಕಣ್ಣಿನಲ್ಲಿ ನೆತ್ತರ.

ಅವಳೆಂದಳು - "ಬರಬೇಕು ನಾ ಹೊರಗೆ ಏಕೆ?
ನಗುತ್ತಿರುವನೇ ಚಂದಿರ?
ನಿನಗೆಲ್ಲೋ ಅರೆಹುಚ್ಚು, ಜೋಕೆ."

ನಾನೇನೋ ಛಲಬಿಡದ ತ್ರಿವಿಕ್ರಮ
ಆದರೂ ಅವಳ ಮುಂದೆ ನೆಡೆಯದು ನನ್ನ ಪರಾಕ್ರಮ
ಹೊರಗೆ ಕರೆಯಲು ಬೇಕಾಯಿತು ಅತಿ ಪರಿಶ್ರಮ
ಹಲವು ನೈಸುಗಳ ನಂತರ
ಹಲವು ಪ್ಲೀಸುಗಳ ನಂತರ
ಓಗೊಟ್ಟಳು ನನ್ನ ಕರೆಗೆ
ಕೊರಗುತ್ತಲೇ ಬಂದಳು ಹೊರಗೆ

ಮುಂದಿನದು ಅಚ್ಚರಿಗಳ ಸರಣಿ -
ಒಮ್ಮೆಗೆ ಇಮ್ಮಡಿಯಾಯ್ತು ಚಂದಿರನ ಹೊಳಪು
ಆಗಸದಿ ತುಂಬಿತು ನಿರ್ಮಾ ಸೋಪಿನ ಬಿಳುಪು
ತಿರುಗಿದೆ ಚಂದಿರನತ್ತ
ಮತ್ತೊಮ್ಮೆ ನೋಡಿದೆ, ಮಗದೊಮ್ಮೆ ನೋಡಿದೆ
ಕಣ್ಮುಚ್ಚಿ ನೋಡಿದೆ, ಬಾಯ್ ತೆರೆದು ನೋದಿದೆ

ಸಂಶಯವೇ ಇಲ್ಲ..!
ಮೂತಿಗೆ ಸ್ವಲ್ಪ ದೊಡ್ಡದೇ ಆದ ಮೂಗು
ಅದರ ಕೆಳಗಿದ್ದ ತುಟಿಗಳಲಿ ಅರಳಿದ್ದ ನಸುನಗು
ಕಣ್ಣ ಮೇಲೆ ಹರಿದಿದ್ದ ಆ ನೀಳ ಹುಬ್ಬು
ನೋಡೀ ಕಣ್ತುಂಬಿಬಂತು ದೃಷ್ಟಿಯಾಯ್ತು ಮಬ್ಬು
ಆದರ ನಡುವೆಯೇ ಚುಕ್ಕಿಯಂತೆ ಹೊಳೆಯುತ್ತಿತ್ತು
ಅವಳ ಮುತ್ತಿನ ಮೂಗುತಿ
ಆಕಡೆಯಿಂದ ಅವಳು ಕಿರುಚಿದಳು
"ಹೇಯ್ ಮಾತಾಡೋ ಕೋತಿ"

ನಾ ತೊದಲುತ್ತಾ ನುಡಿದೆ -
"ಚಿನ್ನಮ್ಮಾ ಚಂದಿರನ್ನೊಮ್ಮೆ ಚೂಡು"
"ಎಂದುಕುರಾ ಹುಡುಗಾ"
ರಾಗವೆಳೆಯುತ ಕತ್ತೆತ್ತಿದಳಷ್ಟೇ..!

ಅಷ್ಟೇ..
ಆ ಕಣ್ಣಲ್ಲಿ ಕಂಡೆನು ಅಚ್ಚರಿಯ ಛಾಯೆ
ಮೂಕವಿಸ್ಮಿತವಾಗಿಸಲು ಚಂದಿರನ ಮಾಯೆ
ತೆರೆದವಳು ಮತ್ತೆ ಮುಚ್ಚಲೇ ಇಲ್ಲ ಬಾಯೇ..!

ಕಣ್ಣುಗಳು ಕಲೆತವು ಲೋಕವನು ಮರೆತವು
ಎರಡು ಜೀವಗಳೂ ಒಂದಾಗಿ ಬೆರೆತವು
ಆ ಬೆಳ್ಳಂಬೆಳಕಿನಲೆ ಇಡಿ ರಾತ್ರಿ ಸರಿಯಿತು
ಮಾತಾಡುವ ಮೊದಲೆ ಮತ್ತೆ ಬೆಳಕು ಹರಿಯಿತು

ನಾನೇ ಮುರಿದೆ ಮೌನವನು -
"ಏನಾದ್ರು ಮಾತಾಡೇ"
ಕತ್ತು ಆಡಿಸುತ ನಕ್ಕಳಷ್ಟೇ ಬಾಯ್ತುಂಬಾ
ಚಂದ್ರನಲ್ಲಿ ಕನ್ನಡಿಯಂತೆ ನಾಚಿತವಳ ಪ್ರತಿಬಿಂಬ

-ತ್ರಿವಿಕ್ರಮ

Saturday, March 02, 2013

ಗಡಿಪಾರು

ಗಡಿಪಾರು

ಮನಸ್ಸಿನ ಮೂಲೆಯಲ್ಲಿದ್ದ
ಸಂತಸದ ಆ ನಗು
ಜೀವ ಕಳೆದುಕೊಂಡಿತ್ತು.
ಆದರೂ, ಉಸಿರಿತ್ತು.
ಒಳಗಿದ್ದ ನೋವೆಲ್ಲ ನದಿಯಾಗಿ ಹರಿದಿತ್ತು.
ದಣಿದಿತ್ತು, ಸಾಗರವ ಹುಡುಕಿ ಹುಡುಕಿ..

ವರುಷಗಟ್ಟಲೆ ಹಿಡಿದಿದ್ದ
ಪ್ರೀತಿ ಪ್ರೇಮದ ಪಾಶ
ಸಡಿಲಗೊಂವಿತ್ತು.
ಆದರೂ, ಬಂಧನದಲ್ಲಿತ್ತು.
ಮನಸ್ಸಿನ ಕೊಳ ಬತ್ತಿಹೋಗಿತ್ತು.
ಹೊರತೆಗೆದಿತ್ತು, ನೆನಪುಗಳ ಕೆದಕಿ ಕೆದಕಿ..

ಅಳತೆಯಿಲ್ಲದ ಮನಸು
ಒಲವಿನ ಸುಳಿಯಲ್ಲಿ
ಪ್ರೀತಿಯನು ಉಳಿಸಿತ್ತು.
ಆದರೂ, ಗಡಿಪಾರು ಮಾಡಿತ್ತು.
ಮಾಡಿರದ ತಪ್ಪಿಗೆ ಶಿಕ್ಷೆಯನು ನೀಡಿತ್ತು.
ನೊಂದಿತ್ತು, ಜೀವನವೆ ಬದುಕಿ ಬದುಕಿ..

-ತ್ರಿವಿಕ್ರಮ