Monday, June 19, 2017

ಬ್ಯಾಕ್ ಸ್ಪೇಸ್ ಬೆನ್ನೇರಿ




ಇದ್ದಕ್ಕಿದ್ದ ಹಾಗೆ ಅವನು ಬರೆಯಲು ಕೂರುತ್ತಾನೆ. ಬರೆಯುವುದೆಂದರೆ ಬರೆಯುವುದಲ್ಲ. ಲ್ಯಾಪ್ ಟಾಪಿನ ಪರದೆಯ ಮೇಲಿನ ಅಸ್ತಿತ್ವವಿಲ್ಲದ ಕಾಗದದ ಮೇಲೆ ಕೀಬೋರ್ಡು ಕುಟ್ಟಿ ಪದಗಳ ಮೂಡಿಸುವುದು.. ಕೈಗೆ ಪೆನ್ನು ಕೊಟ್ಟು ಬರೆಯಪ್ಪ ರಾಜ ಅಂದರೆ ನಾಲ್ಕು ಸಾಲು ಬರೆಯುವುದರಲ್ಲಿ ಕೈ ಸೋತು ಅಕ್ಷರಗಳು ಅತ್ತಿತ್ತ ವಾಲತೊಡಗುತ್ತವೆ. ಪೆನ್ನು ಹಿಡಿದು ಬರೆವ ಅಭ್ಯಾಸ ಎಂದೋ ತಪ್ಪಿ ಹೋಗಿದೆ. ಆದರೆ ಲ್ಯಾಪ್ ಟಾಗು ತೆಗೆದಿಟ್ಟುಕೊಟ್ಟರೆ ಮಾತ್ರ ಕೈಬೆರಳುಗಳು ಕುದುರೆಗಳಾಗುತ್ತವೆ. ಕುಂಟೇಬಿಲ್ಲೆ  ಆಟವಾಡತ್ತಿರುವ ಪುಟ್ಟ ಹುಡುಗಿಯ ಕಾಲುಗಳಂತೆ ಅವನ ಕೈಬೆರಳುಗಳು ಆ ಕೀ ಇಂದ ಈ ಕೀಗೆ ನೆಗೆನೆಗೆದು ಖುಷಿಪಡುತ್ತವೆ. ಆ ಕೀಬೋರ್ಡಿನ ಟಪಟಪ ಸದ್ದು ಕೇಳುವುದೆಂದರೆ ಅವನ ಕಿವಿಗೊಂತರ ಹಿತ. ಇದಕ್ಕೆ ಮೊದಲು ಹಾಳೆಯ ಮೇಲೆ ಬರೆಯುತ್ತಿದ್ದಾಗ ಪೆನ್ನಿಂಕಿನ ವಾಸನೆ ಮೂಗಿಗೆ ಹಿತವಾಗುತ್ತಿದ್ದ ಹಾಗೆ.

ಕೀಬೋರ್ಡಿನಲ್ಲಿ ಅಷ್ಟೆಲ್ಲಾ ಪದಗಳಿದ್ದರೂ ಆಗೊಮ್ಮೆ ಈಗೊಮ್ಮೆ ಬಳಸುವ ಬರೆದಿದ್ದನ್ನೆಲ್ಲ ಅಳಿಸುವ ಬ್ಯಾಕ್ ಸ್ಪೇಸು ಕೀ ಬೋರ್ಡಿನಲ್ಲೇ ಅವನಿಗೆ ಬಹಳ ಇಷ್ಟವಾದ ಕೀ. ಈಗ ತಾನೆ ತಾನು ಬರೆದದ್ದನ್ನು ಬರೆದೇ ಇಲ್ಲವೆಂಬಂತೆ ಅಳಿಸಿಬಿಡಬಹುದು. ಮೈಮರೆತು ಮಾಡಿದ ತಪ್ಪುಗಳನ್ನು ಅಳಿಸಿ ಸರಿಮಾಡಿಬಿಡಬಹುದು. ಹೀಗೆ ಹಿಂದೆ ಮಾಡಿದ ತಪ್ಪುಗಳನ್ನು ಅಳಿಸಿ ತಿದ್ದಿಕೊಳ್ಳುವ ಭಾಗ್ಯವನ್ನು ಮತ್ಯಾರು ಕೊಟ್ಟಾರು? ಆದರೆ ಅದೊಂದು ಬ್ಯಾಕ್ ಸ್ಪೇಸ್ ಇಲ್ಲದಿದ್ದರೆ? ಅವನು ಯೋಚಿಸುತ್ತಾ ಕೂರುತ್ತಾನೆ. ಡಾಕ್ಯುಮೆಂಟಿನ ಹಾಳೆಗಳು ತಪ್ಪು ಸರಿ ಪದಗಳಿಂದ ತುಂಬಿ ತುಳುಕುತ್ತಿರುತ್ತು. ಓದುವವರಿಗೆ ಸರಿ ಯಾವುದು ತಪ್ಪು ಯಾವುದು ತಿಳಿಯದೆ ಗೊಂದಲಕ್ಕೀಡಾಗುತ್ತಿದ್ದರು. ಸಾವಿರ ತಪ್ಪುಗಳಿದ್ದರೂ ಹೊಟ್ಟೆಗೆ ಹಾಕಿಕೊಂಡು ಸರಿಯಾದುದನ್ನು ಮಾತ್ರ ಉಳಿಸುತ್ತದೆ ಈ ಬ್ಯಾಕ್ ಸ್ಪೇಸ್. ಅಂದರೆ ತಾನು ಇದುವರೆಗು ಬರೆದ ಪದಗಳೆಷ್ಟಿದೆಯೋ ಅದರ ಹತ್ತರಷ್ಟು ನೂರರಷ್ಟು ಪದಗಳನ್ನು ಈ ಬ್ಯಾಕ್ ಸ್ಪೇಸ್ ನುಂಗಿಕೊಂಡಿದೆ.

ಇದ್ದಕ್ಕಿದ್ದಂತೆ ಅವನ ಕಣ್ಣಿಗೆ ಬ್ಯಾಕ್ ಸ್ಪೇಸ್ ವಿಕಾರ ಹಸಿವಿನ ಪದಭಕ್ಷಕನಂತೆ ಕಾಣತೊಡಗಿತು. ಸರಿಯಾದ ಪದಗಳೋ, ತಪ್ಪು ಪದಗಳೋ ಅಂತೂ ಪದಗಳು ಪದಗಳೇ ತಾನೆ? ಹೀಗೆ ಪದಗಳನ್ನು ನುಂಗುವ ಅಧಿಕಾರ ಈ ಬ್ಯಾಕ್ ಸ್ಪೇಸಿಗೆ ಕೊಟ್ಟವರ್ಯಾರು? ತಾನೋ? ಅಥವಾ ಕಂಪ್ಯೂಟರನ್ನು ಕಂಡುಹಿಡಿದ ವಿಜ್ಞಾನಿಯೋ? ಈ ಬ್ಯಾಕ್ ಸ್ಪೇಸು ನುಂಗಿದ ಪದಗಳಲ್ಲಿ ಒಂದಷ್ಟನ್ನು ಅನ್ ಡೂ ಮಾಡಿ ಕಕ್ಕಿಸಬಹುದು. ಆದರೆ ಮಿಕ್ಕ ಪದಗಳೆಲ್ಲಾ ಎಲ್ಲಿ ಹೋದವು?

ಛೆ..! ತನ್ನ ಕಥೆ ಕವಿತೆಗಳಲ್ಲಿ ತುಂಬಿಸಿದ್ದ ಆದರೆ ಆ ಕ್ಷಣಕ್ಕೆ ಹೊಂದದ ಎಷ್ಟೋ ಪದಗಳನ್ನು ಈ ಬ್ಯಾಕ್ ಸ್ಪೇಸ್ ನುಂಗಿ ನೀರು ಕುಡಿದಿತ್ತೋ? ತನ್ನ ಹಿಂದಿನ ಕಥೆಯಲ್ಲಿ ಊರಿಗೆ ಹೊರಟ ಸುಖೇಶ ಹಿಂತಿರುಗಿ ನೋಡಲು ಜಾನಕಿ ಕಣ್ಣೀರು ಒರೆಸಿಕೊಂಡಳೆಂದು ಬರೆದಿದ್ದನ್ನು ಮುಲಾಜಿಲ್ಲದೆ ಅಳಿಸಿದ ಬ್ಯಾಕ್ ಸ್ಪೇಸು ರಸ್ತೆ ತಿರುವಿನಲ್ಲಿದ್ದ ಊರಿನ ಬೋರ್ಡನ್ನು ನೋಡುವಂತೆ ಮಾಡಿತು. ಇದರಿಂದ ಪಾಪ ಸುಖೇಶನಿಗೆ ಜಾನಕಿಯ ಪ್ರೀತಿ ಆ ಕ್ಷಣಕ್ಕೆ ತಿಳಿಯಲೇ ಇಲ್ಲ. ಹೀಗೆ ಎಷ್ಟು ಕಥೆಗಳ, ಎಷ್ಟು ಪಾತ್ರಗಳ ದಿಕ್ಕನ್ನು ಬದಲಾಯಿಸಿದೆ. ಕಥೆಯ ಪಾತ್ರಗಳೇಕೆ? ನಾನೇ ಇಲ್ಲವೆ? ನನ್ನ ಜೀವನದ ದಿಕ್ಕನ್ನೂ ಬದಲಾಯಿಸಿತು ಇದು.  ಪೀಯೂಸಿಯಲ್ಲಿದ್ದಾಗ ಅವಳಿಗೆ ಬರೆದಿದ್ದ ಇಮೇಲು ಇತ್ತಲ್ಲ? ನೇರವಾಗಿ ಹೇಳಲಾಗದ ಎಷ್ಟೋ ಮಾತುಗಳನ್ನು ಇಮೇಲಿನಲ್ಲಿ ತುಂಬಿಸಿದ್ದೆ. ಆದರೆ ನಾ ಬರೆದಂತೆ ಬರೆದಂತೆ ಅದನ್ನೆಲ್ಲಾ ಏನೋ ಮಹಾ ತಪ್ಪುಗಳೆಂಬಂತೆ ಅಳಸಿಹಾಕುತ್ತಿತ್ತು ಈ ಬ್ಯಾಕ್ ಸ್ಪೇಸ್. ಇದು ಇರದಿದ್ದರೆ ಅಂದೇ ನಾನವಳಿಗೆ ಎಲ್ಲಾ ಹೇಳಿ ಇಷ್ಟು ಹೊತ್ತಿಗೆ….

ಹೀಗೆ ಯೋಚನೆಗಳು ಹರಿಯತೊಡಗಿದಂತೆ ಅವನಿಗೆ ಬ್ಯಾಕ್ ಸ್ಪೇಸಿನ ಮೇಲೆ ದ್ವೇಷ ಹುಟ್ಟತೊಡಗಿತು. ಇನ್ನೆಂದು ತನಗೆ ಅದರ ಸಹವಾಸ ಬೇಡವೆಂದು ನಿರ್ಧರಿಸಿದ. ಬ್ಯಾಕ್ ಸ್ಪೇಸ್ ಒತ್ತುವುದನ್ನೇ ಬಿಟ್ಟುಬಿಟ್ಟ. ತಪ್ಪಿಗಳ ಮೇಲೆ ತಪ್ಪುಗಳಾಗತೊಡಗಿದವು. ಆದರೆ ಅಪ್ಪಿತಪ್ಪಿಯೂ ಪಿ ಅಕ್ಷರದ ತನ್ಅಕ ಹೋದ ಅವನ ಕೈ ಬ್ಯಾಕ್ ಸ್ಪೇಸಿನ ಬೆನ್ನು ಸವರಲಿಲ್ಲ. ತಪ್ಪಾದರೆ ಆಗಲಿ. ಅವಳಿಗೆ ಎಲ್ಲಾ ಹೇಲದೆ ನಾನು ಮಾಡಿದ ತಪ್ಪಿನ ಮಿಂದೆ ಈ ತಪ್ಪುಗಳೆಲ್ಲ ಚಿಕ್ಕವೆನಿಸತೊಡಡಗಿತು. ಆ ತಪ್ಪು ಮಾಡಿಸಿದ್ದು ಿದದೇ ಬ್ಯಾಕ್ ಸ್ಪೇಸ್. ಇಂದು ಆಕೆ ಮತ್ತೊಬ್ಬನ ಪಾಲಾಗಿದ್ದಕ್ಕೆ ಈ ಬ್ಯಾಕ್ ಸ್ಪೇಸೆ ಕಾರಣವೆಂದು ತನಗೆ ತಾನೇ ಹೇಳಿಕೊಂಡ. ಅದರ ಮೇಲೆ ಸೇಡು ತೀರಿಸಿಕೊ್ಳ್ಳುವನಿದ್ದ. ಻ದನ್ನು ಕೀ ಬೋರ್ಟಿನಿಂದ ಕಿತ್ತು ತೆಗೆಯುವನಿದ್ದ. ಪದಭಕ್ಷಕನ ಶಿಕ್ಷಿಸುವನಿದ್ದ.

-ತ್ರಿವಿಕ್ರಮ

Friday, June 02, 2017

ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ


ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ..!
ಕ್ಯಾಮರಾನೇ ನನ್ನ ಕಂಡು
ಕ್ಯಾಮರಾನೇ ನನ್ನ ಕಂಡು
ಕಣ್ಣನು ಹೊಡೆಯಿತಮ್ಮ..

ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ..!

ನೀನೇ ನೋಡು ರೀಸೆಂಟ್ ಪೋಟೋಸ್
ಪೋನು ಗ್ಯಾಲರಿಯಲ್ಲಿ
ಹೇಗೆ ಸೆಲ್ಫಿ ತೆಗೆಯಲಿ ಅಮ್ಮಾ
ಹೇಗೆ ಸೆಲ್ಫಿ ತೆಗೆಯಲಿ ಅಮ್ಮಾ
ಲಾಕಾಗಿರುವ ಪೋನಲ್ಲಿ

ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ..!

ರಾಧೆ ನುಡಿದಳು….
ರಾಧೆ ನುಡಿದಳು ಪೌಡರ್ ಮೆತ್ತಿದ
ತನ್ನ ಮೂತಿ ಒರೆಸುತ್ತಾ
ಕೈಯಲ್ಲಿದ್ದ ಅಮ್ಮನ ಲಿಪ್ ಸ್ಟಿಕ್
ಕೈಯಲ್ಲಿದ್ದ ಅಮ್ಮನ ಲಿಪ್ ಸ್ಟಿಕ್
ಬೆನ್ನ ಹಿಂದೆ ಮರೆಸುತ್ತಾ

ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ..!

ಸ್ವಿಚ್ ಆಫ್ ಆದ ಐಪೋನನ್ನು
ಚಾರ್ಜಿಗಿಟ್ಟು ನಕ್ಕಳು ವಾಣಿ
ತ್ರಿವಿಕ್ರಮ ಸುತೆ ರಾಧೆಯ
ತ್ರಿವಿಕ್ರಮ ಸುತೆ ರಾಧೆಯ
ಎತ್ತಿ ಮುತ್ತನ್ನಿಟ್ಟಳು ವಾಣಿ

ಅಮ್ಮಾ ನಾನು ದೇವರಾಣೆ ಸೆಲ್ಫಿ ತೆಗೆದಿಲ್ಲಮ್ಮ..!
ಕ್ಯಾಮರಾನೇ ನನ್ನ ಕಂಡು
ಕ್ಯಾಮರಾನೇ ನನ್ನ ಕಂಡು
ಕಣ್ಣನು ಹೊಡೆಯಿತಮ್ಮ..

- ತ್ರಿವಿಕ್ರಮ