Tuesday, September 13, 2016

ಬೆಂಕಿ ಬಿದ್ದಿದೆ ನಾಡಿಗೆ..!

ಬೆಂಕಿ ಬಿದ್ದಿದೆ ನಾಡಿಗೆ..!



ಹಣ್ಣು ಹೇರಳವಾಗಿದ್ದಾಗ
ಹೆಚ್ಚಿ ಹಂಚಿದೆವೆಂದು
ನಾವೇ ಹಸಿದಿರುವಾಗ ಬಂದು
ಹೆಚ್ಚು ಪಾಲು ಬೇಕೆಂದರೆ ಅದು
ಹುಚ್ಚುತನವಲ್ಲದೆ ಮತ್ತೇನು?

ತಾ ಹೆತ್ತ ಮಕ್ಕಳ ಉಪವಾಸ ಕೆಡವಿ
ನೆರೆಮನೆಯ ಮಕ್ಕಳ ಮೈದಡವಿ
ಉಣಬಡಿಸು ಎಂದಾಗ
ಆ ತಾಯಿಯ ಕರುಳು
ಕಿವುಚಿದಂತಾಗುವುದಿಲ್ಲವೇನು?

ಅಂದು
ನೆರೆ ಹೊರೆಯವರೆಂದು
ನೆರೆ ಬಂದಾಗ ನೆರವಾದದ್ದು
ಇಂದು
ಬರ ಬರುವ ಹೊತ್ತಿನಲಿ
ಬಾಯಿಂದ ತುತ್ತು ಕಿತ್ತುಕೊಳ್ಳುವಾಗ
ನೆನಪಾಗುವುದಿಲ್ಲವೇ ನಿಮಗೆ?

ಕೋರ್ಟಿನಂಗಡಿಯಲ್ಲಿ
ಕೋಟಿ ಕೋಟಿ ಕೊಟ್ಟು
ಕಪ್ಪು ಕೋಟುಗಳ ಕೊಂಡು
ಕಟ್ಟಿಬಿಟ್ಟಿರಲ್ಲವೇ
ಜೀವಜಲಕ್ಕೆ ಬೆಲೆ?

ಆಹಾ..! ಅದ್ಭುತ
ನಿಮ್ಮ ‘ಲಲಿತ’ ಕಲೆ

ತಕ್ಕಡಿ ಹಿಡಿದ ನ್ಯಾಯದೇವತೆ
ಕಣ್ಣಿಗೆ ಕಟ್ಟಿಕೊಂಡಿರುವಾಗ ಕಪ್ಪು ಬಟ್ಟೆ
ನೆಡೆಯುತಿರುವ ಅನ್ಯಾಯವನು
ಹೇಗೆ ತಡೆದೀತು ಕನ್ನಂಬಾಡಿ ಕಟ್ಟೆ?

ಅತ್ತ ತೀರ್ಪಿಗೆ ತಲೆಬಾಗಿ
ಬಿಕ್ಕುತ್ತ ಹರಿದಿಹಳು ಕಾವೇರಿ
ಇತ್ತ ವ್ಯವಸ್ಥೆ ತಲೆಕೆಳಗಾಗಿ
ಪರಿಸ್ಥಿತಿ ಹೋಗುತಿದೆ ಕೈಮೀರಿ
ಎಲ್ಲೆಲ್ಲು ಆಕ್ರೋಶ ಆವೇಶ
ಇಳಿದಿದೆ ನಾಡೆಲ್ಲ ಬೀದಿಗೆ
ಬೆಂಕಿ ಬಿದ್ದಿದೆ ನಾಡಿಗೆ..!

ನಿಲ್ಲಬೇಕಿದೆ ಈ ಅನ್ಯಾಯ
ಕೊನೆಯಾಗಲಿ ಕರಾಳ ಅಧ್ಯಾಯ

- ತ್ರಿವಿಕ್ರಮ