Friday, June 14, 2013

ಅವಳಕ್ಕನ ಮದುವೆ

 ಅವಳಕ್ಕನ ಮದುವೆ

ಅವಳಕ್ಕನ ಮದುವೆಗೆ ನಾನು ಹೋಗಿದ್ದೆ
ಇರಲಿಲ್ಲ ಆಮಂತ್ರಣ
ಯಾರಾದರೂ ಕೇಳಿದರೇ ಎಂದು ಹೆದರಿದ್ದೆ
ಕೇವಲ ಒಂದು ಕ್ಷಣ

ಮದುವೆ ಮನೆಯ ತುಂಬಾ ಇವಳದೇ ಓಡಾಟ
ಅಕ್ಕನ ಮುದ್ದಿನ ತಂಗಿ
ಬಂದ ಬಂಧುಗಳೊಡನೆ ಆತ್ಮೀಯ ಒಡನಾಟ
ಅದ್ಭುತ ಹಾವ-ಭಾವ-ಭಂಗಿ

ನಾ ಕಂಡೆ, ಹೃದಯ ಬಾಯಿಗೆ ಬಂತೇನೋ
ದೃಷ್ಟಿಯಾಯ್ತು ಏರುಪೇರು
ನಾ ಕಣ ಹೊಡೆದೆ ಅಂತೇನೋ
ಕೋಪವೂ ಕಾಣಿಸಿತು ಚೂರು

ಬಳಿಗೋಡಿ ಬಂದು ತುಸು ಕೋಪದಿ ಕೇಳಿದಳು
'ನೀ ಯಾಕೆ ಇಲ್ಲಿಗೆ ಬಂದೆ?'
ಹಿಂದಿರುಗಿ ನೋಡಿ ಹೆದರುತ್ತ ಹೇಳಿದಳು
'ಮೊದಲು ಜಾಗ ಖಾಲಿ ಮಾಡು ತಂದೆ..!'

'ಮದುವೆಗೆ ಬಂದರೆ ಇಷ್ಟೊಂದು ಭಯವೇ?
ನಿಮ್ಮಕ್ಕ ನನಗೂ ಅಕ್ಕ
ಹೇಗೂ ಬಂದಿರುವೆ ಊಟ ಮಾಡಿ ಹೋಗುವೆ
ನೀ ಬಂದು ಕೂರು ಪಕ್ಕ'

'ಅಯ್ಯೋ..! ಊಟದ ಮನೆ ಹಾಳಾಯ್ತು,
ಕೈ ಮುಗಿವೆ ಹೊರನಡಿಯೊ ಚಿನ್ನು
ನೀ ಇಲ್ಲಿಯವರೆಗೆ ಬಂದಿದ್ದೆ ಹೆಚ್ಚಾಯ್ತು
ಅಣ್ಣಂದಿರ ವಿಚಾರ ಗೊತ್ತಿಲ್ಲ ನಿನಗಿನ್ನು'

'ಅವರೇನು ಹುಲಿಗಳೇ, ಕಾಡೇನು ನಿಮ್ಮನೆ?
ಬೇಟೆಯಾಡೋದು ನನಗೂನು ಗೊತ್ತು
ಹೋಗಬೇಕಿದ್ದರೆ ನಾನೀಗ ಸುಮ್ಮನೆ
ಕೊಡಬೇಕು ನನಗೊಂದು ಮುತ್ತು.'

ತಕ್ಷಣ ಬಾಯ್ಮುಚ್ಚಿದಳು ಕೈಯನ್ನು ಮುಂದೆ ಚಾಚಿ
ದುರುಗುಟ್ಟಿ ನೋಡಿದಳು ನನ್ನೇ.
ಮತ್ತೊಮ್ಮೆ ಕಣ ಹೊಡೆದೆ ನೀರಾದಳು ನಾಚಿ
ಮರುಕ್ಷಣವೆ ಕೆಂಪಾಯ್ತು ಕೆನ್ನೆ.

ಅದಾಗದ ಮಾತೆಂದು ಪರಿಯಾಗಿ ಬೇಡಿದಳು
ಬಾಕಿಯಿತ್ತು ಅಳುವುದು ಒಂದೇ
ನಾ ಜಗ್ಗದೇ ಇರಲು ಹುಸಿ ಕೋಪದಿ ನುಡಿದಳು
"ಕಾದಿರು ಮನೆಯ ಹಿಂದೆ"

ನಾ ಹೋಗಿ ಕಾದೆ ಮರೆಯಲ್ಲಿ ನಿಂತು
ಯಾರಿಲ್ಲವೆಂದು ಮಾಡಿಕೊಂಡು ಖಾತರಿ
ಯಾರಾದರೂ ನೋಡಿದರೆ, ನನಗೂ ತಿಳಿದಿತ್ತು
ಬೀಳುವುದು ಪ್ರೇಮಕ್ಕೆ ಕತ್ತರಿ

ಹಿಂತಿರುಗಿ ನೋಡುತ್ತ ಮೆಲ್ಲನೇ ಬಂದಳು
ಕೋಪವಿನ್ನು ಕಣ್ಣಲ್ಲೇ ಇತ್ತು.
ಆ ಕೋಪಕ್ಕೆ ದನಿಯನ್ನು ತಂದಳು
"ಇದೇ ನಿನ್ನ ಕೊನೆಯ ಮುತ್ತು"

ಪೋಲಿ ನಗು ನಕ್ಕು ತುಂಟತನದಿ ಕೇಳಿದೆ
"ಮತ್ತೆ ಕೊಡಲಾರೆಯಾ ಯಾವತ್ತು?"
ಅವಳ ಕಣ್ಣಲ್ಲೇ ಕಣ್ಣಿಟ್ಟು ಹೇಳಿದೆ
"ಈ ತುಟಿಗಳು ನನ್ನದೇ ಸ್ವತ್ತು"

ಜಾಸ್ತಿ ತಡಮಾಡದೇ ತುಟಿಗೆ ತುಟಿ ಒತ್ತಿದೆ
ಮಕರಂದ ಹೀರುತ್ತ ಮೃದುವಾಗಿ ಕಚ್ಚಿದೆ
ತೋಳಲ್ಲಿ ಅವಳನ್ನು ಹಿತವಾಗಿ ಸುತ್ತಿದೆ
ಆ ಮಧುರ ಸ್ಪರ್ಶಕ್ಕೆ ನಾನೇ ನಾಚಿದೆ

ಅವಳ ಭಯವನ್ನೆಲ್ಲ ಕ್ಷಣದಲ್ಲಿ ತೊಲಗಿಸಿತು
ಆ ಸಿಹಿಯ ಚುಂಬನ
ಮನೆಯ ಹಿತ್ತಲು ಮತ್ತೂ ಹೆಚ್ಚಿಸಿತು
ಸಿಹಿಮುತ್ತ ರೋಮಾಂಚನ
ತುಟಿಯ ಚಿಲಕವನು ತಾನೇ ತೆರೆದಳು
ಜೇನಂತ ನಾಲಿಗೆಯನು ತಳ್ಳಿ
ಮತ್ತೊಂದು ಸವಿಮುತ್ತ ಲೆಕ್ಕ ಬರೆದಳು
ಕೋಪದ ನಾಟಕವಾಡುತ ಕಳ್ಳಿ

ಬಿಡಲಾರದೆ ಬಿಟ್ಟು ತಲೆತಗ್ಗಿಸಿ ನಿಂತಳು
ಕಣ್ಣಲ್ಲಿ ಇರಲಿಲ್ಲ ಕೋಪ
ನಸುನಗೆ ಬೀರಿ ನಾಚುತ್ತ ನೋಡಿದಳು
ಕೆಂಪಾಗಿಯೇ ಇದ್ದವು ಕೆನ್ನೆ, ಪಾಪ..!

"ನೂರು ಮುತ್ತಿಕ್ಕಿದರೂ ತೀರದು ನನ್ನ ಆಸೆ
ಒಂದು ಯಾವ ಲೆಕ್ಕಕ್ಕೆ ಸಾಕೇ?"
"ಬಿಟ್ಟರೆ ಈಗಲೆ ಕೊಡುತೀಯ ಕೂಸೇ,
ಹೊರಡು, ಮತ್ತೆ ಬಂದರೆ ಜೋಕೆ" 

ಅಷ್ಟರಲೆ ಒಳಗಿಂದ ಮತ್ತೊಮ್ಮೆ ಮಗದೊಮ್ಮೆ
ಕೂಗಿರಲು ಅವಳ ಹೆಸರು
ನೋಡಿದಳು ನಸುನಗುತ ನನ್ನ ಕಡೆಗೊಮ್ಮೆ
ಓಡಿದಳು ಕಟ್ಟಿಕೊಂಡಉ ಉಸಿರು

ಅವಳೋದ ಮೇಲೆ ನಾ ಯೋಚಿಸುತ ನಿಂತಿರಲು
'ಮಾಡಲೇ ಅಕ್ಕನ ಮದುವೆಯ ಊಟ?'
ಯಾರೋ ಲೇಡೀಸು ಆ ಕಡೆಗೆ ಬರುತಿರಲು
ನಿಲ್ಲದೇ ನಾ ಕಿತ್ತೆ ಓಟ

ರಾತ್ರಿ ಬಂದಿತು ಅವಳದೊಂದು  ಮೆಸೇಜು
'ಅಲ್ಲಿಗ್ಯಾಕೋ ಬಂದಿದ್ದೆ ಕೋತಿ'
ಅದರ ಹಿಂದೆಯೇ ಹಾಕಿದಳು ಆವಾಜು
'ಮತ್ತೆ ಬಂದರೆ ಇದೆ ನಿನ್ನ ತಿಥಿ'

ಪ್ರೀತಿಯಲಿ ನಾನೆನಲು
"ಅಕ್ಕನ ಮದುವೆಯ ಮುತ್ತು ಪ್ರತಿನಿಮಿಷ ಕೊಲ್ಲುತಿದೆ
ಬಾಕಿ ಉಳಿದಿರುವುದೇ ನನ್ನ ತಿಥಿ"
ತುಂಟತನದಿ ನುಡಿದಳು
" ಈ ತಂಗಿ ಮದುವೆಗೂ ಬಾ ಕೊಡುವೆ
ತಾಳಿ ಕಟ್ಟಿ ಆಗೆನ್ನ ಪತಿ"

                                                                                             -ತ್ರಿವಿಕ್ರಮ