ಶ್ಯಾಮನು ಬಂದನು ರಾಧೆಯ ಮನೆಗೆ ರಾತ್ರಿಯಾಗಿತ್ತು
ಮಾಗಿಯ ಚಳಿಗೆ ಮುಸುಕನು ಹೊದ್ದು ಮಥುರೆಯು ಮಲಗಿತ್ತು
ಆದರೂ ವಿರಹವು ಸುಡುತಿತ್ತು.
(1)
ಸುತ್ತಾ ಮುತ್ತಲು ನೋಡುತ ಶ್ಯಾಮ ಹಿತ್ತಲ ಸೇರಿದನು..
ಚಿಲಕವೆ ಇಲ್ಲದ ಬಾಗಿಲ ಮೆಲ್ಲನೆ ಹಿಂದಕೆ ದೂಡಿದನು..
ಕಾಣದೇ ಹೊಸ್ತಿಲನೆಡವಿದನು.
(2)
ಹಿತ್ತಲ ಬೇಲಿಯ ಹಿಂದೆಯೇ ಕಾದಿಹ ಪಿಳಿ ಪಿಳಿ ಕಣ್ಣೆರಡು
ಒಳಗಡಿಯಿಟ್ಟ ಶ್ಯಾಮನ ಹೆಜ್ಜೆಯ ಜಾಡನು ಹಿಡಿದಿತ್ತು.
ಹಿಂದೆಯೇ ಮನೆಯನು ಹೊಕ್ಕಿತ್ತು
(3)
ಆರು ಕಾಲ್ಗಳು, ನಾಲ್ಕು ಕಂಗಳು ಕತ್ತಲ ಕದಡಿರಲು
ನೂರು ದೇವರ ನೆನೆಯುತ ಶ್ಯಾಮ ಅಟ್ಟವನೇರಿದನು
ರಾಧೆಯು ಕೋಣೆಯ ಸೇರಿದನು
(4)
ಸ್ವರ್ಗದ ಅಪ್ಸರೆ ಮೈದಳೆದಂತೆ ರಾಧೆಯು ಮಲಗಿರಲು
ಬಾನಿನ ದೀಪದ ಬೆಳ್ಳನೆ ಬೆಳಕು ಮೈಯನು ತೊಳೆದಿರಲು.
ಇರುಳಲಿ ಮೂಗುತಿ ಹೊಳೆದಿರಲು.
(5)
ನಲ್ಲೆಯ ಎದೆಯ ಏರಿಳಿತಗಳು ಉಕ್ಕುವ ಅಲೆಯಂತೆ..
ಅದರೊಳಗಿಳಿದು ತೇಲಿದ ಶ್ಯಾಮ ಮುತ್ತುಗದೆಲೆಯಂತೆ..
ನೋಡುತಾ ನಿಂತನು ಶಿಲೆಯಂತೆ
(6)
ಪ್ರೇಮಿಯ ಹರುಷವೇ ಬೆಕ್ಕಿಗೂ ಆ ಕಡೆ ಹಾಲನು ಕಂಡಾಗ
ಸರಿ ಹೊತ್ತಿನಲಿ ಕೇಳದೇ ದೊರೆತ ಸಿರಿಯನು ಸ್ವೀಕರಿಸಿ..
ಸವಿಯಿತು ನಾಲಿಗೆ ಚಪ್ಪರಿಸಿ.
(7)
ಬೆಚ್ಚನೆ ಒಲೆಯು, ಮುಚ್ಚಿದ ಕಂಗಳು, ಬೆಕ್ಕಿಗೆ ಮೈ ಮರೆತು
ಒಲೆಯ ಬೂದಿಯು ಮುಚ್ಚಿದ ಕೆಂಡಕೆ ಬಾಲವ ತಾಕಿಸಿತು
ಕಿರುಚಿ ಪಾತ್ರೆಯನುರುಳಿಸಿತು
(8)
ನೆಲವನು ಸೇರಿದ ಪಾತ್ರೆಯ ಸಪ್ಪಳ ಮನೆಯಿಡಿ ಮಾರ್ದನಿಸಿ..
ಕೂಗಿದರ್ಯಾರೋ ನಡುಮನೆಯಿಂದ ‘ಯಾರದು ಸದ್ದಲ್ಲಿ?’
ಬೆಕ್ಕು ಹಾರಿತು ಕಿಟಕಿಯಲಿ
(9)
ಬಾಗಿಲ ಪರೆದೆಯ ಆಚೆಗೆ ಯಾವುದೋ ದೀಪವು ಬೆಳಗಿರಲು
ನೆರಳನು ಕಂಡು ನುಸುಳಿದ ಶ್ಯಾಮ ರಾಧೆಯ ಮಂಚದಡಿ..
ಭಯದಲಿ ಬಾಗಿಲ ಕಡೆ ನೋಡಿ
(10)
ಬೆನ್ನಲಿ ಸುರಿಯಲು ಬೆವರಿನ ಮಳೆಯು ಗುಡುಗುವ ಎದೆಬಡಿತ..
ತಪ್ಪಿಸಿಕೊಳ್ಳುವ ತವಕದಿ ದಾರಿಯ ಹುಡುಕುತ ರಾಧಸಖ..
ಕಾದನು ಬೆಳಗಾಗುವ ತನಕ
(11)
ಕೊಕ್ಕೊಕ್ಕೋಕ್ಕೋ.. ಕೂಗಿದ ನಸುಕಲಿ ಕೋಳಿಯನನುಕರಿಸಿ
ಮೈಯನು ಮುರಿಯುತಾ ಎದ್ದಳು ರಾಧೆ ಹಮ್ಮನೇ ಆಕಳಿಸಿ..
ನಿಂತಳು ಹೊದಿಕೆಯನು ಸರಿಸಿ..
(12)
ರಾಧೆಯು ನೆಡೆಯಲು ಗೆಜ್ಜೆಯ ದನಿಯು ದಾರಿಯ ಹೇಳುತಿರೆ..
ಹಿತ್ತಲ ಬಾಗಿಲ ತಲುಪಿದ ಶ್ಯಾಮ, ಕಳಚಿತು ತಿಮಿರ ತೆರೆ
ನಲ್ಲೆಯು ಸಿಕ್ಕಳು ತೋಳಸೆರೆ
(13)
ಬೆಚ್ಚಿದ ರಾಧೆಯ ಮಂಪರುಗೆದರಿಸೋ ಕಂಪನ ದೇಹದಲಿ..
ಇನಿಯನ ತೋಳಿನ ಪಂಜರದಲ್ಲಿ ಆದಳು ಕೆಂಪು ಗಿಳಿ
ನಾಚಿಕೆ ಇಣುಕಿತು ಕಣ್ಣಿನಲಿ
(14)
ಬಿಸಿಯಪ್ಪುಗೆಯ ಕುಲುಮೆಯ ಒಳಗಡೆ ಕರಗಿದ ಚೆಲುವೆಯನು
ನಡುವಲಿ ಹಿಡಿದು ಅದರುವ ತುಟಿಗೆ ತುಟಿಯನು ತೀಡಿದನು..
ಬಾನಲಿ ಸೂರ್ಯನು ಮೂಡಿದನು..
(15)
ಶ್ಯಾಮನು ಹೊರಟನು ಗೋಕುಲದೆಡೆಗೆ ರಾತ್ರಿ ಕಳೆದಿತ್ತು
ಮೂಡಣದಾಗಸ ರಾಧೆಯ ಕೆನ್ನೆಗೆ ಕನ್ನಡಿಯಾಗಿತ್ತು
ಮಿನುಗುವ ತುಟಿಯಲಿ ನಗುವಿತ್ತು.
(16)
- ತ್ರಿವಿಕ್ರಮ