Monday, November 21, 2016

ಕಪ್ಪು ಕಾಂಚಾಣ

ಕಪ್ಪು ಕಾಂಚಾಣ


ಕಪ್ಪು ಕಾಂಚಾಣ ಕುಣಿಯುತ್ತಲಿದ್ಲು
ಬ್ಯಾಂಕೊಳಗೆ ಬರದೆ ನುಲಿಯುತ್ತಲಿದ್ಲು

ಎಲೆಕ್ಷನ್ ಹೊತ್ತಲ್ಲಿ ಸೂಟ್ಕೇಸಲಿ ಕುಳಿತು
ಸೀಟೀನ ಡೀಲನ್ನು ಕುದುರಿಸುತ್ತಿದ್ಲು
ಬಡತನದೆದುರು ನಡುವನ್ನು ಕುಲುಕಿಸಿ
ನೋಟದಲೇ ಓಟನ್ನು ಉದುರಿಸುತ್ತಿದ್ಲು

ಲಂಚಿಗೂ ಕೂಡ ಲಂಚಾನೇ ನುಂಗ್ತಿದ್ದ
ಸಾಹೇಬಗೂ ಇವಳೇ ಊಟ ಬಡಿಸಿದ್ಲು
ಸರ್ವೀಸು ಮುಗಿಸುವ ಹೊತ್ತಿಗಾಗಲೇ
ಕೋಟಿ ಕೋಟಿಗಳ ಸೈಟು ಕೊಡಿಸಿದ್ಲು

ದೇಗುಲದ ಹುಂಡಿಯ ಕಿಂಡಿಯ ಒಳಗೂ
ಇವಳದ್ದೆ ಕರಿಛಾಯೆ ಇಣುಕುತ್ತಲಿತ್ತು
ಧನ ಕನಕ ತೊರೆದ ಕಾವಿ ಸ್ವಾಮಿಯನು
ಕರಿಗೆಜ್ಜೆ ಸೌಂಡು ಕೆಣಕುತ್ತಲಿತ್ತು

ಮೋದಿ ಬಂದು ಇವಳ ಕರಿಸೀರೆ ಕಳಚಲು
‘ಇಟ್ಕಂಡೋರ’ ಫೇಸು ಮಂಕಾಗಿ ಹೋಯ್ತು
ಕಣ್ಣೆದಿರೆ ಸೀರೆ ಬದಲಾಗಿದ್ದನು ಕಂಡ
ಗಾಂಧಿ ತಾತನ ಮೂತಿ ಪಿಂಕಾಗಿ ಹೋಯ್ತು

ಯರ್ಯಾರ ಜೊತೆಗೆ ಎಲ್ಲೆಲ್ಲಿ ಇದ್ಲೋ
ಬಿಳಿಸೀರೆ ಉಟ್ಟು ಬ್ಯಾಂಕಲ್ಲಿ ಬಿದ್ಲೋ


(ಇದಕ್ಕೆ ಸ್ಪೂರ್ತಿಯಾದ, ಕುರುಡು ಕಾಂಚಣ ಪದ್ಯ ಬರೆದ ಬೇಂದ್ರೆಯವರ ಅಕೌಂಟಿಗೆ, ಕೋಟಿ ನಮನ)

- ತ್ರಿವಿಕ್ರಮ