Tuesday, October 11, 2016

ಮೂರು ತಿಂಗಳ ನಂತರ. . .




ಕಾಲೇಜು ಮುಗಿಸೋ ಹೊತ್ತಿಗೆ
ಸಿಕ್ಕಿತೊಂದು ಕೆಲಸ ನಂಗೂ
ಕತ್ತರಿ ಇರದ ಕಟ್ಟಿಂಗು
ಕೈಗೆ ಅಂಟದ ಪೇಸ್ಟಿಂಗು
ಅದೇ ಕಟ್ಟು ಪೇಸ್ಟು ಎಡಿಟಿಂಗು
ಕಣ್ಮುಂದೆ ಪಿಸಿ ಸುತ್ತಲೂ ಏಸಿ
ಸಂಜೆಯ ಹೊತ್ತಿಗೆ ತಪ್ಪದು ತಲೆಬಿಸಿ

ಹಗಲೊತ್ತಲ್ಲಿ ಪುರುಸೊತ್ತಿಲ್ಲದಿರಲು
ಅವಳ ನೆನಪುಗಳು ಕೂಡ
ಶಿಫ್ಟು ಬದಲಿಸಿ
ಕನಸಾಗಿ ಬಂದು ಹೋಗುತಿವೆ
ಬೆಳಗಿನ ಜಾವದಲಿ..!
ಕನಸು ಮಸುಕು ಮಸುಕಾಗಿ
ಬ್ಲರ್ ಆಗುವುದವಳ ಇಮೇಜು
ಮುಸುಕು ತೆಗೆಯಲು ಬಂದಿರುವುದು
ಮುಂಜಾನೆಯ ಮೆಸೇಜು
ಮೇಲೆದ್ದರೆ ಸಮಯವೆಲ್ಲಿದೆ
ಪೋನಿನತ್ತ ಕಣ್ಣು ಹಾಯಿಸಲು
ಓಡಬೇಕು ನೀರು ಕಾಯಿಸಲು

ಮೂರು ತಿಂಗಳ ಹಿಂದೆ ನಾ ಹೇಗಿದ್ದೆ?
ಈಗ ಆರಕ್ಕೆದ್ದರೆ ಹನ್ನೊಂದಕ್ಕಾಗಲೆ ನಿದ್ದೆ
ಕಾವಿ ತೊಟ್ಟ ಸ್ವಾಮಿಯಂತೆ
ಸದಾ ಖಾಲಿ ಕುಳಿತು
ಕಾಲ ಕಳೆಯುತಿದ್ದೆ ಆಗ
ತನ್ನೊಳಗೆ ಸೆಳೆದುಕೊಂಡಿದೆ
ಬೆಂಗಳೂರಿನÀ ವೇಗ
ವೇಗವೆಷ್ಟಾದರೇನು? ಹಾಳಾದ್ದು
ಭಾನುವಾರ ಮಾತ್ರ ಬರೋದಿಲ್ಲ ಬೇಗ

ನಿರಂತರ ನೆಡೆಯುತಿರಲು
ಕಾಲದೊಡನೆ ರೇಸು
ಕಷ್ಟವಾಗುತಿದೆ ಮಾಡಲು
ಕನಸುಗಳ ಚೇಸು
ಓಟದಲ್ಲಿ ಗಡಿಯಾರ ಸೋಲದಾಗಿದೆ
ಇಪ್ಪತ್ನಾಲ್ಕು ಗಂಟೆಗಳು ಸಾಲದಾಗಿದೆ

ಕಾಂಕ್ರೀಟು ಕಾಡಲ್ಲಿ ಹೈಟೆಕ್ಕು ವನವಾಸ
ಆದರೂ ಸಂಬಳ ಬಂದ ದಿವಸ
ಸ್ವಲ್ಪ ಉತ್ಸಾಹ, ಸ್ವಲ್ಪ ಉಲ್ಲಾಸ
ಕೈ ಎತ್ತಿ ಮುಗಿಬೇಕು
ಕಾಯಕವೇ ಕೈಲಾಸ..! 
ಕಾಯಕವೇ ಕೈಲಾಸ..!





- ತ್ರಿವಿಕ್ರಮ