Monday, November 04, 2013

ನಿದ್ಗೆಟ್ ಪದಗಳು

ಹಗಲಲ್ಲೇ ದಬ್ಬಾಕೊಂಡ್
ಮಲ್ಕೊಂಡು ಮಾಮೂಲಿ
ಕನಸುಗಳ ಕಾಣೋದು ಸಾಕಾಗಿದೆ
ನೈಟೀಗು ಒಸಿ ನಿದ್ದೆ ಬೇಕಾಗಿದೆ..!!

ಇಡಿ ರಾತ್ರಿ ಆಕಾಶ
ನೋಡ್ಕೊಂಡು ನಕ್ಷತ್ರ
ಎಣಿಸುತಾ ಲೆಕ್ಕ ಮರೆತೋಗಿದೆ
ಮಲಗೆದ್ದು ಮಗ್ಗೀನ ಕಲಿಬೇಕಿದೆ..!!

ಚಂದ್ರಂಗೆ ಯಾಕೆ ಯಾವಾಗ್ಲು ಇರಬೇಕು ರಾತ್ರೀಯ ಪಾಳಿ?
ಬೆಳಕ್ಹರಿಯೊ ತನಕ ಕಂಪೆನಿ ಕೊಡಬೇಕು ನಕ್ಷತ್ರ ಜೊತೇಲೀ?
ಬಿಸಿಲಲ್ಲಿ ಊರನ್ನು ಸುತ್ತೋನು ಸೂರ್ಯ
ಅವನೆದೆಯಲ್ ಇರಬಹುದು ಮಾಯದ ಗಾಯ
ಚಂದ್ರಂಗೆ ಸಿಗಬೇಕಾ ಎಲ್ಲಾ ವಿಲಾಸ?
ಲೋಕದ ಸೃಷ್ಠೀಲಿ ಏಕಿಂತ ಮೋಸ?

ತಡರಾತ್ರಿ ಬೀಳುವ ತಲೆಕೆಟ್ಟ ಕನಸಿಗೆ ನಾನೇನೇ ಬಾಸು
ಬೆಳಗಿದ್ದು ಕಣ್ಬಿಟ್ರೆ ಈ ಲೋಕ್ದಲ್ ನಾನೊಬ್ಬ ಮೆಂಟಲ್ಲು ಕೇಸು
ಕನಸಲ್ಲಿ ಪ್ರತಿಕ್ಷಣವು ಪೆಪ್ಪರ್ಮೆಂಟು
ಲೋಕದಾ ಸಂತೇಲಿ ತೊಂದ್ರೆ ನೂರೆಂಟು
ಕಾಣುವಾ ಕನಸಲ್ಲೆ ಕಳೆದೋಗೋ ಆಸೆ
ಮಲ್ಕೊಂಡೆ ತಿನ್ನುತ್ತಾ ಮಸಾಲೆದೋಸೆ

ನುಂಗಿ ನೀರ್ಕುಡಿದರೂ ನಿದ್ದೆ ಮಾತ್ರೇನಾ, ಯಾಕೋ ಹತ್ತುತಿಲ್ಲ ನಿದ್ದೆ
ಕಿವಿಗೆ ಇಯರ್ ಪೋನು, ಮ್ಯಾಲೆ ತಿರುಗೋ ಫ್ಯಾನು ನೋಡ್ಕೊಂಡ್ ಮಲ್ಗಿದ್ದೆ
ನೀ  ಬಂದು ಎದೆಯಲ್ಲಿ ಎಡಗಾಲು ಇಟ್ಟೆ
ಸಾವಿರದ ಸ್ವಪ್ನಕ್ಕೆ ನನ್ನ ನೂಕಿಬಿಟ್ಟೆ
ಕ್ಲೈಮ್ಯಾಕ್ಸು ಬರೊಮೊದಲೇ ಆಗೋಯ್ತು ಎಚ್ಚರ
ಮರೆತೋಗೋ ಕನಸನ್ನು ಕಾಣೋರು ಹುಚ್ಚರಾ..?

ನನ್ನೊಡನೆ ಪದ್ಗಲೂ ನಿದ್ಗೆಟ್ಟು ನಲುಗಿವೆ
ಮರೆತೋಗೊ ಮುನ್ನ ಬರೆದಿಟ್ಟು ಮಲಗುವೆ

ಗುಡ್ನೈಟ್

-ತ್ರಿವಿಕ್ರಮ


ಸಮಯದ ಸವತಿ

ಸಮಯದ ಸವತಿ

 ಬಿಟ್ಯಾಕೆ ಹೋಗುವೆ ನೀ ನನ್ನ ತುಂಟಿ
ನೀನಿರದ ಊರಲ್ಲಿ ನಾನೆಂದು ಒಂಟಿ

ನೀ ಸನಿಹ ಇರುವಾಗ
ಓಡುವಾ ಸಮಯ
ನೀ ದೂರ ಹೋದೊಡನೆ
ಬರುವುದು ಸನಿಹ
ಬಗೆಹರಿಸು ನನದೊಂದು ಅನುಮಾನ
ಆ ಸಮಯ ನಿನಗೇನು ಸವತೀನಾ?

ಆ ಕಾಲವೇ ಇಲ್ಲಿ ಬಿದ್ದಿದೆ
ಮುರಿದುಕೊಂಡು ಕಾಲನ್ನು
ತೆವಳುವ ಕಾಲವ ತಳ್ಳೋದು
ಸಾಕಾಗಿದೆ ನನಗಿನ್ನು
ತಿರುಗೋದ ನಿಲ್ಲಿಸಿದೆ ಈ ಭೂಮಿ
ಎಲ್ಲಿರುವೆ ನೀ ಬೇಗ ಬಾರಮ್ಮಿ

ಕೂಡಿ ಕೂಡಿ ಕಳೆದಿರುವೆ
ಒಂದೊಂದು ಕ್ಷಣವನ್ನು
ಇಡಿ ರಾತ್ರಿ ಎಣಿಸಿರುವೆ
ನೀ ಬರುವ ದಿನವನ್ನು
ನಿಂತಲ್ಲೇ ನಿಂತಿದೆ ಎದೆಗೂಡ ಗಡಿಯಾರದ ಮುಳ್ಳು
ನೀ ಬಂದು ಸೇರಿಕೋ, ನೀನೇ ಅದ ತಿರುಗಿಸೋ ಶಲ್ಲು

-ತ್ರಿವಿಕ್ರಮ