Tuesday, July 23, 2013

ಅವಳ ಮೂ(ಗು)ತಿಗೆ

ಅವಳ ಮೂ(ಗು)ತಿಗೆ


ಅವಳ ಮುದ್ದು ಮೊಗಕೆ
ಆ ಮೂಗೇ ಭೂಷಣ
ಕೊಳ್ಳಬೇಕೆಂದಿದ್ದೆ ಅಲ್ಲೊಂದೆರಡು ಖಾಲಿ ನಿವೇಶನ.
ಅಷ್ಟರಲಿ ನೀ ಬಂದು
ಆವರಿಸಿದೆ ಆ ಜಾಗ
ಈಗ ನೀ ಅವಳ ಮುಖದ ಅವಿಭಾಜ್ಯ ಭಾಗ.
ಆ ಮೂಗೇ ಈಗ ನಿನ್ನ ನಿವಾಸ
ಅವಳ ಪ್ರತಿ ಉಸಿರು ಹೇಳುವವು ನಿನ್ನ ವಿಳಾಸ.


ಬಂದಲ್ಲಿ ಬೇರೂರಿದೆ ನೀನು
ಊರ ಬೆಳಗುವ ಸೂರ್ಯನೂ
ಈಗವಳ ಫ್ಯಾನು..!
ಮಾಡದೇ ಹೋಗಲಾರ ಈ ಬ್ಯೂಟಿಯ ಭೇಟಿ
ಅವನ ಕಿರಣಗಳಿಗೋ
ಮೂಗಿನ ಮೇಲೆಯೇ ಡ್ಯೂಟಿ.
ಅವಳಿ ಸೂರ್ಯರು ಅವಳಿರುವ ಊರಿಗೆ,
ಸಾಟಿ ಇನ್ಯಾರು ನನ ಮೂಗುತಿ ನಾರಿಗೆ.


ಹೇ ಮೂಗುತಿಯೇ.. ನೀನೆಷ್ಟು 'ಲಕ್ಕಿ'
ಅವಳ ಪ್ರತಿ ಉಸಿರು
ಸಾಗಲೇಬೇಕು ನಿನ್ನ ಮೈತಾಕಿ.
ಉಚ್ವಾಸ ನಿಶ್ವಾಸ ನಿನಗೆಲ್ಲ ಅಭ್ಯಾಸ
ಉಸಿರಿಗೆ ಉಸಿರಾಗಿ
ಜೊತೆಗಿರುವೆ ಪ್ರತಿನಿಮಿಷ.
ನನಗೂನು ನೀಡಯ್ಯ ಒಂದೆರಡು ದಿವಸ,
ಅವಳುಸಿರ ಏರಿಳಿತಗಳ ಎಣಿಸುವ ಕೆಲಸ.


ನನದೊಂದು ಬಿನ್ನಹ
ಕೇಳಪ್ಪ ಪರಬ್ರಹ್ಮ
ಆದಷ್ಟು ಬೇಗ ನೀಡೆನೆಗೆ ಮರುಜನ್ಮ.
ಆಗಬೇಕಿದೆ ನಾನವಳ
ಮೂತಿಗೆ ಮೂಗುತಿ
ಬಿಸಿಉಸಿರಿನೊಡನಾಡಲು ದಿನಂಪ್ರತಿ.

ಇರುವೆನು ಮೂರೊತ್ತು ಮೂತಿಯ ಮೇಲೆ,
ಉಸಿರಿಗೆ ಬರೆಯುತ್ತ ಪ್ರೀತಿಯ ಓಲೆ.

                                                                                                                         -ತ್ರಿವಿಕ್ರಮ