Wednesday, December 30, 2015

ಮಾಂತ್ರಿಕ



ಮಾಂತ್ರಿಕ


ಸೆಲೂನಿನೊಳಹೊಕ್ಕಲು
ಸೀಟು ಕೊಡವಿ ಕೂರಿಸಿ
ಕನ್ನಡಿಯೊಳಗಿರುವ
ನಿಮ್ಮನ್ನೇ ನಿಮಗೆ ತೋರಿಸಿ
ನೋಡನೋಡುತ್ತಿರುವಂತೆ
ನೀವು ನೀವಲ್ಲದಂತೆ ಮಾಡಬಲ್ಲ
ಇವನು ಬರಿಯ ಕ್ಷೌರಿಕನಲ್ಲ
ಇವನು ಮಾಂತ್ರಿಕ.

ಕತ್ತರಿಯ ಕಚಕಚನೆ ಆಡಿಸುತ
ತೋರುವನು ಕೈ ಚಳಕ
ಕೇಶರಾಶಿಯೊಳಗಾಡುವ ಕಲೆ
ಇವನಿಗೆ ಕರತಲಾಮಲಕ.
ಹಣಿಗೆಯಲಿ ಹೆಣೆಯುವ
ತಲೆಮೇಲೆ ಹೊಸ ಕ್ರಾಪು.
ಗಡ್ಡ ಗಿಡ್ಡವಾಗಿಸುವ, ಮಾಡುವ
ಮೀಸೆಯ ತುದಿ ಚೂಪು.

ನಾವು ನೀವೇನು
ತಲತಲಾಂತರಗಳಿಂದ
ತಲೆಗಳುರುಳಿಸಿ ಮೆರೆದ
ಎಲ್ಲ ರಾಜ ಮಹರಾಜರೂ
ತಿಂಗಳಿಗೊಮ್ಮೆ ಆಗಲೇಬೇಕು
ಇವನÀÀ ಮುಂದೆ ಹಾಜರು.
ಇವನಿಗೆ ತಲೆ ಬಾಗಲೇಬೇಕು
ಕೈಯಲ್ಲಿ ಹಿಡಿದಾಗ ರೇಜರು.

ಅವನ ಪಾಲಿಗೆ ತಲೆ
ಶಿಲ್ಪಿ ಕೆತ್ತುವ ಶಿಲೆ.
ಮೂಡಿಸುವನು ತನ್ನ ಕಲೆ
ನಂನಿಮ್ಮ ತಲೆಗಳ ಮೇಲೆ.
ಕತ್ತರಿಯನು ಕೈಗಿಡಲು
ಕತ್ತೆಯನು ಕುದುರೆಯಾಗಿಸಬಲ್ಲ.
ಇವನು ಬರಿಯ ಕ್ಷೌರಿಕನಲ್ಲ
ಇವನು ಮಾಂತ್ರಿಕ.

-ತ್ರಿವಿಕ್ರಮ
 


Friday, December 25, 2015

ಅನುಸೂಯೆಗೊಬ್ಬ ಅಂಗಾರ

ಅನುಸೂಯೆಗೊಬ್ಬ ಅಂಗಾರ

(ರಂಗಿತರಂಗ ಸಿನಿಮಾದ ಅಂಗಾರನ ಕಂಡು ಬರೆದದ್ದು )

ಎಲ್ಲಾ ಅನುಸೂಯೆಯರಿಗೂ
ಇದ್ದೇ ಇರುವನೊಬ್ಬ ಅಂಗಾರ
ಅವನೊಂಥರ ಕಷ್ಟಕಾಲದಲ್ಲಿ
ಮಣಪ್ಪುರಂ ಗೊಲ್ಡ್ ಲೋನಿಗೆಂದು
ಅಡವಿಡುವ ಬಂಗಾರ

ಅವಳಿಗೆ ಕಾಣಿಸುವುದೇನೋ
ಅವನ ಕೊರಳಿನಲ್ಲೊಂದು
‘ನನ್ನನ್ನು ಉಪಯೋಗಿಸಿ’ ಬೋರ್ಡು
ಹಾಗೋ ಹೀಗೋ ಹೇಗೇಗೋ
ಅವನಾಗಿ ಬಿಡುವನು
ಸಂಬಳವಿರದೆ ಬಾಡಿಗಾರ್ಡು
ಕಷ್ಟ ಬಂದಾಗ ಮಾತ್ರ ಕೂಗುವಳು “ಡಿಯರ್ ಅಂಗಾರ,
ಪ್ಲೀಸ್ ಕಣೋ, ಇದೊಂದು ಹೆಲ್ಪ್ ಮಾಡು ಹೆಂಗಾರ”

ದಿನಾ ಮಾಡುವನವಳ ಪಿಕ್-ಅಪ್ಪು-ಡ್ರಾಪು
ಮನೆಯ ಹೊರಗೆ ಕಾಯುವನು
ಮುಗಿಯುವವರೆಗೆ ಅವಳ ಮೇಕಪ್ಪು
ಬರಿಯ ಮಿಸ್ ಕಾಲ್ ಕೊಡುವ
ಅವಳ ಸೆಲ್ ಪೋನಿಗೆ
ಇವನದೇ ರೀಚಾರ್ಜು ಟಾಪಪ್ಪು.
ದಿನವೆಲ್ಲ ಸುತ್ತಿಸುವನು ಶಾಪಿಂಗು ಮಾಲು
ಅವಳಿಗೆಂದು ಬಿಡದೇ ತಾನೇ ನೀಡುವನು ಬಿಲ್ಲು

ಅನುಸೂಯೆಯ ಮಾಯೆಗೆ
ಸಿಕ್ಕಿದ ಪಾಪದ ಅಂಗಾರ
ಇಲ್ಲವೆನ್ನದೆ ಮಾಡುವನು ಎಲ್ಲವನು
ಏನು ಮಾಡಿದರೇನು?
ಕೊನೆಯಲ್ಲವನು ಸೇರಲೇಬೇಕು
ಅನುಸೂಯೆಯ ಫ್ರೆಂಡ್ ಜೋನು
ಅವನಿಗೆ ತಿಳಿಯುವುದೇ ಇಲ್ಲ ಅನುಸೂಯೆಯ ಡ್ರಾಮ
ಅವನೊಂಥರ ಕಲಿಯುಗದಲ್ಲಿ ಲಿಂಕು ತಪ್ಪಿದ ಶ್ರೀರಾಮ
                  -ತ್ರಿವಿಕ್ರಮ

Friday, December 18, 2015

ದಯಾಮರಣ

ದಯಾಮರಣ


ತೊರೆದು ಹೋಗುವ ಮುನ್ನ
ತಿರುಗಿ ನೋಡಿದ್ದೇಕೆ ನೀ ಎನ್ನ?
ಕೇಳಿಸಿತೆ ನನ್ನೆದೆಯ ಅರ್ತನಾದ?
ಹಿಂತಿರುಗಿ ನೀ ನಕ್ಕೆ
ಬಿಚ್ಚುತ್ತ ನಿನ್ನ ರೆಕ್ಕೆ
ಆ ಕಡೆಯ ನೋಟಕ್ಕೆ ಧನ್ಯವಾದ.

ನೀ ತಿರುಗಿದೆಯಲ್ಲ?
ನಿನ್ನ ಕುಡಿಹುಬ್ಬ ಬಿಲ್ಲಿಂದ ಚಿಮ್ಮಿದ
ಬಾಣ ನನ್ನೆದೆಗೆ ನಾಟಿದೊಡೆ
ಸಣ್ಣಗೆ ಚೀರಿತು ನನ್ನೆದೆ.
ನಿನಗದು ಕೇಳಿಸಿರಲಾರದು.
ಬದುಕಲೂ ಆಗದೆ
ಸಾಯಲೂ ಆಗದೆ
ಎದೆಯಲ್ಲಿ ನರಳುತ್ತಿದ್ದ ಪ್ರೀತಿಗೆ
ಆ ನಗೆಯ ಹೂಬಾಣ
ನೀಡಿತ್ತು ದಯಾಮರಣ.

ಎದೆಯಲ್ಲೆ ನೆಡೆಸಿರುವೆ
ಪ್ರೀತಿಯ ಸಂಸ್ಕಾರ. ಆದರೆ
ನಿನ್ನ ನಗೆಬಾಣವಿನ್ನೂ
ಹಾಗೆ ಇದೆ ಎದೆಯಲ್ಲಿ
ತೆಗೆಯಲು ಮನಸ್ಸಾಗುತ್ತಿಲ್ಲ.
ಪ್ರೀತಿ ಸಾವಾದರು
ಅದರೆದೆಯಲ್ಲಾದರೂ ಇರಲಿ
ನಿನ್ನ ನಗೆ ಜೀವಂತ.

-ತ್ರಿವಿಕ್ರಮ

Monday, October 26, 2015

ಲಕ್ಕಿ, ನಾನಾ? ಅವಳಾ?



ಲಕ್ಕಿ, ನಾನಾ? ಅವಳಾ?


ಕೆಲವೊಮ್ಮೆ ಎನಿಸುವುದು ಅವಳು ಚಂದ ಇರುವುದೇ ತಪ್ಪಾ?
ಸುಂದರಿಯನು ಬ್ರಹ್ಮ ನನಗ್ಯಾಕೆ ಕೊಟ್ಟನಪ್ಪಾ?
ಹುಡುಗರ ಸಾಲೇ ಉಂಟು ಇವಳ ಬೆನ್ನ ಹಿಂದೆ
ನನ್ನ ಪುಣ್ಯಕ್ಕೆ ನಾನಿದ್ದೆ ಎಲ್ಲರಿಗಿಂತ ಮುಂದೆ

ಹಾಕಿದೆನು ಕಾಳು, ಕಾಳಿಗೆ ಬಿದ್ದಳು ಅವಳು
ಕ್ಷಣಕ್ಕೆ ಬೆಳದಿಂಗಳಾಯ್ತು ನನ್ ಬಾಳು
ಕಾಲ ಕಳೆದಂತೆ ಕೂದ್ಲು ಬೆಳದಂತೆ ಅವಳಾದಳು ಫಿಗರ್ರು
ಬೆಲ್ಲಕೆ ನೊಣ ಮುತ್ತುವಂತೆ ಹಿಂದೆ ಬಿದ್ದರು ಹುಡುಗ್ರು

ಇರಬಾರದಿತ್ತೇ ಅವಳಿಗೆ ಸೊಟ್ಟ ಮೂಗು, ಹಲ್ಲು ಉಬ್ಬು
ಬರಬಾರದಿತ್ತೇ ಸೋಡಾಗ್ಲಾಸು ಆಗಿ ಕಣ್ಣುಗಳು ಮಬ್ಬು
ಆಗ ಬರುತ್ತಿರಲಿಲ್ಲ ಯಾವನೂ ನನ್ ಹುಡ್ಗಿ ಹತ್ರ
ನಾನೊಬ್ನೆ ಇರಬಹುದಿತ್ತು ರಾಜನ್ ತರ..

ಫಿಸಿಕಲಿ ನಾ ವೀಕು, ಇನ್ನು ಬಂದಿಲ್ಲ ಸಿಕ್ಸ್ ಪ್ಯಾಕು
ತಕಮಟ್ಟಿಗೆ ಕಲಿತಿರುವೆ ಓಡಿಸಲು ಬೈಕು
ಈಗಿನ ಕಾಲದ ಹುಡ್ಗೀರ್ಗೆ ಇಷ್ಟೆಲ್ಲಿ ಸಾಕು?
ಸಾಕಾದಾಗ ಹಾಕುವರು ಲವ್ ಸ್ಟೋರಿಗೆ ಬ್ರೇಕು

ಈಗಂತೂ ಕಾಂಪಿಟೇಷನ್ ಜಾಸ್ತೀನೇ ಜಾಸ್ತಿ
ಆದ್ರೂನು ಅವಳ್ಗೆ ನನ್ ಮೇಲೆ ಪ್ರೀತಿ
ಎಲ್ಲರಂಥಲ್ಲ ನನ್ ಹುಡ್ಗಿ ಅವಳೇ ಡಿಫರೆಂಟು
ಆದರೆ ಮುಗಿದೇಹೋಯ್ತು ಒಮ್ಮೆ ಕಮಿಟ್ಟು

ಬರೋ ಹುಡುಗರಿಗೆಲ್ಲಾ ಮಾಡೋಲ್ಲ ಕೇರು
ನಾಚುತ್ತ ಹೇಳುವಳು "ಆಗ್ಲೇ ಆಗ್ಬಿಟ್ಟೈತೆ ಪ್ಯಾರು"


-ತ್ರಿವಿಕ್ರಮ