Saturday, July 25, 2020

ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು

ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು



(ವಿ.ಸೂ. ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ ಉತ್ತರಿಸತಕ್ಕದ್ದು)

ಎರಡು ಪೆಗ್ಗನು ಕುಡಿದೆನೆಂದು
ಮುನಿದ ನಿನ್ನಯ ಮನದ ಮೊಗ್ಗು
ಮತ್ತೆ ಅರಳಿ ಘಮವ ಚೆಲ್ಲಲು
ಎಷ್ಟು ಎಂ.ಎಲ್ ಒಲವು ಬೇಕೇ?

ನಿನಗೆ ಬರೆದ ಕವಿತೆಯೆಲ್ಲವೂ
ಉಸಿರ ಬಿಸಿಗೆ ಅಳಿಸದಂತೆ
ಅಚ್ಚು ಒತ್ತಿದ ಹಾಗೆ ಉಳಿಯಲು
ಯಾವ ದ್ರಾವಣ ಬೆರೆಸಬೇಕೆ?

ಮುಖವ ಕಾಣದ ದಿನಗಳೆಣಿಸಿ
ನೆನಪು ಕಾಡಿದ ಕ್ಷಣವ ಗುಣಿಸಿ
ಎನ್ನ ಮನದ ದುಗುಡ ತಿಳಿಸಲು
ಯಾವ ಫಾರ್ಮುಲ ಬಳಸಬೇಕೆ?

ಎಲ್ಲಾ ತಪ್ಪನು ಮಾಫಿ ಮಾಡಲು
ನಿನ್ನ ಕೊಪದ ಮದ್ಯಸಾರದಿ
ವಿರಹ ತಪಿತ ಹೃದಯವನ್ನು
ಎಷ್ಟು ಡಿಗ್ರಿಲಿ ದಹಿಸಬೇಕೇ?

ಹಾಲು ಬಿಳುಪಿನ ಕೆನ್ನೆ ಮೇಲೆ
ತಿಳಿಯ ಕೆಂಪು ಬಣ್ಣ ಮೂಡಲು
ಕಿವಿಯ ಒಳಗೆ ಕದ್ದು ಪಿಸುಗುಡೋ
ಪೋಲಿ ಪದಗಳ ಲೆಕ್ಕ ಸಾಕೇ?

ತ್ರಿವಿಕ್ರಮ

Friday, February 07, 2020

ಶ್ಯಾಮನು ಬಂದನು ರಾಧೆಯ ಮನೆಗೆ..


ಶ್ಯಾಮನು ಬಂದನು ರಾಧೆಯ ಮನೆಗೆ..




ಶ್ಯಾಮನು ಬಂದನು ರಾಧೆಯ ಮನೆಗೆ ರಾತ್ರಿಯಾಗಿತ್ತು
ಮಾಗಿಯ ಚಳಿಗೆ ಮುಸುಕನು ಹೊದ್ದು ಮಥುರೆಯು ಮಲಗಿತ್ತು
ಆದರೂ ವಿರಹವು ಸುಡುತಿತ್ತು.                                              (1)

ಸುತ್ತಾ ಮುತ್ತಲು ನೋಡುತ ಶ್ಯಾಮ ಹಿತ್ತಲ ಸೇರಿದನು..
ಚಿಲಕವೆ ಇಲ್ಲದ ಬಾಗಿಲ ಮೆಲ್ಲನೆ ಹಿಂದಕೆ ದೂಡಿದನು..
ಕಾಣದೇ ಹೊಸ್ತಿಲನೆಡವಿದನು.                                              (2)

ಹಿತ್ತಲ ಬೇಲಿಯ ಹಿಂದೆಯೇ ಕಾದಿಹ ಪಿಳಿ ಪಿಳಿ ಕಣ್ಣೆರಡು
ಒಳಗಡಿಯಿಟ್ಟ ಶ್ಯಾಮನ ಹೆಜ್ಜೆಯ ಜಾಡನು ಹಿಡಿದಿತ್ತು.
ಹಿಂದೆಯೇ ಮನೆಯನು ಹೊಕ್ಕಿತ್ತು                                           (3)

ಆರು ಕಾಲ್ಗಳುನಾಲ್ಕು ಕಂಗಳು ಕತ್ತಲ ಕದಡಿರಲು
ನೂರು ದೇವರ ನೆನೆಯುತ ಶ್ಯಾಮ ಅಟ್ಟವನೇರಿದನು
ರಾಧೆಯು ಕೋಣೆಯ ಸೇರಿದನು                                            (4)

ಸ್ವರ್ಗದ ಅಪ್ಸರೆ ಮೈದಳೆದಂತೆ ರಾಧೆಯು ಮಲಗಿರಲು
ಬಾನಿನ ದೀಪದ ಬೆಳ್ಳನೆ ಬೆಳಕು ಮೈಯನು ತೊಳೆದಿರಲು
ಇರುಳಲಿ ಮೂಗುತಿ ಹೊಳೆದಿರಲು.                                          (5)

ನಲ್ಲೆಯ ಎದೆಯ ಏರಿಳಿತಗಳು ಉಕ್ಕುವ ಅಲೆಯಂತೆ..
ಅದರೊಳಗಿಳಿದು ತೇಲಿದ ಶ್ಯಾಮ ಮುತ್ತುಗದೆಲೆಯಂತೆ..
ನೋಡುತಾ ನಿಂತನು ಶಿಲೆಯಂತೆ                                           (6)

ಪ್ರೇಮಿಯ ಹರುಷವೇ ಬೆಕ್ಕಿಗೂ  ಕಡೆ ಹಾಲನು ಕಂಡಾಗ
ಸರಿ ಹೊತ್ತಿನಲಿ ಕೇಳದೇ ದೊರೆತ ಸಿರಿಯನು ಸ್ವೀಕರಿಸಿ..
ಸವಿಯಿತು ನಾಲಿಗೆ ಚಪ್ಪರಿಸಿ.                                                (7)

ಬೆಚ್ಚನೆ ಒಲೆಯುಮುಚ್ಚಿದ ಕಂಗಳುಬೆಕ್ಕಿಗೆ ಮೈ ಮರೆತು
ಒಲೆಯ ಬೂದಿಯು ಮುಚ್ಚಿದ ಕೆಂಡಕೆ ಬಾಲವ ತಾಕಿಸಿತು
ಕಿರುಚಿ ಪಾತ್ರೆಯನುರುಳಿಸಿತು                                               (8)

ನೆಲವನು ಸೇರಿದ ಪಾತ್ರೆಯ ಸಪ್ಪಳ ಮನೆಯಿಡಿ ಮಾರ್ದನಿಸಿ..
ಕೂಗಿದರ್ಯಾರೋ ನಡುಮನೆಯಿಂದ ‘ಯಾರದು ಸದ್ದಲ್ಲಿ?’
ಬೆಕ್ಕು ಹಾರಿತು ಕಿಟಕಿಯಲಿ                                                   (9)

ಬಾಗಿಲ ಪರೆದೆಯ ಆಚೆಗೆ ಯಾವುದೋ ದೀಪವು ಬೆಳಗಿರಲು
ನೆರಳನು ಕಂಡು ನುಸುಳಿದ ಶ್ಯಾಮ ರಾಧೆಯ ಮಂಚದಡಿ..
ಭಯದಲಿ ಬಾಗಿಲ ಕಡೆ ನೋಡಿ                                              (10)

ಬೆನ್ನಲಿ ಸುರಿಯಲು ಬೆವರಿನ ಮಳೆಯು ಗುಡುಗುವ ಎದೆಬಡಿತ..
ತಪ್ಪಿಸಿಕೊಳ್ಳುವ ತವಕದಿ ದಾರಿಯ ಹುಡುಕುತ ರಾಧಸಖ..
ಕಾದನು ಬೆಳಗಾಗುವ ತನಕ                                                 (11)

ಕೊಕ್ಕೊಕ್ಕೋಕ್ಕೋ.. ಕೂಗಿದ ನಸುಕಲಿ ಕೋಳಿಯನನುಕರಿಸಿ
ಮೈಯನು ಮುರಿಯುತಾ ಎದ್ದಳು ರಾಧೆ ಹಮ್ಮನೇ ಆಕಳಿಸಿ..
ನಿಂತಳು ಹೊದಿಕೆಯನು ಸರಿಸಿ..                                            (12)

ರಾಧೆಯು ನೆಡೆಯಲು ಗೆಜ್ಜೆಯ ದನಿಯು ದಾರಿಯ ಹೇಳುತಿರೆ..
ಹಿತ್ತಲ ಬಾಗಿಲ ತಲುಪಿದ ಶ್ಯಾಮಕಳಚಿತು ತಿಮಿರ ತೆರೆ
ನಲ್ಲೆಯು ಸಿಕ್ಕಳು ತೋಳಸೆರೆ                                                (13)

ಬೆಚ್ಚಿದ ರಾಧೆಯ ಮಂಪರುಗೆದರಿಸೋ ಕಂಪನ ದೇಹದಲಿ..
ಇನಿಯನ ತೋಳಿನ ಪಂಜರದಲ್ಲಿ ಆದಳು ಕೆಂಪು ಗಿಳಿ
ನಾಚಿಕೆ ಇಣುಕಿತು ಕಣ್ಣಿನಲಿ                                                   (14)

ಬಿಸಿಯಪ್ಪುಗೆಯ ಕುಲುಮೆಯ ಒಳಗಡೆ ಕರಗಿದ ಚೆಲುವೆಯನು
ನಡುವಲಿ ಹಿಡಿದು ಅದರುವ ತುಟಿಗೆ ತುಟಿಯನು ತೀಡಿದನು..
ಬಾನಲಿ ಸೂರ್ಯನು ಮೂಡಿದನು..                                          (15)

ಶ್ಯಾಮನು ಹೊರಟನು ಗೋಕುಲದೆಡೆಗೆ ರಾತ್ರಿ ಕಳೆದಿತ್ತು
ಮೂಡಣದಾಗಸ ರಾಧೆಯ ಕೆನ್ನೆಗೆ ಕನ್ನಡಿಯಾಗಿತ್ತು
ಮಿನುಗುವ ತುಟಿಯಲಿ ನಗುವಿತ್ತು.                                           (16)


ತ್ರಿವಿಕ್ರಮ

Tuesday, January 14, 2020

ಕುದುರೆಯಷ್ಟೇ ನಾನು.


ಕುದುರೆಯಷ್ಟೇ ನಾನು.
 
ಕುದುರೆಯಷ್ಟೇ ನಾನು.
ಕಣ್ಣ-ಪಟ್ಟಿ ಕಟ್ಟಿಕೊಂಡು
ಎಡಕ್ಕು ನೋಡದೇ, ಬಲಕ್ಕೂ ನೋಡದೇ
ಮುಂದಕ್ಕೋಡಬೇಕು..
ಎದುರಾದರೆ ಎಡ-ಬಲಗಳು
ಲಾಳದ ಅಚ್ಚೊತ್ತುವಂತೆ
ಮುಖದ ಮೇಲೆ ಜಾಡಿಸಿ ಒದೆಯಬೇಕು!

ನಾ ಓಡುತ್ತಿದ್ದೆ, ಅತ್ತಿತ್ತ ನೋಡದೇ..
ಬರಲಿದೆ ಎಂದರು ಬಲದಲ್ಲಿ ಮಂದಿರ
ಕೈ ಮುಗಿದು ಬಂದೆ..
ಇಡ್ಲಿ ಕೊಡುತಿದ್ದಳು ಎಡದಲ್ಲಿ ಇಂದಿರಾ
ಚಟ್ನಿ ಜೊತೆ ತಿಂದೆ..
ಎಡ-ಬಲಗಳ ಭುಜಬಲಗಳ ಚಿಂತೆ
ಹುಲ್ಲು ತಿನ್ನುವ ಕುರುಡು ಕುದುರೆಗೆ ಉಂಟೆ?
ನನ್ನ ದಾರಿಯು ನನಗೆ, ಸಾಗುತಿದ್ದೆ ಮುಂದೆ!

ಓಟ ಮುಂದುವರೆದಿತ್ತು, ಬಂದಿತ್ತು
ಪೊಳ್ಳು ಪ್ರತಿಭಟನೆಗಳ, ಸುಳ್ಳು ಸಂಘರ್ಷಗಳ
ಸುದ್ದಿ ಸಾವಿರ ಕಣ್ಮುಂದೆ..
ಕುದುರೆಯೋ ಕತ್ತೆಯೋ, ದಾಖಲೆ ಕೇಳಿದಿರಾ?
ಲದ್ದಿ ಹಾಕುವೆ, ಬಗ್ಗಿರಿ ಹಿಂದೆ!
ಎಲ್ಲಿಂದಲೋ ಬಂದವನು, ಎಲ್ಲಿಗೋ ಹೊರಟವನು
ಇದ್ದಕಿದ್ದಂತೆ ಹೊತ್ತಿ ವ್ಯಾಪಿಸಿದ
ಗುರುತು ದಾಖಲೆಯ ದಳ್ಳುರಿಯಲಿ ಬೆಂದೆ.

ಓಡಿದೆ ಓಡಿದೆ, ಮೈಮರೆತು ಓಡಿದೆ
ಅಸಹ್ಯವಾಗುತಿತ್ತು ಮೆತ್ತಿಕೊಳ್ಳುತಿರಲು
ಮೈಗೆಲ್ಲಾ ಕೆಸರಿಯ ಬಣ್ಣ.
ಓಡಿದೆ ಓಡಿದೆ, ಮೈ ಬೆವತು ಓಡಿದೆ
ಹಸುವ ತಿಂದವರು ಕುದುರೆಯ ಕೊಂದು
ಬಾಯಿ ಚಪ್ಪರಿಸುವ ಮುನ್ನ.
ಅವರ ಮೇಲಿವರು, ಇವರ ಮೇಲವರು
ಹರಿಹಾಯುತಲಿರಲು ಪ್ರತಿನಿತ್ಯ
ಅರಿವಾಯಿತು ನನಗೆ ಕಟುಸತ್ಯ.
ಜಾತಿ(ಧರ್ಮ) ಇಲ್ಲದೇ ಬಲಕೆ ಬಲವಿಲ್ಲ
ನೀತಿಗೆಟ್ಟವರೇ ಎಡದ ಕುಲವೆಲ್ಲಾ

ಓಡಲೇಬೇಕು ಇಲ್ಲಿ, ಕಲಿಗಾಲದಲ್ಲಿ
ಅಧರ್ಮ ಧರ್ಮವ ಗೆಲ್ಲದು
ಧರ್ಮ ಅಧರ್ಮವನು ಮೆಟ್ಟಿ ನಿಲ್ಲದು.
ಕುದುರೆಯಷ್ಟೇ ನಾನು, ಓಡುವುದಷ್ಟೇ ನನ್ನ ಕೆಲಸ.
ನಿನ್ನ ಕರ್ಮವ ನೀ ಮಾಡೆಂದು ನುಡಿದ
ನನ್ನ ಲಗಾಮು ಹಿಡಿದಿರುವ ಜಾಕಿ
ಧರ್ಮ-ಅಧರ್ಮದ ತಕ್ಕಡಿಯ ತೂಗಲು
ಮತ್ತೆ ಅವತಾರವೆತ್ತುವುದು ಬಾಕಿ.

-      - ಆಫ್ಟರ್ ಎ ಲಾಂಗ್ ಟೈಮ್, ತ್ರಿವಿಕ್ರಮ