Thursday, December 05, 2013

ಪ್ರೀತಿಯ ಲಕ್ಕಿಗೆ

 ಪ್ರೀತಿಯ ಲಕ್ಕಿಗೆ
ಹೇಳಿದ್ದೆನಲ್ಲಾ??
ನಿನ್ನ ಹುಟ್ಟು ಹಬ್ಬಕ್ಕೆ ಬರೆದುಕೊಡುವೆನೊಂದು ಕವಿತೆ
ನೀ ಬರುವ ಹಿಂದಿನ ದಿನ ಅದ ಬರೆಯುತ್ತ ಕುಳಿತೆ
ಎದೆಯಲ್ಲಿದ್ದ ಸವಿ ನೆನಪುಗಳ ಕೊಡವಿ ಕೊಡವಿ ಹಾಸಲು
ಹೊರಬಂದ ಒಂದೊಂದು ಪದಗಳು ನಮ್ಮ ಪ್ರೀತಿಗೆ ಮೀಸಲು

ನಾನೇನಾದರೂ ಆಗಿದ್ದಿದ್ದರೆ ಅದ್ಭುತ ಪ್ರೇಮ ಕವಿ
ಒದರುತ್ತಲೇ ಇರುತ್ತಿದ್ದೆ ನನ್ನ ಪ್ರೇಮಕಾವ್ಯವನು
ನೀ ಮುಚ್ಚಿಕೊಳ್ಳುವವರೆಗು ಕಿವಿ
ಏನು ಮಾಡಲಿ ನಾನೊಬ್ಬ ಸಾಮಾನ್ಯ ಪ್ರೇಮಿ
ಆದರೂ ನಾನಲ್ಲ ಯಾವ ಕವಿಗೂ ಕಮ್ಮಿ..!
ಏಕೆ ಗೊತ್ತೇ??
ಕವಿ ಹುಚ್ಚನಂತೆ, ಪ್ರೇಮಿಯೂ ಹುಚ್ಚನೆ
ನಾ ನಿನ್ನ ಪ್ರೀತಿಯ ಹುಚ್ಚ
ನಾ ಕವಿಯೂ ಹೌದು ಪ್ರೇಮಿಯೂ ಹೌದು

ನಿರಾಭರಣ ಸುಂದರಿ ನೀನು
ನಾ ಹೇಳಿದೆನೆಂದು ಧರಿಸಿದೆ ಮೂಗುಬೊಟ್ಟನು
ಅದ ನೋಡಿದ ಮರುಕ್ಷಣ ನಾ ಸೋತುಬಿಟ್ಟೆನು
ನೀಳ ಮೂಗ ಆಗಸಕೆ ಮೂಗುತಿಯೆ ಚಂದಿರ
ತುಂಟತನದಿ ಕುಡಿಹುಬ್ಬ ಹಾರಿಸುವ ಪರಿಯೆಷ್ಟು ಸುಂದರ
ಅಪ್ಪಣೆ ಕೊಡು ಗೆಳತಿ
ಮುಖದ ಮೇಲೆಯೇ ನಾನಿರುವೆ ಕಟ್ಟಿಕೊಂಡು ಮಂದಿರ

ಹಣೆಯ ಮೇಲಿನ ಮುಂಗುರುಳು ಎಡಗೈಯ ಕಿರುಬೆರಳು
ಸಾಕೆನಗೆ ಹಿಡಿಸಲು ಹುಚ್ಚು - ಹಗಲೂ ಇರುಳೂ
ಎಷ್ಟುದ್ದವಿತ್ತು ಆ ನಿನ್ನ ಕಿರುಬೆರಳ ಉಗುರು
ಅದಕ್ಕಿಂತ ಒಂದು ಕೈ ಹೆಚ್ಚಾಗಿಯೇ ಇತ್ತು ನಿನ್ನ ಪೊಗರು
ಆ ಉಗುರು ಮುರಿಯಿತು ಕಣ್ತುಂಬ ಅತ್ತೆ
ಈ ಪೊಗರು ಇಳಿಯದಿರೆ ನನ್ನಾಣೆ ನಾ ಸತ್ತೆ

ಎದೆಯಲ್ಲಿ ಬಿತ್ತಿರುವೆ ಹಸಿ ಹಸಿ ಕನಸುಗಳ ಗಿಡ
ಮುಳುಗಿಸದೆ ತೇಲಿಸೆನ್ನ ಸಿಗುವವರೆಗೆ ಪ್ರೀತಿ ಕಡಲ ದಡ
ನೀನೇ ನನ್ನ ಪಾಲಿನ ವಾಣಿ ಲತಿಕಾ ಲಕ್ಕಿ
ನಿನಗೆಂದೆ ಬುಕ್ ಆಗಿದೆ ನನ್ನೆದೆಯ ಪಲ್ಲಕ್ಕಿ
ನಾವಾಡಿದ ಜಗಳಗಳಿಗೆ ಮೊದಲಿಲ್ಲ ಕೊನೆಯಿಲ್ಲ
ಆದರೂ ಪ್ರೀತಿ ಕೋಟೆಯ ಸಣ್ಣ ಕಲ್ಲೂ ಕದಲಿಲ್ಲ
ಜೊತೆಯಾಗಿ ನೀನಿರಲು ಮಾಡುವೆ ಕೊನೆಯಿರದ ತಂಟತನ
ನೀ ಹೋದ ಮರುಗಳಿಗೆ ಕಾಡುವುದು ಒಂಟಿತನ
ಹೋಗದಿರು ನನ್ನನ್ನು ತೊರೆದು
ನನ್ನೆದೆಯ ಮೇಲೆ ಕೊನೆ ಸಾಲ ಬರೆದು

- ತ್ರಿವಿಕ್ರಮ