Friday, January 11, 2013

ನಾನು ನಿರ್ಭಯೆ



ನಾನು ನಿರ್ಭಯೆ..

ಬಾಳಿ ಬದುಕುವ ಕಡೆಯ ಆಸೆಗೆ 
ಇಟ್ಟಿರುವೆ ನಿಟ್ಟುಸಿರ ಪೂರ್ಣವಿರಾಮ.
ಉಸಿರು ತನ್ನ ಆಸ್ತಿಯನು
ಸಾವಿನ ಹೆಸರಿಗೆ ಬರೆದು ಕೊಟ್ಟಿದೆ,
ಆದರೆ ಆ ಸಾವಲ್ಲಿಯೂ ನಾ 
ಬದುಕುವ ಸಣ್ಣ ಕನಸ ಕಟ್ಟಿದೆ.
ನನಗಿನ್ನು ಬಂದಿರಲಿಲ್ಲ ಮುಪ್ಪು
ನಾ ಮಾಡಿದ್ದಾದರೂ ಯಾವ ಮಹಾ ತಪ್ಪು?


ಮುದ್ದಾದ ಮುಸ್ಸಂಜೆಯ ಮುಂದಿದ್ದದ್ದು
ಆ ಕ್ರೂರ ಕರಾಳ ರಾತ್ರಿ
ಗರಿಗೆದರಿದ್ದ ಸವಿಗನಸುಗಳ ಹೊತ್ತ 
ಪುಟ್ಟ ಹಕ್ಕಿಯಂತೆ ಗೂಡಿಗೆ ಮರಳುತ್ತಿದ್ದೆ.
ನಾ ಆಗ ತಾನೆ ಅರಳಿದ್ದ ಬಣ್ಣ ಬಣ್ಣದ ಹೂ
ನನಗಿರಲಿಲ್ಲ ಮುದುಡಿಹೋಗುವ
ಒಂದು ಚಿಕ್ಕ ಸುಳಿಹು.
ಆದರೆ ನಾ ಏರಿದ್ದು ಮೃತ್ಯುವಿನ ವಾಹನ
ಕಿಟಕಿಯಲ್ಲಿದ್ದ ಕಪ್ಪು ಚಂದಿರನತ್ತ
ಹರಿಯಲೇ ಇಲ್ಲ ನನ್ನ ಗಮನ.
ನಾ ಆಗಿಹೋಗಿದ್ದೆ ಕ್ಷುದ್ರ ಕ್ರಿಮಿಗಳ ಭೋಜನ.
ಹಸಿದ ನಾಯಿಯ ಹಿಂಡಿಗೆ ಸಿಕ್ಕ
ತುಪ್ಪ ಸವರಿದ ರೊಟ್ಟಿಯಂತಾಗಿದ್ದ ನನ್ನ
ಹರಿದರಿದು ತಿಂದರು.
ಪರಿಧಿಯನು ದಾಟಿ ಸರದಿಯಲಿ ಉಂಡರು
ಕಿಂಚಿತ್ ಕರುಣೆಯ ಕಾಣಿಸದೆ
ಇರಿದಿರಿದು ಕೊಂದರು.
ಮೃಷ್ಟಾನ್ನ ತುಂಬಿದ ಬಾಳೆಲೆಯ
ಬರಿದು ಮಾಡಿ ಬೆರಳ ನೆಕ್ಕಿದರು
ನನ್ನ ಕಣ್ಣಲ್ಲಿ ಅವರಾಗಿರಲಿಲ್ಲ ರಕ್ಕಸರು,
ನಿರ್ಭಾಗ್ಯ ಭಾಜನೆಯಾದ ನನಗೆ
ನಿಸ್ಸಹಾಯಕತೆಯ ನರಕ ತೋರಿದ ನಪುಂಸಕರು.

ನಡುಗಿಸುವ ಆ ನಟ್ಟಿರುಳಿನಲಿ
ನೆತ್ತರ ನೆರಳ ಹುಡುಕುತ್ತಿದ್ದೆ
ಸುತ್ತಲೂ ಇದ್ದದ್ದು ಕಗ್ಗತ್ತಲು
ಬರಲಿಲ್ಲ ಯಾರೂ 
ಕೈ ಹಿಡಿದು ಮೇಲೆತ್ತಲು
ಪಾಳು ಬಿದ್ದ ಮನೆಯ
ಪಾಳಿಯಲಿದ್ದು ಕಾಯುವವರಾರು?
ನೆಲದ ಮೆಲೆ ಚೆಲ್ಲಿದ್ದ ನೆತ್ತರಲಿ
ತನ್ನ ನಗ್ನ ಪ್ರತಿಬಿಂಬವನು ಕಂಡ
ಚಂದಿರನು ಹೊದ್ದಾಗ ಮೋಡದ ಹೊದಿಕೆ
ಛಿದ್ರವಾಗಿ ಹೋಗಿತ್ತು ಈ ನನ್ನ ಬದುಕೆ..!

ನನ್ನ ಬದುಕಿನ ದೀಪ
ನಿಮ್ಮ ಕಣ್ಣೆದುರೆ ಆರುವಾಗ
ನಿಂತು ನೋಡಿದ ನೀವೆಲ್ಲ
ಆಮೇಲೆ ದೀಪ ಹಚ್ಚಿ ಕಣ್ಣೀರಿಟ್ಟದ್ದೇಕೆ?
ಸಿಗಲಿ ಎಂದೇ ನನ್ನ ಆತ್ಮಕ್ಕೆ ಶಾಂತಿ?
ಹಾಗಿದ್ದರೆ ಅದು ನಿಮ್ಮ ಭ್ರಾಂತಿ.
ಪಶ್ಚಾತಾಪದ ಹೆಸರಲ್ಲಿ
ಅನುಕಂಪದ ನೆಪದಲ್ಲಿ
ಗಿಳಿಪಾಠ ಓದುವ ನಾಯಕರೊಡನೆ
ಸೇರಿ ಮಾಡಿದಿರಿ ನೋವಿನ ನಟನೆ
ಅದಕ್ಕೆ ನೀವೆ ಕೊಟ್ಟ ಹೆಸರು ಪ್ರತಿಭಟನೆ.

ದೋಷಗಳೇ ಇರುವ ದೇಶಕ್ಕೊಂದು
ರಕ್ಷಣೆಯೇ ಇರದ ರಾಜಧಾನಿ
ಅದನ್ನಾಳುವ ನೀಯತ್ತಿರದ ನಾಯಕರನ್ನೇ
ತಮ್ಮ ಪ್ರತಿನಿಧಿಗಳನ್ನಾಗಿಸಿರುವ ಪ್ರಜೆಗಳು
ಇಲ್ಲಿರುವುದು ಸುಲಭವಲ್ಲ,
ಆದರೆ ಲೋಕವನ್ನೇ ತ್ಯಜಿಸಿದ
ನನಗಿನ್ನು ಯಾವ ಭಯವೂ ಇಲ್ಲ
ನಾನು ನಿರ್ಭಯೆ,,


ದೇಶಕ್ಕೆ ದೇಶವೆ ಕಂಬನಿ ಸುರಿಸಿದ ನಿರ್ಭಾಗ್ಯೆ ನಿರ್ಭಯಾಳ ಸಾವು ನಿಜವಾಗಿಯೂ ಭಯಂಕರ.
ಅವಳನ್ನು ನನ್ನ ಅಕ್ಕ ಎಂದು ಭಾವಿಸಿ, ಅವಳ ತಮ್ಮನಾಗಿ ಅವಳ್ ಸ್ಥಾನದಲ್ಲಿ ನಿಂತು, ಅವಳಿದ್ದ ಪರಿಸ್ಥಿತಿಯ ಕುರಿತು ಯೋಚಿಸಿದಾಗ ಬಂದ ಕಹಿ-ಕಹಿ ಸಾಲುಗಳ ಸೇರಿಸಿ ಒಂದು ದುರಂತ ಕವಿತೆಯ ರೂಪ ನೀಡಲು ಪ್ರಯತ್ನಿಸಿದ್ದೇನೆ.

                                                    -ತ್ರಿವಿಕ್ರಮ