Sunday, August 04, 2013

ಮಹಾಯುದ್ಧ

ಮಹಾಯುದ್ಧ


"ಈಗ ನಾನು, ಜಗತ್ತುಗಳ ವಿನಾಶಕ ಮೃತ್ಯುವಾಗಿದ್ದೇನೆ"
-ಭಗವದ್ಗೀತೆ

ಬಾನಿಗೆ ಜಿಗಿದಿತ್ತು ಯುದ್ಧವಿಮಾನ

ಜಪಾನಿನೆಡೆಗೆ ಮಾಡಿತ್ತು ಪ್ರಯಾಣ
ಕಾದು ಕುಳಿತಿದ್ದನು ಯಮನು
ಕೊಂಡೊಯ್ಯಲು ತನ್ನೊಡನೆ
ನರಳಲಿರುವ ನರರ ಪ್ರಾಣ

***

ನಗರಕ್ಕದೊಂದು ಹೊಸದಿನ
ಆಗತಾನೆ ಮನೆಗಳಿಂದ
ಹೊರಗಡಿಯಿಡುತದ್ದರು ಜನ
ಮೇಲಿಂದ ಬರಲಿದ್ದ ಮೃತ್ಯು ದೇವನ
ಕಡೆಗಿರಲಿಲ್ಲ ಯಾರದೂ ಗಮನ

ರೋಗಿಗೆ ಮಾತ್ರೆ ಕೊಟ್ಟಳು ನರ್ಸು
ಪೋಂ ಪೋಂ ಎಂದಿತು ಶಾಲೆಯ ಬಸ್ಸು
ಗಂಡನು ಕೂಗಿದ 'ಬಾರೆ ಬೇಗ'
ಹೆಂಡತಿ ಹಾಕಿದಳು ಮನೆಗೆ ಬೀಗ
ಅಮ್ಮ ತಿನಿಸಿದಳು ಮಗುವಿಗೆ ಬ್ರೆಡ್ಡು
ಹಾಲಿನವ ಕೇಳಿದ ತಿಂಗಳ ದುಡ್ಡು
ಮುದುಕಿಯು ತಿರುಗಿಸಿದಳು ಕ್ಯಾಲೆಂಡರ್ರು
ಗುರುತು ಮಾಡಿದಳು "ಆಗಸ್ಟ್ ಆರು"

ಕೇಳಿತು ಕಿವಿ ಗಡಚಿಕ್ಕುವ ಶಬ್ದ
ಊರಿಗೆ ಊರೇ ಆಯಿತು ಸ್ತಬ್ದ
ಗಗನದಿ ಕಂಡಿತು
ಹಣಬೆಯಂತ ಕಾರ್ಮೋಡ
ಹೊಮ್ಮಿತು ಒಡನೆಯೆ ಬೆಂಕಿಯು ಕೂಡ
ಚಾಚುತ್ತ ತನ್ನಯ ಕೆನ್ನಾಲಿಗೆ
ನುಂಗಿತು ಸಾಗಿತು
ಎದುರಿಗೆ ಸಿಕ್ಕವರನೊಮ್ಮೆಗೆ
ತಿಳಿಯದು ಯಾರಿಗೂ ಏನದು ಎಂದು
ಹೇಳುವವರೆಗೂ
ಸಾವೇ ಬಳಿ ಬಂದು..!


ನಿಮಿಷದಿ ನೆಡೆದಿತ್ತು ಸರ್ವನಾಶ
ಉಳಿಸದೆ ಯಾವುದೆ ಅವಶೇಷ
ಸುತ್ತಲೂ ಜನರು ಸತ್ತು ಬಿದ್ದಿರಲು
ನಡುಗಿ ಶರಣಾಯಿತು ದೇಶ.
ಹೆಡೆಯಾಡಿಸಿತ್ತು
ದೊಡ್ಡಣ್ಣನೆಂಬ ವಿಷಸರ್ಪ
ಕೇಳುವರೇ ಇರಲಿಲ್ಲ ಅದರ ದರ್ಪ
ಒಬ್ಬ ಸತ್ತರೆ ಅದು ಸಾವು
ಸಾವಿರ ಜನ ಸತ್ತರೆ
ನಿಂತು ಲೆಕ್ಕ ಹಾಕುವೆವು ನಾವು

ನೆಲಸಮವಾಗಿತ್ತು ಹಿರೋಶಿಮಾ
ಅಮಯಾಕರ ಬಲಿಪಡೆದ
ಅಮೇರಿಕಾ ತೋರಿತ್ತು ಪರಾಕ್ರಮ
ವಿಜ್ಞಾನವೆ ಆಗಿ ಆಯುಧ
ಮುಗಿಸಿತ್ತು ಎರಡನೇ ಮಹಾಯುದ್ಧ

***

ಕಣ್ಣ ಮುಂದೆಯೇ ಇಂದು
ಮೇಲೆದ್ದಿದೆ ಹಿರೋಶಿಮಾ
ಆ ಬೂದಿಯ ಕೊಡವಿಕೊಂಡು
ಆದರೂ ಆರಿಲ್ಲ ಬೆಂಕಿಯ ತಾಪ
ತಟ್ಟುತ್ತಲೇ ಇದೆ
ಜಪಾನಿನ ಜನರಿಗೆ ಶಾಪ.
ಬದುಕುತಿರುವರು ಮಡಿದವರ ನೆನಪಿನೊಡನೆ
ನೆನೆಯುತ್ತಾ ಆ ದಿನವ ಕಣ್ಣೀರಿನೊಡನೆ..!

                                                                                                                    - ತ್ರಿವಿಕ್ರಮ

















Saturday, August 03, 2013

ಎಲ್ಲಿರುವೆ??

ಎಲ್ಲಿರುವೆ??


ನಾ ಕರೆ ಮಾಡಿದಾಗಲೆಲ್ಲ
ನೀ ವ್ಯಾಪ್ತಿ ಪ್ರದೇಶದಿಂದ ಹೊರಗೆ
ಪ್ರೀತಿಗೆಲ್ಲಿದೆ ವ್ಯಾಪ್ತಿ??
ಚಂದ್ರನ ಮೇಲೆಯೇ ಇದ್ದರೂ
ಇಳಿದು ಬಂದು ಈ ಧರೆಗೆ
ಉತ್ತರಿಸು ನೀ ನನ್ನ ಕರೆಗೆ

ನಾನಲ್ಲ ಕಾಳಿದಾಸ
ಕಳಿಸಲು ನಿನಗೆ ಮೇಘಸಂದೇಶ
ಆದರೂ ಕೇಳಲಾರದು
ನನ್ನ ಹುಚ್ಚು ಮನಸ್ಸು
ಕಳಿಸು ಎನುವುದು ನಿನಗೆ ಎಸ್ಸೆಮ್ಮೆಸ್ಸು
ನನಗೆ ತಿಳಿಯದಿರುವಾಗ
ನಿನ್ನನ್ನು ತಲುಪುವ ಬಗೆ
ಡೊಕೊಮೋ ನಿನ್ನನ್ನು ಹುಡುಕೀತು ಹೇಗೆ?

ಸಾಕಾಗಿದೆ ಹುಚ್ಚು ಕನಸುಗಳ ಸವಾರಿ
ಕಟ್ಟುವುದಕ್ಕೂ ಮುನ್ನ
ಕೆಟ್ಟಿರೋ ಹೃದಯಕ್ಕೊಂದು ಗೋರಿ
ತೋರಿಸು ನಿನ್ನ
ಮನಸನ್ನು ಸೇರುವ ದಾರಿ
ಅದಕಾಗಿ ನಾ ಎಲ್ಲಕ್ಕೂ ತಯಾರಿ

ಆಗಲೇ ನಿನ ಕನಸುಗಳ ರಾಯಭಾರಿ?
ಬರೆಯುಲೇ ನಿನ್
ಹೆಸರಲ್ಲೊಂದು ಕಾದಂಬರಿ?
ಹಾಡಲೇ ಕನ್ನಡದಲ್ಲಿ ಕೋಲವರಿ?

ನೆನಪಿಡು ಹುಡುಗಿ
ನೀನೇ ಇಲ್ಲದ ನಾನು
ಮೋಡ ಮುಸುಕಿದ ಬಾನು
ರೆಕ್ಕೆ ತಿರುಗದ ಫ್ಯಾನು
ಕುಡಿದೆಸೆದ ಕೋಲಾ ಕ್ಯಾನು
ಮತ್ತೊಮ್ಮೆ ಹೇಳುವೆ
ಎಲ್ಲೇ ಇದ್ದರೂ ನೀನು
ತಡಮಾಡದೆ ಬಂದು ಸೇರೆನ್ನನು..!

                                                                                                                -  ತ್ರಿವಿಕ್ರಮ