Friday, January 18, 2013

ಮೊಬೈಲು ಜೀವ

         ಮೊಬೈಲು ಜೀವ

            ಇಂದು ಮುಂಜಾನೆ ಏಳುತ್ತಿದ್ದಂತೆಯೆ, ಏಕೋ ಏನೋ ಪ್ರತಿದಿನ ಮೊಬೈಲ್ ಬಟನ್ ಒತ್ತುತ್ತಿದ್ದ ಕೈಗಳು ದೇವರಿಗೆ ನಮಿಸಿದವು. ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ ಕಣ್ಣುಗಳು ಕಿಟಕಿಯಿಂದ ಬರುತ್ತಿದ್ದ ಸೂರ್ಯನ ಕಿರಣಗಳನ್ನು ನೋಡಿದವು. ಮೊಬೈಲ್ ಪಕ್ಕದಲ್ಲೆ ಬಿದ್ದಿರುವುದನ್ನು ಕಂಡರು ಅದನ್ನು ಮುಟ್ಟುವುದಕ್ಕೂ ಮನಸಾಗಲಿಲ್ಲ. ಕಂಡರೂ ಕಾಣದ ಹಾಗೆ ಎದ್ದು ಹೋಗಿ ಸ್ನಾನ, ತಿಂಡಿ ಮುಗಿಸಿ ಬಂದೆ. ಆಸೆ ತಡೆಯಲಾಗದೆ ಹಾಸಿಗೆಯಲ್ಲಿ ನಿಶ್ಚೇತವಾಗಿ ಬಿದ್ದಿದ್ದ ಮೊಬೈಲನ್ನು ಕೈಗೆತ್ತುಕೊಂಡೆನಾದರೂ ಸ್ವಿಚ್ಆಫ್ ಆಗಿದ್ದ ಅದಕ್ಕೆ ಜೀವ ತುಂಬುವ ಮನಸಾಗಲಿಲ್ಲ. ನೆನ್ನೆ ರಾತ್ರಿ ಅವಳಾಡಿದ ಮಾತುಗಳು ಮನಸ್ಸನ್ನು ಇನ್ನೂ ಇರಿಯುತ್ತಿದ್ದವು. ನಿನ್ನನ್ನು ಬಿಟ್ಟು ನಾ ಬದುಕಿರಲಾರೆ ಎಂದಿದ್ದ ನಾಲಿಗೆಯೇ, ದಯವಿಟ್ಟು ನನಗೆ ತೊಂದರೆ ಕೊಡಬೇಡ ನನ್ನನ್ನು ಬಿಟ್ಟುಬಿಡು ಎಂದಿತ್ತು. ಪ್ರೇಮಕ್ಕೆ ಕಣ್ಣು ಮಾತ್ರವಲ್ಲ ಕೊಂಚ ಕರುಣೆಯೂ ಇಲ್ಲ ಎಂದೆನಿಸಿತು. ಮೊಬೈಲನ್ನು ಬಿಚ್ಚಿ ಸಿಮ್ ಹೊರತೆಗೆದು ಕಸದ ಬುಟ್ಟಿ ಸೇರಿಸಿದೆ. ಮನಸ್ಸು ನಿರಾಳವಾಯಿತು.
         ಕಾಲೇಜಿಗೆ ಹೊರಡಲು ಸಮಯ ನೋಡಿದೆ. ಅವಳೇ ಕೊಡಿಸಿದ್ದ ವಾಚ್ ಸಮಯ ತೋರಿಸುವುದನ್ನೂ ನಿಲ್ಲಿಸಿತ್ತು. ಅದನ್ನು ಬಿಚ್ಚಿ ಮೊಬೈಲ್ ಮೇಲಿಟ್ಟು ಹೊರನೆಡೆದೆ.