Tuesday, December 18, 2018

ಮ್ಯಾರಥಾನ್ ಗಾಂಧಿ


ಮ್ಯಾರಥಾನ್ ಗಾಂಧಿ


ನಾಥೂರಾಮನ ಕೈಯಲ್ಲಿದ್ದ ಬೆರೆಟ್ಟಾ ಎಂ34 ಪಿಸ್ತೂಲಿನಿಂದ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡೊಂದು ಸಿಡಿಯಿತು. ಅದರ ಹಿಂದೆಯೇ ಇನ್ನೊಂದು, ಮತ್ತೊಂದು..!

ಗಾಂಧೀಜಿ ಬೆಚ್ಚಿ ತನ್ನತ್ತಲೇ ಮುಖ ಮಾಡಿದ್ದ ಪಿಸ್ತೂಲಿನ ಕಡೆಗೆ ನೋಡಿದರು. ಆದರೆ ಅದರಿಂದ ಹೊರಬರುತ್ತಿದ್ದ ಗುಂಡುಗಳು ಕೇವಲ ಗುಂಡುಗಳಾಗಿರಲಿಲ್ಲ. ಅದರಲ್ಲಿದ್ದದ್ದು ಇಬ್ಭಾಗವಾದ ದೇಶದ ನಡುವೆ ಸಿಕ್ಕಿಕೊಂಡು ತಮ್ಮದೆಲ್ಲವನ್ನೂ ಕಳೆದುಕೊಂಡವರ ದುಃಖ, ಎರಡು ದೇಶಗಳಲ್ಲಿ ತಾವು ಎಲ್ಲಿಗೂ ಸೇರದೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವರ ಅಸಹಾಯಕತೆ, ಯಾರೋ ಮಾಡಿದ ತಪ್ಪಿಗೆ, ಯಾರದ್ದೋ ಅಧಿಕಾರದ ಲಾಲಸೆಗೆ, ತಮ್ಮ ಜೀವನ ಬಲಿ ಕೊಟ್ಟವರ ದ್ವೇಷ, ರೋಷ, ಆಕ್ರೋಷಗಳು. ಇವೆಲ್ಲವೂ ಸೇರಿ ನಾಥೂರಾಮನ ಕೈಲಿದ್ದ ಪಿಸ್ತೂಲಿನ ಮೂರು ಗುಂಡುಗಳಾಗಿ ಬಂದು ಇನ್ನೇನು ಗಾಂಧೀಜಿಯ ಎದೆ ಸೀಳಬೇಕು, ಅಷ್ಟರಲ್ಲಿ..

ಗಾಂಧೀಜಿ ಕೂಡಲೇ ಕೈಯಲ್ಲಿದ್ದ ಕೋಲನ್ನು ಮೇಲೆಸೆದು ಹಿಂದೆ ತಿರುಗಿ ಓಡತೊಡಗಿದರು. ನಾಥೂರಾಮನ ಗುಂಡುಗಳು ಹಿಂಬಾಲಿಸತೊಡಗಿದವು. ಗಾಂಧೀಜಿಯವರ ಪಕ್ಕದಲ್ಲಿದ್ದ ಮನುಬೆನ್ ಮತ್ತು ಅಭಾ, ಸುತ್ತಲೂ ಪ್ರಚಾರಕ್ಕೆಂದು ನೆರೆದಿದ್ದ ಅನುಯಾಯಿಗಳು, ಗುಂಡು ಹಾರಿಸಿದ ನಾಥೂರಾಮ, ಎಲ್ಲರೂ ಏನಾಯಿತು ಎಂದು ನೋಡುವಷ್ಟರಲ್ಲಿ, ಅವರು ಬಿರ್ಲಾ ಭವನದಿಂದ ಬಹಳ ದೂರ ಓಡಿಹೋಗಿದ್ದರು. ಕಾಲಿನಲ್ಲಿದ್ದ ಚಪ್ಪಲಿ, ಮೈಮೇಲೆ ಹೊದ್ದಿದ್ದ ಅಂಗವಸ್ತ್ರ, ಕಣ್ಣಿನ ಕನ್ನಡಕ ಅದೆಲ್ಲೆಲ್ಲಿ ಹಾರಿ ಬಿದ್ದವೋ, ಗಾಂಧೀಜಿ ಎದ್ದು ಬಿದ್ದು ಓಡತೊಡಗಿದ್ದರು. ತಾನು ಎತ್ತ ಓಡುತ್ತಿದ್ದೇನೆಂಬ ಪರಿವೆಯೂ ಇಲ್ಲದೇ ಓಡುತ್ತಿದ್ದ ಅವರು ದೆಹಲಿಯನ್ನೆಲ್ಲಾ ಸುತ್ತಿ, ಪಂಜಾಬಿನ ಕಡೆಗೆಲ್ಲೋ ಓಡತೊಡಗಿದರು. ಆ ಮೂರು ಗುಂಡುಗಳು ಬಿಡದೇ ಹಿಂಬಾಲಿಸುತ್ತಲೇ ಇದ್ದವು.

ಇತ್ತ ಗುಂಡು ಹಾರಿಸಿದ ನಾಥೂರಾಮನಿಗೆ ಮೊದಲು ಬಿರ್ಲಾ ಭವನದಲ್ಲಿದ್ದ ಜನರೆಲ್ಲಾ ಚೆನ್ನಾಗಿ ಥಳಿಸಿದರು. ಗಾಂಧೀಜಿ ಇರುವ ತನಕ ತಮ್ಮನ್ನು ಕಚ್ಚಿದ ಇರುವೆಯನ್ನೂ ಕೊಲ್ಲದೇ ಅಹಿಂಸಾ ತತ್ವವನ್ನು ಪಾಲಿಸುತ್ತಿದ್ದ ಅವರು ಗಾಂಧೀಜಿ ಓಡುತ್ತಲೇ ನಾಥೂರಾಮನ ಮೇಲೆ ಮುಗಿಬಿದ್ದರು. ಆಳಿಗೊಂದೇಟು ಎಂಬಂತೆ ಹೊಡೆಯುವವರೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅವನನ್ನು ಬಂಧಿಸಿ ಕರೆದೊಯ್ದರು. ನ್ಯಾಯಲಯದ ಮುಂದೆ ಹಾಜರಿಪಡಿಸಿದರು. ವಿಚಾರಣೆ ನೆಡೆಯಿತು. ನಾಥೂರಾಮ ಗುಂಡು ಹಾರಿಸಿದ್ದನಾದರೂ ಅವು ಗಾಂಧಿಯನ್ನು ಕೊಲ್ಲುವ ತನಕ ಯಾವ ತೀರ್ಪನ್ನೂ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ತಾನು ಹಾರಿಸಿದ ಗುಂಡುಗಳು ಇಂದಲ್ಲ ನಾಳೆ ಗಾಂಧಿಯನ್ನು ಕೊಲ್ಲುತ್ತದೆ ಎಂಬ ಆತ್ಮವಿಶ್ವಾಸದಿಂದ ನಾಥೂರಾಮನೂ ಕಾಯತೊಡಗಿದ.

ಈ ಓಟ ಮುಗಿಯುವುದಿಲ್ಲವೆಂದು ಅರಿವಾದ ಗಾಂಧೀಜೀ ಹಿಂದೆ ತಿರುಗಿ ಗುಂಡುಗಳ ಜೊತೆಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ದೇಶ ವಿಭಜನೆಯಲ್ಲಿ ತನ್ನ ತಪ್ಪೇನಿಲ್ಲ, ಆ ಪರಿಸ್ಥಿತಿಯಲ್ಲಿ ಅದು ಅವಶ್ಯಕವಾಗಿತ್ತು’ ಎಂದು ತಿಳಿಹೇಳಿದರು. ‘ಪಾಕಿಸ್ತಾನಕ್ಕೆ ಹಣ ಸಹಾಯ ಮಾಡಿದ್ದರಲ್ಲಿ ತನಗೆ ಒಂದು ಪೈಸೆ ಲಾಭವಿಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಷ್ಟೇ ತನ್ನ ಉದ್ದೇಶವಾಗಿತ್ತು’ ಎಂದು ಪರಿಪರಿಯಾಗಿ ವಿವರಿಸಿದರು. ‘ಈ ದೇಶ ಇಬ್ಭಾಗವಾದರೆ ಅದು ತನ್ನ ಗೋರಿಯ ಮೇಲೆಯೇ ಎಂದು ಒಮ್ಮೆ ಹೇಳಿದ್ದನ್ನೂ ಒತ್ತಿ ಒತ್ತಿ ಹೇಳಿ ತಾನು ವಿಭಜನೆಯ ಪರವಾಗಿ ಇರಲಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಗುಂಡುಗಳಿಗೆ ತಮ್ಮ ಗುರಿ ತಲುಪುವುದರ ಹೊರತಾಗಿ ಮತ್ಯಾವುದರ ಕಡೆಗೂ ಲಕ್ಷ್ಯವಿರದಿದ್ದನ್ನು ಅರಿತ ಗಾಂಧೀಜಿ ಸುಮ್ಮನೇ ಓಡತೊಡಗಿದರು.

ಗಾಂದೀಜಿಯ ಈ ಸಾವಿನ ಮ್ಯಾರಥಾನ್ ಸುದ್ದಿ ದೇಶದಲ್ಲೆಲ್ಲಾ ಹಬ್ಬಿತು. ರೇಡಿಯೋಗಳಲ್ಲಿ ಗಾಂಧಿ ಯಾವ ಊರಿನಲ್ಲಿ ಓಡುತ್ತಿದ್ದಾರೆ ಎಂದು ಗಂಟೆಗೊಮ್ಮೆ ಸುದ್ದಿ ಬಿತ್ತರವಾಗತೊಡಗಿತು. ನೆಡೆಯಲೂ ಶಕ್ತಿ ಇಲ್ಲದೇ ಕೋಲನ್ನೂರುತ್ತಲೋ, ಬೇರೆಯವರ ಹೆಗಲ ಮೇಲೆ ಕೈಯಿರಿಸಿಕೊಂಡೋ ನೆಡೆಯುತ್ತಿದ್ದ ಎಪ್ಪತ್ತೇಳರ ಮುದುಕಪ್ಪ ಆಯಾಸವೇ ಇಲ್ಲದಂತೆ ಓಡುತ್ತಿದ್ದಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಈ ಬಗ್ಗೆ ಎಲ್ಲೆಡೆ ಬಹಳಷ್ಟು ಚರ್ಚೆಗಳಾದವು. ಅವರ ಈ ಅಶ್ವಶಕ್ತಿಗೆ ವರುಷಗಳಿಂದ ತನ್ನ ಮೇಲೆಯೆ ಮಾಡಿಕೊಳ್ಳುತ್ತಿದ್ದ ವಿಶೇಷ ಯೋಗ, ಪ್ರಯೋಗಗಳೇ ಕಾರಣವಿರಬಹುದು ಎಂದು ಜನ ಮಾತನಾಡಿಕೊಂಡರು. ಗಾಂಧೀಜಿಯವರು ಊರಿಂದ ಊರಿಗೆ ಓಡುತ್ತಿದ್ದರೆ, ಮುಂದೆ ಯಾವ ಊರಿಗೆ ಓಡಬಹುದೆಂದು ಊಹಿಸುತ್ತಿದ್ದ ಜನ ಆ ಊರು ತಲುಪಿ ಅವರ ಓಟವನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಕೆಲವರಂತೂ ಅವರು ಎಷ್ಟು ನಿಮಿಷದಲ್ಲಿ ಊರು ದಾಟಬಹುದು, ಮುಂದೆ ಯಾವ ಊರಿಗೆ ಹೋಗಬಹುದು, ಗುಂಡು ಯಾವ ಊರಿನಲ್ಲಿ ಅವರ ಮೈ ಸೇರಬಹುದೆಂದು ತಮ್ಮ ತಮ್ಮಲ್ಲೇ ಹಣ ಕಟ್ಟಿಕೊಂಡು ಜೂಜಾಡಿದರು. ಇಂಥಹವರನ್ನೆಲ್ಲಾ ಪೊಲೀಸರು ಅವರನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಿದರು.

ಗಾಂಧಿ ನೂರಾರು ಕಿ.ಮೀ ಓಡಿಯಾಗಿತ್ತು. ಮಹಾತ್ಮರನ್ನು ಕೊಲ್ಲಲು ಗುಂಡುಗಳು ಹಿಂದೆ ಬಿದ್ದಿರುವಾಗ ತಾವು ಸುಮ್ಮನಿರುವುದು ಸೂಕ್ತವಲ್ಲವೆಂದು ಮಂತ್ರಿಮಂಡಲ ಸಭೆ ಸೇರಿತು. ದೇಶ ವಿಭಜನೆಗೆ ಕಾರಣವಾದವರು ಯಾರಾದರೂ ಗಾಂಧೀಜಿಯ ಹಿಂದೆ ಬಿದ್ದಿದ್ದ ಗುಂಡುಗಳಿಗೆ ಬಲಿಯಾಗುವುದರಿಂದ ಗಾಂಧೀಜಿಯವರ ಸಾವನ್ನು ತಪ್ಪಿಸಬಹುದೆಂದು ನಿರ್ಧಾರಿಸಲಾಯಿತು. ‘ಪ್ರತಿಯೊಬ್ಬ ಹಿಂದೂವಿಗೂ ಅಖಂಡ ಭಾರತದ ಕನಸಿತ್ತು. ದೇಶ ವಿಭಜನೆಗಾಗಿ ಪಟ್ಟು ಹಿಡಿದು ಕುಳಿತದ್ದು ಮುಸ್ಲೀಂ ಲೀಗಿನವೇರೇ ಇದಕ್ಕೆ ನೇರ ಹೊಣೆಯಾದ್ದರಿಂದ ಹಿಂದೂಗಳು ಪ್ರಾಣತ್ಯಾಗ ಮಾಡುವ ಪ್ರಶ್ನೆಯೇ ಇಲ್ಲವೆಂದು ವಿರೋಧ ಪಕ್ಷದವರು ವಾದಿಸಿದರು. ಆಡಳಿತ ಪಕ್ಷದವರಿಗೆ ಇದು ಸರಿ ಎನ್ನಿಸಿತು. ಯಾರಾದರೂ ಮುಸ್ಲೀಮರೇ ತಲೆದಂಡ ಮಾಡಬೇಕೆಂದು ಕೂಡಲೇ ಭಾರತದಿಂದ ಪಾಕಿಸ್ತಾನಕ್ಕೆ ಟೆಲಿಗ್ರಾಂ ಹೋಯಿತು. ‘ನಾವೇನೋ ಪ್ರಾಣ ನೀಡಲು ಸಿದ್ಧರಿದ್ದೇವೆ. ಆದರೆ ಗಾಂಧೀಜಿಯವರಿಗೆ ಪ್ರತಿಯೊಬ್ಬ ಮುಸ್ಲೀಮರ ಪ್ರಾಣವೂ ತುಂಬಾ ಅಮೂಲ್ಯವಾಗಿತ್ತು. ತನ್ನ ಜೀವ ಉಳಿಸಿಕೊಳ್ಳಲು ಆ ಮಹಾತ್ಮ ಎಂದಿಗೂ ಮುಸ್ಲೀಮರನ್ನು ಬಲಿ ಕೊಡಲಿಕ್ಕಿಲ್ಲ’ ಎಂದು ಮರುತ್ತರ ಬರೆದರು. ಆಡಳಿತ ಪಕ್ಷದವರಿಗೆ ಇದೂ ಸರಿ ಎನ್ನಿಸಿತು. ಕಡೆಗೆ ಯಾರನ್ನು ಬಲಿ ಕೊಡುವುದೆಂಬ ವಿಷಯ ಇತ್ಯರ್ಥವಾಗದೇ ಎಲ್ಲರೂ ಪ್ರಧಾನ ಮಂತ್ರಿಯ ಕಡೆಗೆ ನೋಡಿದರು. 

‘’ಹಣ್ಣು ಹಂಚಿ ತಿನ್ನು, ದೇಶ ಒಡೆದು ಆಳು’’ ಎಂದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟಿದ್ದ ಡೈರಿಯೊಂದಲ್ಲಿ ಬರೆದುಕೊಂಡಿದ್ದ ವಾಕ್ಯವನ್ನು ಉಲ್ಲೇಖಿಸುತ್ತಾ ಭಾಷಣ ಪ್ರಾರಂಭಿಸಿದರು ಮಾನ್ಯ ಪ್ರಧಾನಿಗಳು. ನಂತರ ಬಹಳ ಗಂಭೀರವಾದ ಧ್ವನಿಯಲ್ಲಿ ದೇಶವನ್ನು ಸೇಬಿನ ಹಣ್ಣಿಗೆ ಹೋಲಿಸುತ್ತಾ, ಹೇಗೆ ಅದನ್ನು ಭಾಗ ಮಾಡಿ ತಿಂದಾಗ ಮಾತ್ರ ಮುಂದಿನ ದಿನಗಳಲ್ಲಿ ಯಾವ ಕಿತ್ತಾಟವಿಲ್ಲದೇ ಎಲ್ಲರೂ ಸವಿಯಲು ಸಾಧ್ಯವಿದೆಯೆಂದು ಹೇಳಿದರು. ಈ ಬಗ್ಗೆ ಗಾಂಧೀಜಿಯವರಿಗಿದ್ದ ಆ ದೂರದೃಷ್ಟಿಯನ್ನು ಶ್ಲಾಘಿಸಿ, ಅವರ ನಿಲುವನ್ನು ಸಮರ್ಥಿಸಿಕೊಂಡರು. ಕೊನೆಯಲ್ಲಿ ‘ಸದಾ ದೇಶದ ಒಳಿತನ್ನೇ ಬಯಸಿ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತ್ಮನಿಗೆ ಮಾತ್ರ ಆ ಗುಂಡುಗಳಿಗೆ ಎದೆಯೊಡ್ಡುವ ಯೋಗ್ಯತೆ ಇದಯೇ ಹೊರತು ನಮ್ಮಂತಹ ಸಾಮಾನ್ಯ ಆತ್ಮಗಳಿಗಲ್ಲ. ಅವರನ್ನು ಕಳೆದುಕೊಳ್ಳುವ ದೇಶ ಅನಾಥವಾಗುತ್ತದೆ ನಿಜ, ಆದರೆ ಇಲ್ಲಿಯವರೆಗೂ ಮಹಾತ್ಮರಾಗಿದ್ದ ಅವರು ನಮ್ಮ ಮನಸ್ಸಿನಲ್ಲಿ ಹುತಾತ್ಮರಾಗುತ್ತಾರೆ’ ಎಂದು ಗದ್ಗದಿತರಾಗಿ ತಮ್ಮ ಸುದೀರ್ಘ ಭಾಷಣವನ್ನು ಮುಗಿಸಲು ನೆರೆದಿದ್ದ ಸಭೀಕರಲ್ಲಿ ಮೌನ ಆವರಿಸಿತ್ತು. ಮರುಕ್ಷಣ ಚಪ್ಪಾಳೆಯ ಧ್ವನಿ ಮುಗಿಲು ಮುಟ್ಟಿತು.

ಆ ಚಪ್ಪಾಳೆಯ ಧ್ವನಿಯ ಓವರ್ ಲ್ಯಾಪಿನಲ್ಲಿಯೇ ಗಾಂಧಿ ಓಡುತ್ತಾ ಓಡುತ್ತಾ ಭಾರತ ಪಾಕಿಸ್ತಾನದ ಗಡಿ ತಲುಪಿದರು. ಪಾಕಿಸ್ತಾನದಿಂದ ಹಿಂದೂಗಳನ್ನು ಕೊಲ್ಲಲು ಬೆನ್ನತ್ತಿ ಬರುತ್ತಿದ್ದ ಮುಸ್ಲೀಮರು, ಭಾರತದಿಂದ ತಲೆಮರೆಸಿ ಓಡುತ್ತಿದ್ದ ಮುಸ್ಲೀಮರ ತಲೆ ಕಡಿಯಲು ಬಂದ ಹಿಂದೂಗಳು ಈ ಗಲಾಟೆಯ ನಡುವೆ ಓಡಿ ಧೋತಿ ಉಟ್ಟು ಓಡಿಬಂದ ಗಾಂಧಿಜಿಯನ್ನು ಕಂಡು ಒಂದು ಕ್ಷಣ ಅವಕ್ಕಾಗಿ ನಿಂತು ನೋಡಿದರು. ನಂತರ ತಮಗೆ ಸಂಬಂಧವಿಲ್ಲ ಎಂಬಂತೆ ಕೊಲ್ಲುವುದನ್ನು ಮುಂದುವರೆಸಿದರು. ಗಾಂಧೀಜಿ ಅವರಿಗೆ ‘ಈ ಕ್ರೌರ್ಯವೆಲ್ಲಾ ತನಗೆ ಇಷ್ಟವಿಲ್ಲ, ನಿಲ್ಲಿಸಿ, ನಿಲ್ಲಿಸಿ’ ಎಂದು ಕೂಗಿ ಹೇಳಲು ಪ್ರಯತ್ನಿಸಿದರು. ಆದರೆ ಯಾರೂ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತಾನೆಲ್ಲಿ ಎಡವಿದೆನೆಂದು ಗಾಂಧೀಜಿಯವರಿಗೆ ನಿಧಾನವಾಗಿ ಅರಿವಾಗತೊಡಗಿತು. ಓಡುತ್ತಾ ಓಡುತ್ತಾ ಅವರ ಕಾಲುಗಳು ಸೋತು ಅಲ್ಲಿ ಬಿದ್ದಿದ್ದ ಯಾವುದೋ ಶವವನ್ನು ಎಡವಿ ಮುಗ್ಗರಿಸಿದರು. ಹೇಗೋ ಸಾವರಿಸಿಕೊಂಡು ಮೇಲೆದ್ದರು. ಮತ್ತೆ ಓಡಲು ಇನ್ನೇನು ಹಿಂದೆ ತಿರುಗಬೇಕು. ಅಷ್ಟರಲ್ಲಿ ತಾವು ಎಡವಿದ ಶವದ ಮೇಲೆ ಅವರ ಕಣ್ಣು ಬಿದ್ದಿತು.

ಗಾಂಧೀಜಿಗೆ ತಾವು ಕಣ್ಣಿಂದ ಕಂಡದ್ದನ್ನು ನಂಬಲಾಗಲಿಲ್ಲ. ಅಲ್ಲಿದ್ದದ್ದು ಸ್ವತಃ ಅವರದ್ದೇ ಶವ. ಅವರದ್ದೇ ಸಣಕಲು ದೇಹದ, ಬೋಳು ತಲೆಯ ಅರೆನಗ್ನ ಶವ. ಗಾಂಧೀಜಿ ಬೆಚ್ಚಿ ಬಿದ್ದು ಅತ್ತಿತ್ತ ಕಣ್ಣು ಹಾಯಿಸಿದರೆ ಸುತ್ತಲೂ ಬಿದ್ದಿರುವ ಪ್ರತಿ ಶವವೂ ಅವರದ್ದೇ. ಆ ಶವಗಳನ್ನು ಆಯುಧ ಹಿಡಿದು ಹೊಡೆದು ಉರುಳಿಸುತ್ತಿರುವುದು ಕೂಡ ಅವರೇ. ಇದನ್ನೆಲ್ಲಾ ನೋಡುತ್ತಾ ನಿಂತ ಗಾಂಧೀಜಿಯವರಿಗೆ ಕಣ್ಣು ಕತ್ತಲೆ ಬಂದಂತಾಯಿತು. ಅಲ್ಲಿಂದ ದೂರ ಓಡೋಣವೆಂದರೆ ಹಜ್ಜೆ ಕಿತ್ತಿಡಲು ಸಾಧ್ಯವಾಗಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಹಿಂಬಾಲಿಸಿ ಬಂದ ನಾಥೂರಾಮನ ಗುಂಡುಗಳು ಕಡೆಗೂ ಗಾಂಧಿಜಿಯವರ ಎದೆಯನ್ನು ಸೀಳಿದ್ದವು. ಗಾಂಧೀಜಿ ಎದೆ ಹಿಡಿದುಕೊಂಡು ಕೆಳಗುರುಳಿದರು.

ಅವರು ‘ಹೇ ರಾಮ್’ ಎಂದದ್ದು ಯಾರಿಗೂ ಕೇಳಿಸಲಿಲ್ಲ.

-      ತ್ರಿಲೋಕ್ ತ್ರಿವಿಕ್ರಮ