ಕೆಮಿಸ್ಟ್ರಿ ಮಿಸ್ಸಿಗಿಷ್ಟು ಪ್ರಶ್ನೆಗಳು
(ವಿ.ಸೂ.
ಕೆಳಗಿನ ಎಲ್ಲಾ ಪ್ರಶ್ನೆಗಳಿಗೆ ಒಂದಕ್ಕಿಂತ ಹೆಚ್ಚು ಮುತ್ತುಗಳಲ್ಲಿ ಉತ್ತರಿಸತಕ್ಕದ್ದು)
ಮುನಿದ ನಿನ್ನಯ ಮನದ ಮೊಗ್ಗು
ಮತ್ತೆ ಅರಳಿ ಘಮವ ಚೆಲ್ಲಲು
ಎಷ್ಟು ಎಂ.ಎಲ್ ಒಲವು ಬೇಕೇ?
ನಿನಗೆ ಬರೆದ ಕವಿತೆಯೆಲ್ಲವೂ
ಉಸಿರ ಬಿಸಿಗೆ ಅಳಿಸದಂತೆ
ಅಚ್ಚು ಒತ್ತಿದ ಹಾಗೆ ಉಳಿಯಲು
ಯಾವ ದ್ರಾವಣ ಬೆರೆಸಬೇಕೆ?
ಮುಖವ ಕಾಣದ ದಿನಗಳೆಣಿಸಿ
ನೆನಪು ಕಾಡಿದ ಕ್ಷಣವ ಗುಣಿಸಿ
ಎನ್ನ ಮನದ ದುಗುಡ ತಿಳಿಸಲು
ಯಾವ ಫಾರ್ಮುಲ ಬಳಸಬೇಕೆ?
ಎಲ್ಲಾ ತಪ್ಪನು ಮಾಫಿ ಮಾಡಲು
ನಿನ್ನ ಕೊಪದ ಮದ್ಯಸಾರದಿ
ವಿರಹ ತಪಿತ ಹೃದಯವನ್ನು
ಎಷ್ಟು ಡಿಗ್ರಿಲಿ ದಹಿಸಬೇಕೇ?
ಹಾಲು ಬಿಳುಪಿನ ಕೆನ್ನೆ ಮೇಲೆ
ತಿಳಿಯ ಕೆಂಪು ಬಣ್ಣ ಮೂಡಲು
ಕಿವಿಯ ಒಳಗೆ ಕದ್ದು ಪಿಸುಗುಡೋ
ಪೋಲಿ ಪದಗಳ ಲೆಕ್ಕ ಸಾಕೇ?
- ತ್ರಿವಿಕ್ರಮ