Monday, March 21, 2016

ನೆನಪಿಗೆ ಸುಪಾರಿ



 ನೆನಪಿಗೆ ಸುಪಾರಿ


ಲೇ ಪೋರಿ..!!
ಎಷ್ಟೇ ಕೊಟ್ಟಿರುವೆ ನಿನ್ನ ನೆನಪುಗಳಿಗೆ
ನನ್ನ ನಿದ್ದೆ ಕೆಡಿಸಲು ಸುಪಾರಿ?
ಕಣ್ಣು ಮುಚ್ಚಲು ಕಿವಿಯಲ್ಲಿ ಊದುವವು
ಶಹನಾಯಿ ಟ್ರಂಪೆಟ್ಟು ತುತ್ತೂರಿ..!

ದೀಪವಾರಿಸಿದೊಡನೆ ಶುರು ಮಾಡುವವು
ದಿನಕೊಂದು ತರಹದ ಕಿತಾಪತಿ
ನಾ ಕಾಣಬೇಕಿದ್ದ ಸವಿಗನಸುಗಳೆಲ್ಲ
ನಿನ್ನ ನೆನಪಿನ ಬೆಂಕಿಗೆ ಆಹುತಿ
ಪರಿಪರಿಯಾಗಿ ನಾ ಬೇಡುತಿದ್ದರೂ
ತೋರಿಸವು ಕಿಂಚಿತ್ ವಿನಾಯಿತಿ

ಮೇಲೆ ಆಗಸದಲ್ಲಿ ತಾರೆಗಳಿಗೆ
ಲೈನ್ ಹಾಕುವುದರಲ್ಲಿ ಚಂದಿರನು ನಿರತ
ನನ್ನೆದೆಯ ಸಾಗರದಲಿ ನಿನ್ನಯ
ನೆನಪಿನಲೆಗಳದೆ ಮೊರೆತ, ಭೋರ್ಗರೆತ
ನಿಲ್ಲಿಸಲಾಗದೆ ಪರಿತಪಿಸುತಿರುವೆ
ಹಾರ್ಟಿನೊಳಗಿನ ವಿರಹದ ಕೆರೆತ

ಆಕಳಿಕೆ ತೂಕಡಿಕೆ ಎಲ್ಲೆಲ್ಲು ನಿನ ನೆನಪೆ
ಹೊಡೆಯುತಲಿರಲು ಮೊಳಕೆ
ಮೊಳಕೆ ಮರವಾಗಿ ಬೆಳೆದು ಬೇರುಗಳು
ಸಾಗುವವು ನನ್ನೆದೆಯ ತಳಕೆ
ಮರವುರುಳಲು ಹೃದಯ ಬಗೆದಾಗ ಸಿಗಬಹುದು
ನಿನ್ನ ನೆನಪುಗಳದೆ ಪಳೆಯುಳಿಕೆ

ದೂರದಲ್ಲಾಗಲೇ ಕೇಳಿಸುತ್ತಿದೆ
ಐದರ ನಮಾಜು ಕೂಗುತಿರುವ ಸದ್ದು
ನಾ ಕಣ್ಣುಜ್ಜುತಾ ಕುಳಿತಿರುವೆ
ಮೊಬೈಲಿನ ಬೆಳಕಿನಲ್ಲಿ ಎದ್ದು
ಹುಡುಕುತ್ತಾ ನಿನ್ನ ತಡರಾತ್ರಿಯ
ನೆನಪುಗಳ ಉಪಶಮನಕ್ಕೆ ಮದ್ದು

ಪ್ಲೀಸ್ ಸಾಕು ಕಣೆ..!
ಗಂಟೆ ಆರಾಯ್ತು ನೆನಪಾಗಿ ಕೊಡಬೇಡ ತೊಂದ್ರೆ
ಜಾಗರಣೆ ಸಾಕಾಯ್ತು ಬರುತಲಿದೆ ನಿದ್ರೆ
ಜೋಪಾನ ಮಾಡಿಟ್ಟುಕೋ ಕನಸುಗಳು ಬಿದ್ರೆ

-ತ್ರಿಲೋಕ್ ತ್ರಿವಿಕ್ರಮ