Wednesday, April 03, 2019

ಕಾದನು ಮಾಧವ ವೇದನೆಯಿಂದಲಿ..


ಕಾದನು ಮಾಧವ ವೇದನೆಯಿಂದಲಿ..



ಕಾದನು ಮಾಧವ ವೇದನೆಯಿಂದಲಿ
ರಾಧೆಯ ದರುಶನಕೆ..
ಒದಗಿದ ವಿರಹವ ಸೈರಿಸಲಾರದೇ
ಸೊರಗಿದ ದಿನದಿನಕೆ..
ಮಾಧವ.. ಸೊರಗಿದ ದಿನದಿನಕೆ..

ತಿಂಗಳೇ ಆಯಿತು.. ಕಂಗಳ ಮುಂದೆ
ಬಾರದೇ ರಾಧೆಮಣಿ
ಕಾದಿಹ ಕರ್ಣವ, ಅಂತಃಕರಣವ
ಸೇರದೇ ಅವಳ ದನಿ
ಕರ್ಣವ.. ಸೇರದೇ ಅವಳ ದನಿ..

ಇತಿಮಿತಿ ಇಲ್ಲದ.. ಕರೆದರು ನಿಲ್ಲದ..
ಕಾಲವ ಶಪಿಸಿದನು..
ಕಾಣದ ನಲ್ಲೆಯ.. ಎಲ್ಲೆಡೆ ಕಾಣುತ..
ನಾಮವ ಜಪಿಸಿದನು..
ನಲ್ಲೆಯ.. ನಾಮವ ಜಪಿಸಿದನು..

ಬರುವಳೇ ರಾಧೆ.. ಇರುಳಲಿ ಕಾದಿದೆ
ಗೋಕುಲದಾ ಬೀದಿ..
ವಿರಹದ ಸೆರೆಯಲಿ, ರಾಧೆಯ ನೆನೆವ
ಮಾಧವ ಅಪರಾಧಿ..
ಸೆರೆಯಲಿ.. ಮಾಧವ ಅಪರಾಧಿ


-      ತ್ರಿವಿಕ್ರಮ

Tuesday, February 19, 2019

ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!


ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!
ಬಲ್ಲವರು ಹೇಳುವುದ
ಶಿರ ಬಗ್ಗಿಸಿ, ದನಿ ತಗ್ಗಿಸಿ
ಬರೆದುಕೊಳ್ಳಯ್ಯ ಮೂರ್ಖ..!
ವ್ಯಾಸ ವಾಚಿತ ಭಾರತವ
ಬರೆದುಕೊಂಡಂತೆ ಆ ಗಜಮುಖ.

ಕ್ಲರ್ಕು, ಸ್ಟೆನೋ, ಟೈಪಿಸ್ಟುಗಳಂತೆ
ಹಸಿದು ಪಂಕ್ತಿಯಲಿ ಕೂತ
ಬಂಡಲುಗಟ್ಟಲೇ ಬಿಳಿಹಾಳೆಗಳಿಗೆ,
ಮತ್ಯಾರೋ ಮಾಡಿದಡುಗೆಯ
ಬಡಿಸುವ ಭಾಗ್ಯವಷ್ಟೇ ನಿನದು
ಅನ್ನದಾನದ ಪುಣ್ಯದಲಿ
ಪಾಲು ಕೇಳಲೇಬಾರದು.

ಗಣಪನಿಗಾದರೂ ಐಡೆಂಟಿಟಿಯಿತ್ತು.
ನಿನಗೇನುಂಟು ಬದನೇಕಾಯಿ ತೊಟ್ಟು?
ಸಾರಸ್ವತ ಲೋಕದ ಡ್ರೈನೇಜಿನಲಿ
ಲೇಖನಿಯ ಹರಿಗೋಲಾಗಿಸಿ
ಕಾಗದದ ತೆಪ್ಪದಲಿ ತೇಲುತ್ತಿದ್ದ
ಸಾಂದರ್ಭಿಕ ಶಿಶು ನೀನು,
ಶಾರದೆಯು ಸಾಕಿದಳು ತಂದು,
ತನ್ನ ವರಪುತ್ರರು ಗೀಚಾಡಿದ
ಸ್ಲೇಟು ಒರೆಸಿಕೊಂಡಿರು ಎಂದು..!

ಒರೆಸುತಲಿ ಒರೆಸುತಲಿ
ಹೊಟ್ಟೆಗನ್ನವ ಅರಸುತಲಿ
ನಾಲ್ಕು ಅಕ್ಷರ ಕಲಿತು,
ಬರೆಯುವಾಸೆಯು ಬಲಿತು,
ಛಲದಿಂ ತಾಯನೊಲಿಸಿಕೊಂಡ
ಆ ಪ್ರೇಮಪುತ್ರರ ಪಕ್ಕ ಕುಳಿತು,
ಅವರುಲಿದದ್ದು ಬರೆದುಕೊಂಡು
ಅವರುಂಡ ತಟ್ಟೆಯಲುಂಡು
ಎಲ್ಲದರಲು ಅವರನನುಸರಿಸಿ
ಅವರಮ್ಮನ ನೀ ಅಮ್ಮನೆಂದರೆ
ಅದು ಕೇವಲ ನಿನ್ನ ಭ್ರಾಂತಿ,
ಅರಿತುಕೋ ಕಂದ
ಸರಸ್ವತಿ ನಿನಗೆ ಅಮ್ಮನಲ್ಲ, ಆಂಟಿ..!

ಹೋಗು, ಮೊದಲು ಕೈತೊಳದು ಬಾ,
ಅಳಿಸಿಹೋಗಲಿ ಕೈರೇಖೆಗಳು
ಕಾಣಿದಂತೆ ಮೆತ್ತಿಕೊಂಡ ಇಂಕು,
ಇಳಿದುಹೋಗಲಿ ತಾನೊಬ್ಬ
ಕವಿಯೆನ್ನುವ ಮಂಕು.

-      - ತ್ರಿವಿಕ್ರಮ