Wednesday, June 20, 2018

ಅಳಿಯ ಅಲ್ಲ ಮಗನ ಗಂಡ


ಅಳಿಯ ಅಲ್ಲ ಮಗನ ಗಂಡ




‘ಆ ಹುಡುಗನ ಹೆಸರು ಮಂಜುನಾಥ ಅಂತ, ನಮ್ಮ ಶ್ರೀಹರಿ ಉಪನಯನದಲ್ಲಿ ನಾನವನ್ನ ಮೊದಲು ನೋಡಿದ್ದು’ ವಾಸು ಅಂಕಲ್ ಗೋಡೆಯ ಮೇಲಿದ್ದ ಶ್ರೀಹರಿಯ ಪೋಟೋವನ್ನೇ ದಿಟ್ಟಿಸಿ ನೋಡುತ್ತಾ ನೆನಪಿಸಿಕೊಂಡರು. ಆತನ ಪೋಟೋ ನೋಡುತ್ತಾ ಅವರು ಫ್ಲಾಷ್ ಬ್ಯಾಕಿಗೆ ಹೋದದ್ದು ಸಿನಿಮೀಯ ರೀತಿಯಲ್ಲಿ ಇತ್ತು. ವಸುಧಾ ಆ ಪೋಟೋ ನೋಡಿದಳು. ಆ ಪೋಟೋದಲ್ಲಿ ಶ್ರೀಹರಿಗೆ ಐದು ಆರು ವಯಸ್ಸಿರಬಹುದು. ದುಂಡು ದುಂಡಗೆ ಒಳ್ಳೆ ಬಿಳಿ ಆಲುಗಡ್ಡೆಯ ತರ ಇದ್ದ. ಮ್ಯಾಟ್ರಿಮನಿ ಸೈಟಿನಲ್ಲಿ ಹಾಕಿದ ಪೋಟೋದಲ್ಲೂ ಥೇಟು ಅದೇ ದುಂಡು ಮುಖವೇ ಇದ್ದದ್ದಲ್ಲವೇ. ವಸುಧಾ ಅದೇ ಫೋಟೋ ನೋಡುತ್ತಾ ಅವಳ ಫ್ಲಾಷ್ ಬ್ಯಾಕಿಗೆ ಹೋದಳು.

ಭಾರತ್ ಮ್ಯಾಟ್ರಿಮನಿಯಲ್ಲಿ ಮೂವತ್ತು ದಾಟಿದ್ದ ಹುಡುಗಿಯರಿಗೂ ಒಳ್ಳೊಳ್ಳೆ ಗಂಡುಗಳು ಸಿಗುತ್ತಾರೆಂದು ವಸುಧಾಳ ಸೋದರತ್ತೆ ಒತ್ತಿ ಒತ್ತಿ ಹೇಳಿ ಅಕೌಂಟ್ ಕ್ರಿಯೇಟ್ ಮಾಡಿಸಿದ್ದರು. ದಿನಪತ್ರಿಕೆಯೊಂದರಲ್ಲಿ ರಿಪೋರ್ಟರ್ ಆಗಿದ್ದ ವಸುಧಾಗೆ ಯಾವತ್ತೂ ಮದುವೆಯಾಗಬೇಕು ಎಂದು ಅನ್ನಿಸಿರಲಿಲ್ಲ. ಹಾಗಂತ ಆಗಬಾರದು ಅಂತಲೂ ಇರಲಿಲ್ಲ. ಅತ್ತೆಯ ಒತ್ತಾಯಕ್ಕೆ ಹುಟ್ಟಿದ ಅಕೌಂಟಿನಿಂದ ಪ್ರತಿದಿನವೂ ಬರುತ್ತಿದ್ದ ಇಮೇಲುಗಳನ್ನು ಕಂಡು ಅದೊಂದು ದಿನ ಹಾಗೆ ಸುಮ್ಮನೆ ಕುತೂಹಲಕ್ಕೆ ಚೆಕ್ ಮಾಡಿದ್ದಳು. ಬಂದಿದ್ದ ರಿಕ್ವೆಸ್ಟುಗಳಲ್ಲೆಲ್ಲಾ ಸ್ವಂತ ಬ್ಯೂಟಿ ಪಾರ್ಲರ್ ನೆಡೆಸುತ್ತಿದ್ದ ಬ್ರಾಹ್ಮಣ ವರ ಶ್ರೀಹರಿಯ ಪ್ರೋಫೈಲು ಇಂಟರೆಸ್ಟಿಂಗ್ ಆಗಿ ಕಂಡಿತ್ತು. ಹುಡುಗ ನೋಡಲು ರೋಜಾ ಸಿನಿಮಾದ ಅರವಿಂದ ಸ್ವಾಮಿಯಂತಿದ್ದ. ವಸುಧಾಳಿಗೆ ಇಷ್ಟವಾಯ್ತು. ಕೂಡಲೇ ಕರೆ ಮಾಡದೇ ಎರಡು ದಿನ ತನ್ನನ್ನು ತಾನೇ ಸತಾಯಿಸಿಕೊಂಡರೂ ನಂತರ ತಡೆಯಲಾರದೆ ಅವನಿಗೆ ಮೆಸೇಜ್ ಮಾಡಿದಳು. ಆದಾದ ಮೇಲೆ ಎಲ್ಲಾ ಬೇಗ ಬೇಗನೆ ನೆಡೆದು ವಾಟ್ಸಪ್ಪಿನಲ್ಲಿ ಪೋಟೋ ವಿನಿಮಯಗಳಾಗಿ ಮೂರು ವಾರ ಕಳೆದು ಶ್ರೀಮಾನ್ ಶ್ರೀಹರಿಯವರು ಕುಟುಂಬ ಸಮೇತರಾಗಿ ವಧು ಪರೀಕ್ಷೆಗೆ ಬಂದಿದ್ದರು.

ಜಾತಕ ಕೂಡಿತ್ತು. ಮಾತು ಕತೆ ನೆಡೆದಿತ್ತು. ಮಾಡಿದ್ದ ಕೇಸರಿಬಾತು ಸ್ವಲ್ಪ ಜಾಸ್ತಿಯೇ ಸಿಹಿಯಾಗಿತ್ತು. ಎಲ್ಲವೂ ಸರಿಯಾಗಿ ಜ್ಯೋಯಿಸರು ಡೀಲು ಕುದುರಿಸುವುದರಲ್ಲಿದ್ದರು. ಆಗಲೇ ಇಬ್ಬರೂ ಪ್ರೈವೇಟ್ ಆಗಿ ಮಾತನಾಡಲು ಹೋಗಿದ್ದು. ವಸುಧಾ ಮೊದಲೆ ಬಾಯಿಬಡುಕಿ. ಬಾಲ್ಕನಿಗೆ ಕಾಲಿಡುತ್ತಿದ್ದ ಹಾಗೆಯೇ ಅದೇನೋ ಹೇಳಲು ಬಾಯಿತೆರೆದಳು. ಆದರೆ ಶ್ರೀಹರಿ ಅವಳಿಗಿಂತಲೂ ಮೊದಲು ಮಾತನಾಡಿದ.

‘ನೋಡಿ ಮಿಸ್ ವಸುಧಾ, ಸುತ್ತಿ ಬಳಸಿ ಹೇಳದೇ ನೇರ ವಿಷಯಕ್ಕೆ ಬರ್ತೀನಿ’ ಅಲ್ಲಿಯವರೆಗೂ ನಗುಮುಖದಲ್ಲಿದ್ದ ಆತ ಇದ್ದಕ್ಕಿದ್ದಂತೆ ಸೀರಿಯಸ್ ಆಗಿ ಮಾತನಾಡಿದ. ‘ನನಗೆ ಈ ಮದುವೆ ಇಷ್ಟ ಇಲ್ಲ. ‘ಆಕ್ಚುಯಲಿ, ಐ ಆಮ್ ಅಲ್ ರೆಡಿ ಇನ್ ಎ ರಿಲೇಷನ್ ಶಿಪ್’  ನೇರವಾಗಿ ವಿಷಯ ಹೇಳಿ ಅವಳ ಮುಖದಲ್ಲಾಗುವ ಬದಲಾವಣೆಗೆ ಕಾಯತೊಡಗಿದ.

‘ಇಷ್ಟು ಕ್ಯೂಟ್ ಆಗಿರೋ ಹುಡುಗನ್ನ ಹುಡುಗೀರು ಇಷ್ಟು ದಿನ ಬಿಡ್ತಾರಾ’ ಅಂತ ಮನಸ್ಸಿನಲ್ಲೇ ಅಂದುಕೊಂಡ, ನೊಂದುಕೊಂಡ ವಸುಧಾ, ಮುಖ ಸಣ್ಣಗೆ ಮಾಡಿ ‘ಅಯ್ಯೋ ಇದ್ರೆ ಮನೇಲಿ ಹೇಳಬೇಕು ತಾನೆ? ಅದನ್ನ ಬಿಟ್ಟು ಮ್ಯಾಟ್ರುಮನಿ ಸೈಟಲ್ಲಿ ಅಕೌಂಟ್ ಯಾಕ್ರೀ ಕ್ರಿಯೇಟ್ ಮಾಡ್ಕೊಂಡಿದೀರಾ?’ ಎಂದು ಕೇಳಿದಳು

‘ಪ್ಲೀಸ್ ಕೋಪ ಮಾಡ್ಕೋಬೇಡಿ, ಅದನ್ನ ಅಪ್ಪ ಅಮ್ಮನೇ ಹ್ಯಾಂಡಲ್ ಮಾಡ್ತಾರೆ, ಅವರೇ ಹುಡುಗೀನು ಸೆಲೆಕ್ಟ್ ಮಾಡೋದು, ನೋಡೋಕೆ ಬರದೆ ರಿಜೆಕ್ಟ್ ಮಾಡಿದ್ರೆ ಕಾರಣ ಹೇಳಬೇಕು ಅಂತ ಇಲ್ಲಿಯವರೆಗೂ ಬಂದೆ’.

‘ಹೀಗೆ ಎಷ್ಟು ಜನ ಹುಡುಗೀರ ಮನೇಲಿ ಕೇಸರಿಬಾತ್ ತಿಂದು ಬಾಲ್ಕನಿಯಲ್ಲಿ ನಿಮ್ಮ ಲವ್ ಮ್ಯಾಟರ್ ಹೇಳಿದೀರಾ?’

‘ನೀವು ಮೂರನೇ ಹುಡುಗಿ. ಬೇರೆ ಬೇರೆ ಹುಡುಗಿಯರಿಗೆ ಬೇರೆ ಬೇರೆ ರೀಸನ್ ಹೇಳಿದ್ದೆ. ಬಟ್ ನಿಮ್ಮ ಹತ್ರ ನಿಜನೇ ಹೇಳಬೇಕು ಅನ್ನಿಸ್ತು, ಹೇಳ್ಕೊಂಡೆ. ಹೋಪ್ ಯು ಅಂಡರಸ್ಟಾಂಡ್’’

‘ಓಹೋ ಈಗೇನು ಸತ್ಯ ಹರೀಶ್ಚಂದ್ರ ಮೈಮೇಲೆ ಬಂದಿದ್ದಾ? ಹೀಗೆ ಮಾಡೋದ್ರು ಬದಲು ಡೈರೆಕ್ಟಾಗಿ ಹುಡುಗಿಯನ್ನ ಕರ್ಕೊಂಡು ಹೋಗಿ ಅಪ್ಪ ಅಮ್ಮನ ಎದುರು ನಿಲ್ಲಿಸಿ ಹೇಳಬೇಕು ತಾನೆ?’ ವಸುಧಾಳ ದನಿ ಪಕ್ಕದ ರೋಡಿಗೂ ಕೇಳಿಸುವಷ್ಟು ಜೋರಾಗಿತ್ತು.

‘ಹುಡುಗಿ ಆಗಿದ್ರೆ ಹೇಳಬಹುದಿತ್ತು, ಬಟ್’ ಒಂದು ಚಿಕ್ಕ ವಿರಾಮ ತೆಗೆದುಕೊಂಡ ಶ್ರೀಹರಿ ಹೇಳಲೋ ಬೇಡವಂತೆ ಯೋಚಿಸಿ ಆಚೀಚೇ ನೋಡುತ್ತಾ ಹೇಳಿದ ‘ಇಟ್ಸ್ ಎ ಹೋಮೋಸೆಕ್ಸುಯಲ್ ರಿಲೇಷನ್ ಶಿಪ್’

ವಸುಧಾಳಿಗೆ ಶಾಕ್ ಆಯಿತು. ಅವನನ್ನೊಮ್ಮೆ ದಿಟ್ಟಿಸಿ ನೋಡಿದಳು. ಮ್ಯಾಟ್ರಿಮನಿ ಸೈಟಲ್ಲಿ ಸಿಗುವ ಗಂಡುಗಳು ಬೋಡು ತಲೆಯಿದ್ದರೂ ವಿಗ್ ಹಾಕಿಕೊಂಡೋ, ಶೋಕಿಗೆ ಬಾಡಿಗೆ ಕಾರು ತೆಗೆದುಕೊಂಡೋ ಅಥವಾ ಡೂಪ್ಲಿಕೇಟ್ ಸ್ಯಾಲರಿ ಸರ್ಟಿಫಿಕೇಟುಗಳನ್ನು ತಂದೋ ಮೋಸ ಮಾಡುತ್ತಾರೆಂದು ಅವರಿವರು ಹೇಳಿದ್ದರು. ಆದರೆ ಈ ರೀತಿಯೂ ಆಗಬಹುದೆಂದು ಊಹಿಸಿರಲಿಲ್ಲ. ಒಳಗೊಳಗೆ ಇಷ್ಟು ಚಂದದ ಹುಡುಗ ತನ್ನ ಕೈತಪ್ಪಿ ಹೋದನಲ್ಲ ಎಂಬ ಹೊಟ್ಟೆ ಕಿಚ್ಚಾಯಿತು. ಇನ್ಯಾವ ಹೆಣ್ಣು ಜಾತಿಗೂ ಈತ ದಕ್ಕುವುದಿಲ್ಲವೆಂದು ಬೇಸರವಾಯಿತು. ಈತ ಹೀಗೆ ಮನೆಯವರಿಗೆ ಹೆದರಿ ಕಡೆಗೆ ಹುಡುಗಿಯನ್ನು ಕಟ್ಟಿಕೊಂಡು ಅವಳ ಬಾಳು ಹಾಳು ಮಾಡುವನೆಂದು ಸಾಮಾಜಿಕ ಕಳಕಳಿ ಜಾಸ್ತಿಯಾದವಳಂತೆ ಸೀದಾ ಕೆಳಗೆ ಹೋದವಳೇ, ಮುಂದಿನ ಪರಿಣಾಮಗಳನ್ನು ಯೋಚಿಸದೇ ಇದ್ದದ್ದು ಇದ್ದ ಹಾಗೆ ಎದೆಗೆ ಒದ್ದಂತೆ ಹೇಳಿ ಬಂದವರ ಎದುರೆಲ್ಲಾ ರಂಪ ರಾದ್ಧಾಂತ ಮಾಡಿಬಿಟ್ಟಳು. ಶ್ರೀಹರಿಯ ತಂದೆ ತಾಯಿಗೆ ವಿಷಯ ಕೇಳಿ ಆಘಾತದ ಜೊತೆಗೆ ಅವಮಾನವಾಗಿ ಅಲ್ಲಿ ನಿಲ್ಲಲಾರದೇ ಹೊರಟುಹೋದರು. ಬಂದಿದ್ದ ವಸುಧಾಳ ನೆಂಟರು ಈಕೆ ಜರ್ನಲಿಸ್ಟ್ ಆಗಿದ್ದು ಸಾರ್ಥಕವಾಯಿತು, ಮೊದಲೇ ಮಹಡಿ ಮೇಲೆ ಹೋಗಿ ಆತನಿಂದ ವಿಷಯ ಬಾಯಿ ಬಿಡಿಸಿದಳೆಂದು ಸಮಾಧಾನಪಟ್ಟುಕೊಂಡರು. ವಸುಧಾ ಅಂದು ರಾತ್ರಿಯೇ ಮ್ಯಾಟ್ರಿಮನಿ ಅಕೌಂಟು ಡಿಲೀಟು ಮಾಡಿಬಿಟ್ಟಳು.

ಆದಾಗಿ ಕೆಲವು ದಿನ ತಾನು ಸರಿಯಾದುದನ್ನೇ ಮಾಡಿದ್ದೇನೆ ಎಂದು ತನ್ನಲ್ಲೇ ಸುಳ್ಳು ಹೇಳಿಕೊಳ್ಳುತ್ತಿದ್ದ ವಸುಧಾಗೆ ಮೊನ್ನೆಯಿಂದೇಕೋ ತಾನು ಹಾಗೆ ಮಾತನಾಡಬಾರದಿತ್ತು ಎನ್ನಿಸತೊಡಗಿತ್ತು. ಪಾಪ ಅವನೇನು ತಪ್ಪು ಮಾಡಿರಲಿಲ್ಲ, ಮದುವೆಗೆ ಮೊದಲೇ ಇದ್ದ ವಿಷಯ ಹೇಳಿಕೊಂಡಿದ್ದ, ಅದಕ್ಕೆ ತಾನು ಫಸ್ಟ್ ನೈಟಿನಲ್ಲಿ ವಿಷಯ ಗೊತ್ತಾದಷ್ಟು ರಿಯಾಕ್ಟ್ ಮಾಡಬಾರದಿತ್ತು ಎನ್ನಿಸಿತು. ತಿಂಗಳ ನಂತರ ಕ್ಷಮೆ ಕೇಳಬೇಕೆಂದೆನಿಸಿ ಶ್ರೀಹರಿಗೆ ಕರೆ ಮಾಡಿದ್ದಳು. ಆದರೆ ಆತ ಪೋನು ಕಟ್ ಮಾಡಿದ್ದ. ಮತ್ತೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಮಾಡಿದ್ದ. ವಸುಧಾ ಹಠಮಾರಿ. ಆತನ ವಿಳಾಸ ಹುಡುಕಿ ನೇರ ಮನೆಯ ಬಾಗಿಲಿಗೆ ಹುಡುಕಿಕೊಂಡು ಬಂದಿದ್ದಳು. ಶ್ರೀಹರಿ ಮನೆಯಲ್ಲಿರಲಿಲ್ಲ. ಬಾಗಿಲು ತೆರೆದ ಶ್ರೀಹರಿಯ ಅಮ್ಮನಿಗೆ ಅವಳನ್ನು ಅಲ್ಲೆ ಉಗಿದು ಓಡಿಸೋಣವೆನ್ನಿಸಿತು. ಆದರೆ ಅವಳ ಮುಖದಲ್ಲಿದ್ದ ದೈನ್ಯತಾ ಭಾವವನ್ನು ಕಂಡು ಮನಸ್ಸು ಬರಲಿಲ್ಲ. ವಸುಧಾ ಒಂದೆರಡು ನಿಮಿಷ ಮಾತನಾಡಬೇಕೆಂದು ಕೇಳಿದಾಗ ಒಳಗೆ ಕರೆದರು. ವಾಸು ಅಂಕಲ್ ಟಿವಿ ನೋಡುತ್ತಾ ಕುಳಿತಿದ್ದವರು, ವಸುಧಾ ಬಂದದ್ದು ಕಂಡು ಟಿವಿ ಆಫ್ ಮಾಡಿದರು. ಶಾಸ್ತ್ರಕ್ಕೆ ಕೊಟ್ಟ ಕಾಫಿ ಕುಡಿದಿದ್ದಾದದ ಮೇಲೆ ಮುಜುಗರದಿಂದಲೇ ಮಾತು ಆರಂಭಿಸಿದ ವಸುಧಾ ತಾನು ಅವತ್ತು ಹಾಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದಳು. ಸ್ವಲ್ಪ ಹೊತ್ತು ಏನೂ ಮಾತನಾಡದೇ ಕುಳಿತಿದ್ದ ಅವರ ಅಂಕಲ್ ನಿಟ್ಟುಸಿರಿಟ್ಟು ಶ್ರೀಹರಿಯ ಪೋಟೋ ನೋಡಿದರು. ಆಗಲೇ ಅವರ ಫ್ಲಾಷ್ ಬ್ಯಾಕ್ ಬಿಚ್ಚಿಕೊಂಡದ್ದು.

‘ಮಂಜುನಾಥ ಮತ್ತೆ ಶ್ರೀಹರಿ, ಹೈಸ್ಕೂಲಿಂದಲೂ ಕ್ಲೋಸು ಫ್ರೆಂಡ್ಸು. ಇಬ್ಬರೂ ಮೂರು ಹೊತ್ತು ಅಂಟಿಕೊಂಡೇ ಇರೋರು. ಇವನು ಅವರ ಮನೆಗೆ ಹೋಗೋನು, ಅವನು ನಮ್ಮನೇಗೆ ಬರೋನು. ನಾಗರಬಾವಿಯಲ್ಲೆಲ್ಲೋ ಅವರ ಮನೆ.  ಲಿಂಗಾಯಿತರ ಜನ, ಹೇಗೂ ಮೀನೂ ಮಾಂಸ ತಿನ್ನಲ್ಲ, ಒಟ್ಟಿಗೆ ಇದ್ರೆ ಇರಲಿ ಬಿಡಿ ಅಂತ ನಾವೂ ಸುಮ್ಮನಿದ್ದು ಬಿಟ್ವಿ’ ವಾಸು ಅಂಕಲ್ ಫ್ಲಾಷ್ ಬ್ಯಾಕು ಮುಂದುವರೆಯಿತು. ವಸುಧಾಳಿಗೆ ಆಗಲೇ ಈ ಮಂಜುನಾಥ ಯಾರಿರಬಹುದೆಂಬುದರ ಕ್ಲೂ ಸಿಕ್ಕಿತ್ತು. ಸುಮ್ಮನೇ ಕೇಳಿಸಿಕೊಳ್ಳತೊಡಗಿದಳು.

‘ಆಮೇಲೆ ಕಾಲೇಜು ಮುಗಿತು, ಎಲ್ಲ ಹುಡುಗ್ರು ಇಂಜಿನಿಯರಿಂಗು ಮೆಡಿಕಲ್ಲು ಓದ್ತಿದ್ರೆ ಇವನು ಅದೇನೋ ಕೋರ್ಸು ಮಾಡಿ ಬ್ಯೂಟಿ ಪಾರ್ಲರ್ ಮಾಡ್ತೀನಿ ಅಂದ. ನಮಗೂ ಏನೋ ಅವನಿಷ್ಟ ಮಾಡಿಕೊಳ್ಳಲಿ ಅಂತ ಸಪೋರ್ಟ್ ಮಾಡಿದ್ವಿ. ಯಾವಾಗಲೂ ಹುಡುಗೀರ ತರ ಕ್ರೀಮು ಲೋಷನ್ನು ಅಂತ ಅದರದ್ದೇ ಚಿಂತೆ ಅವನಿಗೆ. ಅವರಮ್ಮನ ಮೇಲೆ ಅವನ ಎಕ್ಸಪರಿಮೆಂಟುಗಳು. ಅದಕ್ಕೆ ಒಬ್ಬಳನ್ನ ಕಟ್ಕೊಂಡು ಇದೆಲ್ಲಾ ಅವಳ ಮೇಲೆ ಮಾಡ್ಕೊ ಅಂತ ಹೆಣ್ಣು ನೋಡೋಕೆ ಶುರು ಮಾಡಿದ್ವಿ. ಆದ್ರೆ ಅವನೇ ಗಂಡು ನೋಡ್ಕೊಂಡು ಬಿಟ್ಟಿದ್ದ’ ಎಂದು ಹೇಳಿ ಅಂಕಲ್ ಮೌನವಾದರು.

ಕೆಳದಿದ್ದರೂ ಅವರು ಅಷ್ಟೆಲ್ಲಾ ಕಥೆ ಹೇಳಿದ ಮೇಲೆ ವಸುಧಾಳಿಗೆ ತಾನೂ ಏನಾದರೂ ಮಾತನಾಡಬೇಕೆನ್ನಿಸಿತು. ‘ಅದರಲ್ಲಿ ತಪ್ಪೇನಿಲ್ಲವಲ್ಲ ಅಂಕಲ್, ಇದು ಅವರವರ ಫಿಸಿಕಲ್ ನೀಡ್ಸ್ ಅಷ್ಟೆ. ಹುಡುಗ್ರು ಹುಡುಗ್ರನ್ನ, ಹುಡುಗೀರು ಹುಡುಗೀರನ್ನ ಓಪನ್ ಆಗಿ ಮದುವೆ ಆಗ್ತಿದ್ದಾರೆ ಈಗೆಲ್ಲಾ,’ ಎಂದಳು.

‘ಅಯ್ಯೋ ಅದೆಲ್ಲಾ ಬೇರೆ ದೇಶದಲ್ಲಮ್ಮಾ, ನಮ್ಮ ದೇಶದಲ್ಲಿ ಇದೆಲ್ಲಾ ಎಲ್ಲಿ ಒಪ್ಕೊತಾರೆ, ಥೂ ಅಸಹ್ಯ’ ಕಿಚನ್ನಿನ ಬಾಗಿಲಿನಲ್ಲಿದ್ದ ನಿರ್ಮಲಾ ಆಂಟಿ ಮೊದಲ ಬಾರಿಗೆ ಮಾತನಾಡಿದ್ದರು.

‘ಅದರಲ್ಲಿ ಅಸಹ್ಯ ಏನಿದೇ ಆಂಟಿ? ಇದೆಲ್ಲಾ ಹಿಂದೆ ಇಂದಾನು ಇದೆ. ಪುರಾಣದಲ್ಲಿ ವಿಷ್ಣು ಮೋಹಿನಿ ಆದಾಗ ಶಿವನಿಗೆ ಇಷ್ಟ ಆಗಲಿಲ್ಲವಾ? ಅದೆಲ್ಲಾ ಆಗಲೇ ಇತ್ತು. ಈಗ ಜನಕ್ಕೆ ಮುಜುಗರ ಅಷ್ಟೆ. ಎಲ್ಲಾ ಬದಲಾಗತ್ತೆ, ಇಲ್ಲೂ ಅದ್ರ ಬಗ್ಗೆ ಹೋರಾಟಗಳೆಲ್ಲಾ ನೆಡಿತಿವೆ’ ವಸುಧಾ ಪಕ್ಕಾ ಜರ್ನಲಿಸ್ಟ್ ಧಾಟಿಯಲ್ಲಿ ವಾದಿಸಿದಳು. ಇವಳೇನಾದರೂ ತನಗೆ ಸೊಸೆಯಾಗಿದ್ದರೆ ಇಬ್ಬರು ಹೇಗೆ ಜಗಳವಾಡಬಹುದಿತ್ತೆಂದು ನಿರ್ಮಲಾ ಆಂಟಿ ಕಲ್ಪಿಸಿಕೊಂಡರು.

‘ಆದ್ರೂ, ಕೇಳಿದವರಿಗೆಲ್ಲಾ ನಮ್ಮ ಶ್ರೀಹರಿ ಆ ವಿಷ್ಣುವಿನ ಅಪರಾವತಾರ ಅಂತ ಹೇಳೋಕಾಗತ್ತಾ?’ ಅಂಕಲ್ ಹೇಳಿದರೂ ಅವರು ತಮಾಷೆ ಮಾಡಿದರೋ, ಸೀರಿಯಸ್ ಆಗಿ ಹೇಳಿದರೋ ವಸುಧಾಳಿಗೆ ಗೊತ್ತಾಗಲಿಲ್ಲ.
‘ಹಾಗಲ್ಲ ಅಂಕಲ್, ಯಾರು ಏನಂತಾರೆ ಅಂತ ತಲೆ ಕೆಡಿಸಿಕೊಳ್ಳೋದಾ? ಈಗೆಲ್ಲಾ ಮೊದಲಿನ ಹಾಗಿಲ್ಲ. ಈಗೆಲ್ರೂ ಮಾಡ್ರನ್ ಆಗಿ ಥಿಂಕ್ ಮಾಡ್ತಾರೆ.’

ವಸುಧಾ ಇನ್ನು ಮುಂದಕ್ಕೆ ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿ ಮಧ್ಯೆ ಬಾಯಿ ಹಾಕಿದರು. ‘ಅಯ್ಯೋ ನಾವು ಮಾಡ್ರನ್ನೇ ಕಣಮ್ಮ, ನಂದೂ ಫೇಸುಬುಕ್ಕಿದೆ, ಇವರೂ ಕರೆಂಟು ಬಿಲ್ಲು ಕಟ್ಟೋಕೆ ಕ್ಯೂ ನಿಲ್ಲಲ್ಲ, ಪೇಟಿಎಂನಲ್ಲೆ ಕಟ್ತಾರೆ, ಮೊನ್ನೆ ಮೊನ್ನೆ ತಾನೆ ಅಮೇಜಾನಿಂದ ಕುಕ್ಕರ್ ತರಿಸಿದೆ. ನೀ ಸಿಕ್ಕಿದೆಯಲ್ಲಾ ಆ ಮ್ಯಾಟ್ರಿಮನಿ ಸೈಟಲ್ಲೂ ನಾವೇ ಅಕೌಂಟು ಮಾಡಿದ್ದು. ಮನೆಗೊಬ್ಳು ಮುದ್ದು ಮುದ್ದಾಗಿರೋ ಸೊಸೆ ತರೋಣಾ ಅನ್ಕೊಂಡಿದ್ವಿ ಅಷ್ಟರಲ್ಲಿ..’ ಆಂಟಿ ನಿಲ್ಲಿಸಿದರು.

‘ಈ ನನ್ನ ಮಗ ಅಳಿಯನ್ನ ತಂದ್ಬಿಟ್ಟ.’ ಅಂಕಲ್ ಮುಂದುವರೆಸಿದರು.

‘ಥೂ ಅದೇನೆಂತ ಮಾತಾಡ್ತೀರಿ ನೀವು?’ ಅಳಿಯ ಅಂತೆ ಅಳಿಯ’ ಆಂಟಿ ಮುಜುಗರದಿಂದ ಒಳಗೆ ಹೋದರು.

‘ಒಳ್ಳೆ  ಕತೆ ಆಯ್ತಲ್ಲ, ಇನ್ನೇನು ಹೇಳಬೇಕು? ಅಳಿಯ ಅಲ್ಲದಿದ್ರೆ ಮಗನ ಗಂಡ ಅನ್ಬೇಕಲ್ಲಾ’ ಎಂದು ಮುಗುಳ್ನಕ್ಕು ವಸುಧಾಳನ್ನು ನೋಡಿದರು. ವಸುಧಾ ತಾನೂ ಮುಗುಳ್ನಕ್ಕು ಹೊರಡಲು ಎದ್ದು ನಿಂತಳು.


1 comment:

  1. Yarige bekadru nanjothe sex mathanadabahudu.. auntys bekadru mathadi
    +919448907124

    ReplyDelete