Wednesday, August 16, 2017

ದ್ವಾರಕೆಯ ದೋಸೆ, ಮತ್ತವಳ ನೆನಪು


ಸಂಜೆ ಯಾಕೋ ಬೋರಾಗ್ತಿತ್ತು. ಸುತ್ತಾಡಿ ಬರಲು ಹೋದವನಿಗೆ ಅಲ್ಲೇ ಇದ್ದ ಫಾಸ್ಟ್‌ಫುಡ್ ಗಾಡಿ ಕಂಡಿತು. ಸೀದಾ ಹೋಗಿ ಮಸಾಲೆದೋಸೆ ಹೇಳಿದೆ. ರಷ್ ಇರದಿದ್ದರಿಂದ ಆರ್ಡರ್ ಬೇಗ ಬಂತು. ಅದರ ಜೊತೆಗೆ ಇದ್ದಕಿದ್ದಂತೆ ಅವಳ ನೆನಪೂ ಬಂತು. ನನಗೆ ಅದೇನು ಹೊಸದಲ್ಲ. ನಗುತ್ತಾ ದೋಸೆ ಮಧ್ಯಕ್ಕೆ ಮುರಿದೆ. ಆಲುಗಡ್ಡೆ ಪಲ್ಯವನ್ನು ನಂಚಿಕೊಂಡು ಬಾಯಿಗಿಡುತ್ತಿದ್ದಂತೆ ಜಗತ್ತೆಲ್ಲಾ ಕಪ್ಪು ಬಿಳುಪಾಗತೊಡಗಿತು. ಇದೇನಪ್ಪಾ ಅಂದುಕೊಳ್ಳುತ್ತಿರುವಾಗಲೇ ಒಂದು ಫ್ಲಾಷ್‍ಬ್ಯಾಕ್ ಶುರುವಾಯಿತು.

ತುಮಕೂರಿನ ದ್ವಾರಕಾ ಹೋಟಲಿನ ಮೂಲೆಯಲ್ಲಿದ್ದ ಗಡಿಯಾರದ ಕೆಳಗಿನ ಟೇಬಲ್ಲು. ಆ ಕಾರ್ನರ್ ಟೇಬಲ್ಲು ಖಾಲಿಯಾಗುವವರೆಗೂ ಕಾದು ಬಂದು ಕುಳಿತಿದ್ವಿ. ಹೇಳಿ ಕೇಳಿ ನಾವಿಬ್ಬರೂ ಲವರ್ಸ್. ನಮಗೆ ಎಲ್ಲಿ ಹೋದರೂ ಕಾರ್ನರ್ ಸೀಟು, ಕಾರ್ನರ್ ಟೇಬಲ್ಲುಗಳೇ ಬೇಕು. ತಪ್ಪು ತಿಳ್ಕೊಳೋ ಅಂತದ್ದೇನಿಲ್ಲ. ನಾವಿದ್ದ ಟೇಬಲ್ ಮೂಲೆಯಲ್ಲಿದ್ದರಿಂದ ಹೋಟಲಿನ ವೇಟರ್‍ಗಳು ನಮ್ಮನ್ನು ಹುಡುಕಿಕೊಂಡು ಬಂದು ಆರ್ಡರ್ ತೆಗೆದುಕೊಳ್ಳಲು ಸಮಯ ಹಿಡಿಯುತ್ತಿತ್ತು. ವೇಟರ್‍ಗೆ ವೈಟಿಂಗ್ ಮಾಡೋ ನೆಪದಲ್ಲಿ ನಾವು ಚಾಟಿಂಗ್ ಮಾಡಬಹುದೆಂಬ ಲೆಕ್ಕಾಚಾರ. ಆದರೆ ಅವತ್ತು ಚಾಟಿಂಗ್ ಮಾಡುವ ಬದಲು ಸುಮ್ಮನೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತುಬಿಟ್ವಿ. ಹೀಗೆ ನನ್ನ ಮುಖ ಅವಳು ಅವಳ ಮುಖ ನಾನು ನೋಡಿಕೊಂಡು ಕುಳಿತಿದ್ದರೇ ದ್ವಾರಕಾ ಹೋಟಲ್ಲೇ ದ್ವಾರಕಾ ನಗರಿ, ಒಳಗೆ ನಾನೆ ಕೃಷ್ಣ ಅವಳೇ ರಾಧೆ.(ಕೊಳಲೊಂದು ಮಿಸ್ಸಿಂಗ್) ಹೀಗೆ ಇಮಾಜಿನೇಷನ್ನಲ್ಲಿ ಇರುವಾಗಲೇ ಕಂಸನಂತಿದ್ದ ಒಬ್ಬ ವೇಟರ್ ಬಂದು ‘ಏನ್ ಬೇಕು?’ ಅಂದ.

ಮೆನು ಅಲ್ಲೇ ಇದ್ದರೂ, ಸುಮ್ಮನೆ ಏನೇನಿದೆ ಎಂದು ಕೇಳಿದೆ. ಅವನು ಸೆಂಟರ್‌ಫ್ರಷ್ ತಿಂದವನಂತೆ ರಪರಪನೆ ಇಷ್ಟುದ್ದದ ಲಿಸ್ಟ್ ಹೇಳಿದ. ಹೋಟಲ್ಲಿನಲಿ ನಳಮಹರಾಜನ ನಳಪಾಕವೇ ಇದ್ದರೂ ನಂದು ಬೈ ಡಿಫಾಲ್ಟ್ ಮಸಾಲೆ ದೋಸೆ. ಅದನ್ನೇ ಹೇಳಿದೆ. ಅವಳು ಕೂಡ ನಾನಿಟ್ಟ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಸತಿ ಸಾವಿತ್ರಿಯಂತೆ ಅದನ್ನೇ ಹೇಳಿದಳು. ವೇಟರ್ ಅಲ್ಲಿಂದಲೇ ಜೋರಾಗಿ ಎರಡು ಮಸಾಲೆ ದೋಸೆ ಎಂದು ಹೇಳಿ ಮುಂದಿನ ಟೇಬಲ್ಲಿಗೆ ಹೋದ.

ಅವನು ಹೋದಮೇಲೆ ನಮ್ಮ ಮಾತು, ಕಥೆ, ನಗು ನಾಚಿಕೆ ಮತ್ತೆ ಶುರುವಾಯಿತು. ನಾನೊಬ್ಬನೆ ಮಾತನಾಡುತ್ತಿದ್ದೆ. ಅವಳು ಸುಮ್ಮನೆ ನೋಡಿ ನಗುತ್ತಿದ್ದಳು. ನಾನೇನಾದರು ನಕ್ಕು ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದರೆ ಹಳೆ ಸಿನಿಮಾ ಹೀರೋಯಿನ್‍ಗಳ ತರಹ ನಾಚಿಕೊಂಡು ಕತ್ತು ಬಗ್ಗಿಸುತ್ತಿದ್ದಳು. ಪೋನಿನಲ್ಲಿ ಮಾತನಾಡುತ್ತಾ ಅಷ್ಟೊಂದು ಜೋರು ಮಾಡುವ ಬಜಾರಿ ಇವಳೇನಾ ಎನ್ನಿಸಿತು. ‘ಇದ್ಯಾಕೆ ಹೀಗೆ’ ಎಂದು ಕೇಳಿದರೆ, ‘ನೀನೆದುರುಗಿದ್ದರೆ ನಂಗೆ ಹಾಗೆ’ ಎಂದು ಹೇಳಿ ಮತ್ತೆ ‘ನಾಚಿಕೆ ಮೋಡ್’ ಆನ್ ಮಾಡಿಬಿಟ್ಟಳು.

ಅಷ್ಟರಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಬಂತು. ಅವಳು ಹಾಸ್ಟಲಿನಲ್ಲಿ ಒಂದು ರೌಂಡ್ ಬಾರಿಸಿ ಬಂದಿದ್ದಳೇನೋ ಸುಮ್ಮನೆ ಪ್ಲೇಟ್ ಮುಂದೆ ಇಟ್ಟುಕೊಂಡು ಕೂತಳು. ನಾನು ದೊಡ್ಡ ಟಾರ್ಗೆಟ್ ಚೇಸ್ ಮಾಡುವ ಓಪನಿಂಗ್ ಬ್ಯಾಟ್ಸ್‍ಮನ್ ತರಹ ಬ್ಯಾಟಿಂಗ್ ಶುರು ಮಾಡಿದೆ. ಇದ್ದಕ್ಕಿದ್ದಂತೆ ಜೋರಾಗಿ ನಗತೊಡಗಿದಳು ‘ಏನಾಯ್ತೇ ಲೂಸು’ ಎಂದು ಕೇಳಿದರೆ ಮತ್ತೆ ಮತ್ತೆ ನಗತೊಡಗಿದಳು. ನನಗೇನು ಕಾಮಿಡಿ ಅಂತ ಅರ್ಥವಾಗಲಿಲ್ಲ. ‘ಲೋ ಕೋತಿ, ದೋಸೆ ತಿನ್ನೋದು ಹಾಗಲ್ಲ ಕಣೋ’ ಎಂದಳು. ನನಗೆ ಅರ್ಥವಾಗಲಿಲ್ಲ? ಮುಖವೆಲ್ಲಾ ಕ್ವಶ್ಚನ್ ಮಾರ್ಕ್ ಮಾಡಿಕೊಂಡು ಅವಳನ್ನು ನೋಡಿದೆ. ಮತ್ತೆ ನಕ್ಕಳು.

ನಕ್ಕು ಸಾಕಾಯ್ತೇನೋ ನಿಧಾನವಾಗಿ ವಿವರಿಸತೊಡಗಿದಳು. ‘ನೋಡು ಮಸಾಲೆ ದೋಸೆಯ ಒಳಗೆ ಪಲ್ಯ ಇರುತ್ತಲ್ವಾ? ಅದಕ್ಕೆ ಹೀಗೆ ಮಧ್ಯದಲ್ಲಿ ಮುರ್ಕೊಂಡು ಹೀಗೆ..’ ಎಂದು ದೋಸೆಯ ಜೊತೆಗೆ ‘ತಿನ್ನಬೇಕು’ ಎನ್ನುವ ಪದವನ್ನು ನುಂಗಿದಳು. ದೋಸೆ ಅಗಿಯುತ್ತಾ ‘ನಿನ್ನ ಹಾಗೆ ತಿಂದರೆ ಲಾಸ್ಟಲ್ಲಿ ಪಲ್ಯ ಹಾಗೆ ಉಳಿಯುತ್ತೆ ಗೂಬೆ’ ಎಂದು ಅಸ್ಪಷ್ಟವಾಗಿ ಹೇಳಿದಳು. ನನಗೆ ಆಶ್ಚರ್ಯವಾಯಿತು. ಅಲ್ಲಿಯವರೆಗೂ ನನಗದು ಗೊತ್ತಿರಲೂ ಇಲ್ಲ, ಯಾರು ಹೇಳಿಕೊಟ್ಟಿರಲೂ ಇಲ್ಲ. ಇವಳು ಸ್ಕೂಲಿನಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಹಾಗೆ ಹೇಳುವುದನ್ನು ಕೇಳಿ ನಗು ಬಂತು. ಒಂದು ಕ್ಷಣ ಅವಳು ಹೇಳಿದ್ದು ಸರಿ ಎನ್ನಿಸಿದರೂ ಅವಳ ಮುಂದೆ ಸೋಲಬಾರದೆಂದು ‘ಹೇಗೆ ತಿಂದರೂ ಹೊಟ್ಟೆಗೆ ಹೋಗೋದು ತಾನೆ, ಸುಮ್ಮನೆ ತಿನ್ನೇ’ ಎಂದು ಹೇಳಿದೆ. ಆದರೂ ಅವಳು ಬಿಡದೆ ದೋಸೆಯನ್ನು ಮಧ್ಯಕ್ಕೆ ಮುರಿಸಿ ತಿನ್ನಿಸಿದಳು. ಜೊತೆಗೆ ತನಗೆ ಹಸಿವಿಲ್ಲವೆಂದು ಅವಳ ದೋಸೆಯನ್ನು ನನಗೆ ತಿನ್ನಿಸಿದಳು. (ಕಡೆಯಲ್ಲಿ ಬಿಲ್ ಕೊಟ್ಟಿದ್ದು ನಾನೆ ಎಂದು ಬೇರೆ ಹೇಳಬೇಕಿಲ್ವಲಾ?)

ಕಮಿಂಗ್ ಬ್ಯಾಕ್ ಟು ರಿಯಾಲಿಟಿ ಈಗ ಅವಳಿಲ್ಲ. ಆದರೆ ನಾ ತಿನ್ನುವ ಪ್ರತಿ ಮಸಾಲೆ ದೋಸೆಯ ಜೊತೆಗೂ ಅವಳ ನೆನಪಿದೆ. ಅವಳು ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅಂದಿನಿಂದ ದೋಸೆಯನ್ನು ಮಧ್ಯಕ್ಕೆ ಮುರಿದು ತಿನ್ನುತ್ತೇನೆ. ಮತ್ತೆ ಅವಳೊಡನೆ ದೋಸೆ ತಿನ್ನುವ ದಿನಕ್ಕಾಗಿ ಕಾಯುತ್ತಿದ್ದೇನೆ.

- ತ್ರಿವಿಕ್ರಮ

Thursday, August 03, 2017

ಪುತ್ರಕಾಮೇಷ್ಟಿಯಾಗ - ೧

ಪುತ್ರಕಾಮೇಷ್ಟಿಯಾಗ - ೧

(ಪರಮ ಪತಿರ್ವತೆ* ಸೀತೆ)


ವರುಷಗಳುರುಳಿದರು ಮನೆಯಲ್ಲಿ
ವಂಶೋದ್ಧಾರಕನ ಸುಳಿವಿರಲಿಲ್ಲ
ಹತ್ತು ಬೆಟ್ಟವ ಹತ್ತಿ ಬಂದರು
ನೂರು ಗುಡಿಯ ಸುತ್ತಿ ಬಂದರು
ಕುಡಿಯ ನೀಡುವ ದೈವ ಒಲಿದಿರಲಿಲ್ಲ

ನಿಂತರೆ ವ್ರತ ಕುಂತರೆ ಪೂಜೆ
ಮಲಗಿ ಉರುಳಿದರೆ ಹರಕೆ ಸೇವೆ
ಸೊತು ಹೋಗಿದ್ದಳು ಸೀತೆ
ಕುಂಚ ಬಣ್ಣದೊಳದ್ದಲಾಗದ ಮೇಲೆ
ಪರದೆ ಮೇಲೆ ಚಿತ್ರ ಮೂಡೀತೆ?
ಹೊಲವೂಳದೆ ಬೆಳೆಯು ಬೆಳದೀತೆ?
ಮರವ ಸುತ್ತಿ ಹರಕೆ ತೀರಿಸಿ ಬಂದು
ಮರದ ಮಂಚದಲಿ ಮಲಗಿ
ಗೊರಕೆ ಹೊಡೆದರೇನು ಫಲ
ಮದ್ದರೆದು ತಿನಿಸಿದರು ಮುದ್ದು ಮಾಡದ
ಪತಿಗೆ ತಾ ಸತಿಯಾಗಿದ್ದಳಷ್ಟೆ
ಬಂದಿರಲಿಲ್ಲ ರತಿಯಾಗುವ ಕಾಲ

ಇವಳು ಹೊರಗಾದಾಗಲೆಲ್ಲ
ಕೊರಗುತಿದ್ದಳು ಅತ್ತೆ ಜಗಲಿಯಲಿ ಕೂತು
ಒಮ್ಮೆ ಮಿತಿಮೀರಿತ್ತು ಅವಳ ಮಾತು:
"ಹೆರಲಾಗದವಳು ಹೊರೆಯಾಗಿ ಏಕಿರುವೆ
ಬೇರೆ ಸೊಸೆಯನಾದರು ತರುವೆ
ಹಾರಿಕೊಳ್ಳಬಾರದೆ ಹೋಗಿ ಕೆರೆಗೆ?"
‘ಅವನು ಮುಟ್ಟದೇ ಮುಟ್ಟು ನಿಲ್ಲುವುದೇನು’
ಬಾಯ್ತದಿಗೆ ಬಂದ ಮಾತ ಮೌನದಲಿ ಕಟ್ಟಿಟ್ಟು
ಕಣ್ಣೀರಿಟ್ಟಿದ್ದಳು ಹೋಗಿ ಮರೆಗೆ..!

ಬೆದಕುತಿರಲು ಅತ್ತೆ ಮಾತು ಮಾತಿಗು
ಬದುಕಿದ್ದಳು ದಿನವು ಸತ್ತು ಸತ್ತು
ಬತ್ತಿ ಹೋಗಿತ್ತು ಕಣ್ಣು ಅತ್ತು ಅತ್ತು
ಇತ್ತ ತಪ್ಪೊಪ್ಪಿಕೊಳ್ಳಲಾರದ ಪತಿಗೆ
ಇತ್ತು ಅದೆಂಥದೋ ಗುಪ್ತರೋಗ
ಅತ್ತ ಅತ್ತೆಯಿಂದ ತಪ್ಪುತಿರಲಿಲ್ಲ
ನಿತ್ಯ ಬೈಗುಳಗಳ ಶ್ರವಣಸಂಭೋಗ

ಇದೇ ಚಿಂತೆಯಲೊಂದು ದಿನ
ಸಂತೆಗೆ ಬಂದಿದ್ದಳು, ಹುಡುಕುತಿದ್ದಳು
ಕೊತ್ತಂಬರಿ ಕಂತೆಗಳಿದ್ದ ಗಾಡಿ
ಆಗ ಕಂಡನಲ್ಲಾ ಅವನು, ಅಬ್ಬಾ
ಎಷ್ಟು ದಿನವಾಯ್ತು ಅವನ ನೋಡಿ
ಇವಳ ಕಂಡವನೆ ಓಡಿ ಬಂದನು
ಕೊಂಚ ತೆಳ್ಳಗಾಗಿದ್ದ, ಬಿಟ್ಟಿದ್ದ ದಾಡಿ
ಇಬ್ಬರಿಗು ಮಾತಿದ್ದರು ಆಡಲು ಕೋಟಿ
ತುಟಿ ಬಿಚ್ಚಲಿಲ್ಲ ಮೌನವನು ಮೀಟಿ
ಪಕ್ಕದಲೆ ನೆಡೆದು ಬಂದರು
ಸಂತೆ ಬೀದಿಯನು ದಾಟಿ

ಹೊಸದಾದ ಗಾಂಭಿರ್ಯವನು
ಹಳೆಯ ಒಲುಮೆಯಲಿ ಅದ್ದಿ
ಇದ್ದಕಿದ್ದಂತೆ ಕೇಳಿದನು ‘ಹೇಗಿದ್ದಿ?’
ಅನಿರೀಕ್ಷಿತವಾದ ಪ್ರಶ್ನೆಗೆ
ನಿರೀಕ್ಷಿತ ಉತ್ತರ ‘ಚೆನ್ನಾಗಿದ್ದೇನೆ’
ಎಂದುಲಿದು ಅವಳು ಉಗುಳು ನುಂಗಲು
ಬೇಡವೆಂದರು ತುಂಬಿ ಬಂದವು ಕಂಗಳು
ಬಿಗಿದ ದುಃಖದುರುಳಿಗೆ ಸಿಕ್ಕವಳಂತೆ
ಬಿಕ್ಕಿ ಅತ್ತಳು ಕರುಳು ಕಿತ್ತು ಬರುವಂತೆ

ಎಷ್ಟಾದರು, ಹಳೆಯ ಸಲುಗೆಯ ಗೆಳೆಯ
ತಾಳಲಾಗದೆ ಹೇಳಿದಳೆಲ್ಲ ವಿಷಯ
ಭಾರವಾದ ಇವಳೆದೆ ಬರಿದಾಗುತಿರಲು
ಸಂತಾಪ ತುಂಬಿಕೊಂಡಿತು ಅವನೆದೆಗೆ
ಕಣ್ಣೊರೆಸಿ, ಬೆನ್ನ ನೇವರಿಸುತಿರಲು
ಅವನ ಸ್ಪರ್ಷ ಮೈಯನಾವರಿಸಿ
ಕಣ್ಣರಳಿಸಿ ನೋಡಿದಳು ಅವನೆಡೆಗೆ
ಪರಿಹಾರ ಕಂಡಿತ್ತು ಅವನ ನೋಟದಲ್ಲಿ
ಸಂಜೆ ಸಿಗಲು ಹೇಳಿ ಹೋದಳು ತೋಟದಲ್ಲಿ

ಮನದ ಅಂಜಿಕೆಯನೆಲ್ಲಾ
ಸಂಜೆ ಸೂರ್ಯನಲಿ ಸುಟ್ಟು
ಬಾನಗೆಂಪಲಿ ಅದ್ದಿ ತೆಗೆದಂತಿದ್ದ
ಕೆಂಪು ಸೀರೆಯನು ಉಟ್ಟು
ದೇವರ ಅಭಿಷೇಕದ ಕುಂಟು ನೆಪ ಹೇಳಿ
ಅಭಿಸಾರವ ಸೇರಿದಳು, ಬೀಸಿತ್ತು ತಂಗಾಳಿ

ಚಂದಿರನ ಬೆಳಕಲ್ಲಿ ಕಂಡವನ
ಬಳಿಗೆ ಬಂದಳು ಬಳಸಿ ನಿಂತಳು
ಮನೆಯ ದೈವವನು ಮನದಿ ನೆನೆದಳು
‘ತಪ್ಪೆನ್ನಿಸಿದರೆ ಮನ್ನಿಸದೆ ನರಕ ಸೇರಿಸು
ಇಲ್ಲವಾದರೆ ಒಪ್ಪಿ ಈ ಹರಕೆ ತೀರಿಸು’
ಎಂದು ಅಪ್ಪಿದಳು ಎದುರು ನಿಂತವನನು

ಉರಿವ ಪಂಜಿನಂತಿದ್ದ ಅವನು
ಕೊರೆವ ಮಂಜಿನಂತಿದ್ದ ಇವಳು
ಇಬ್ಬರೂ ಒಂದಾಗಿ ಬೆರೆತಾಗ
ಬಂಜೆಯೆಂದವರ ಬಾಯಿಗೆ ಬಿದ್ದಿತ್ತು ಬೀಗ
ಹರಕೆ ಹೂತ್ತ ದೇವರುಗಳೆಲ್ಲಾ
ಮೇಲೆ ನಿಂತು ಹರಸಿದಂತಿತ್ತು
ನೆಡೆದಿರಲು ಪುತ್ರಕಾಮೇಷ್ಟಿಯಾಗ..!

*ತಿಳಿದು ಮಾಡಿದ ತಪ್ಪಿದೆ. ಶೀರ್ಷಿಕೆಯಲ್ಲೂ, ಕವಿತೆಯಲ್ಲೂ.

- ನಾ ತ್ರಿವಿಕ್ರಮ