Friday, January 27, 2017

ಹಾಳು ಮಾಡಲಿಲ್ಲ, ಹಾಡು ಮಾಡಿದೆ


 
ಈಡೇರಿಸುವೆ ನಿನ್ನ ಹಾಡಾಗುವ ಬಯಕೆ
ನೋಡಿಲ್ಲಿ ಚೆಲುವೆ ನನ್ನತ್ತ
ಬ್ರಹ್ಮನೇ ಎರಡು ಪೆಗ್ಗೊಡೆದಾಗ
ಪೆನ್ನಿಡಿದು ಬರೆದ ಹಾಡು ನೀನು,
ನಾನಿಲ್ಲಿ ಕೇವಲ ನಿಮಿತ್ತ

ಮುಂಗುರುಳೇ ಸಂಗೀತ ಬೈತಲೆಯು ಶೀರ್ಷಿಕೆ
ಮುಂಗುರುಳೇ ಸಂಗೀತ ಬೈತಲೆಯು ಶೀರ್ಷಿಕೆ
ಶುರುವಿನಲೆ ಕೈ ನಡುಗುತಿದೆಯಲ್ಲಾ ತ್ರಿಲೋಕ
ಸ್ಟಡಿ.. ಸ್ಟಡಿ.. ಸ್ಟಡಿ.. ಹಾಂ ಈಗ ಓಕೆ..!

ನೀ ರೆಪ್ಪೆ ತೆರೆದಾಗ ಮೂಡಿತು ಮೊದಲ ಸಾಲು
ಆ ಸಾಲನ್ನೆ ತಿದ್ದುತ್ತಾ ತೀಡುತ್ತಾ
ಬಿದ್ದಿರುತ್ತಿದ್ದೆನೇನೋ ಪೂರ್ತಿ ಬಾಳು
ಎಚ್ಚರವಾಗೋಯ್ತು ನೀ ಕಣ್ಣ ಮಿಟುಕಿಸಲು
ಕುಡಿನೋಟದ ಪನ್ನೀರನು ಚುಮುಕಿಸಲು

ಮಾಡಹೋಗದೇ ವೃತಾ ಕಾಲಹರಣ
ಬರೆದು ಕೆಡವಿದೆ ನೋಡು
ಕಂಗಳ ಪಲ್ಲವಿಗೆ ಚಂದುಟಿಯು ಚರಣ
ಕುಡಿಹುಬ್ಬುಗಳಾದವು ಒಂದಕ್ಕೊಂಡು ಪ್ರಾಸ
ಕೆಂಪು ಕೆನ್ನೆಗಳಲ್ಲಿರಲಿಲ್ಲ ವ್ಯಾಕರಣ ದೋಷ

ಇಲ್ಲಿಗೆಲ್ಲವೂ ಮುಗಿಯಿತು ನನ್ನ ಪ್ರಕಾರ
ಉ’ಗುರು’ ಕಚ್ಚುತ್ತಾ ‘ಲಘು’ವಾಗಿ ನೀ ನಗುವಾಗ
ಬೇಕೇತಕೆ ಹೇಳು ಬೇರೆ ಅಲಂಕಾರ?
ಇನ್ನು ಕೆಳಗೆ ಹೋಗಲಾರೆ ಸಾಕು
ಕೊಡುವೆ ಒಂದು ಮಾಸ್ಟರ್ ಸ್ಟ್ರೋಕು

ಮುದ್ದು ಮೂಗು ಕೊನೆಯ ಸಾಲು, ತುದಿಯು ಸ್ಡಲ್ಪ ಚೂಪು
ಇಟ್ಟರೆ ಮುಗಿದುಹೋಯ್ತು ಮೂಗುತಿಯ ಫುಲ್ ಸ್ಟಾಪು..! 

- ತ್ರಿವಿಕ್ರಮ