Monday, January 21, 2013

ನಗು

 ನಗು


        ದೇವಸ್ಥಾನದ ಘಂಟೆಯ ಸದ್ದಾಯಿತು. ಗರ್ಭಗುಡಿಯಿಂದ ಹೊರಗಿಣುಕಿದೆ. ಬಿಳಿ ಸೀರೆ ಉಟ್ಟಿದ್ದ ಇಪ್ಪತ್ತರ ಆಸುಪಾಸಿನ ಮಹಿಳೆಯೊಬ್ಬಳು ತನ್ನ ಕಂದಮ್ಮನನ್ನು ಘಂಟೆಯ ಬಳಿ ಎತ್ತಿ ಹಿಡಿದಿದ್ದಳು. ಆ ಮಗು ತನ್ನ ಪುಟ್ಟ ಬೆರಳುಗಳಿಂದ ಘಂಟೆಯನ್ನು ಬಡಿದು ಸಂತೋಷಪಡುತ್ತಿತ್ತು. ತೀರ್ಥ ನೀಡಲೆಂದು ಹೊರಹೋದವನ ನೋಟ ಆ ತಾಯಿಯ ಮುಖದ ಮೇಲೆ ಹರಿಯಿತು. ನಗುವಿನ ನೆನಪೇ ಮರೆತುಹೋದಂತಿದ್ದ ಆ ಮುಖದಲ್ಲಿದ್ದ ನಿಸ್ತೇಜ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡಿದಾಗ ಕೊಂಚ ತಳಮಳವಾಯಿತು. ಹಣೆಯಲ್ಲಿ ಕುಂಕುಮವಿಲ್ಲ, ಕೆನ್ನೆಯಲ್ಲಿ ಅರಿಸಿನವಿಲ್ಲ, ಕೊರಳಿನಲ್ಲಿ ಮಾಂಗಲ್ಯವಿಲ್ಲ. ಆ ಒಂದು ಕ್ಷಣ ದ.ರಾ.ಬೇಂದ್ರೆಯವರ ಪುಟ್ಟ ವಿಧವೆ ನೆನಪಾದಳು. ಕತ್ತು ಬಗ್ಗಿಸಿ ತೀರ್ಥವನ್ನು ನೀಡಿ ಗರ್ಭಗುಡಿ ಸೇರಿದೆ. ಅಲ್ಲಿದ್ದ ಕಲ್ಲಿನ ದೇವರ ವಿಗ್ರಹ ನಗುತ್ತಿತ್ತು.
          ಹೊರಗೆ ಜೀವವಿದ್ದ ಮಹಿಳೆ ನಗುತ್ತಿರಲಿಲ್ಲ. ಒಳಗೆ ನಗುತ್ತಿದ್ದ ದೇವರಿಗೆ ಜೀವವೇ ಇರಲಿಲ್ಲ.

No comments:

Post a Comment