Monday, January 28, 2013

Why Sooo Serious - ವೈ ಸೋ ಸೀರಿಯಸ್?

ವೈ ಸೋ ಸೀರಿಯಸ್ಸು?

ವಯಸಿನ್ನು ದಾಟಿಲ್ಲ ಹದಿನೆಂಟು
ಈಗಲೇ ಏಕಿಷ್ಟು ಡಿಸಪಾಯಿಂಟ್ ಮೆಂಟು?
ನಗುನಗುತ ಕಳೆಯೋಣ ಪೂರ್ತಿ ಆಯಸ್ಸು
ವೈ ಸೋ ಸೀರಿಯಸ್ಸು??

ಎಸ್ಸೆಸಲ್ಸಿ, ಆದಮೇಲೆ ಪೀಯೂಸಿ
ಜೀವನ ಸಾಯೋವರೆಗೂ ತುಂಬಾ ಬ್ಯುಸಿ
ಹಾಳಾಗಿಹೋಗಲಿ ಪಾಸಾಗದಿದ್ದರೆ ಸಿಇಟಿ
ಬದುಕೋಕೆ ದಾರಿಗಳಿವೆ ಕೋಟಿ ಕೋಟಿ
ಹುಟ್ಟಿಸಿದ ದೇವರು ಮೇಯಿಸೋಲ್ಲ ಹುಲ್ಲು
ಇರುವವರೆಗು ಜೀವನವನ್ನು ಖುಷಿಯಿಂದ ತಳ್ಳು

ಅರ್ಧ ಜೀವನ ಓದಿದ್ದೇ ಆಯಿತು,
ಅಂತೂ ಇಂತೂ ಕೋರ್ಸು ಮುಗಿಯಿತು.
ಸಿಗಬಹುದು ಎಂಎನ್ಸೀಯಲ್ಲೊಂದು ಜಾಬು
ತುಂಬಿ ತುಳುಕುತ್ತಿರುತ್ತದೆ ಜೇಬು
ಖರ್ಚು ಮಾಡಲಾದರೂ ಎಲ್ಲಿದೆ ಸಮಯ?
ಆಫೀಸು ಕೆಲಸದಲ್ಲೇ ಆಗಿರುವಿರಿ ಮಾಯ

ಇಷ್ಟರಲ್ಲೇ ಆಗಿರುವುದು ಯೌವ್ವನದ ಕೊಲೆ
ಕೂದಲುದುರಿ ಆವರಿಸಿರುತ್ತದೆ ಬೋಳುತಲೆ
ಹಿಂತಿರುಗಿ ನೋಡಿದರೆ ಎಲ್ಲ ಖಾಲಿ ಖಾಲಿ
ಸವೆದಿರುತ್ತದೆ ಅಷ್ಟೇ ಜೀವನದ ಚಪ್ಪಲಿ
ಇದರೋಳಗೆ ನಗೋದಕ್ಕೂ ಮಾಡಿಕೊಳ್ಳಿ ಟೈಮು
ಖುಷಿಯಾಗಿರೋದೇನು ಅಲ್ಲವಲ್ಲ ಕ್ರೈಮು?

ಕೈ ಜಾರಿ ಹೋಗುವುದು ಕಣ್ಣೆದುರೆ ವಯಸ್ಸು
ಸಂತಸದಿಂದಿರಲಿ ಸದಾ ನಿಮ್ಮ ಮನಸ್ಸು
ಈಗಲಾದರು ನಕ್ಕುಬಿಡಿ
ವೈ ಸೋ ಸೀರಿಯಸ್ಸು???

-ತ್ರಿವಿಕ್ರಮ



Thursday, January 24, 2013

Second innings - ಸೆಕೆಂಡ್ ಇನ್ನಿಂಗ್ಸು

ಸೆಕೆಂಡ್ ಇನ್ನಿಂಗ್ಸು


ಮೊದಲ ಪ್ರೇಮದ ಕುರುಹುಗಳ
ಎದೆಯಿಂದ ಅಳಿಸಬಹುದೇ?
ನಿತ್ಯ ನೈಟಿನಲಿ ನಿದಿರೆ ಕದಿಯುವ
ಆ ಹುಚ್ಚು ನೆನಪುಗಳ
ಸೆರೆಮನೆಗೆ ಕಳಿಸಬಹುದೇ?

ಅಂದು ರಕ್ಷಾ ಬಂಧನ -
ಎಷ್ಟೋ ಲವ್ ಸ್ಟೋರಿಗಳಿಗೆ
ರಾಖಿ ಹಾಕಿತ್ತು ಚೂರಿ
ಎದೆಯೆ ಆಗಿತ್ತು ಗೋರಿ
ಕೈಗಳಾದಾಗ ರಕ್ಷೆಯಲಿ ಬಂಧಿ.
ಆದರೆ ಸಖತ್ ಡಿಫರೆಂಟ್ ರೀ
ನಮ್ ಲವ್ ಸ್ಟೋರಿ - ಇಲ್ಲಿ
ರಾಖಿಯೇ ಹಾಡಿತ್ತು ಪ್ರೇಮಕ್ಕೆ ನಾಂದಿ.

ಕೈಗಳನು ಮುಂದೆ ಚಾಚಿ
ಕಟ್ಟಿಸಿಕೊಳ್ಳುತ್ತಿದ್ದೆ ರಾಖಿ
ಕಣ್ಣುಗಳು ಬೆರೆತವು, ಕರೆಂಟು ಹೊಡೆಯಿತು
ಅವಳ ಕೈಗೆ ಕೈ ತಾಕಿ.

ರಾಖಿ ಕಟ್ಟಿದ ಅವಳಿಗೆ
ನಾನಾಗಬೇಕಿತ್ತು ಬ್ರದರ್ರು
ಆದರೆ ಎದೆಯಲ್ಲಿದ್ದ ಕಾಮನೆಗಳ
ಕಾಮನಬಿಲ್ಲಿಗೆ ಅವಳು ಹಚ್ಚಿದ್ದಳು
ಕೋಟಿ ಕೋಟಿ ಕಲರ್ರು.

ಮನಸ್ಸಿನ ಕೊಳದಲ್ಲಿ ಇಳಿದ
ಅವಳೊಂದು ಬಣ್ಣದ ಮೀನು
ಮೀನ ಹಿಡಿಯಲು ಗಾಳ ಇಳಿಸಿದ
ನನಗಿನ್ನು ಏಜು ತರ್ಟೀನು..!
ಮುಖದಲ್ಲಿ ಮೀಸೆ ಮೂಡುವ ಮೊದಲೇ
ಎದೆಯಲ್ಲಿ ಆಸೆ ಮಾಡಿತ್ತು ತರಲೆ

ನನ್ನೊಳಗೆ ನನಗೆ ತಿಳಿಯದೆ
ಕಟ್ಟಿದ ಕನಸುಗಳು ನೂರಾರು
ನನಗೆ ಇಂದಿಗೂ ತಿಳಿಯದು
ಅದಕ್ಕೆಲ್ಲ ಹೊಣೆಯಾರು??
ಪ್ರಾಯದ ಹೊಸ್ತಿಲಲ್ಲೇ ಆಗಿತ್ತು
ನನಗೂ ವಿರಹ ವೇದನೆ
ತಡೆಯಲಾರದೆ  ನಾ ಮಾಡಿದ್ದೆ
ನನ್ನ ಪ್ರೇಮ ನಿವೇದನೆ

ನನ್ನ ಪ್ರಪೋಸಲ್ಲು ಅವಳಿಗೆ
ತಂದಿತ್ತು ಭರಿಸಲಾಗದ ಅಚ್ಚರಿ
ಪ್ರೇಮ ಪತ್ರ ಹರಿದು ಚೂರಾಗಿತ್ತು
ನಾ ಯೋಚಿಸುವ ಮೊದಲು ಬೇರೆ ದಾರಿ
ವೀಕಾಗಿ ಹೋಯ್ತು ನನ್ನೆದೆಯ ಬ್ಯಾಟರಿ
ಹೊತ್ತಿಕೊಂಡಿತು ಎದೆಯಾಳದಲ್ಲಿ
ಧಗಧಗನೇ ಉರಿವ ಉರಿ.

ನನ್ನದೂ ಅದೇ ಕಥೆಯಾಯ್ತು
ಮತ್ತೆ ತಂದಳು ರಾಖಿ ಎಂಬ ವೆಪನ್ನು
ಈ ಬಾರಿ ಮಾಡಿದ್ದಳು ಪ್ರೀತಿಯ ದಫನು.
ಮೊದಲ ರಾಖಿಯಿಂದ ಲವ್ವು
ಬೀರಿತ್ತು ಒಲವಿನ ನಗೆ
ಈ ರಾಖಿ ಹಾಕಿತ್ತು ಆ ಲವ್ವಿಗೆ ಹೊಗೆ.

ದೊಡ್ಡವರು ಸುಮ್ಮನೇ ಹೇಳಿಲ್ಲ
ಒಳ್ಳೆಯದಕ್ಕಾಗಿಯೇ ಆಗುವುದೆಲ್ಲ
ಮನದಲ್ಲಿ ಮೂಡಿತ್ತು ಹೊಸದೊಂದು ಕನಸು
ಶುರುವಾಗುವುದಿತ್ತು ಸೆಕೆಂಡ್ ಇನ್ನಿಂಗ್ಸು.

ಜಾಸ್ತಿ ದಿನ ಇಟ್ಟುಕೊಳ್ಳಬಾರದಂತೆ
ಖಾಲಿ ಹೊಡೆಯುತ್ತಿರುವ ಹಾರ್ಟು
ಅದಕೆಂದೆ ಕರೆಸಿದ್ದೆ ಮತ್ತೊಬ್ಬಳನು
ಮಾಡಲು ಪ್ರೇಯಸಿಯ ಪಾರ್ಟು.

ಬಾಡಿಯಲೇ ಕೊಳೆಯುತ್ತಿದ್ದ ಹಾರ್ಟಿಗೆ
ಬಾಡಿಗೆಗೆ ಎಂದು ಬಂದಳು
ಬಾಡಿ ಹೋಗುತ್ತಿದ್ದ ಪ್ರೀತಿಗೆ
ಮಳೆನೀರ ತಂದಳು.
ಬಾಡಿಗೆ ಮನೆ ಅವಳಿಗೆ ಸ್ವಂತವಾಯ್ತು
ಅಂದಿಗೆ ನನ್ನ ನೋವೆಲ್ಲ ಅಂತ್ಯವಾಯ್ತು.

ಪ್ರೀತಿಯ ಹೂ ಅರಳಿ ನಿಂತಿದೆ
ಇದು ಅವಳ ಕೊಡುಗೆ
ನೀವೇನು ಹೇಳುವಿರಿ? ಸೇರಬೇಕು ತಾನೆ
ಈ ಹೂ ಅವಳ ಮುಡಿಗೆ?

 




 -ತ್ರಿವಿಕ್ರಮ


Monday, January 21, 2013

ನಗು

 ನಗು


        ದೇವಸ್ಥಾನದ ಘಂಟೆಯ ಸದ್ದಾಯಿತು. ಗರ್ಭಗುಡಿಯಿಂದ ಹೊರಗಿಣುಕಿದೆ. ಬಿಳಿ ಸೀರೆ ಉಟ್ಟಿದ್ದ ಇಪ್ಪತ್ತರ ಆಸುಪಾಸಿನ ಮಹಿಳೆಯೊಬ್ಬಳು ತನ್ನ ಕಂದಮ್ಮನನ್ನು ಘಂಟೆಯ ಬಳಿ ಎತ್ತಿ ಹಿಡಿದಿದ್ದಳು. ಆ ಮಗು ತನ್ನ ಪುಟ್ಟ ಬೆರಳುಗಳಿಂದ ಘಂಟೆಯನ್ನು ಬಡಿದು ಸಂತೋಷಪಡುತ್ತಿತ್ತು. ತೀರ್ಥ ನೀಡಲೆಂದು ಹೊರಹೋದವನ ನೋಟ ಆ ತಾಯಿಯ ಮುಖದ ಮೇಲೆ ಹರಿಯಿತು. ನಗುವಿನ ನೆನಪೇ ಮರೆತುಹೋದಂತಿದ್ದ ಆ ಮುಖದಲ್ಲಿದ್ದ ನಿಸ್ತೇಜ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡಿದಾಗ ಕೊಂಚ ತಳಮಳವಾಯಿತು. ಹಣೆಯಲ್ಲಿ ಕುಂಕುಮವಿಲ್ಲ, ಕೆನ್ನೆಯಲ್ಲಿ ಅರಿಸಿನವಿಲ್ಲ, ಕೊರಳಿನಲ್ಲಿ ಮಾಂಗಲ್ಯವಿಲ್ಲ. ಆ ಒಂದು ಕ್ಷಣ ದ.ರಾ.ಬೇಂದ್ರೆಯವರ ಪುಟ್ಟ ವಿಧವೆ ನೆನಪಾದಳು. ಕತ್ತು ಬಗ್ಗಿಸಿ ತೀರ್ಥವನ್ನು ನೀಡಿ ಗರ್ಭಗುಡಿ ಸೇರಿದೆ. ಅಲ್ಲಿದ್ದ ಕಲ್ಲಿನ ದೇವರ ವಿಗ್ರಹ ನಗುತ್ತಿತ್ತು.
          ಹೊರಗೆ ಜೀವವಿದ್ದ ಮಹಿಳೆ ನಗುತ್ತಿರಲಿಲ್ಲ. ಒಳಗೆ ನಗುತ್ತಿದ್ದ ದೇವರಿಗೆ ಜೀವವೇ ಇರಲಿಲ್ಲ.

Friday, January 18, 2013

ಮೊಬೈಲು ಜೀವ

         ಮೊಬೈಲು ಜೀವ

            ಇಂದು ಮುಂಜಾನೆ ಏಳುತ್ತಿದ್ದಂತೆಯೆ, ಏಕೋ ಏನೋ ಪ್ರತಿದಿನ ಮೊಬೈಲ್ ಬಟನ್ ಒತ್ತುತ್ತಿದ್ದ ಕೈಗಳು ದೇವರಿಗೆ ನಮಿಸಿದವು. ಮೊಬೈಲ್ ಸ್ಕ್ರೀನ್ ನೋಡುತ್ತಿದ್ದ ಕಣ್ಣುಗಳು ಕಿಟಕಿಯಿಂದ ಬರುತ್ತಿದ್ದ ಸೂರ್ಯನ ಕಿರಣಗಳನ್ನು ನೋಡಿದವು. ಮೊಬೈಲ್ ಪಕ್ಕದಲ್ಲೆ ಬಿದ್ದಿರುವುದನ್ನು ಕಂಡರು ಅದನ್ನು ಮುಟ್ಟುವುದಕ್ಕೂ ಮನಸಾಗಲಿಲ್ಲ. ಕಂಡರೂ ಕಾಣದ ಹಾಗೆ ಎದ್ದು ಹೋಗಿ ಸ್ನಾನ, ತಿಂಡಿ ಮುಗಿಸಿ ಬಂದೆ. ಆಸೆ ತಡೆಯಲಾಗದೆ ಹಾಸಿಗೆಯಲ್ಲಿ ನಿಶ್ಚೇತವಾಗಿ ಬಿದ್ದಿದ್ದ ಮೊಬೈಲನ್ನು ಕೈಗೆತ್ತುಕೊಂಡೆನಾದರೂ ಸ್ವಿಚ್ಆಫ್ ಆಗಿದ್ದ ಅದಕ್ಕೆ ಜೀವ ತುಂಬುವ ಮನಸಾಗಲಿಲ್ಲ. ನೆನ್ನೆ ರಾತ್ರಿ ಅವಳಾಡಿದ ಮಾತುಗಳು ಮನಸ್ಸನ್ನು ಇನ್ನೂ ಇರಿಯುತ್ತಿದ್ದವು. ನಿನ್ನನ್ನು ಬಿಟ್ಟು ನಾ ಬದುಕಿರಲಾರೆ ಎಂದಿದ್ದ ನಾಲಿಗೆಯೇ, ದಯವಿಟ್ಟು ನನಗೆ ತೊಂದರೆ ಕೊಡಬೇಡ ನನ್ನನ್ನು ಬಿಟ್ಟುಬಿಡು ಎಂದಿತ್ತು. ಪ್ರೇಮಕ್ಕೆ ಕಣ್ಣು ಮಾತ್ರವಲ್ಲ ಕೊಂಚ ಕರುಣೆಯೂ ಇಲ್ಲ ಎಂದೆನಿಸಿತು. ಮೊಬೈಲನ್ನು ಬಿಚ್ಚಿ ಸಿಮ್ ಹೊರತೆಗೆದು ಕಸದ ಬುಟ್ಟಿ ಸೇರಿಸಿದೆ. ಮನಸ್ಸು ನಿರಾಳವಾಯಿತು.
         ಕಾಲೇಜಿಗೆ ಹೊರಡಲು ಸಮಯ ನೋಡಿದೆ. ಅವಳೇ ಕೊಡಿಸಿದ್ದ ವಾಚ್ ಸಮಯ ತೋರಿಸುವುದನ್ನೂ ನಿಲ್ಲಿಸಿತ್ತು. ಅದನ್ನು ಬಿಚ್ಚಿ ಮೊಬೈಲ್ ಮೇಲಿಟ್ಟು ಹೊರನೆಡೆದೆ.

Saturday, January 12, 2013

Buck-tooth-Beauty- ಉಬ್ಬಲ್ಲು ಸುಂದರಿ

ಉಬ್ಬಲ್ಲು ಸುಂದರಿ

ಕೆಂದುಟಿಯನು ಸೀಳಿ ಹೊರಬಂದ ನಿನ್ನ ಉಬ್ಬಲ್ಲು
ಮಾಡಿದೆ ನಿನ್ನ ಸೌಂದರ್ಯವನ್ನು ಡಬ್ಬಲ್ಲು
ಮಂದಹಾಸ ತುಂಬಿದ ಆ ನಿನ್ನ ವದನದಲಿ
ಎಂದಿಗೂ ದುಃಖದ ಸುಳಿವೇ ಇಲ್ಲ
ನೀ ನಕ್ಕರೂನೂ.. ನಗದಿದ್ದರೂನೂ..
ನೀ ಹಸನ್ಮುಖಿ, ಸದಾ ಹಸನ್ಮುಖಿ

ನಿನ್ನ ಬಾಯಲ್ಲಿರುವುದು ಮುತ್ತಿನ ಮಣಿಗಳೇ
ಆದರವು ಕಪ್ಪೆ ಚಿಪ್ಪ ಕೊರೆದು ಹೊರಬಂದಿವೆ
ನಿನ್ನ ಬಾಯಲ್ಲಿರುವುದು ದಾಳಿಂಬೆ ಬೀಜಗಳೇ
ಆದರವು ಸಿಪ್ಪೆಯ ಹರಿದು ಹೊರಬಂದಿವೆ
ದೇವರು ನಿನಗಿತ್ತ ಸುಂದರ ಶಾಪವಿದು.

ಬಾಲೆಯರ ಗುಂಪಲ್ಲಿ ನೀನಲ್ಲ ಸಾಮಾನ್ಯ ಹೆಣ್ಣು
ಬದಲಿಗೆ ನೀನೇ ಸೆಂಟರ್ ಆಫ್ ಅಟ್ರಾಕ್ಷನ್ನು
ನಗುಮೊಗದ ನೀ ಮತ್ತೊಮ್ಮೆ ನಕ್ಕಾಗ
ದೀಪದ ಪಕ್ಕದಲೆ ದೀಪ ಹೊತ್ತಿಸಿದಂತೆ
ಚಂದಿರನಿದ್ದ ಆಗಸಕೆ ಮತ್ತೊಬ್ಬ ಚಂದಿರ ಬಂದಂತೆ.

ಹಣ್ಣೊಂದ ತಿನುವಾಗ ಬಾಯ್ತುಂಬ ಕಚ್ಚು
ಖಂಡಿತ ಸಿಗುವುದು ನಿನಗೊಂದು ಪಾಲು ಹೆಚ್ಚು
ದೇವರೆಂದು ಓದಿರಲಿಲ್ಲ ಡೆಂಟಲ್ ಸೈನ್ಸನ್ನು
ಆದರು ಜೋಡಿಸಹೊರಟ ನಿನ್ನ ದಂತಪಂಕ್ತಿಯನು
ನಿನ್ನ ಸೌಂದರ್ಯ ಮಾಡಿಸಿತವನಿಂದ ಈ ತಪ್ಪನು
ಆದಕ್ಕಾಗಿ ನೀಡಿರುವನು ಈ ನಗುಮೊಗದ ಹೊಳಪನು

ನಿನ್ನ ನಗುವಿಗೆಂದೂ ಬಂದಿರಲಿಲ್ಲ ಮುಪ್ಪು
ಹಾಕಿಸುವವರೆಗೂ ನೀ ಹಲ್ಲುಗಳಿಗೆ ಕ್ಲಿಪ್ಪು
ಮನೆಯಲ್ಲಿದ್ದ ಕ್ಲೋಸ್ ಅಪ್ ಟೂತ್ ಪೇಸ್ಟು
ಆಗುತ್ತಿತ್ತೇ ನಿನ್ನ ಹಲ್ಲುಗಳಿಂದಲೇ ವೇಸ್ಟು?
ಯಾವ ಸಂತಸಕ್ಕಾಗಿ ಆ ಹಲ್ಲುಗಳ ಮಾಯ ಮಾಡಿದೆ?
ಯಾತಕ್ಕಾಗಿ ಆ ನಿನ್ನ ಮೊದಲ ನಗುವ ಕೊಂದೆ?

ನಿಜ ಹೇಳಲೇ ಚಲುವೆ..?
ಒಮ್ಮೆ ಕೆಂದುಟಿಗಳಿಂದ ಇಣುಕುತ್ತಿದ್ದ ನಿನ್ನ ಉಬ್ಬಲ್ಲು
ನನ್ನಾಣೆಗೂ ಮಾಡಿತ್ತು ನಿನ್ನ ಸೌಂದರ್ಯವನ್ನು ಡಬ್ಬಲ್ಲು..!

ಕ್ಲಿಪ್ಪು ಹಾಕಿಸದೆ ಉಬ್ಬಲ್ಲನ್ನೆ ಮೈಂಟೈನ್ ಮಾಡುತ್ತಿರುವ ಚಲುವೆಯರಿಗೆ..
ಅವರು ಹೇಗಿದ್ದಾರೋ ಹಾಗೆಯೆ ಪ್ರೀತಿಸುತ್ತಿರುವ ಹುಡುಗರಿಗೆ..


-ತ್ರಿವಿಕ್ರಮ

Friday, January 11, 2013

ನಾನು ನಿರ್ಭಯೆ



ನಾನು ನಿರ್ಭಯೆ..

ಬಾಳಿ ಬದುಕುವ ಕಡೆಯ ಆಸೆಗೆ 
ಇಟ್ಟಿರುವೆ ನಿಟ್ಟುಸಿರ ಪೂರ್ಣವಿರಾಮ.
ಉಸಿರು ತನ್ನ ಆಸ್ತಿಯನು
ಸಾವಿನ ಹೆಸರಿಗೆ ಬರೆದು ಕೊಟ್ಟಿದೆ,
ಆದರೆ ಆ ಸಾವಲ್ಲಿಯೂ ನಾ 
ಬದುಕುವ ಸಣ್ಣ ಕನಸ ಕಟ್ಟಿದೆ.
ನನಗಿನ್ನು ಬಂದಿರಲಿಲ್ಲ ಮುಪ್ಪು
ನಾ ಮಾಡಿದ್ದಾದರೂ ಯಾವ ಮಹಾ ತಪ್ಪು?


ಮುದ್ದಾದ ಮುಸ್ಸಂಜೆಯ ಮುಂದಿದ್ದದ್ದು
ಆ ಕ್ರೂರ ಕರಾಳ ರಾತ್ರಿ
ಗರಿಗೆದರಿದ್ದ ಸವಿಗನಸುಗಳ ಹೊತ್ತ 
ಪುಟ್ಟ ಹಕ್ಕಿಯಂತೆ ಗೂಡಿಗೆ ಮರಳುತ್ತಿದ್ದೆ.
ನಾ ಆಗ ತಾನೆ ಅರಳಿದ್ದ ಬಣ್ಣ ಬಣ್ಣದ ಹೂ
ನನಗಿರಲಿಲ್ಲ ಮುದುಡಿಹೋಗುವ
ಒಂದು ಚಿಕ್ಕ ಸುಳಿಹು.
ಆದರೆ ನಾ ಏರಿದ್ದು ಮೃತ್ಯುವಿನ ವಾಹನ
ಕಿಟಕಿಯಲ್ಲಿದ್ದ ಕಪ್ಪು ಚಂದಿರನತ್ತ
ಹರಿಯಲೇ ಇಲ್ಲ ನನ್ನ ಗಮನ.
ನಾ ಆಗಿಹೋಗಿದ್ದೆ ಕ್ಷುದ್ರ ಕ್ರಿಮಿಗಳ ಭೋಜನ.
ಹಸಿದ ನಾಯಿಯ ಹಿಂಡಿಗೆ ಸಿಕ್ಕ
ತುಪ್ಪ ಸವರಿದ ರೊಟ್ಟಿಯಂತಾಗಿದ್ದ ನನ್ನ
ಹರಿದರಿದು ತಿಂದರು.
ಪರಿಧಿಯನು ದಾಟಿ ಸರದಿಯಲಿ ಉಂಡರು
ಕಿಂಚಿತ್ ಕರುಣೆಯ ಕಾಣಿಸದೆ
ಇರಿದಿರಿದು ಕೊಂದರು.
ಮೃಷ್ಟಾನ್ನ ತುಂಬಿದ ಬಾಳೆಲೆಯ
ಬರಿದು ಮಾಡಿ ಬೆರಳ ನೆಕ್ಕಿದರು
ನನ್ನ ಕಣ್ಣಲ್ಲಿ ಅವರಾಗಿರಲಿಲ್ಲ ರಕ್ಕಸರು,
ನಿರ್ಭಾಗ್ಯ ಭಾಜನೆಯಾದ ನನಗೆ
ನಿಸ್ಸಹಾಯಕತೆಯ ನರಕ ತೋರಿದ ನಪುಂಸಕರು.

ನಡುಗಿಸುವ ಆ ನಟ್ಟಿರುಳಿನಲಿ
ನೆತ್ತರ ನೆರಳ ಹುಡುಕುತ್ತಿದ್ದೆ
ಸುತ್ತಲೂ ಇದ್ದದ್ದು ಕಗ್ಗತ್ತಲು
ಬರಲಿಲ್ಲ ಯಾರೂ 
ಕೈ ಹಿಡಿದು ಮೇಲೆತ್ತಲು
ಪಾಳು ಬಿದ್ದ ಮನೆಯ
ಪಾಳಿಯಲಿದ್ದು ಕಾಯುವವರಾರು?
ನೆಲದ ಮೆಲೆ ಚೆಲ್ಲಿದ್ದ ನೆತ್ತರಲಿ
ತನ್ನ ನಗ್ನ ಪ್ರತಿಬಿಂಬವನು ಕಂಡ
ಚಂದಿರನು ಹೊದ್ದಾಗ ಮೋಡದ ಹೊದಿಕೆ
ಛಿದ್ರವಾಗಿ ಹೋಗಿತ್ತು ಈ ನನ್ನ ಬದುಕೆ..!

ನನ್ನ ಬದುಕಿನ ದೀಪ
ನಿಮ್ಮ ಕಣ್ಣೆದುರೆ ಆರುವಾಗ
ನಿಂತು ನೋಡಿದ ನೀವೆಲ್ಲ
ಆಮೇಲೆ ದೀಪ ಹಚ್ಚಿ ಕಣ್ಣೀರಿಟ್ಟದ್ದೇಕೆ?
ಸಿಗಲಿ ಎಂದೇ ನನ್ನ ಆತ್ಮಕ್ಕೆ ಶಾಂತಿ?
ಹಾಗಿದ್ದರೆ ಅದು ನಿಮ್ಮ ಭ್ರಾಂತಿ.
ಪಶ್ಚಾತಾಪದ ಹೆಸರಲ್ಲಿ
ಅನುಕಂಪದ ನೆಪದಲ್ಲಿ
ಗಿಳಿಪಾಠ ಓದುವ ನಾಯಕರೊಡನೆ
ಸೇರಿ ಮಾಡಿದಿರಿ ನೋವಿನ ನಟನೆ
ಅದಕ್ಕೆ ನೀವೆ ಕೊಟ್ಟ ಹೆಸರು ಪ್ರತಿಭಟನೆ.

ದೋಷಗಳೇ ಇರುವ ದೇಶಕ್ಕೊಂದು
ರಕ್ಷಣೆಯೇ ಇರದ ರಾಜಧಾನಿ
ಅದನ್ನಾಳುವ ನೀಯತ್ತಿರದ ನಾಯಕರನ್ನೇ
ತಮ್ಮ ಪ್ರತಿನಿಧಿಗಳನ್ನಾಗಿಸಿರುವ ಪ್ರಜೆಗಳು
ಇಲ್ಲಿರುವುದು ಸುಲಭವಲ್ಲ,
ಆದರೆ ಲೋಕವನ್ನೇ ತ್ಯಜಿಸಿದ
ನನಗಿನ್ನು ಯಾವ ಭಯವೂ ಇಲ್ಲ
ನಾನು ನಿರ್ಭಯೆ,,


ದೇಶಕ್ಕೆ ದೇಶವೆ ಕಂಬನಿ ಸುರಿಸಿದ ನಿರ್ಭಾಗ್ಯೆ ನಿರ್ಭಯಾಳ ಸಾವು ನಿಜವಾಗಿಯೂ ಭಯಂಕರ.
ಅವಳನ್ನು ನನ್ನ ಅಕ್ಕ ಎಂದು ಭಾವಿಸಿ, ಅವಳ ತಮ್ಮನಾಗಿ ಅವಳ್ ಸ್ಥಾನದಲ್ಲಿ ನಿಂತು, ಅವಳಿದ್ದ ಪರಿಸ್ಥಿತಿಯ ಕುರಿತು ಯೋಚಿಸಿದಾಗ ಬಂದ ಕಹಿ-ಕಹಿ ಸಾಲುಗಳ ಸೇರಿಸಿ ಒಂದು ದುರಂತ ಕವಿತೆಯ ರೂಪ ನೀಡಲು ಪ್ರಯತ್ನಿಸಿದ್ದೇನೆ.

                                                    -ತ್ರಿವಿಕ್ರಮ

Tuesday, January 08, 2013

ನನ್ನ ಮೊದಲ ಕವಿತೆ - ಕವಿಸಮಯ

ಕವಿಸಮಯ



ಆಧುನಿಕ ಪ್ರೇಮದ ಪರಿಯೆನಗೆ ಕಗ್ಗಂಟು
ಕಣ್ ಹೊಡೆವ ಕಲೆಯಲ್ಲಿ ನಾನಿನ್ನು ಹೆಬ್ಬೆಟ್ಟು
ಆಸೆಗಳ ಹೊಡೆತಕ್ಕೆ ನಾನಾದೆ ಪೇಷಂಟು
ಕಣ್ಣಲ್ಲೆ ಕೊಡು ಚಲುವೆ ನಸುನಗೆಯ ಟ್ರೀಟ್ಮೆಂಟು

ವಿರಹದ ಜ್ವಾಲೆಗೆ ನಿನ್ನ ನೆನಪುಗಳೆ ಪೆಟ್ರೋಲು
ಧಗಧಗನೆ ಉರಿಯುತಿದೆ ಆಗದು ಕಂಟ್ರೋಲು
ವಿಸ್ಕಿ ಮುಟ್ಟಲಿಲ್ಲ ಧಮ್ಮು ಎಳೆಯಲಿಲ್ಲ
ಕವಿಯಾಗಿ ಬದಲಾದೆ ಕೊನೆಸಾಲು ಹೊಳೆಯಲಿಲ್ಲ

ಕಣ್ಣೆದುರೆ ಆಗುತಿರೆ ನನ್ನೆದೆಯ ದಹನ
ಕಣ್ಮುಚ್ಚಿ ಓದು ಬಾ ನನ್ನುಸಿರ ಕವನ
ಒಂದೊಂದು ಸಾಲಿಗೂ ಮರುಜೀವ ತುಂಬು ನೀ
ಇನ್ನೊಮ್ಮೆ ಒರೆಸು ಬಾ ನನ್ನೊಲವ ಕಂಬನಿ

ಆ ನಿನ್ನ ಕಣ್ಣೋಟ ಕೆಂದುಟಿಯ ತುಂಟಾಟ
ಪ್ರತಿಕ್ಷಣವು ಕೊಲ್ಲುತಿದೆ ನನ್ನ
ಮನಸಲ್ಲಿ ಮನೆಮಾಡು ಕನಸಲ್ಲಿ ನನಕಾಡು
ಕಣ್ಣೀರು ಕೊನೆಯಾಗುವ ಮುನ್ನ

ಎಡಬಿಡದೆ ಆಗುತಿರೆ ಪೋಲಿ ಪದಗಳ ವಿನಿಮಯ
ಅಚ್ಚರಿಪಡಬೇಡ ಹುಡುಗಿ.. ಇದು ಕವಿಸಮಯ

[ಎದೆಯಲ್ಲಿ ನೀ ಮಾಡಿ ಮುಚ್ಚದೆ ಉಳಿಸಿರುವ ಹೋಲುಗಳು
ವಿರಹದ ಸಂಜೆಯಲಿ ಅದರಿಂದ ಹೊರಬಂದ ಈ ಸಾಲುಗಳು
ಗೀಚಿರುವೆ ನಿನಗಾಗಿ ಮರೆಯಾಗುವ ಮೊದಲು]


                                                                                           -ತ್ರಿವಿಕ್ರಮ