Sunday, June 03, 2018

ಡೈರೀಸ್ ಆಫ್ ದಾಳಿ ಪಾಪಣ್ಣ - 2


ಪಾಪಣ್ಣನ ಪ್ರೇಮ ಪ್ರಸಂಗ



ಹಿಂದಿನ ಭಾಗದಲ್ಲಿ : ಗೋಲ್ಡನ್ ಹಾರ್ಸ್ ಬಾರಿಗೆ ಬಂದಿದ್ದ ಭೂಗತ ವ್ಯಕ್ತಿಯೊಬ್ಬ, ಅಲ್ಲಿದ್ದವರನೆಲ್ಲಾ ಭಯಭೀತಗೊಳಿಸಿ ಏನು ಆಗಿ ಇಲ್ಲವೆಂಬಂತೆ ಮಾತನಾಡಿ ತಾನು ಕಡಿದು ತಂದಿದ್ದ ರಕ್ತಸಿಕ್ತವಾದ ಕೈಯೊಂದಿಗೆ ಹೊತಬೀಳುತ್ತಾನೆ.


ಬಂದ ಆಗುಂತಕ ವ್ಯಕ್ತಿ ಹೊರಗೆ ಹೋಗಿ ಸುಮಾರು ಹೊತ್ತಾದರೂ ವೀರಭದ್ರಪ್ಪ, ನಾರಾಯಣ ಹಾಗು ಶ್ರೀನಿವಾಸ ಗರ ಬಡಿದವರಂತೆ ನಿಂತಲ್ಲಿಯೇ ನಿಂತಿದ್ದರು.

‘ವೀರಣ್ಣ, ಹೋಗ್ ಬತ್ತಿನಿ ನಾನು ಪೋಲೀಸ್ ಕರ್ಕಂಡು ಬರಕ್ಕೆ?’ ಮೊದಲು ಮಾತನಾಡಿದ್ದು ನಾರಾಯಣ.

ವೀರಭದ್ರಪ್ಪ, ಅದು ಕೇಳಿಸದಂತೆ ನಿಂತಲ್ಲಿಯೇ ನಿಂತಿದ್ದವರು, ಸ್ವಲ್ಪ ಹೊತ್ತಿನ ನಂತರ ‘ಬೇಡ ನಾರಾಯ್ಣ, ಈಗ ಸುಮ್ನೆ ಮನೆಗೋಗಿ ಮಲ್ಕಳಿ. ಇಲ್ ನೆಡದಿದ್ ಯಾರ್ಗೂ ಹೇಳ್ಬೇಡಿ.’ ಎಂದು ಸಮಾಧಾನದಲ್ಲಿ ಹೇಳಿ ಅಲ್ಲಿಯೇ ಬಾರಿನ ಕುರ್ಚಿಯೊಂದರ ಮೇಲೆ ಕುಳಿತರು. ಸೀನ ಹಾಗು ನಾರಾಯಣ ಮುಖ ನೋಡಿಕೊಂಡರು.

‘ಈಗ್ಲೇ ಹೇಳದೊಳ್ಳೇದು ಅಲ್ವೇನಣ್ಣೋ?’ ನಾರಾಯಣ ಹೇಳಿದ.

‘ಲೇ, ಆವಯ್ಯ ನಂಗೆ ಗುರ್ತಿನೋನೋ ಕಣ್ಲಾ, ಅವನು ಹೆಸ್ರೇಳ್ದಾ ಕೇಳಸ್ಕಂಡ್ರಾ?’ ಇಬ್ಬರೂ ಇಲ್ಲವೆಂಬಂತೆ ತಲೆಯಾಡಿಸಿದರು.

‘ಪಾಪಣ್ಣ ಅಂತ ಅವ್ನ ಹೆಸ್ರು. ಊರ್ಕಡೆ ಎಲ್ಲಾ ದಾಳಿ ಪಾಪಣ್ಣ ಅಂತ್ಲೇ ಫೇಮಸ್ಸು.’

1985

ದಾಳಿ ಪಾಪಣ್ಣ ಸಾಮಾನ್ಯ ವ್ಯಕ್ತಿಯಲ್ಲ. ಆತನ ಕಥೆ ಶುರುವಾಗುವುದೇ ಜೈಲಿನಲ್ಲಿ. ಇಲ್ಲ, ಅವನೇನು ಕೃಷ್ಣನಂತೆ ಸೆರೆಮನೆಯಲ್ಲಿ ಜನಿಸಲಿಲ್ಲ. ಬದಲು ವಸುದೇವನಂತೆ ಜೈಲಿನಲ್ಲಿದ್ದಾಗಲೇ ಮಗುವೊಂದಕ್ಕೆ ಜನ್ಮ ಕೊಟ್ಟಿದ್ದ. ಮೂವತ್ತೆರಡು ವರುಷದ ಮದುವೆಯಾಗದ ಮಹಿಳಾ ಪೇದೆ ಮಣಿಕರ್ಣಿಕಾ ಇದ್ದಕ್ಕಿದ್ದಂತೆ ಕುಂತಿಯಂತೆ ಬಸುರಾಗಿ ಮೆಟರ್ನಟಿ ಲೀವು ಕೇಳಿದಾಗ ಎಲ್ಲರೂ ಜೈಲರಾಗಿದ್ದ ಶಿವಶಂಕರನೋ, ಆಫೀಸು ಕ್ಲರ್ಕಾಗಿದ್ದ ನಂಜುಂಡಪ್ಪನೋ, ಆಗಾಗ ಮಣಿಕರ್ಣಿಕಾಳನ್ನು ಟೀ ಕುಡಿಯಲು ಕರೆದುಕೊಂಡು ಹೋಗುತ್ತಿದ್ದ, ಇನ್ನೂ ಪ್ರೊಬೇಷನರಿ ಪಿರಿಯಡ್ಡು ಪೂರೈಸದ ಜಿತೇಂದ್ರನೋ ಕಾರಣವಿರಬೇಕು ಎಂದುಕೊಂಡರು. 12ನೇ ಸೆಲ್ಲಿನಲ್ಲಿದ್ದ ಹುರಿ ಮೀಸೆಯ ಖೈದಿಯೊಬ್ಬ ಇದಕ್ಕೆ ಕಾರಣವಿರಬಹುದು ಯಾರಿಗೂ ಊಹಿಸಲೂ ಸಾಧ್ಯವಿರಲಿಲ್ಲ.

ಪಾಪಣ್ಣ ಜೈಲಿಗೆ ಬಂದದ್ದು ಒಂದು ಅಟೆಂಪ್ಟ್ ಟು ಮರ್ಡರ್ ಕೇಸಿಗಾಗಿ. ಬಸುರಿಯಾಗಿದ್ದ ತನ್ನ ಹೆಂಡತಿಯನ್ನು ಆಸ್ಪತ್ರಗೆ ಕರೆದುಕೊಂಡು ಹೋಗಲು ಅರ್ಧ ದಿನ ರಜಾ ಕೇಳಿದಾಗ, ತಾನು ಕೆಲಸ ಮಾಡುತ್ತಿದ್ದ ಕಿರಾಣಿ ಅಂಗಡಿಯ ಮಾಲಿಕ ಬಸವಪ್ಪ ಶೆಟ್ಟಿ ನಿರಾಕರಿಸಿದ್ದ. ಮಾತಿಗೆ ಮಾತು ಬೆಳೆದು ತನ್ನ ಮುದ್ದಿನ ಹೆಂಡತಿ ಯಾರಿಗೆ ಕದ್ದು ಬಸುರಾಗಿದ್ದಾಳೋ ಎಂದು ಶೆಟ್ಟಿ ವ್ಯಂಗ್ಯ ಮಾಡಿದಾಗ ಸಿಟ್ಟಿಗೆದ್ದು ಕೈಗೆ ಸಿಕ್ಕ ದಪ್ಪ ಬೀಗದಿಂದ ಆತನ ತಲೆಗೆ ಬಾರಿಸಿದ್ದ. ಶೆಟ್ಟಿ ಗಟ್ಟಿ ಇದ್ದ, ಬದುಕಿಕೊಂಡ. ಆದರೆ ಪಾಪಣ್ಣನ ಮೇಲೆ ಯಾವ್ಯಾವುದೋ ಕೇಸುಗಳು ಬಿದ್ದು 2 ವರುಷಗಳ ಕಾಲ ಜೈಲು ಶಿಕ್ಷೆಯಾಯಿತು. ಬರಿ ಎರಡು ವರುಷವಾದ್ದರಿಂದ ಸೆಂಟ್ರಲ್ ಜೈಲಿಗೆ ಕಳುಹಿಸದೆ ಚಿತ್ರದುರ್ಗದ ಜಿಲ್ಲಾ ಕಾರಾಗೃಹದಲ್ಲೇ ಇಟ್ಟುಕೊಳ್ಳಲಾಯಿತು. ಹೀಗೆ ತನಗೆ ರಜಾ ನೀಡದಿದ್ದಕ್ಕೆ ಶೆಟ್ಟಿಯ ಮನೆ ಮಂದಿಯೆಲ್ಲಾ ರಜಾ ಹಾಕಿ ಅವನನ್ನು ಕಾಣಲು ಬರುವಂತೆ ಮಾಡಿ ತಾನು ಜೈಲು ಸೇರಿದ್ದ ಪಾಪಣ್ಣ.

ಇತ್ತ ಅವನ ಹೆಂಡತಿ ಗಿರಿಜಾ ತುಂಬು ಬಸುರಿ. ತನ್ನ ಗಂಡ ಹೀಗೆ ಅಚಾನಕ್ಕಾಗಿ ಜೈಲು ಸೇರಿದ ಮೇಲೆ ಅವಳಿಗೆ ದಿಕ್ಕೇ ತೋಚದಾಯಿತು. ಮದುವೆಯಾದಗಿನಿಂದ ಎಂದೂ ಗಂಡನನ್ನು ಬಿಟ್ಟಿರದ ಅವಳಿಗೆ ಗಂಡನ ಪ್ರೀತಿಯಿಲ್ಲದೇ ಬದುಕಲು ಕಷ್ಟವಾಯ್ತು. ವಾರಕ್ಕೊಂದು ಸಲ ತಪ್ಪದೇ ಜೈಲಿಗೆ ಬರುತ್ತಿದ್ದಳು. ಬರುವಾಗ ಆತನಿಗೆಂದು ಕೈಲಾದ ಮಟ್ಟಿಗೆ ರುಚಿರುಚಿಯಾದ ಅಡುಗೆಗಳನ್ನು ಮಾಡಿ ತರುತ್ತಿದ್ದಳು. ಕೈಯಾರೆ ತಿನ್ನಿಸುತ್ತಾ ಸುತ್ತ ಮುತ್ತಲಿನ ಪರಿವೆಯೇ ಇಲ್ಲದೇ ಆತನಿಗೆ ಒದಗಿದ ಕಷ್ಟವನ್ನು ನೋಡಿ ಜೋರಾಗಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಪಾಪಣ್ಣ ಸರಳುಗಳ ನಡುವಿನಿಂದ ಕೈತೂರಿಸಿ ಕಣ್ಣೊರೆಸಿ ಅವಳ ತುಂಬಿದ ಒಡಲ ತಡವುತ್ತಾ ನಿಂತುಬಿಡುತ್ತಿದ್ದ. ಭೇಟಿಯ ಅವಧಿ ಮುಗಿದರೂ ಅವಳ ಕಣ್ಣೀರಿನ ಕೂಗು ನಿಲ್ಲುತ್ತಲೇ ಇರಲಿಲ್ಲ. ಗಿರಿಜಾಳನ್ನು ಹೊರಗೆ ಕಳುಹಿಸುವ ಕೆಲಸ ಅಲ್ಲಿದ್ದ ಏಕೈಕ ಮಹಿಳಾ ಪೇದೆಯಾಗಿದ್ದ ಮಣಿಕರ್ಣಿಕಾಳ ಪಾಲಿಗೆ ಬೀಳುತ್ತಿತ್ತು. ಸಮಯವಾಯಿತೆಂದು ಎಷ್ಟು ಹೇಳಿದರೂ ಕೇಳದೇ ಗೋಗರೆಯುತ್ತಾ ನಿಂತುಬಿಡುತ್ತಿದ್ದಳು. ಪಾಪಣ್ಣ ಕೂಡ ‘ಮೇಡಮ್ನೋರೆ, ನಮ್ ಹೆಂಗುಸ್ರು ಬಸ್ರಿ, ಒಂಚೂರು ದಾಕ್ಷಿಣ್ಯ ತೋರ್ಸಿ, ನಿಮ್ ದಮ್ಮಯ್ಯ’ ಎನ್ನುತಿದ್ದ.

ತನಗಿಂತ ಚಿಕ್ಕ ವಯಸ್ಸಿನವಳಾದರೂ ತಾಯಿಯಾಗುವ ಸೌಭಾಗ್ಯ ಪಡೆದಿದ್ದ ಗಿರಿಜಾ, ಅವಳನ್ನು ಮನಸಾರೆ ಪ್ರೀತಿಸುವ ಗಂಡ ಪಾಪಣ್ಣ, ಅವರಿಬ್ಬರ ಈ ಬಹಿರಂಗ ಪ್ರೇಮ, ಇದೆಲ್ಲವನ್ನು ನೋಡಿ ಅದೇನೇನು ಅನ್ನಿಸುತ್ತಿತ್ತೋ, ಅವರಿಬ್ಬರನ್ನು ಬೇರೆ ಮಾಡಿ ಅವಳನ್ನು ಎಳೆದುಕೊಂಡು ಹೋಗಲು ಕೈ ಸೋತು ಮೈಮರೆತು ನಿಂತು ಅವರನ್ನೇ ನೋಡುತ್ತಿದ್ದಳು. ಪೋಲೀಸಾದರೇನು, ಅವಳದ್ದು ಹೆಂಗರುಳಲ್ಲವೇ? ಪಾಪಣ್ಣ ಹೆಂಡತಿಯನ್ನು ಮಗುವಿನಂತೆ ಅಕ್ಕರೆಯಿಂದ ಮಾತನಾಡುವಾಗೆಲ್ಲಾ ಒಳಗೊಳಗೇ ಏನೇನೋ ಹಂಬಲಿಸುತ್ತಿದ್ದಳು. ಅವನು ಕೇಳಿಕೊಂಡನೆಂದು ಗಿರಿಜಾಳ ಕಡೆಗೆ ಅಗತ್ಯಕ್ಕಿಂತ ಹೆಚ್ಚೇ ಮೃದುವಾಗುತ್ತಿದ್ದಳು.

ಅದೊಂದು ದಿನ ಇಬ್ಬರೂ ಅತ್ತು ಕರೆದದ್ದೆಲ್ಲಾ ಮುಗಿವವರೆಗೂ ಕಾದ ಮಣಿಕರ್ಣಿಕಾ ಗಿರಿಜಾಳನ್ನು ಸಮಾಧಾನ ಮಾಡುತ್ತಾ ಜೈಲಿನ ಬಾಗಿಲಿನವರೆಗು ಕರೆದುಕೊಂಡು ಬಂದಳು. ಆಗ ಗಿರಿಜಾಳಿಗೆ ಆರು ತಿಂಗಳಿರಬೇಕು. ಅತ್ತು ಅತ್ತು ಸುಸ್ತಾಗಿತ್ತೇನೋ ಪಾಪ ನಿಂತಲ್ಲಿಯೇ ತಲೆ ಸುತ್ತಿ ಬಿದ್ದಳು. ಆಗ ಮಣಿಕರ್ಣಿಕಾ ತಾನೆ ಅವಳನ್ನು ಜೈಲಿನ ಕ್ಯಾಂಟೀನಿಗೆ ಕರೆದೊಯ್ದು  ಕಾಫಿ, ತಿಂಡಿ ಕೊಡಿಸಿ ಕೈಗೊಂದಿಷ್ಟು ದುಡ್ಡು ಕೊಟ್ಟು ಕಳುಹಿಸಿದಳು. ಮುಂದಿನ ವಾರ ಬಂದಾಗ ಗಿರಿಜಾ ಪಾಪಣ್ಣನಿಗೆ ಮಣಿಕರ್ಣಿಕಾಳನ್ನು ತೋರಿಸುತ್ತಾ ನೆಡದಿದ್ದೆಲ್ಲವನ್ನು ಹೇಳಿ ಅವಳ ಸಹಾಯವನ್ನು ಹಾಡಿ ಹೊಗಳಿದ್ದಳು. ಬೇಡ ಬೇಡವೆಂದರೂ ಅವಳಿಗೂ ಒಂದು ಬಟ್ಟಲಿಗೆ ನಾಟಿ ಕೋಳಿ ಸಾರಿನ ಊಟ ಹಾಕಿ ಕೊಟ್ಟಳು. ಅಲ್ಲಿಂದ ಶುರುವಾಯ್ತು ಇವರಿಬ್ಬರ ಒಡನಾಟ.

ಪ್ರತಿ ಬಾರಿ ಬಂದಾಗಲೂ ಗಿರಿಜಾ ಮಣಿಯನ್ನು ಬಾಯ್ತುಂಬಾ ಅಕ್ಕಾ ಅಕ್ಕಾ ಎಂದು ಕರೆಯುತ್ತಾ ಅವಳೊಡನೆ ಮಾತಿಗಿಳಿದು ತನ್ನ ಕಥೆಯನ್ನೆಲ್ಲಾ ಹೇಳಿಕೊಳ್ಳುತ್ತಿದ್ದಳು. ತನ್ನ ಗಂಡ ಹೇಗೆ ತನಗಾಗಿ ಶೆಟ್ಟಿಗೆ ಹೊಡೆದು ಜೈಲು ಸೇರಿದನೆಂದು ಹೇಳಿ ಪಾಪಣ್ಣನ ಮೇಲೆ ಅಭಿಮಾನ ಹುಟ್ಟಿಸಿದ್ದಳು. ಪಾಪಣ್ಣ ಕೂಡ ಜೈಲಿನೊಳಗೆ ಆಕೆಯನ್ನು ಕಂಡಾಗಲೆಲ್ಲಾ ಮುಗುಳ್ನಕ್ಕು ಕಣ್ಣಲೇ ಮಾತನಾಡುತ್ತಿದ್ದ. ಬರುಬರುತ್ತಾ ಈ ಕಣ್ಣಿನ ಸಂಭಾಷಣೆಗಳು ನಿಧಾನವಾಗಿ ತುಟಿಗೂ ಶಿಫ್ಟ್ ಆದವು. ಜಿಲ್ಲಾ ಕಾರಾಗೃಹವಾದ್ದರಿಂದ ಇದ್ದವರೆಲ್ಲಾ ಚಿಕ್ಕ ಪುಟ್ಟ ಕೇಸುಗಳಲ್ಲಿ ಒಳಗೆ ಬಂದ ಖೈದಿಗಳೇ. ಅಂತಹ ದೊಡ್ಡ ಅಪರಾಧಿಗಳಾರು ಇರದಿದ್ದರಿಂದ ಪೋಲೀಸರೂ ಕೂಡ ಅಷ್ಟೇನು ಬಿಗಿಯಾಗಿರಲಿಲ್ಲ. ಖೈದಿಗಳೊಂದಿಗೆ ಸಲುಗೆಯಿಂದಲೇ ಮಾತನಾಡಿಕೊಂಡಿದ್ದರು. ಹೀಗಾಗಿ ಲೈಬ್ರರಿಯ ಕಪಾಟು ಒರೆಸುವಾಗಲೋ, ಊಟದ ನಂತರ ಕೈ ತೊಳೆಯುವ ನಲ್ಲಿಯ ಬಳಿ ಬಂದಾಗಲೋ ಅಥವಾ ಪ್ರಾರ್ಥನೆಗೆ ಜೈಲರು ಬರುವುದು ತಡವಾದಾಗಲೋ, ಪಾಪಣ್ಣ ಮಣಿಕರ್ಣಿಕಾರಿಗೆ ಆರಾಮವಾಗಿ ಮಾತನಾಡಲು ಅವಕಾಶ ಸಿಗುತ್ತಿತ್ತು.  

ಅದೊಮ್ಮೆ ಎಂಟು ತಿಂಗಳು ತುಂಬಿದ್ದ ಗಿರಿಜಾ ಇದ್ದಕ್ಕಿದ್ದಂತೆ ಜೈಲಿಗೆ ಬರುವುದನ್ನು ನಿಲ್ಲಿಸಿಬಿಟ್ಟಳು. ಪಾಪಣ್ಣ ಎರಡು ವಾರ ಜೈಲಿನ ಬಾಗಿಲಲ್ಲಿ ಕಾದಿದ್ದವನು, ಮೂರನೇ ವಾರವೂ ಮಡದಿಯ ಸುಳಿವಿಲ್ಲದಿದ್ದಾಗ ಹೇಗೋ ಮಣಿಕರ್ಣಿಕಾಳನ್ನು ಸಂಪರ್ಕಿಸಿ ಹಂಪನೂರಿನಲ್ಲಿದ್ದ ತನ್ನ ಮನೆಯ ವಿಳಾಸವನ್ನು ಕೊಟ್ಟು ಅವಳ ಕ್ಷೇಮ ವಿಚಾರಿಸಿಕೊಂಡು ಬರಬೇಕೆಂದು ಬೇಡಿಕೊಂಡ. ಮಣಿಕರ್ಣಿಕಾ ಅಂದು ಸಂಜೆಯೇ ಡ್ಯೂಟಿ ಮುಗಿಸಿ ಅವನ ಮನೆಗೆ ಹೋದಳು. ಮನೆಯ ಬಾಗಿಲು ತೆರೆದೇ ಇತ್ತು. ಮಂಚದ ಮೇಲೆ ಮಲಗಿದ್ದ ಗಿರಿಜಾ ಅಲ್ಲಿಂದಲೇ ಕ್ಷೀಣ ದನಿಯಲ್ಲಿ ‘ಯಾರೂ’ ಎಂದು ಕೇಳಿದಳು. ಮಣಿಯ ಮುಖ ಕಂಡದ್ದೇ ಅವಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹೊಟ್ಟೆಯ ಭಾರಕ್ಕೆ, ಕಾಲಿನ ಪಾದಗಳು ಊದಿಕೊಂಡು ಯಾರಿಗೂ ಹೇಳಲೂ ಆಗದೇ, ಆಸ್ಪತ್ರೆಗೂ ಹೋಗಲಾಗದೇ ಮನೆಯಲ್ಲೇ ಒದ್ದಾಡುತ್ತಿದ್ದಳು ಗಿರಿಜಾ. ಮಣಿಕರ್ಣಿಕಾ ತಡಮಾಡದೇ ತನಗೆ ಗೊತ್ತಿದ್ದ ಡಾಕ್ಟರೊಬ್ಬರನ್ನು ಮನೆಗೇ ಕರೆಸಿ ಚಿಕಿತ್ಸೆ ಕೊಡಿಸಿದಳು. ಆ ರಾತ್ರಿ ಅಲ್ಲಿಯೇ ಇದ್ದು ಅವಳನ್ನು ನೊಡಿಕೊಂಡಳು. ಗಿರಿಜಾಳಿಗೆ ತನಗಿಂತಲೂ ಜೈಲಿನಲ್ಲಿದ್ದ ತನ್ನ ಗಂಡನ ಬಗ್ಗೆಯೇ ಅವಳಿಗೆ ಯೋಚನೆಯಾಗಿತ್ತು. ಇಡೀ ರಾತ್ರಿ ಗಂಡನ ಬಗ್ಗೆ ಏನೇನೋ ಮಾತನಾಡುತ್ತಿದ್ದವಳು, ಜಾವದಲ್ಲಿ ನಿದ್ದೆಗೆ ಜಾರಿದಳು. ಮಣಿ ಬೆಳಗ್ಗೆ ಎದ್ದು ಮನೆಗೊಂದಷ್ಟು ಸಾಮಾನುಗಳನ್ನು ತಂದು ತಾನೇ ಅಡುಗೆ ಮಾಡಿಟ್ಟು, ಹೆರಿಗಯಾಗುವವರೆಗೆ ಆಗಾಗ ಬಂದು ನೋಡಿಕೊಂಡು ಹೋಗುವುದಾಗಿ ಹೇಳಿದಳು. ಗಿರಿಜಾ ಹೋಗುವಾಗ ಮರೆಯದೇ ತಾನು ಗಂಡನಿಗಾಗಿ ಹಣೆದಿದ್ದ ಬೀಸಣಿಗೆಯನ್ನು ಕೊಟ್ಟು ಅವರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿದಳು. ಅದೇನನ್ನಿಸಿತೋ, ಮಣಿಕರ್ಣಿಕಾ ತನಗೇ ತಿಳಿಯದೇ ಹೂಂಗುಟ್ಟಿದಳು.

ಮರುದಿನ ಸಂಜೆ ವಿರಾಮ ಮುಗಿಸಿ ಖೈದಿಗಳೆಲ್ಲಾ ಸೆಲ್ಲಿಗೆ ಹೊರಡುತ್ತಿದ್ದರು. ಪಾಪಣ್ಣ ಲೈಬ್ರರಿಯ ಕೀಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಆಫೀಸು ಕೊಠಡಿಯಿನ್ನು ತೆರೆದೇ ಇತ್ತು. ಸಾಮಾನ್ಯವಾಗಿ ಆಫೀಸು ಸಿಬ್ಬಂದಿ ಕೆಲಸ ಮುಗಿಸಿ ಹೊರಡುತ್ತಾ ಲೈಬ್ರರಿ ಕೀಯನ್ನು ಪಕ್ಕದಲ್ಲಿದ್ದ ನೋಟೀಸು ಬೋರ್ಡಿನ ಮೇಲಿಟ್ಟು ಹೋಗುತ್ತಿದ್ದರು. ಇಂದು ಬಾಗಿಲಿನ್ನು ತೆರೆದಿದ್ದನ್ನು ಕಂಡು ಯಾರೋ ಕೆಲಸ ಮಾಡುತ್ತಿರಬೇಕೆಂದು ಒಳಗೆ ಬಂದ ಪಾಪಣ್ಣನಿಗೆ ಕಂಡದ್ದು ಆತನಿಗಾಗಿ ಕಾದಿದ್ದ ಮಣಿಕರ್ಣಿಕಾ. ಅವನಿಗೆ ನೆಡೆದ ವಿಷಯವನ್ನೆಲ್ಲಾ ಹೇಳಿದಳು.  ಪಾಪಣ್ಣ ತನ್ನ ಹೆಂಡತಿಯ ಈ ಸ್ಥಿತಿಯಲ್ಲಿ ಬಿಟ್ಟು ತಾನು ಈ ಜೈಲಿನಲ್ಲಿರಬೇಕಾಯಿತೇ ಎಂದು ದುಃಖದಿಂದ ಅಳತೊಡಗಿದ. ಮಣಿಕರ್ಣಿಕಾ ಆತನಿಗೆ ಸಮಾಧಾನ ಮಾಡುತ್ತಾ ಡಾಕ್ಟರು ಯಾವ ತೊಂದರೆಯೂ ಇಲ್ಲವೆಂದು ಹೇಳಿದ್ದಾರೆಂದೂ, ಅಲ್ಲದೇ ತಾನೂ ಸಮಯ ಸಿಕ್ಕಾಗಲೆಲ್ಲ ಹೋಗಿ ನೋಡಿಕೊಂಡು ಬರುವೆನೆಂದು ಹೇಳಿದಳು.

ಪಾಪಣ್ಣ ಏನೂ ಮಾತನಾಡದೇ ನಿಂತು ಅವಳನ್ನೇ ನೋಡಿದ. ನಂತರ ಉದ್ವೇಗದಲ್ಲಿ ‘ದೇವ್ತೇ ಮೇಡಮ್ನೋರೇ ನೀವು, ದೇವ್ತೆ’ ನಿಮ್ಮ ಋಣಾನ ಯಾವತ್ತು ಮರೆಯಕ್ಕಿಲ್ಲಾ’ ಎಂದು ಅವಳ ಭುಜ ಹಿಡಿದುಕೊಂಡು ಅಳತೊಡಗಿದ. ಮಣಿಕರ್ಣಿಕಾಳ ಮೈಯಲ್ಲಿ ಅವನ ಈ ದಿಡೀರ್ ಸ್ಪರ್ಷದಿಂದ ಮಿಂಚು ಸಂಚಾರವಾಯ್ತು. ಅಲ್ಲಿಯವರೆಗೂ ಅವಳಿಗೆ ಪುರುಷ ಸ್ಪರ್ಷದ ಅನುಭವವೇ ಇರಲಿಲ್ಲವೇನೋ. ಅರೆಕ್ಷಣ ಸ್ತಬ್ದಳಾದವಳು ನಂತರ ಸಾವರಿಸಿಕೊಂಡು ಭುಜವನ್ನು ಬಿಗಿಯಾಗಿ ಹಿಡಿದಿದ್ದ ಅವನ ಒರಟು ಕೈಗಳಿಂದ ಬಿಡಿಸಿಕೊಂಡು ಹಿಂದೆ ಸರಿದಳು. ಪಾಪಣ್ಣನಿಗೆ ತಕ್ಷಣಕ್ಕೆ ಏನಾಯಿತೆಂದು ತಿಳಿಯಲಿಲ್ಲ. ಕಣ್ಣೊರಿಸಿಕೊಂಡು ನೋಡಿದಾಗ ಮಣಿಕರ್ಣಿಕಾ ನಿಂತಲ್ಲಿಯೇ ಕಂಪಿಸುತ್ತಿದ್ದಳು. ಪಾಪಣ್ಣ ತನ್ನ ಕೈಗಳನ್ನೊಮ್ಮೆ ನೋಡಿಕೊಂಡು ತನ್ನ ತಪ್ಪಿನ ಅರಿವಾಗಿ ಅದೇನೋ ಹೇಳಲು ಬಾಯ್ತೆರೆದ. ಅಷ್ಟರಲ್ಲಿ ತಾನೇ ಮುಂದೆ ಬಂದ ಮಣಿಕರ್ಣಿಕಾ ಅವನನ್ನು ಬಿಗಿಯಾಗಿ ತಬ್ಬಿಕೊಂಡುಬಿಟ್ಟಳು. ತನ್ನ ಮುಖವನ್ನು ಅವನ ಎದೆಯಲ್ಲಿ ಹುದುಗಿಸಿದಳು. ಸುಮಾರು ದಿನಗಳಿಂದ ಹೆಣ್ಣಿನ ಆ ಬಿಸಿಯಪ್ಪುಗೆಯನ್ನೇ ಕಾಣದ ಪಾಪಣ್ಣ ಸ್ವಲ್ಪ ಹೊತ್ತು ಹಾಗೆಯೇ ನಿಂತಿದ್ದವನು ತಾನೂ ನಿಧಾನವಾಗಿ ಅವಳನ್ನು ತಬ್ಬಿಕೊಂಡ. ಹೀಗೆ ಸರಳುಗಳ ಹಿಂದಿರಬೇಕಾದ ಜೈಲಿನ ಬಿಳಿ ಸಮವಸ್ತ್ರವೊಂದು, ಸರಳುಗಳ ಹೊರಗೆ ನಿಂತು ಕಾಯುವ ಖಾಕಿ ಸಮವಸ್ತ್ರದೊಡನೆ ಸರಳವಾಗಿ ಬೆರೆತು ಹೋಗಿತ್ತು.

ಅದಾದ ಮೇಲೆ ಮುಂದಿನ ಎರಡು ವಾರಗಳವರೆಗೆ ಇಬ್ಬರೂ ಒಬ್ಬರನ್ನೊಬ್ಬರು ಕತ್ತೆತ್ತಿ ನೋಡಿದ್ದೇ ಇಲ್ಲ. ಸಮಯ ಸಿಕ್ಕಾಗಲೆಲ್ಲಾ ಅವಸರ ಅವಸರದಲ್ಲಿ ಗಿರಿಜಾಳ ಆರೋಗ್ಯದ ಬಗ್ಗೆ ಹೇಳಿ ಓಡುತ್ತಿದ್ದಳು ಮಣಿಕರ್ಣಿಕಾ. ಪಾಪಣ್ಣ ಏನೂ ಮಾತನಾಡದೇ ನಿಂತು ಕೇಳಿಸಿಕೊಳ್ಳುತ್ತಿದ್ದ. ಆತನಿಗೆ ತನ್ನ ಹೆಂಡತಿಯ ವಿಚಾರ ಕೇಳಿದ ಸಂತಸವಾದರೆ ಮಣಿಕರ್ಣಿಕಾಳ ಭೇಟಿಯಿಂದ ಅದೊಂತರ ಮೈಪುಳಕವಾಗುತ್ತಿತ್ತು. ಅದೊಂದು ದಿನ ಮಣಿಕರ್ಣಿಕಾ ಕಡೆಗೂ ಸಿಹಿ ಸುದ್ದಿಯೊಂದಿಗೆ ಬಂದಳು. ಜೊತೆಯಲ್ಲಿ ತಾನೇ ಮಾಡಿದ್ದ ಮೈಸೂರು ಪಾಕನ್ನೂ ತಂದಿದ್ದಳು. ಪಾಪಣ್ಣನಿಗೆ ಗಂಡು ಮಗುವಾಗಿತ್ತು. ಸುದ್ದಿ ಕೇಳಿ ನಿಂತಲ್ಲೇ ಕುಣಿದಾಡಿದ ಪಾಪಣ್ಣ ಸಿಹಿ ತಿಂದು ಅವಳಿಗೂ ತಿನ್ನಿಸಿದ. ಬರುವ ಭಾನುವಾರ ಹೇಗಾದರೂ ಮಾಡಿ ತಾಯಿ ಮಗು ಇಬ್ಬರನ್ನೂ ಕರೆದುಕೊಂಡು ಬರಬೇಕೆಂದು ಬೇಡಿಕೊಂಡ. ಮಣಿ ಒಪ್ಪಿದಳು

ತಿಂದ ಸಿಹಿಯನ್ನು ಮನಸ್ಸಿನಲ್ಲೂ ಇಟ್ಟುಕೊಂಡು ಭಾನುವಾರ ಬರುವುದನ್ನೇ ಕಾಯತೊಡಗಿದ ಪಾಪಣ್ಣನಿಗೆ, ಶನಿವಾರ ಬೆಳಗಿನ ಜಾವದಲ್ಲಿ ಕಹಿ ಸುದ್ದಿಯೊಂದು ಬಂದಿತು. ಕುಡಿದ ನೀರಿನಲ್ಲೇನೋ ವ್ಯತ್ಯಾಸವಾಗಿ, ಗಿರಿಜಾಳಿಗೆ ಮತ್ತು ಮಗುವಿಗೆ ಇದ್ದಕ್ಕಿದ್ದಂತೆ ವಾಂತಿ ಭೇದಿ ಕಾಣಿಸಿಕೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಮಗು ಉಳಿಯುವುದೇ ಕಷ್ಟವೆಂದಾಗ ಪಾಪಣ್ಣನನ್ನು ಪೋಲೀಸರ ಕಾವಲಿನಲ್ಲಿ ಆಸ್ಪತ್ರೆಗೆ ಕರೆತರಲಾಯಿತು. ಅವರು ಬರುವ ವೇಳೆಗಾಗಲೇ ಮಗುವಿನ ಜೀವ ಹೋಗಿಯಾಗಿತ್ತು. ಪಾಪಣ್ಣನನ್ನು ಕೊನೆಯ ಬಾರಿಗೆ ಕಾಣಬೇಕೆಂದು ಜೀವ ಹಿಡಿದುಕೊಂಡಿದ್ದಳೇನೋ ಗಿರಿಜಾ, ಅವನು ಬರುತ್ತಿದ್ದಂತೆ ಅವನ ಕೈಯನ್ನು ಬಿಗಿಯಾಗಿ ಒತ್ತಿ ಹಿಡಿದುಕೊಂಡು ಪ್ರಾಣ ಬಿಟ್ಟಳು. ಪಾಪಣ್ಣ ಗಿರಿಜಾಳನ್ನು, ಪಕ್ಕದಲ್ಲಿದ್ದ ಎರಡು ದಿನದ ಹಸುಗೂಸನ್ನು ಅವಚಿಕೊಂಡು ಗೋಳಾಡುತ್ತಿದ್ದರು, ತಾನೂ ಕಣ್ಣಿರನ್ನು ತಡೆಯಲಾರದೇ ಮಣಿಕರ್ಣಿಕಾ ಹೊರಗೋಡಿದ್ದಳು.

***

ತಿಂಗಳುಗಳು ಉರುಳಿದವು. ಪಾಪಣ್ಣ ಮತ್ತೆ ಜೈಲಿನಲ್ಲಿ ಮಾತನಾಡಿದ್ದೇ ನೋಡಿದವರಿರಲಿಲ್ಲ. ಆ ಜೈಲಿನ ಒಂಟಿತನದ ನಡುವೆ ಮತ್ತಷ್ಟು ಒಂಟಿಯಾಗಿಬಿಟ್ಟ. ಜೈಲಿನಲ್ಲಿ ಇತರ ಕೈದಿಗಳೂ, ಪೋಲೀಸರು ಹೇಗೇತೋ ಆತನಿಗೆ ಸಮಾಧಾನ ಮಾಡಲು ನೋಡಿ ಸೋತುಹೋದರು. ಮಣಿಕರ್ಣಿಕಾ ತಾನೂ ಹಲವು ಬಾರಿ ಮಾತನಾಡಿಸಲು ಪ್ರಯತ್ನಿಸಿದರೂ ತಿರುಗಿಯೂ ನೋಡಲಿಲ್ಲ. ತೀವ್ರ ಖಿನ್ನತೆಗೊಳಗಾದ ಅವನ ಆರೋಗ್ಯ ತಪಾಸಣೆಗೆ ಬಂದ ಮನೋವೈದ್ಯರು ಆತನಿಗೆ ನಾಲ್ಕು ಗೋಡೆಗಳ ಒಳಗೇ ಕುಳಿತು ಆಗಿದ್ದರ ಬಗ್ಗೆ ಚಿಂತಿಸದೇ ಆದಷ್ಟು ಸೆಲ್ಲಿನ ಹೊರಗಿರಬೇಕೆಂದು ಹೇಳಿ ಜೈಲಿನ ಕಾಂಪೌಂಡಿನ ಒಳಗೆ ಎಲ್ಲಿಯಾದರೂ ಓಡಾಡಬಹುದೆಂದು ಅನುಮತಿ ಕೊಡಿಸಿದರು. ಆ ಮೂವತ್ತು ಎಕರೆ ವಿಶಾಲ ಜಾಗದಲ್ಲೂ ಏಕಾಂತವನ್ನೇ ಹುಡುಕುತ್ತಿದ್ದ ಪಾಪಣ್ಣ ಸದಾ ಯಾರೂ ಇಲ್ಲದ ಸ್ಥಳಕ್ಕೆ ಹೋಗಿ ಒಂದೇ ದಿಕ್ಕಿಗೆ ನೋಡುತ್ತಾ ಕುಳಿತುಬಿಟ್ಟಿರುತ್ತಿದ್ದ.

ಆಗಲೇ ಮಣಿಕರ್ಣಿಕಾ ಮೆಟರ್ನಿಟಿ ರಜೆಗೆ ಅರ್ಜಿ ಸಲ್ಲಿಸಿದ್ದು. ಇದ್ದ ಒಬ್ಬಳೇ ಮಹಿಳಾ ಪೇದೆ ಮದುವೆಯಾಗದೇ ತಾಯಿಯಾದ ಸುದ್ದಿ ಇಡೀ ಜೈಲಿಗೆ ಹಬ್ಬಿತು. ಪೋಲಿಸರು ಖೈದಿಗಳೆನ್ನದೇ ಎಲ್ಲರೂ ಒಳಗೊಳಗೆ ಗುಸುಗುಸು ಮಾತನಾಡುತ್ತಿದ್ದರು. ಆಕೆ ಬಸುರಾಗಲು ಇದ್ದ ಸಕಲ ದಾರಿಗಳ ಬಗ್ಗೆಯೂ ಅವರವರದೇ ತರ್ಕಗಳು ಹುಟ್ಟಿಕೊಂಡವು. ಆದರೆ ಮಣಿಕರ್ಣಿಕಾ ಮಾತ್ರ ಧೈರ್ಯವಾಗಿ ಗಂಡನ ಹೆಸರಿಲ್ಲದೇ ಅರ್ಜಿಯನ್ನು ಹಾಕಿದಳು. ಅದನ್ನು ತೆಗೆದುಕೊಳ್ಳುತ್ತಾ ಕ್ಲರ್ಕ್ ನಂಜುಂಡಪ್ಪ ಅದೊಂದು ರೀತಿಯಲ್ಲಿ ನಕ್ಕಿದ್ದ. ಆದರೆ ಮಣಿಕರ್ಣಿಕಾ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಅವಳು ಯಾರಿಗೂ ಉತ್ತರ ಕೊಡಬೇಕಿರಲಿಲ್ಲ. ರಜೆಗೆ ಅನುಮತಿ ದೊರೆಯಿತು. ಹೋಗುವ ಹಿಂದಿನ ದಿನ ಲಾರೆನ್ಸ್ ಗಾರ್ಡನ್ನಿನಲ್ಲಿ ಒಂಟಿಯಾಗಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಪಾಪಣ್ಣನೆದುರು ಹೋಗಿ ನಿಂತಳು. ಪಾಪಣ್ಣ ಎಂದಿನಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಮಣಿಕರ್ಣಿಕಾ ತಾನೇ ಮಾತನಾಡಿದಳು.

‘ನೀವಿನ್ನೆಷ್ಟು ದಿನ ಹೀಗಿಯೇ ಇರುತ್ತೀರೋ ಗೊತ್ತಿಲ್ಲ, ಆದ್ರೆ ನನ್ನ ಹೊಟ್ಟೆಲಿ ನಿಮ್ಮದೊಂದು ಮಗು ಇದೆ ಅನ್ನೋದು ನೆನಪಿಟ್ಕೊಳಿ’ ಎಂದು ಹೇಳಿ, ಪಾಪಣ್ಣ ಮೊದಲ ಬಾರಿಗೆ ಕತ್ತೆತ್ತಿ ಅವಳನ್ನು ನೋಡಿದ. ಆದರೆ ಅವಳಾಗಲೇ ಅವನಿಗೆ ಬೆನ್ನು ತೋರಿಸಿ ನೆಡೆದು ಹೋಗುತ್ತಿದ್ದಳು.

(ಮುಂದುವರೆಯುವುದು)

No comments:

Post a Comment