Wednesday, May 23, 2018

ಡೈರೀಸ್ ಆಫ್ ದಾಳಿ ಪಾಪಣ್ಣ


ಅಧ್ಯಾಯ 1

ಪಾಪಣ್ಣ ವಿಸಿಟ್ಸ್ ಗೋಲ್ಡನ್ ಹಾರ್ಸ್



ಆ ಶನಿವಾರ ರಾತ್ರಿ ಗೋಲ್ಡನ್ ಹಾರ್ಸ್ ಬಾರಿನ ಕೌಂಟರಿನಲ್ಲಿ ನಿಂತಿದ್ದ ನಾಲ್ಕೈದು ಕುಡುಕರು ಜೀರೋ ಕ್ಯಾಂಡಲು ಬಲ್ಬಿನ ಬೆಳಕಿನಲ್ಲಿ ತೂರಾಡುತ್ತಾ ಕುಡಿಯುತ್ತಿದ್ದರು. ನಡುವಿನಲ್ಲಿ ಆಗೊಮ್ಮೆ ಈಗೊಮ್ಮೆ ಪೇಪರಿನ ಮೇಲಿದ್ದ ಖಾರವನ್ನು ಬಾಯಿಗೆ ಎಸೆದುಕೊಳ್ಳುತ್ತಿದ್ದರು. ಖಾರವನ್ನು ಜಗಿಯುವಾಗ ಬಿಟ್ಟು ಮಿಕ್ಕೆಲ್ಲಾ ಸಮಯದಲ್ಲೂ ಕಚಪಚ ಕಚಪಚ ಮಾತನಾಡುತ್ತಲೇ ಇದ್ದರು. ಚುನಾವಣೆ ಸಮಯದಲ್ಲಿ ಮಾತನಾಡಲು ವಿಷಯಗಳನ್ನು ಕೇಳಬೇಕೆ? ಗಂಟೆ ಹತ್ತಾಗಿರಬಹದು. ಅಂಗಡಿ ಬಾಗಿಲು ಹಾಕಿಕೊಂಡು ಮೊಟ್ಟೆ ಬಿರಿಯಾನಿ ಕಟ್ಟಿಸಿಕೊಳ್ಳಲು ಬಂದ ಪಕ್ಕದ ಪಾನು ಶಾಪಿನ ಸರೋಜಕ್ಕ ಇದ್ದಕಿದ್ದಂತೆ ಚಿಟಾರನೇ ಚೀರಿದಳು. ಕುಡುಕ ಮಹಾಶಯರೆಲ್ಲಾ ಬೆಚ್ಚಿ ಅತ್ತ ಕಡೆಗೆ ತಿರುಗಲು ಅದೇನೇನೋ ಗೊಣಗುತ್ತಾ ತನ್ನ ಕಾಲನ್ನು ಗೋಣಿ ಚೀಲವೊಂದಕ್ಕೆ ಒರೆಸುತ್ತಿದ್ದಳು.

‘ಏನಾಯ್ತಮ್ಮೋ?’ ದಪ್ಪ ಮೀಸೆ ವೀರಭದ್ರಪ್ಪ ಕೌಂಟರಿನ ಒಳಗಿಂದ ಕತ್ತು ಹೊರಗೆ ಹಾಕಿ ಕೇಳಿದರು.

‘ರಕ್ತ ಕಣಣ್ಣೋ, ಈ ಪಾಟಿ ರಕ್ತ ಚೆಲ್ಲೈತೆ, ಮೈ ಮೇಲೆ ಎಚ್ರ ಇಲ್ದೇ ಕುಡಿತಾ ನಿಂತಿದಿರಲ್ರಪ್ಪ ನಿಮ್ ಗ್ಯಾನಕ್ ನನ್ ಮೆಟ್ ಸಿಗಾಕ’ ಎಂದು ಸರೋಜಕ್ಕ ಅದೇ ಮೆಟ್ಟುಗಳನ್ನು ಗೋಣಿ ಚೀಲಕ್ಕೇ ತಿಕ್ಕುತ್ತಲೇ ಅರಚಿದಳು.

ಅಷ್ಟು ಹೊತ್ತಿನಿಂದ ಅಲ್ಲೇ ನಿಂತು ಕುಡಿಯುತ್ತಿದ್ದರೂ ಯಾರಿಗೂ ಅಲ್ಲಿ ರಕ್ತ ಚೆಲ್ಲಿದ್ದ ಸುಳಿವೂ ಇರಲಿಲ್ಲ. ಅವಳ ಧ್ವನಿ ಕೇಳಿ ಕುಡಿದು ತೇಲುತ್ತಿದ್ದವರೆಲ್ಲಾ ಹಾವು ತುಳಿದವರಂತೆ ನೆಗೆದು ಕುಣಿದಾಡುತ್ತಾ ಪಾದಗಳನ್ನು ನೋಡಿಕೊಳ್ಳತೊಡಗಿದರು. ಅವರ ಕಾಲುಗಳ ನಡುವೆ ನುಗ್ಗಿ ಬಂದ ಬೆಕ್ಕೊಂದು ನೆಲದ ಮೇಲೆ ಚೆಲ್ಲಿದ್ದ ಹಸಿ ರಕ್ತವನ್ನೊಮ್ಮೆ ಬ್ಲಡ್ ಟೆಸ್ಟ್ ಮಾಡುವ ಡಾಕ್ಟರಿನಂತೆ ನಾಲಿಗೆಯಿಂದ ನೆಕ್ಕಿ ನೋಡಿ ಮಿಯಾಂ ಎಂದು ಅದೇನೋ ರಿಪೋರ್ಟ್ ಹೇಳಿ ಮತ್ತೆ ನೆಕ್ಕತೊಡಗಿತು. ನಶೆಯಲ್ಲೇ ಗಿಜಿಗುಡುತ್ತಿದ್ದ ಬಾರು ಈ ಗಲಿಬಿಲಿಯಿಂದ ಮತ್ತಷ್ಟು ಚುರುಕಾಯಿತು. ಎಲ್ಲರೂ ಬಾಯಿಗೆ ಬಂದಂತೆ ರಾಗವಾಗಿ ಮಾತನಾಡತೊಡಗಿದರು. ಈ ಗದ್ದಲ ಕೇಳಿ ಐಪಿಎಲ್ ಪಂದ್ಯ ನೋಡಲು ಪಕ್ಕದಲ್ಲಿದ್ದ ಕಟಿಂಗ್ ಶಾಪಿನಲ್ಲಿ ಸೇರಿದ್ದ ಗುಂಪೊಂದು ಸೇರಿ ಬಾರಿನಲ್ಲಿ ಬೇಡದ ಜನಸಂದಣಿಯಾಯಿತು. ಅದರಲ್ಲಿ ಕೆಲವು ಕುತೂಹಲಕಾರಿ ಯುವಕರು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಏನಾಯಿತೆಂದು ರೆಕಾರ್ಡ್ ಆಗಿರುವುದನ್ನು ನೋಡಬೇಕೆಂದು ವೀರಭದ್ರಪ್ಪನವರನ್ನು ಒತ್ತಾಯಿಸಿದಾಗ ಆತನಿಗೆ ಮತ್ತಷ್ಟು ಕಿರಿಕಿರಿಯಾಗಿ ಶ್ರೀನಿವಾಸನನ್ನು ಕರೆದು ಕೂಡಲೇ ಚೆಲ್ಲಿದ್ದ ರಕ್ತವನ್ನು ಕ್ಲೀನ್ ಮಾಡಲು ಹೇಳಿದ.

ಬಾರಿನ ಟೇಬಲುಗಳನ್ನು ಕ್ಲೀನು ಮಾಡುತ್ತಿದ್ದ ಸೀನ ವೀರಭದ್ರಪ್ಪ ಕೂಗಿದ್ದು ಕೇಳಿ ಯಾರೋ ಕುಡಿದದ್ದು ಹೆಚ್ಚಾಗಿ ಆಮ್ಲೇಟು ಹೊರಗೆ ಹಾಕಿರಬೇಕೆಂದು ಬಕೇಟು ಪೊರಕೆಗಳ ಸಮೇತವೇ ಹೊರಗೆ ಬಂದ. ಕೌಂಟರಿನ ಮಬ್ಬು ಬೆಳಕಿನಲ್ಲಿ ನೆಲದಲ್ಲಿ ಅದೇನೋ ಕಪ್ಪಗೆ ಚೆಲ್ಲಿದ್ದನ್ನು ಒಂದು ಬೆಕ್ಕು ಮತ್ತೊಂದಷ್ಟು ಜನ ಸುತ್ತಲೂ ನಿಂತು ನೋಡುತ್ತಿದ್ದಾರೆ. ಸೀನ ಮೊದಲು ಬೆಕ್ಕನ್ನು ಪೊರಕೆಯಿಂದ ಹೊಡೆದು ಅಲ್ಲಿಂದ ಓಡಿಸಿದ. ಬೆಕ್ಕು ದೂರದಲ್ಲಿ ಹೋಗಿ ನಿಂತು ಗರ್ಜಿಸಿತು. ನಂತರ ಅಲ್ಲಿ ನಿಂತಿದ್ದವರಿಗೆ ಬದಿಗೆ ಸರಿಯಲು ಹೇಳಿದ. ತಮ್ಮದೇ ತರ್ಕಗಳಲ್ಲಿ ಮುಳುಗಿಹೋಗಿದ್ದ ಅವರೆಲ್ಲಾ ಕದಲದೇ ಅಲ್ಲೇ ನಿಂತಿರಲು ಕಾಲಿಗೆ ಸಿಡಿಯುವಂತೆ ನೀರೆರಚಿ ಪರಪರ ಗುಡಿಸತೊಡಗಿದ. ಹೀಗೆ ಬಾರಿನ ಮಬ್ಬು ಬೆಳಕಿನವರೆಗೆ ಹೋಗಿ ಮಾಯವಾಗಿದ್ದ ಆ ಕಲೆಗಳನ್ನು ತೊಳೆದ ಸೀನ ತಾನು ಬಾರಿನೊಳಕ್ಕೆ ಹೋಗಿ ಮಾಯವಾದ. ಸುಮಾರು ಹೊತ್ತಿನವರೆಗೆ ಅಲ್ಲೇ ನಿಂತಿದ್ದ ಕೆಲವರು ಅಲ್ಲಲ್ಲಿ ಉಳಿದಿದ್ದ ರಕ್ತದ ಹನಿಗಳ ಜಾಡು ಹಿಡಿದು ಹೋರಟರು. ಅದೆಲ್ಲೋ ಲೈಟುಕಂಬದ ಬುಡದಲ್ಲಿದ್ದ ಕತ್ತಲಿನಲ್ಲಿ ಮರೆಯಾಗಿದ್ದನ್ನು ಕಂಡು ಅವರಿಗೂ ನಿರಾಸೆಯಾಯಿತು. ಕಡೆಗೆ ಬೆಕ್ಕು ಯಾವುದೋ ಇಲಿಯೋ ಹೆಗ್ಗಣವನ್ನೋ ಕಚ್ಚಿ ಎಳೆದಾಡಿರಬೇಕು ಎಂಬ ನಿರ್ಧಾರಕ್ಕೆ ಬಂದರು. ಅಷ್ಟರಲ್ಲಿ ಮೆಕ್ಯುಲಮ್ ಔಟಾಗಿ ಕೋಹ್ಲಿ ಬ್ಯಾಟಿಂಗಿಗೆ ಬರಲು ಮತ್ತೆ ಸೆಲೂನಿನ ಒಳಹೊಕ್ಕರು.

ಬಾರಿಗೆ ಜನ ಬರುತ್ತಿದ್ದರು, ಹೋಗುತ್ತಿದ್ದರು. ಕೌಂಟರಿನಲ್ಲಿ ಸೀರಿಯಲ್ ಸೆಟ್ ಹಾಕಿದ್ದ ಹಳೆಯ ವೆಂಕಟರಮಣ ಸ್ವಾಮಿಯ ಫೋಟೋದ ಕೆಳಗೆ ನಿಂತು ವೀರಭದ್ರಪ್ಪ ಪ್ಲಾಸ್ಟಿಕ್ ಲೋಟಗಳಿಗೆ ಹೆಂಡವನ್ನು ಹೊಯ್ದು ದುಡ್ಡು ತೆಗೆದುಕೊಳ್ಳುತ್ತಲೇ ಇದ್ದರು. ಅಷ್ಟರಲ್ಲಿ ಕ್ರಿಕೆಟ್ ಮ್ಯಾಚು ಮುಗಿದಿತ್ತೇನೋ, ಕಟಿಂಗ್ ಶಾಪಿನ ಬಾಗಿಲು ಹಾಕಿಕೊಂಡು ಜನರೆಲ್ಲಾ ಹೊರಗೆ ಬಂದರು. ಆರ್ಸೀಬಿ ಮೇಲೆ ಬೆಟ್ಟು ಹಾಕಿದ್ದ ಕೆಲವರು ಹಾಗೆ ಬಾರಿಗೊಂದು ವಿಸಿಟ್ಟು ಕೊಟ್ಟು ಹೊರನೆಡೆದರು. ನಡುರಾತ್ರಿ ದಾಟಿ ಕೊನೆ ಪಂಕ್ತಿಯ ಕುಡುಕರು ಲೋಟ ಖಾಲಿ ಮಾಡಿ ಹೋದ ಮೇಲೆ ವೀರಭದ್ರಪ್ಪ ಅಂದಿನ ಲೆಕ್ಕ ಬರೆದಿಡಲು ಶುರು ಮಾಡಿದರು.

ಇತ್ತ ಸೀನಾ ಒಳಗಿದ್ದ ಟೇಬಲ್ಲಿನಲ್ಲಿ ಉಳಿಸಿ ಹೋಗಿದ್ದ ಬಾಟಲಿಗಳನ್ನು ಕ್ಲಿಯರ್ ಮಾಡಿ ಚೆಲ್ಲಿದ್ದ ಹೆಂಡ, ಬಿರಿಯಾನಿ, ಕಬಾಬು, ಮತ್ತು ಅಸಂಖ್ಯಾತ ಮೂಳೆ ತುಂಡುಗಳನ್ನು ಗುಡಿಸುತ್ತಾ. ಕೊನೆಯ ಟೇಬಲ್ಲಿಗೆ ಹೋಗಲು ಸ್ವಲ್ಪ ಹೊತ್ತಿನ ಮೊದಲು ಹೊಡೆದು ಓಡಿಸಿದ್ದ ಬೆಕ್ಕು ಕುಳಿತು ಕಪ್ಪು ಬಣ್ಣದ ಕವರೊಂದನ್ನು ನೆಕ್ಕುತ್ತಿದೆ. ಸೀನ ಉಷ್ ಎಂದು ಮತ್ತೆ ಅದನ್ನು ಓಡಿಸಿ ಕವರನ್ನು ಪರಕೆಯಲ್ಲಿ ಎಳೆದು ಬಕೇಟಿಗೆ ತುಂಬಿಸಲು ನೋಡಿದರೆ ಭಾರವಿದ್ದಂತೆ ಕಂಡಿತು. ಕೈಯಲ್ಲೇ ಹತ್ತಿರಕ್ಕೆ ಎಳೆದುಕೊಂಡು ತೆಗೆದು ನೋಡಿದ. ಪೇಪರಿನಲ್ಲಿ ಕಟ್ಟಿಕೊಟ್ಟಿದ್ದ ಅವರ ಹೋಟಲಿನದ್ದೇ ಕಬಾಬು. ಪೇಪರೆಲ್ಲಾ ಜಿಡ್ಡು ಜಿಡ್ಡಾಗಿ ಅಂಟಿದಂತಾಗುತ್ತಿತ್ತು. ಆದರೆ ಅದು ಎಣ್ಣೆಯ ಜಿಡ್ಡಲ್ಲ ಎಂದು ಸೀನನಿಗೆ ಅನುಮಾನ ಬಂದಿತು. ಕಬಾಬನ್ನು ಟೇಬಲಿನ ಮೇಲೆ ಇಟ್ಟು ಕವರಿನೊಳಗೆ ಕೈ ಹಾಕಿದ. ಕೈಗೆ ಒಳಗೇನೋ ಬೆರಳಿನಂತದ್ದು ತಗುಲಿ ಅರೆಕ್ಷಣ ಬಾರಿನ ಹಿಂದಿನ ಕತ್ತಲೆಯಲ್ಲಿ ಪಾನು ಶಾಪು ಸಾವಿತ್ರಕ್ಕನ ಮಗಳು ಸುಶ್ಮಾಳ ಕೈಹಿಡಿದು ಬೆರಳಲ್ಲಿ ಬೆರಳು ಬೆಸೆದಿದ್ದು ನೆನಪಾಗಿ ರೋಮಾಂಚನವಾದರೂ ಮರುಕ್ಷಣವೇ ನಿಂತಲ್ಲಿಯೇ ಬೆವರಿ ನೀರಾಗಿಹೋದ.

ಸೀನನಿಗೆ ದೂರದ ಕೌಂಟರಿನಲ್ಲಿದ್ದ ವೀರಭದ್ರಪ್ಪನನ್ನು ಕರೆಯಬೇಕೋ ಅಥವಾ ಹತ್ತಿರದಲ್ಲಿದ್ದ ಅಡುಗೆ ಮನೆಯಲ್ಲಿದ್ದ ಭಟ್ಟ ನಾರಾಯಣನನ್ನು ಕರೆಯಬೇಕೋ ಗೊತ್ತಾಗಲಿಲ್ಲ. ಹೀಗೆ ‘ಕೈಗೆ ಕೈ ತಾಕಿ’ ರೋಮಾಂಚನವಾದ ಮೇಲೆ ಆತನ ಗಂಟಲಿನಿಂದ ಹೊರಡುವ ಧ್ವನಿ ಯಾರನ್ನು ತಲುಪಲು ಸಾಧ್ಯ ಎಂದು ಅವನಿಗೆ ಅಂದಾಜು ಸಿಗಲಿಲ್ಲ. ಆದರೂ ಧೈರ್ಯ ಮಾಡಿ ಇಬ್ಬರನ್ನು ಕೂಗುವುದು ಎಂದು ನಿರ್ಧರಿಸಿ ಕೂಗಿಕೊಂಡ.

‘ನಾರಾಯ್ನ.. ಓಯ್ ನಾರಾಯ್ನ.. ಸಾವ್ಕಾರ್ರೆ.. ಇಲ್ ಬನ್ನಿ’ ಎಂದು ಗಜೇಂದ್ರ ಮೋಕ್ಷ ಕಥೆಯಲ್ಲಿ ಮೊಸಳೆ ಬಾಯಿಗೆ ಸಿಕ್ಕು ಕಷ್ಟದಲ್ಲಿದ್ದ ಆನೆ ವಿಷ್ಣುವನ್ನು ಕೂಗುವಂತೆ ಕೂಗಿದ. ಅಂತೂ ಆತನ ಅರ್ತನಾದ ಗುರಿ ಮುಟ್ಟಿತು. ಈತ ಬೊಬ್ಬೆ ಹಾಕುವುದನ್ನು ಕೇಳಿ ತಾನೆ ಮಾಡಿದ್ದ ಬಿರಿಯಾನಿ ತಿನ್ನುತ್ತಿದ್ದ ನಾರಾಯಣ ತಟ್ಟೆ ಕೈಯಲ್ಲೇ ಹಿಡಿದು ಓಡಿಬಂದರೆ, ವೀರಭದ್ರಪ್ಪ ಅವಸರದಲ್ಲಿ ಕೈಯಲ್ಲಿದ್ದ ನೋಟಿನ ಕಂತೆಯನ್ನು ಪೆಟ್ಟಿಗೆಗೆ ಸೇರಿಸಿ ಬೀಗ ಜಡಿದು ಮುಂದಿದ್ದ ಷಟರ್ ಪೂರ್ತಿ ಕೆಳಗೆಳೆದು ಓಡಿ ಬಂದರು.

‘ಲೇಯ್ ಮುಚ್ಚಾ ಬಾಯಿ, ಅದ್ಯಾಕಂಗ್ ಅರಚತೀಯಲೇ ಇಷ್ಟೊತ್ನಾಗೆ? ಏನಾದ್ರು ಹಾವು ಚೇಳು ಎನಾದ್ರು ಕಡಿತಾ?’ ವೀರಭದ್ರಪ್ಪ ಒಳಬರುತ್ತಾ ಗದರಿದರು.

ಸೀನನಿಗೆ ಅವರು ಗದರಿದ್ದು ಕಂಡು ಹೊರಟ ಮಾತು ಗಂಟಲಲ್ಲೇ ಉಳಿದು ಟೇಬಲಿನಲ್ಲಿದ್ದ ಕವರಿನ ಕಡೆಗೆ ಕೈ ತೋರಿಸಿ ‘ಅದು.. ಕವರು.. ಕೈ..’ ಎಂದು ತೊದಲತೊಡಗಿದ.

‘ಏ ನಾರಾಯ್ಣ, ಅದೇನ್ ನೋಡ್ಲಾ ಕವರ್ನಾಗೆ’ ವೀರಭದ್ರಪ್ಪ ಕಿರಿಕಿರಿಯಲ್ಲಿ ಹೇಳಿದರು.

ನಾರಾಯಣ ಊಟದ ತಟ್ಟೆಯನ್ನು ಬಲಗೈಯಲ್ಲಿ ಹಿಡಿದು ಎಡಗೈಯಲ್ಲಿ ಕವರನ್ನೊಮ್ಮೆ ಒತ್ತಿ ನೋಡಿದ. ಏನೋ ಬಾಳೆ ದಿಂಡಿನಂತಿತ್ತು. ಕತ್ತಲಲ್ಲಿ ಕವರಿನ ತುದಿ ಎಲ್ಲಿದೆ ಸಿಗದೆ ಕವರನ್ನೇ ಎತ್ತಿ ನೆಲಕ್ಕೆ ಕೊಡವಿದ. ಕವರನ್ನು ಕೊಡವಿದ ನಾರಾಯಣನ ಕೈಯೇ ಕೆಳಕ್ಕೆ ಕತ್ತರಿಸಿ ಬಿದ್ದಂತೆ ಒಳಗಿನಿಂದ ಮನುಷ್ಯನ ರಕ್ತಸಿಕ್ತವಾದ ಕೈಯೊಂದು ಕೆಳಗೆ ಬಿದ್ದಿತು. ಅದರ ಹಿಂದೇಯೇ ಒಂದಷ್ಟು ಕರ್ರನೇ ರಕ್ತವೂ ಚೆಲ್ಲಿ ನಿಂತಿದ್ದವರ ಕಾಲಿಗೆಲ್ಲಾ ಸಿಡಿಯಿತು. ಅದರ ಸುತ್ತಾ ಇದ್ದ ಮೂರು ಜೀವಗಳು ಸ್ತಬ್ಧರಾದರೆ ಕಿಟಕಿಯಲ್ಲಿದ್ದ ಜೀವವೊಂದು ಸತ್ಯ ಮೊದಲೇ ಗೊತ್ತಿದ್ದಂತೆ ಮಿಯಾಂ ಎಂದಿತು. ತನ್ನ ಕಾಲ ಬುಡದಲ್ಲಿ ಬಂದು ಬಿದ್ದ ಕೈಯನ್ನು ಕಂಡ ಸೀನ ಬೊಬ್ಬೆ ಹಾಕಲು ಬಾಯಿ ತೆರೆದು ಅದೆಷ್ಟು ಹೊತ್ತಾಗಿತ್ತೋ, ಅಂತೂ ಗಂಟಲಿನಿಂದ ವಿಕಾರವಾದ ಕೂಗೊಂದು ಹೊರಗೆ ಬಂದಿತು. ಅದುವರೆಗೆ ಸಾವಿರಾರು ಪ್ರಾಣಿಗಳ ಕೈಕಾಲುಗಳನ್ನು ಕತ್ತರಿಸಿದ್ದ ನಾರಾಯಣನ ಮುಖವೂ ಭಯದಿಂದ ಬಿಳುಚಿಕೊಂಡಿತ್ತು. ಇದ್ದ ಮೂವರಲ್ಲಿ ವೀರಭದ್ರಪ್ಪನೇ ಸ್ವಲ್ಪ ಗಟ್ಟಿ ಮನುಷ್ಯ. ಆತನಿಗೆ ಇದು ಸಾಮಾನ್ಯ ಸಂಗತಿ ಅಲ್ಲದಿದ್ದರೂ ತೀರಾ ಭಯ ಬೀಳುವಂತ ಸಂಗತಿಯೇನು ಆಗಿರಲಿಲ್ಲ. ಸ್ವಲ್ಪ ಹೊತ್ತಿನ ಮುಂಚೆ ಬಾರಿನ ಹೊರಗೆ ಚೆಲ್ಲಿದ್ದ ರಕ್ತದ ಮೂಲ ಇಲ್ಲಿಯವರೆಗೆ ಬಾರಿನೊಳಗೆ ಕುಳಿತಿತ್ತು ಎಂದು ಯೋಚಿಸಿ ಅವರಿಗೆ ಆತಂಕವಾಯಿತು. ಅಲ್ಲಿ ಕುಳಿತಿದ್ದವರು ಯಾರೆಂದು ಕೇಳೋಣವೆಂದರೆ ವೇಟರುಗಳು ಆಗಲೇ ಮನೆಗೆ ಹೋಗಿಬಿಟ್ಟಿದ್ದರು. ವೀರಭದ್ರಪ್ಪ ಧೈರ್ಯ ತಂದುಕೊಂಡು ಇಬ್ಬರ ಮುಖವನ್ನೂ ನೋಡಿ ಹೆದರಿ ನಡುಗುತ್ತಿದ್ದ ಸೀನನಿಗೆ ಒಳಗೆ ಹೋಗುವಂತೆ ಗದರಿಸಿದರು.

ಕೆಳಗೆ ಬಿದ್ದಿದ್ದ ಕೈಯನ್ನೊಮ್ಮೆ ದಿಟ್ಟಿಸಿ ನೊಡಿ ಏನನ್ನೋ ಯೋಚಿಸಿ ನಾರಾಯಣನಿಗೆ ‘ಲೋ ನಾರಾಯ್ಣ, ಬೇಗ ಹೋಗಿ ಆ ಎಲೆಕ್ಷನ್ ಚೆಕ್ ಪೋಸ್ಟ್ ಹತ್ರ ಯಾರಾದ್ರೂ ಪೋಲಿಸ್ನೋರು ಇರ್ತಾರೆ. ಹೋಗಿ ಹಿಂಗಿಂಗೆ ಅಂತ ಹೇಳಿ ಜಲ್ದಿ ಕರ್ಕೊಂಡ್ ಬಾ, ಎಂದು ಮತ್ತೇನೋ ಹೇಳಲು ಬಾಯಿ ತೆರೆದರು ಅಷ್ಟರಲ್ಲಿ,

‘ಬ್ಯಾಡ ಸ್ವಾಮಿ, ಆ ಪೋಲೀಸ್ನೋರು ಬಂದು ಕೈಯ ಎತ್ಕೊಂಡೋಗ್ಬಿಟ್ರೆ ನಾ ತಿರ್ಗಾ ಪೋಲಿಸ್ ಸ್ಟೇಷನ್ ಮ್ಯಾಲೇ ದಾಳಿ ಇಕ್ಬೇಕಾಯ್ತದೆ.’ ಅಂತ ಟಾಯ್ಲೆಟ್ಟು ರೂಮಿನ ಕಡೆಯಿಂದ ಧ್ವನಿಯೊಂದು ಬಂದಿತು.

ಧ್ವನಿಯ ಹಿಂದೆಯೇ ಐದು ಮುಕ್ಕಾಲಡಿ ಎತ್ತರದ ಸಣಕಲು ಆಕೃತಿಯೊಂದು ಹೊರಗೆ ಬಂದು ತೂರಾಡುತ್ತಾ ಟೇಬಲ್ಲುಗಳನ್ನು ಹಿಡಿದು ಸೀದಾ ಇವರ ಬಳಿಗೆ ತಲುಪಿತು. ವಯಸ್ಸು ಸುಮಾರು ಅರವತ್ತು-ಅರವತ್ತೈದಿರಬಹುದು. ಒಂದು ದಿನದ ಮಟ್ಟಿಗೆ ಮಾಸಿದ್ದ ಬಿಳಿ ಪಂಚೆ, ಮೇಲೊಂದು ಮ್ಯಾಚಿಂಗ್ ಇರದ ಬಣ್ಣದ ಅಂಗಿ. ಕೋಲುಮುಖ, ದಪ್ಪ ದಪ್ಪ ಹುಬ್ಬುಗಳು, ನೀಟಾಗಿ ಗಡ್ಡ ಮೀಸೆಗಳನ್ನು ಶೇವ್ ಮಾಡಿದ್ದರೂ ತುಟಿಗಳ ಮೇಲೊಂದು ಮೀಸೆ ಇಟ್ಟರೆ ಕಣ್ಣಿನ ಬುಡದಲ್ಲಿದ್ದ ಗಾಯದ ಗುರುತಿನ ಜೊತೆ ಸೇರಿ ಮುಖ ಇನ್ನೆಷ್ಟು ಭೀಕರವಾಗಿ ಕಾಣಬಹುದೆಂದು ಊಹಿಸಿಕೊಳ್ಳಬಹುದಿತ್ತು.

‘ದಾಳಿ ಇಕ್ಕದೇನ್ ತೊಂದ್ರೆ ಇಲ್ಲ, ಆದ್ರೆ ಈ ಬೆಂಗ್ಳೂರೈತಲ್ಲ, ಬೋ ವಿಚಿತ್ರ, ಒಂದ್ ಸರಿ ಬಂದಾಗ ಇದ್ದಂಗೆ ಇನ್ನೊಂದ್ ಸರಿ ಇರಲ್ಲ, ಓದ್ ಸರಿ ಪೋಲಿಸ್ ಸ್ಟೇಷನು ಇದ್ದಿದ್ ಜಾಗ್ದಲ್ಲಿ ಈಗ ಪೋಸ್ಟಾಪೀಸು ಆಗಿರುತ್ತೆ, ಹುಡ್ಕೊದ್ ಕಷ್ಟ ಸ್ವಾಮಿ’ ಎಂದು ಹೇಳಿ ಅಮಲೇರಿದ ಕಣ್ಣುಗಳಲ್ಲಿ ಅವಕ್ಕಾಗಿ ನಿಂತಿದ್ದ ಮೂವರನ್ನೂ ನೋಡಿದ ಆ ವ್ಯಕ್ತಿ.

ಮೂವರ ಮುಖದಲ್ಲೂ ಭಯ ಕುತೂಹಲಗಳು ವಿಸ್ಕಿಗೆ ನೀರು ಬೆರೆತಷ್ಟು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಭಯದಲ್ಲಿ ಮಾತು ಹೊರಬರದೆ ತುಟಿ ಅದುರುತ್ತಿದ್ದರೆ, ಕಣ್ಣಲ್ಲಿ ಕುತೂಹಲ ಮನೆ ಮಾಡಿತ್ತು. ಇದರ ಪರಿವೆಯೇ ಇಲ್ಲದಂತೆ ಆ ವ್ಯಕ್ತಿ ಟಾಯ್ಲೆಟ್ಟಿನಲ್ಲಿ ಸರಿಯಾಗಿ ಕಟ್ಟಿಕೊಳ್ಳದೇ ಉದುರುತ್ತಿದ್ದ ಪಂಚೆಯನ್ನು ಬಿಗಿದುಕೊಂಡು ಕಾಲು ಬೆರಳಿನಲ್ಲಿ ಬ್ಯಾಲನ್ಸ್ ಮಾಡಿ ಮೇಲಕ್ಕೆತ್ತಿ ಕಟ್ಟಿಕೊಂಡ. ಜೇಬಿನಿಂದ ಅರ್ಧ ಸೇದಿದ ಬೀಡಿಯೊಂದನ್ನು ಬಾಯಲ್ಲಿಟ್ಟು ಜೇಬೆಲ್ಲ ತಡಕಾಡಿ ಸಿಕ್ಕ ಪೊಟ್ಟಣದಲ್ಲಿದ್ದ ಕೊನೆಯ ಬೆಂಕಿ ಕಡ್ಡಿಯನ್ನು ಗೀಚತೊಡಗಿದ. ಕೈ ಒದ್ದೆಯಾಗಿದ್ದಕ್ಕೋ ಏನೋ ಕಡ್ಡಿ ಹತ್ತದೇ ಇರಲು ಮೂವರೂ ಕಡ್ಡಿಯನ್ನೇ ನೋಡತೊಡಗಿದರು. ಇದ್ದಕ್ಕಿದ್ದಂತೆ ರಪ್ಪನೆ ಬೆಂಕಿ ಕಿಡಿ ಹೊತ್ತಿಕೊಳ್ಳಲು ನಿಧಾನವಾಗಿ ಬೀಡಿ ಹಚ್ಚಿದ ವ್ಯಕ್ತಿ ನಡುಗುತ್ತಿದ್ದ ಕೈಯಲ್ಲಿ ಪೊರಕೆಯನ್ನು ಹಿಡಿದುಕೊಂಡಿದ್ದ ಸೀನನನ್ನು ನೋಡಿ ಒಮ್ಮೆ ನಕ್ಕು ಹೊಗೆ ಬಿಟ್ಟ.

‘ಮಿಕ್ಸಿಂಗಲ್ಲಿ ಏನೋ ಎಡವಟ್ಟಾಗೈತೆ, ಅದಕ್ಕೆ ಎರಡಕ್ ಹೋದಾಗ್ಯಾಕೋ ಜೊಂಪ್ ಹತ್ತದಂಗಾಗೈತೆ ಕಣ್ರಪ್ಪ. ನೀವೇನೋ ಕ್ಲೀನು ಮಾಡ್ಕೊತಿದ್ರೇನೋ ಮಾಡ್ಕಳಿ, ನಿಮಗ್ಯಾಕ್ ತೊಂದ್ರೆ’ ಎಂದು ಮೂವರಿಗೂ ಹೇಳಿ ನಾರಾಯಣನ ಕೈಯಲ್ಲಿದ್ದ ಕವರನ್ನು ಕಿತ್ತುಕೊಂಡ ಆ ವ್ಯಕ್ತಿ ಅನಾಮತ್ತಾಗಿ ಕೆಳಗೆ ಬಿದ್ದಿದ್ದ ಕೈಯನ್ನು ಚಿಕ್ಕ ಮಕ್ಕಳು ಆಟದ ಸಾಮಾನು ಎತ್ತಿಕೊಳ್ಳುವಂತೆ ಎತ್ತಿ ಕವರಿಗೆ ಹಾಕಿಕೊಂಡು ಟೇಬಲ್ಲಿನ ಮೇಲೆ ಇಟ್ಟಿದ್ದ ಕಬಾಬನ್ನು ಅದರೊಳಗೆ ತುಂಬಿಕೊಂಡು ಗಂಟು ಕಟ್ಟಿದ. ಆ ಕೋಳಿಯ ಮಸಾಲೆ ಬೆರೆತ ಮಾಂಸದ ತುಂಡುಗಳು ರಕ್ತ ಸೋರುತ್ತಿದ್ದ ಮನುಷ್ಯನ ಹಸಿ ಮಾಂಸದ ಜೊತೆಗೆ ಬೆರತ ಪರಿಯನ್ನು ಕಂಡು ಅಡುಗೆ ಮನೆಯ ಬಾಗಿಲಿನಲ್ಲಿದ್ದ ನಾರಾಯಣ ಮುಖ ಕಿವುಚಿದ.

ಹೊರಡಲು ಬಾಗಿಲ ಕಡೆಗೆ ತಿರುಗಿದ ವ್ಯಕ್ತಿ ಅದಕ್ಕೂ ಮೊದಲು ಅಷ್ಟು ಹೊತ್ತಿನಿಂದ ಏನೂ ನಿಂತು ತನ್ನನ್ನೇ ನೋಡುತ್ತಿದ್ದ ಆ ಮೂವರಿಗೂ ತನ್ನಿಂದ ತಡವಾಗಿದ್ದಕ್ಕೆ ಕಾರಣ ನೀಡಬೇಕೆನ್ನಿಸಿತೇನೋ, ಬಾಯಲ್ಲಿದ್ದ ಮೋಟು ಬೀಡಿಯನ್ನು ಎರಡು ಬಾರಿ ಧೀರ್ಘವಾಗಿ ಎಳೆದು ನೆಲಕ್ಕೆಸೆದು ಚೂರು ತೊದಲದೇ ಮಾತನಾಡತೊಡಗಿದ.

‘ನಾನ್ ಕತ್ಲಾಗೋ ಒತ್ಗೆ ಕೆಲ್ಸ ಮುಗ್ಸಿ ಊರ್ ಸೇರ್ಕಳನಾ ಅಂತಾನೇ ಬಂದುದ್ದು, ಆ ತಿರ್ಭೋಕಿ ಟೈಲರ್ದು ಅಂಗಡಿ ಉಡ್ಕೋ ಒತ್ಗೆ ಸಾಕ್ ಸಾಕಾಗೋಯ್ತು. ನಮ್ ಮಗಾ ಇಲ್ಲೇ ಈ ಬೆಂಗ್ಳೂರ್ನಾಗೆ ನರ್ಸಿಂಗ್ ಮಾಡ್ತೈತೆ. ಆಸ್ಪೆಟ್ಲಾಗೆ ಏನೋ ಫಂಕ್ಷನ್ನು, ಬ್ಲೌಜು ಒಲ್ಸನಾ ಅಂತ ಆವಯ್ಯಂತಾಕೆ ಓದ್ರೆ, ಅಳ್ತೆ ತಗತೀನಿ ಅಂತ ನಮ್ ಮಗೀದು ಬೆನ್ ಸವರ್ತಾನಂತೆ ಹಲಾಲ್ಕೋರ್’, ಆ ಕೊಳ್ ಸುತ್ತಾ ಇದ್ದಿದ್ದ್ ಟೇಪಲ್ಲೇ ನೇಣಾಕ್ಬುಡ್ತಿದ್ದೆ ಸೂಳೆಮಗನ್ನಾ. ಫುಲ್ ಮಡ್ರು ಬೇಡ, ಅವನಗೂ ಎಂಡ್ರು ಮಕ್ಳಿರ್ತವೆ, ಆಫು ಸಾಕು ಅಂತ ನಮ್ ಹೆಂಗಸ್ರು ಒತ್ತಿ ಒತ್ತಿ ಯೋಳ್ ಕಳ್ಸಿದ್ರು. ಅದಕ್ಕೆ ಬುಟ್ಬಂದೆ. ಈಗ ಕೈಯೂ ತಕ್ಕಂಡೋಗ್ಲಿಲ್ಲಾ ಅಂದ್ರೆ ನಾಕೂರ್ನಾಗೆ ಈ ಪಾಪಣ್ನ ಮರ್ವಾದೇ ಏನಾಗ್ಬೇಡಾ. ಉಣ್ಣೋ ಕೈ ತೆಗದ್ರೆ ಬಡ್ಡಿ ಮಗ ಚಮಚದಲ್ಲಿ ತಿಂತಾನೆ, ಈಗ ತೊಳ್ಕೊಳೋ ಕೈ ತೆಗದಿದಿನಲ್ಲ ಚಮಚ ತಕಂಡು ತಿಕ ತೊಳ್ಕಳ್ಳಿ ನೋಡನಾ’

ನಿಧಾನವಾಗಿ ಸೋನೆ ಮಳೆಯಂತೆ ಶುರುವಾದ ಮಾತುಗಳು ಕೊನೆಗೆ ಕೊನೆಗೆ ಸಿಡಿಲಿನಂತೆ ಆರ್ಭಟಿಸಿದ್ದವು. ಕಡೆಗೆ ಮಳೆ ನಿಂತ ಮೇಲೆ ಉಳಿವ ಮೌನದಂತಹದೇ ಒಂದು ಆ ಬಾರಿನಲ್ಲಿ ಉಳಿದುಕೊಂಡಿತ್ತು. ಆದರೆ ತೊಟ್ಟಿಕ್ಕುತಿದ್ದದ್ದು ಮಾತ್ರ ಮಳೆಹನಿಯಲ್ಲ. ಕವರಿನಲ್ಲಿದ್ದ ರಕ್ತ.

ಹೇಳಿದ್ದೆಲ್ಲವನ್ನು ಮುಗಿಸಿದ ಪಾಪಣ್ಣ ‘ನಾನಿನ್ ಬತ್ತಿನ್ರಪ್ಪ, ಲಾರಿ ಗೀರಿ ಹತ್ಕಂಡು ಒತ್ತಾರೆಗೆ ಊರ್ ಸೇರ್ಕಬೇಕು’ ಎಂದು ಕೈಮುಗಿದು ಎದ್ದು ಬಾಗಿಲ ಕಡೆಗೆ ನೆಡೆಯತೊಡಗಿದ.

(ರಕ್ತ ಮುಂದೆ ಹರಿಯುವುದು)



No comments:

Post a Comment