Sunday, June 10, 2018

ಡೈರೀಸ್ ಆಫ್ ದಾಳಿ ಪಾಪಣ್ಣ - ೩

 ಅಧ್ಯಾಯ 3 - ಪಾಪಣ್ಣನ ಪ್ರಿಸನ್ ಬ್ರೇಕ್


ಹಿಂದಿನ ಭಾಗದಲ್ಲಿ : ಮೊದಲ ಹೆಂಡತಿಯನ್ನು ಕಳೆದುಕೊಂಡ ದುಃಖದಿಂದ ಹೊರಬರಲಾರದೇ  ಬದುಕುತ್ತಿದ್ದ ಪಾಪಣ್ಣನನಿಗೆ ಆತನ ಕುಡಿ ತನ್ನ ಒಡಲಿನಲ್ಲಿ ಬೆಳೆಯುತ್ತಿರುವುದಾಗಿ ಹೇಳಿದ ಮಣಿಕರ್ಣಿಕಾ ಅಲ್ಲಿ ನಿಲ್ಲದೇ ಹೊರಟು ಹೋಗುತ್ತಾಳೆ.


ಮಣಿಕರ್ಣಿಕಾ ಹೋದ ದಿಕ್ಕಿನಲ್ಲೇ ನೋಡುತ್ತಾ ಸುಮಾರು ಹೊತ್ತಿನವರೆಗೆ ನಿಂತಲ್ಲಿಯೇ ನಿಂತಿದ್ದ ಪಾಪಣ್ಣನ ಕೈಯಲ್ಲಿದ್ದ ಪೈಪು ಹೂವಿನ ಕುಂಡಗಳಲ್ಲಿದ್ದ ಗಿಡಗಳ ಮೇಲೆ ನೀರು ಸುರಿಯುತ್ತಲೇ ಇತ್ತು. ಕಾಲಿನ ಬುಡವೆಲ್ಲಾ ತೇವವಾದಾಗಲೇ ಪಾಪಣ್ಣನಿಗೆ ಎಚ್ಚರವಾದದ್ದು. ಓಡಿ ಹೋಗಿ ಕೊಳಾಯಿಯನ್ನು ನಿಲ್ಲಿಸಿ ನೀರೆಷ್ಟು ಪೋಲಾಯಿತೋ ನೋಡಲು ತೊಟ್ಟಿಯಲ್ಲಿ ಇಣುಕಿದ. ತೊಟ್ಟಿಯಲ್ಲಿನ್ನೂ ಅರ್ಧದಷ್ಟು ನೀರಿತ್ತು. ಆ ಸಂಜೆಯ ಬೆಳಕಿನಲ್ಲೂ ನೀರಿನೊಳಗೆ ಆತನ ಪ್ರತಿಬಿಂಬ ಸ್ಪಷ್ಟವಾಗಿ ಕಂಡಿತು. ಕಳೆದ ಆರು ತಿಂಗಳಿನಲ್ಲಿ ಆತನಿಗೆ ತನ್ನ ಮುಖವನ್ನು ನೋಡಿದ್ದೇ ನೆನಪಿರಲಿಲ್ಲ. ಮುಖದ ಮೇಲೆಲ್ಲ ಮನಸ್ಸೋ ಇಚ್ಛೆ ಬೆಳೆದ ಮೀಸೆ ಗಡ್ಡಗಳಲ್ಲಿ ಅವನಿಗೆ ಅವನ ಗುರುತೇ ಹತ್ತಲಿಲ್ಲ. ದಿಟ್ಟಿಸಿ ನೋಡುತ್ತಾ ಗಿರಿಜಾಳನ್ನು ನೆನಪಿಸಿಕೊಂಡ, ಇಲ್ಲ, ಅವಳ ಮುಖವೂ ಸ್ಪಷ್ಟವಾಗಿ ನೆನಪಾಗಲಿಲ್ಲ. ಇನ್ನು ಆ ಎರಡು ದಿನದ ಆ ಮಗು? ಉಹ್ಹೂ, ಅದರ ಮುಖವೂ ನೆನಪಿಗೆ ಬರುತ್ತಿಲ್ಲ. ಮತ್ತೆ ಮತ್ತೆ ನೆನಪಿಸಿಕೊಳ್ಳಲು ಪ್ರಯತ್ನಿಸಿದ, ಯಾವ ಪ್ರಯೋಜನವೂ ಆಗಲಿಲ್ಲ. ತಾನಷ್ಟು ಪ್ರೀತಿಸುತ್ತಿದ್ದ ಮಡದಿಯನ್ನು ಇಷ್ಟು ಬೇಗ ಮರೆತೆನೇ ಎಂದು ಆಶ್ಚರ್ಯವಾಯಿತು. ಬಹುಶಃ ನಾನವಳ ನೆನಪಿನಲ್ಲಿ ಕೊರಗಬಾರದೆಂದು ಅವಳೇ ತನ್ನ ನೆನಪಿನಿಂದ ಹೊರಟು ಹೋಗಿರಬೇಕೆಂದು ಸಮಾಧಾನ ಮಾಡಿಕೊಂಡ. ಆದರೆ ಅವಳ ನೆನಪೇ ಇಲ್ಲದ ಮೇಲೆ ಯಾರಿಗಾಗಿ ಇಷ್ಟು ದಿನ ಹೀಗೆ ಎಲ್ಲಾ ಕಳೆದುಕೊಂಡವನಂತೆ ಬದುಕುತಿದ್ದೆ ಎಂದು ಯೋಚನೆಯಾಯಿತು.

ಬಹಳ ದಿನಗಳ ನಂತರ ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟ ಕೂಡಲೇ ಕಣ್ಣಿಗೆ ನಿದ್ದೆ ಹತ್ತಿತು. ಕನಸಿನಲ್ಲಿ ಲಾರೆನ್ಸ್ ಗಾರ್ಡನ್ನಿನ ತೊಟ್ಟಿಯೊಳಗಿನಿಂದ ತಲೆಗೆ ಬ್ಯಾಂಡೇಜು ಕಟ್ಟಿಕೊಂಡು ಎದ್ದು ಬಂದ ತನ್ನ ಹಳೆಯ ಅಂಗಡಿಯ ಮಾಲಿಕ ಬಸವಪ್ಪ ಶೆಟ್ಟಿ ಹೂಗಿಡಗಳನೆಲ್ಲಾ ಕಟಾವು ಮಾಡಿಸಿದಂತೆ. ಅವನು ಹೋದ ಮೇಲೆ ಇವನೂ ಮಣಿಕರ್ಣಿಕಾ ಸೇರಿ ಆ ಜಾಗವನ್ನೆಲ್ಲಾ ಅಗೆದು ಕೆಳಗೆ ಮಲಗಿದ್ದ ಗಿರಿಜಾಳನ್ನು ಮೇಲಕ್ಕೆತ್ತಿ ತಂದಂತೆ, ಅವಳು ಎದ್ದಾಗ ಮಣಿಕರ್ಣಿಕಾ ಆಕೆಗೆ ಹೂ ಕಟ್ಟಿ ಮುಡಿಸಿ ಅವಳ ಕಂಕುಳಲ್ಲಿದ್ದ ಮಗುವಿಗೆ ಹಾಲುಣಿಸಿದಂತೆ ಹೀಗೆ ಚಿತ್ರ ವಿಚಿತ್ರ ಕನಸುಗಳು ಬಿದ್ದವು. ಆದರೆ ಬೆಳಗೆದ್ದಾಗ ಮತ್ತೆ ಯಾವ ನೆನಪೂ ಇರಲಿಲ್ಲ. ಆದರೆ ಆತನ ಒಳಗೇನೋ ಬದಲಾವಣೆಯಾಗಿತ್ತು. ಮಣಿಕರ್ಣಿಕಾಳ ಭರವಸೆಯಿಂದಲೋ, ತೊಟ್ಟಿಯ ಬಳಿ ಆದ ಜ್ಞಾನೋದಯದಿಂದಲೋ ಅಥವಾ ಅರ್ಥವಿಲ್ಲದ ಆ ಕನಸಿನಿಂದಲೋ, ಪಾಪಣ್ಣ ಮತ್ತೆ ಮೊದಲಿನಂತಾದ. ನಿಧಾನವಾಗಿ ಚೇತರಿಸಿಕೊಳ್ಳತೊಡಗಿದ.

ಅದೊಂದು ದಿನ ಪಾಪಣ್ಣ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದಾಗ, ಪೇದೆಯೊಬ್ಬ ಬಂದು ಆತನನ್ನು ಕಾಣಲು ಯಾರೋ ಬಂದಿರುವುದಾಗಿ ತಿಳಿಸಿದ. ದಿನಗಳ ಲೆಕ್ಕವೇ ಮರೆತುಹೋಗಿದ್ದ ಪಾಪಣ್ಣನಿಗೆ ಅಂದು ಭಾನುವಾರವೆಂದು ನೆನಪಾಯಿತು. ಗಿರಿಜಾ ಸತ್ತಾಗಿನಿಂದ ಆತನನ್ನು ನೋಡಲು ಬಂದದ್ದು ಜೈಲಿನ ಡಾಕ್ಟರು ಒಬ್ಬರೇ. ಈಗ್ಯಾರು ಬಂದಿರಬಹುದು ಎಂದು ಯೋಚಿಸಿ ಬೇಗ ಬೇಗ ಸ್ನಾನ ಮುಗಿಸಿ ವಿಸಿಟರ್ಸ್ ಕೊಠಡಿಗೆ ಹೋದ. ಆತನನ್ನು ಕರೆದುಕೊಂಡು ಬಂದ ಪೇದೆ ಅಲ್ಲಿ ನಿಂತಿದ್ದ ಹುಡುಗನೊಬ್ಬನನ್ನು ತೋರಿಸಿ ಹೊರಟ. ಸುಮಾರು ಹತ್ತೊಂಬತ್ತು ಇಪ್ಪತ್ತು ವರುಷದ ಹುಡುಗ. ಕೈಯಲ್ಲಿ ಬುಟ್ಟಿ ಹಿಡಿದು ಅತ್ತಿತ್ತ ನೋಡುತ್ತಾ ನಿಂತಿದ್ದ. ಪಾಪಣ್ಣ ಹೋಗಿ ಅವನ ಎದುರು ನಿಂತ. ಹುಡುಗ ಮುಜುಗರದಿಂದಲೇ ಮುಗುಳ್ನಕ್ಕ.

‘ಇ.. ಇದು.. ಪಾಪಣ್ಣ ಅಂದ್ರೇ.. ನೀ…ವೇನಾ?’ ಹುಡುಗ ತೊದಲುತ್ತಾ ಕೇಳಿದ.

ಪಾಪಣ್ಣ ಹೌದೆಂಬಂತೆ ತಲೆಯಾಡಿಸಿದ. ಆತನನ್ನು ಮೊದಲೆಲ್ಲಾದರೂ ನೋಡಿದ್ದೇನೆಯೇ ಎಂದು ನೆನಪಿಸಿಕೊಂಡ. ಇಲ್ಲ. ಆತನ ಗುರುತು ಸಿಗಲಿಲ್ಲ.

‘ಮಮಮಣಿಯಕ್ಕ.. ಕಳ್ಸಿದಾಳೆ. ಇದನ್ನ ಕೊಕೊಕೊಡಕ್ಕೆ.. ಬಿಬಿಬಿರಿಯಾನಿ’ ಹುಡುಗ ಕೈಯಲ್ಲಿದ್ದ ಬುಟ್ಟಿಯನ್ನು ಮೇಲೆತ್ತಿ ತೋರಿಸುತ್ತಾ ಹೇಳಿದ.

ಪಾಪಣ್ಣನಿಗೆ ಆ ತೊದಲು ಮಾತಿನಲ್ಲೂ ಮಣಿಯ ಹೆಸರನ್ನು ಕೇಳಿ ಮೈ ಜುಂ ಎಂದಿತು. ಆ ಹುಡುಗನ ಹೆಸರು ಸರ್ವೇಶ, ಮಣಿಕರ್ಣಿಕಾಳ ಮನೆಯಲ್ಲಿ ಕೆಲಸಕ್ಕಿದ್ದ ಹುಡುಗನಂತೆ. ಅವಳು ತಾನು ಜೈಲಿಗೆ ಬರಲು ಸಾಧ್ಯವಾಗದೇ ಇದ್ದಿದ್ದರಿಂದ ಹುಡುಗನನ್ನು ಕಳುಹಿಸಿದ್ದಳು. ಜೊತೆಯಲ್ಲಿ ತಾನೇ ಕೈಯಾರೆ ಮಾಡಿದ್ದ ಬಿರಿಯಾನಿಯನ್ನು ಕಳುಹಿಸಿದ್ದಳು. ಪಾಪಣ್ಣ ಬಿರಿಯಾನಿ ಸವಿಯುತ್ತಾ ಆ ಹುಡುಗನ ಮೇಲೆ ಮಣಿಕರ್ಣಿಕಾಳ ಕುರಿತಾದ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ. ಆತ ತೊದಲುತ್ತಲೇ ಸಾಧ್ಯವಾದಷ್ಟೂ ಉತ್ತರಿಸಿದ. ಅವನು ಹೋದ ಮೇಲೆ ಪಾಪಣ್ಣ ಇಡೀ ದಿನ ತನ್ನ ಕೈಯಲ್ಲಿದ್ದ ಆ ಬಿರಿಯಾನಿಯ ವಾಸನೆಯನ್ನೇ ಆಸ್ವಾದಿಸಿದ.

ಮರುದಿನ ಲೈಬ್ರರಿಯಲ್ಲಿ ಕ್ಯಾಲೆಂಡರ್ ಬದಲಾಯಿಸುತ್ತಿದ್ದಾಗ ತನ್ನ ಬಿಡುಗಡೆಗೆ ಎಷ್ಟು ತಿಂಗಳಿದೆ ಎಂದು ಯೊಚಿಸಿದ. ನೆನಪಾಗಲಿಲ್ಲ. ತನಗೆ ಶಿಕ್ಷೆಯಾದಾಗ ಗಿರಿಜಾಳಿಗೆ ಮೂರು ತಿಂಗಳು, ಈಗ ಮಣಿಕರ್ಣಿಕಾಗೆ ಆರು. ಅವಳಿಗೆ ಹೆರಿಗೆಯಾದಾಗ ಇವಳ ಬಸಿರು ಕಟ್ಟಿದ್ದು. ಅಲ್ಲಿಗೆ ತನಗಿನ್ನು ಒಂದು ವರ್ಷದ ಶಿಕ್ಷೆಯಷ್ಟೇ ಮುಗಿದದ್ದು ಎಂದು ಅರಿವಾದಾಗ ಪಾಪಣ್ಣನಿಗೆ ತಳಮಳವಾಯಿತು. ಅಲ್ಲಿಯವರೆಗೆ ತಾನು ಮಣಿಯನ್ನು ಕಾಣಲಾಗದೆಂಬ ಬೇಸರವಾದರೆ. ಅದಕ್ಕಿಂತ ಹೆಚ್ಚಾಗಿ ಹೆರಿಗೆ ಸಮಯದಲ್ಲಿ ಮೊದಲ ಹೆಂಡತಿಯಿಂದ ದೂರವಿದ್ದು ಆದ ದುರಂತಗಳು ಇಲ್ಲೂ ಆಗಿಹೋದರೆ ಎಂಬ ಭಯ ಶುರುವಾಯಿತು. ಒಂದು ಹಂತದಲ್ಲಿ ಜೀವನವೇ ಬೇಡವೆಂದು ನಿರ್ಧರಿಸಿದ್ದವನಿಗೆ ಮತ್ತೇಕೋ ಸರಳುಗಳಾಚೆಗಿನ ಬದುಕಿನ ಬಯಕೆ ಹೆಚ್ಚಾಗತೊಡಗಿತು.  

ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿದ

ದುರ್ಗದ ಜೈಲು ಬ್ರಿಟೀಷರ ಕಾಲದ್ದು. ಸುಮಾರು ವರುಷ ಹಳೆಯದು. ಹಳೆಯ ಶಾಲೆಯೊಂದರಲ್ಲೆ ಜೈಲು ಮಾಡಿ ಸುತ್ತಲೂ ಇದ್ದ ಗೋಡೆಗಳ ಎತ್ತರ ಹೆಚ್ಚಿಸಿದ್ದರು. ಚೌಕಾಕಾರದ ಕಟ್ಟಡದ ಮೂರು ಬದಿಯಲ್ಲಿ ಜೈಲು ಕೋಣೆಗಳಿದ್ದವು ಪ್ರತಿ ಬದಿಯಲ್ಲು ಆರು ಸೆಲ್ಲುಗಳು. ಹಳೆಯ ಜೈಲಾದ್ದರಿಂದ ಗೋಡೆಗಳು ಶಿಥಿಲಗೊಂಡಿದ್ದರೆ, ಕಬ್ಬಿಣದ ಕಂಬಿಗಳು ತುಕ್ಕು ಹಿಡಿದಿದ್ದವು. ಹೊಸ ಜಾಗದಲ್ಲಿ ಜೈಲು ಕಟ್ಟಲು ಅನುಮತಿ ದೊರೆತಿದ್ದರಿಂದ ಯಾರೂ ಇದರ ರಿಪೇರಿಗೆ ಕೈ ಹಾಕಿರಲಿಲ್ಲ. ಹಗಲಿನಲ್ಲಿ ಸೆಲ್ಲಿನ ಹೊರಗೆ ಓಡಾಡಿಕೊಂಡಿರಲು ಅನುಮತಿಯಿದ್ದರೂ, ಆ ಸಮಯದಲ್ಲಿ ಮುಂದಿನ ಭಾಗದಲ್ಲಿ ಕಾವಲು ಪೋಲೀಸರು ಕಾವಲಿದ್ದರೆ, ಹಿಂದೆ ಸದಾ ಜನರಿಂದ ಗಿಜಿಗುಡುತ್ತಿದ್ದ ಸಂತೆ ಮೈದಾನವಿತ್ತು. ಸಂಜೆ ಸಂತೆ ಮುಗಿಯುವ ವೇಳೆಗೆ ಖೈದಿಗಳು ಮತ್ತೆ ಸೆಲ್ಲಿನೊಳಗೆ ಸೇರಿಕೊಳ್ಳಬೇಕಿತ್ತು. ಹೀಗೆ ಸಾಧ್ಯಾಸಾಧ್ಯತೆಗಳನ್ನು ಯೋಚಿಸಿದ ಪಾಪಣ್ಣ ಕಡೆಗೆ ನಡುರಾತ್ರಿಯಲ್ಲಿ ಸರಳುಗಳನ್ನು ಕತ್ತರಿಸಿ ಹೊರಗೆ ಬಂದು ಹಿಂದಿನಿಂದ ಗೋಡೆ ಹಾರಿ ತಪ್ಪಿಸಿಕೊಳ್ಳುವುದೆಂದು ನಿರ್ಧರಿಸಿದ.

ತಪ್ಪಿಸಿಕೊಳ್ಳಲು ಸಕಲ ಸಿದ್ಧತೆಗಳನ್ನು ನೆಡೆಯತೊಡಗಿತು. ಮೊದಲು ತೋಟದಿಂದ ಪೈಪು ಕತ್ತರಿಸುವವ ಬ್ಲೇಡನ್ನು ತಂದು ತನ್ನ ಚಾಪೆಯ ಕೆಳಗೆ ಸೇರಿಸಿದ. ಆದರೆ ತುಕ್ಕು ಹಿಡಿದ ಕಂಬಿಗಳು ಕತ್ತರಿಸುವಾಗ ಸದ್ದು ಮಾಡುವ ಸಾಧ್ಯತೆಯಿತ್ತು. ಕೆಲವು ದಿನಗಳ ಹಿಂದೆಯಷ್ಟೆ ರಾತ್ರಿಯೆಲ್ಲಾ ಡಿಪಾರ್ಟಮೆಂಟ್ ಪರೀಕ್ಷೆ ಪಾಸು ಮಾಡಲು ಓದುತ್ತಿದ್ದ ಜಿತೇಂದ್ರ, ಲೈಬ್ರರಿಯ ಕಬ್ಬಿಣದ ಕಿಟಕಿ ಬಾಗಿಲುಗಳು ಗಾಳಿಗೆ ಅಲುಗಿ ಕಿರ ಕಿರ ಸದ್ದು ಮಾಡುತ್ತವೆಂದು ಅವುಗಳಿಗೆ ಗ್ರೀಸು ಹಚ್ಚಿದ್ದ. ಮಿಕ್ಕಿದ್ದ ಗ್ರೀಸನ್ನು ಪಾಪಣ್ಣನ ಕೈಯಲ್ಲೆ ಕಳುಹಿಸಿ ಟಾಯ್ಲೆಟ್ಟಿನ ಹಿಂದೆ ಇರಿಸಿದ್ದ. ಪಾಪಣ್ಣ ಆ ರಾತ್ರಿ ಊಟವಾದ ಮೇಲೆ ಯಾರಿಗೂ ಕಾಣದಂತೆ ತನ್ನ ಲೋಟಕ್ಕೆ ಗ್ರೀಸು ತುಂಬಿಕೊಂಡು ತಂದಿಟ್ಟುಕೊಂಡು ತಪ್ಪಿಸಿಕೊಳ್ಳುವ ದಿನಕ್ಕಾಗಿ ಕಾಯತೊಡಗಿದ.

ಎರಡು ವಾರದ ನಂತರ ಮತ್ತೆ ಜಿತೇಂದ್ರನ ಡ್ಯೂಟಿ ಬಂದಿತು. ಬೇರೆ ಗಾರ್ಡುಗಳಾದರೆ ರಾತ್ರಿ ಎಲ್ಲೆಲ್ಲಿ ತಿರುಗುವರೆಂದು ಊಹಿಸಲು ಸಾಧ್ಯವಿರಲಿಲ್ಲ. ಆದರೆ ಜೀತೇಂದ್ರ ಮಾತ್ರ ಲೈಬ್ರರಿ ಸೇರಿದರೆ ಹೊರಗೆ ಬರುತ್ತಿದ್ದದ್ದು ಅಪರೂಪಕ್ಕೆ. ಆತನ ಡ್ಯೂಟಿ ಪ್ರಾರಂಭವಾಗಿ ಮೂರನೇ ದಿನ ರಾತ್ರಿ ಲೈಬ್ರರಿಯ ಲೈಟು ಹೊತ್ತುವುದನ್ನೇ ಕಾಯುತ್ತಿದ್ದ ಪಾಪಣ್ಣ ಹನ್ನೆರಡು ಗಂಟೆ ಬಡಿದ ಕೂಡಲೇ ಕೆಲಸ ಪ್ರಾರಂಭಿಸಿದ. ಮೊದಲು ಕೆಳಭಾಗದಲ್ಲಿದ್ದ ಮೂರು ಸರಳುಗಳಿಗೆ ಗ್ರೀಸು ಹಚ್ಚಿದ. ನಂತರ ಚಾಪೆಯ ಕೆಳಗಿದ್ದ ಬ್ಲೇಡು ಹೊರಗೆ ತೆಗೆದು ಗ್ರೀಸು ಹಚ್ಚಿದ ಜಾಗದಲ್ಲಿ ನಿಧಾನವಾಗಿ ಕತ್ತರಿಸತೊಡಗಿದ. ಪೈಪು ಕತ್ತರಿಸುವ ಬ್ಲೇಡು ತುಂಬಾ ತೆಳ್ಳಗಿತ್ತು. ಆದರೆ ಆ ತುಕ್ಕು ಹಿಡಿದ ಕಂಬಿಗಳನ್ನು ಕತ್ತರಿಸಲು ಅಷ್ಟು ಸಾಕಿತ್ತು. ಕೆಲಸ ಸ್ವಲ್ಪ ನಿಧಾನವಾದರೂ ಚೂರು ಶಬ್ದ ಬರದೇ ಎರಡು ಸರಳುಗಳನ್ನು ಕತ್ತರಿಸಿದ್ದಾಯ್ತು. ಮೂರನೇ ಸರಳನ್ನು ಅಷ್ಟೇ ಜಾಗರೂಕತೆಯಿಂದ ಕತ್ತರಿಸತೊಡಗಿದ ಪಾಪಣ್ಣ ಲೈಬ್ರರಿಯ ದೀಪ ಆರಿದ್ದನ್ನು ಗಮನಿಸಲೇ ಇಲ್ಲ. ಇದ್ದಕ್ಕಿದ್ದಂತೆ ಕತ್ತರಿಸುತ್ತಿದ್ದ ಬ್ಲೇಡಿನ ಮೇಲೆಯೇ ನೇರವಾಗಿ ಟಾರ್ಚಿನ ಬೆಳಕೊಂದು ಬಿದ್ದಾಗ ಬೆಚ್ಚಿದ ಪಾಪಣ್ಣ ಬ್ಲೇಡು ಕೈಬಿಟ್ಟು ರಪ್ಪನೆ ಗೋಡೆಯ ಹಿಂದೆ ಸರಿದು ಕುಳಿತುಕೊಂಡ.

‘ಪಾಪಣ್ಣ., ಏಯ್ ಪಾಪಣ್ಣ..!’ ಜೀತೇಂದ್ರ ಜೋರಾಗಿ ಕಿರುಚಿದ. ಲೈಬ್ರರಿಯ ಕಡೆಯಿಂದ ಬಂದ ಟಾರ್ಚಿನ ಬೆಳಕು ಆಚೀಚೆ ತಿರುಗಿ ಆರಿತು. ಪಾಪಣ್ಣ ಚೂರು ಅಲ್ಲಾಡದೇ ಕುಳಿತಲ್ಲಿಯೇ ಕುಳಿತಿದ್ದ. ಬೆಳಕು ಆರಿದ್ದೇ ಬ್ಲೇಡು ಕೆಳಗೆ ಬಿಟ್ಟು ಅದರ ಮೇಲೆ ತೊಡೆ ಹಾಕಿ ಕುಳಿತುಕೊಂಡ. ಜೀತೇಂದ್ರ ತಾನು ಕಂಬಿ ಕತ್ತರಿಸುತ್ತಿದ್ದನ್ನು ನೋಡಿಬಿಟ್ಟಿದ್ದರೆ? ಆತ ತನ್ನ ಸೆಲ್ಲಿನೆಡೆಗೆ ಬರುತ್ತಿರುವುದು ಅರಿವಾಗಿ ಎದೆ ಜೋರಾಗಿ ಬಡಿದುಕೊಳ್ಳತೊಡಗಿತು. ತನಗೆ ಆತನ ಹೆಜ್ಜೆ ಸಪ್ಪಳ ಕೇಳುತ್ತಿರುವಷ್ಟೆ ಸ್ಪಷ್ಟವಾಗಿ ಆತನಿಗೆ ನನ್ನ ಎದೆ ಬಡಿತ ಕೇಳುತ್ತಿರಬಹುದು ಎನ್ನಿಸಿತು ಪಾಪಣ್ಣನಿಗೆ. ಬಾಗಿಲಲ್ಲಿ ನಿಂತು ಕಂಬಿಯೊಳಗಿಂದ ಇಣುಕಿದ ಜೀತೇಂದ್ರ ಒಳಗೆ ಬಿದ್ದ ನೆರಳನ್ನೆ ನೋಡುತ್ತಾ ಉಸಿರು ಬಿಗಿಹಿಡಿದು ಕೂತಿದ್ದ ಪಾಪಣ್ಣನ ಮುಖಕ್ಕೆ ಟಾರ್ಚು ಬಿಟ್ಟ. ಪಾಪಣ್ಣ ಬೆಚ್ಚಿದವನಂತೆ ನಟಿಸಿ ಹಿಂದಕ್ಕೆ ತಿರುಗಿದ.

‘ಯೋ ಪಾಪಣ್ಣ, ಎದ್ದಿದ್ಯಾ? ಕೂಗಿದ್ ಕಿವಿ ಕೇಳಲ್ವೇನ್ ನಿಂಗೆ? ’ ಜೀತೇಂದ್ರ ಟಾರ್ಚು ಆರಿಸಿ ಕೇಳಿದ.

‘ಯಾವಾಗ ಜೀತೇಂದ್ರಪ್ಪೋ, ಕೇಳಲೇ ಇಲ್ಲ’ ಎಷ್ಟು ಪ್ರಯತ್ನಿಸಿರದೂ ಮಾತು ತಡವರಿಸಿತು. ಮಾತುಗಳು ಹೊರಗೆ ಹೊರಡುತ್ತಲೇ ತೊಡೆಯ ಕೆಳಗಿದ್ದ ಬ್ಲೇಡು ತಣ್ಣಗೆ ಕೊರೆದು ಮೈಯೆಲ್ಲಾ ಚಳಿಯಾದಂತಾಯಿತು.

   ‘ನಿಂಗೆ ಗ್ಯಾನ ಎಲ್ಲಿರ್ತದೆ ಬಿಡು. ಏನಿಲ್ಲಾ, ಮೊನ್ನೆ ಒಂದಷ್ಟು ಹೊಸ ಬುಕ್ಸ್ ತರ್ಸಿದ್ನಲ್ಲಾ, ಎಲ್ ಜೋಡ್ಸಿದ್ಯಾ ಕೇಳಕ್  ಬಂದೆ’

      ಪಾಪಣ್ಣನ ಶ್ವಾಸದಿಂದ ಸಮಾಧಾನದ ನಿಟ್ಟುಸಿರೊಂದು ಹೊರಗೆ ಬಂದಿದ್ದು ಜೀತೇಂದ್ರನಿಗೆ ಆ ಕತ್ತಲೆಯಲ್ಲಿ ಕಾಣಲಿಲ್ಲ. ಪಾಪಣ್ಣ ಈಗ ಸ್ವಲ್ಪ ಜೋರಾಗಿಯೇ ಮಾತನಾಡಿದ. ‘ಅವನ್ನ ಜೋಡ್ಸಿಲ್ಲಪ್ಪೋ, ಆ ಮೂರನೇ ಲೈನಗೆ ಆ ಗಾಂಧೀ ಪೋಟೋತವನೇ ಮಡ್ಗಿದಿನಿ, ಬಂಡ್ಲುನೂ ಬಿಚ್ಚಿಲ್ಲ’  

‘ಹೌದಾ, ನೋಡ್ತಿನಿ ಬಿಡು. ಟೀ, ಗೀ ಏನಾರ ಕುಡಿತ್ಯಾ?’

      ‘ಟೀಯಾ? ಬ್ಯಾಡ, ನಿದ್ದೆ ಒಂಟೋಯ್ತದೆ’

‘ಈಗೇನ್ ಗೊರ್ಕೆ ಹೊಡ್ಕಂಡ್ ನಿದ್ದೆ ಮಾಡ್ತಿದಿಯಾ ಒಂಟೋಗಕ್ಕೆ, ಕಥೆ ಪಾಪಣ್ಣ ನೀನೊಬ್ಬ’

ಜೀತೇಂದ್ರ ಪಕ್ಕದಲ್ಲಿದ್ದ ಸೆಲ್ಲುಗಳೊಳಕ್ಕೆ ಟಾರ್ಚು ಬಿಡುತ್ತಾ ಲೈಬ್ರರಿಯ ಕಡೆಗೆ ನೆಡೆದು ಹೋಗಿ ಮತ್ತೆ ದೀಪ ಹೊತ್ತಿಸಿದ. ಪಾಪಣ್ಣನಿಗೆ ಹೋದ ಜೀವ ಬಂದಂತಾಯ್ತು. ತಾನು ಸಿಕ್ಕಿಬಿದ್ದಿದ್ದರೆ? ಅಲ್ಲಿಯವರೆಗೂ ಪಾಪಣ್ಣ ಅದರ ಬಗ್ಗೆ ಚಿಂತಿಸಿಯೇ ಇರಲಿಲ್ಲ. ಹೊರಗೆ ಹೋದ ಮೇಲೂ ತಾನು ಸಿಕ್ಕಿಬಿದ್ದರೆ ಏನು ಮಾಡುವುದೆಂಬ ಕಲ್ಪನೆಯೂ ಇರಲಿಲ್ಲ. ಆತನ ತಲೆಯ ತುಂಬಾ ಮಣಿಕರ್ಣಿಕಾಳನ್ನು ಕಾಣುವ ಯೋಚನೆಯೇ ತುಂಬಿಕೊಂಡಿತ್ತು. ಆದರೆ ಈಗೇಕೋ ಸಣ್ಣಗೆ ಭಯ ಶುರುವಾಯಿತು. ಪ್ಲಾನು ಮುಂದಕ್ಕೆ ಹಾಕೋಣಾವೇ ಎನ್ನಿಸಿತು. ಶಿಕ್ಷೆ ಮುಗಿಸಿ ಬಿಡುಗಡೆಗಾಗಿ ಕಾಯುವ ಯೋಚನೆಯೂ ಸುಳಿದು ಹೋಯ್ತು.

ಆದರೆ ಮತ್ತೆ ಮಣಿಕರ್ಣಿಕಾಳ ನೆನಪಾಯ್ತು, ಆದದ್ದಾಗಲಿ ಈಗ ಹಿಂದೇಟು ಹಾಕುವುದು ಬೇಡವೆಂದು ಮತ್ತೆ ಸರಳು ಕತ್ತರಿಸುವುದನ್ನು ಮುಂದುವರೆಸಿದ. ಮೊದಲೆರಡನ್ನು ಕತ್ತರಿಸಿದ ಅನುಭವದಿಂದ ಮೂರನೆಯದನ್ನು ಕತ್ತರಿಸಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಇನ್ನು ತಡಮಾಡದೇ, ಬ್ಲೇಡನ್ನು ಮತ್ತೆ ಚಾಪೆಯ ಕೆಳಗೆ ಸೇರಿಸಿ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಸರಳುಗಳನ್ನು ಬಗ್ಗಿಸಿದ. ನುಸುಳಿ  ಹೊರಬಂದಿದ್ದಾದ ಮೇಲೆ ಸರಳನ್ನು ಮತ್ತೆ ನೇರ ಮಾಡಲು ನೋಡಿದ. ಅವೇಕೋ ಮತ್ತೆ ಮೊದಲಿನಂತಾಗಲು ಒಪ್ಪದೇ ನಾಯಿ ಬಾಲದಂತೆ ಡೊಂಕಾಗಿಯೇ ನಿಂತಿದ್ದವು. ಪಾಪಣ್ಣ ಪ್ರಯತ್ನ ಬಿಟ್ಟು ಎದ್ದು ಕಂಬಗಳ ಮರೆಯಲ್ಲೇ ಓಡಿ ಜೈಲಿನ ಹಿಂಬದಿ ಸೇರಿದ.


ಜೈಲನ್ನು ಒಂದು ಸುತ್ತು ಹೊಡೆದು ಹಿಂದಿನ ಗೋಡೆಯ ಬಳಿಗೆ ಬಂದು ನಿಂತ. ಆಗಲೇ ಅವನಿಗೆ ಆತನ ತಪ್ಪಿನ ಅರಿವಾದದ್ದು. ವರುಷ ಪೂರ್ತಿ ಪ್ರತಿದಿನವೂ ಆ ಗೋಡೆಯನ್ನು ನೋಡಿದ್ದರೂ, ಕೆಲವೊಮ್ಮೆ ಅದಕ್ಕೇ ಒರಗಿ ಮಣಿಕರ್ಣಿಕಾಳ ಜೊತೆಗೆ ಮಾತನಾಡಿದ್ದರೂ, ಯಾರೂ ಇಲ್ಲದಿದ್ದಾಗ ಅದಕ್ಕೆ ಉಚ್ಚೆ ಹೋಯ್ದಿದ್ದರೂ ಎಂದೂ ಅದರ ಎತ್ತರವನ್ನು ಗಮನಿಸಿಯೇ ಇರಲಿಲ್ಲ ಸುಲಭವಾಗಿ ನೆಗೆದು ಕಂಬಿ ಹಿಡಿದು ಹಾರಿ ಹೊರಟುಬಿಡಬಹುದು ಎಂದುಕೊಂಡಿದ್ದ ಗೋಡೆ ಈಗ ಇದ್ದಕ್ಕಿದ್ದಂತೆ ದೊಡ್ಡದಾಗಿ ಬೆಳೆದು ನಿಂತಿದೆ ಎನ್ನಿಸಿತು.

ಗೋಡೆಯಲ್ಲಿ ಕಾಲಿಟ್ಟು ಹತ್ತಲು ಜಾಗವಿದೆಯೇ ಎಂದು ತಡಕಾಡಿದ. ಏನೂ ಕಾಣದೆ ನಿರಾಶನಾಗಿ ಕತ್ತಲಲಿ ನಿಂತು ಸುತ್ತಲೂ ನೋಡುತ್ತಿರುವಾಗ ಕಂಡಿತು ಲಾರೆನ್ಸ್ ಗಾರ್ಡನ್ನಿನಲ್ಲಿ ಗೋಡೆಗೆ ಸಮನಾಗಿ ಬೆಳೆದು ನಿಂತಿದ್ದ ಆ ನುಗ್ಗೆ ಮರ. ಒಮ್ಮೆ ಆತನ ಯೋಚನೆಗೆ ಅವನಿಗೆ ನಗು ಬಂದಿತು. ಆ ಮರ  ಭಾರವನ್ನು ತಡೆಯುವುದು ಸಾಧ್ಯವೇ ಇರಲಿಲ್ಲ. ಆದರೆ ಹೆಂಡತಿ ಸತ್ತ ಮೇಲೆ ಬಹಳ ಇಳಿದು ಹೋಗಿದ್ದಾನೆಂದು ಎಲ್ಲರೂ ಮಾತನಾಡುತ್ತಿದ್ದದು ನೆನಪಾಯ್ತು. ಅಲ್ಲಿಯವರೆಗೆ ಎಂದೂ ಆತನಿಗೆ ಹಾಗನ್ನಿಸದಿದ್ದರೂ ಇವತ್ತೇಕೋ ಅದು ನಿಜವಿರಬೇಕು ಎನ್ನಿಸಿತು. ತಾನು ಬಹಳ ಇಳಿದು ಹೋಗಿದ್ದೇನೆ, ಈ ನುಗ್ಗೇ ಮರವೂ ತನ್ನ ಭಾರವನ್ನು ತಡೆಯಬಲ್ಲದು ಎಂದು ಮನದಲ್ಲೇ ಹೇಳಿಕೊಂಡು ಸೀದಾ ನುಗ್ಗೆಮರದ ಬಳಿ ಬಂದು ನಿಂತನು.

ಸಿಂಹಾಸನವನ್ನೇರುವ ರಾಜ ಮೊದಲು ಅದನ್ನು ಮುಟ್ಟಿ ನಮಸ್ಕರಿಸುವಂತೆ ನುಗ್ಗೇ ಮರಕ್ಕೆ ನಮಸ್ಕಾರ ಮಾಡಿ ಆತನ ತೋಳಿನಷ್ಟೇ ತೆಳ್ಳಗಿದ್ದ ಕೊಂಬೆಗಳನ್ನು ಹಿಡಿದು ನಿಧಾನವಾಗಿ ಅದರ ನಡುವೆ ಬಲಗಾಲಿಟ್ಟು ಮೇಲಕ್ಕೇರಿದ. ಆತನ ಭಾರಕ್ಕೆ ಮರ ಸೀದಾ ಹಿಂದಕ್ಕೆ ಬಾಗಿತು. ಪಾಪಣ್ಣ ನಿಧಾನವಾಗಿ ಅದಕ್ಕಿಂತ ಚೂರು ಎತ್ತರದಲ್ಲಿದ್ದ ಕೊಂಬೆಗಳ ಕವಲಿನಲ್ಲಿ ಎಡಗಾಲಿಟ್ಟು ಬಾವಲಿಯಂತೆ ನೇತಾಡುತ್ತಾ ಅತ್ತಿತ್ತ ತೂಗುತ್ತಿದ್ದ ಮರವನ್ನು ಸಮವಾಗಿರಿಸಿ ಮೇಲೆ ನೋಡಿದ. ಗೋಡೆ ಇನ್ನೂ ಸ್ವಲ್ಪ ಎತ್ತರದಲ್ಲೇ ಇತ್ತು. ವಾಮನ ಭೂಮಿ ಆಕಾಶಗಳ ಮೇಲೆ ಎರಡೂ ಕಾಲಿಟ್ಟಂತೆ ಎರಡೂ ಕೊಂಬೆಗಳ ಮೇಲೆ ಕಾಲಿಟ್ಟು ಮೂರನೇ ಕಾಲಿಡಲು ಜಾಗ ಹುಡುಕಿದ. ಅದರೆ ಮರದ ಮೇಲೆ ಮತ್ತಿನ್ಯಾವ ಕೊಂಬೆಯೂ ಇರಲಿಲ್ಲ. ಏನೋ ಯೋಚಿಸಿ ಉಲ್ಟಾ ತಿರುಗಿ ಗೋಡೆಗೆ ಬಲಗಾಲು ಕೊಟ್ಟು ಮೇಲಿದ್ದ ಕಬ್ಬಿಣದ ಕಂಬಿಯನ್ನೇ ನೋಡುತ್ತಾ ಮನೆದೇವರಾದ ಉಳ್ಳೇಕಾಲು ಲಕ್ಕಮ್ಮನನ್ನು ನೆನೆದು ಮೇಲಕ್ಕೆ ಚಿಮ್ಮಿದ. ನೆಗೆದ ರಭಸಕ್ಕೆ ಆತನಿಗೇ ತಿಳಯದೇ ಗಂಟಲಿನಿಂದ ಉದ್ಗಾರವೊಂದು ಹೊರಬಿದ್ದು, ಎಡಗಾಲಿಟ್ಟಿದ ಕೊಂಬೆ ಪಟ್ಟನೆ ಮುರಿದ ಸದ್ದಿನೊಡನೆ ಬೆರೆತುಹೋಯ್ತು. ಆದಾದ ಮೇಲೆ ಉಳಿದ ನಿಶ್ಯಬ್ದದಲ್ಲಿ ಕಂಬಿಯನ್ನು ಪಾಪಣ್ಣ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು ನೇತಾಡುತ್ತಿದ್ದ.

ಕಂಬಿಯೇನೋ ಸಿಕ್ಕಿತು. ಆದರೆ ಅದನ್ನು ಬಳಸಿ ಗೋಡೆಯ ಮೇಲೆ ಹತ್ತಲು ಪ್ರಯತ್ನಿಸಿದೊಡನೆ ಕಂಬಿ ಅಲುಗಾಡುತ್ತಾ ಗೋಡೆಯಲ್ಲಿ ಬಿರುಕು ಕಾಣಿಸಿತು. ಹೆಚ್ಚು ಪ್ರಯತ್ನಿಸಿದಷ್ಟೂ ಬಿರುಕು ದೊಡ್ಡದಾಗಿ ಕಂಬಿಯೂ ಬಗ್ಗಿತು. ಪಾಪಣ್ಣ ಉಸಿರು ಬಿಗಿ ಹಿಡಿದು ಅಲುಗುತ್ತಿದ್ದ ಕಂಬಿಗೆ ಕಟ್ಟಿದ್ದ ಮುಳ್ಳು ತಂತಿಗೆ ಕೈಹಾಕಿ ಜಗ್ಗಿ ಮೇಲೇರತೊಡಗಿದ. ಮುಳ್ಳುಗಳು ಕೈಗೆ ನಾಟಿಕೊಂಡು ರಕ್ತ ಸೋರತೊಡಗಿತು. ಪಾಪಣ್ಣ ಹಲ್ಲು ಕಚ್ಚಿ ನೋವು ತಡೆಯುತ್ತಾ ಮೇಲಕ್ಕೆ ಬಂದು ಗೋಡೆಯ ಮೇಲೆ ನಿಂತುಬಿಟ್ಟ. ಕತ್ತಲಿನಲ್ಲಿ ವಿಶಾಲವಾದ ಚಿತ್ರದುರ್ಗ ಕಾಣಿಸಿತು. ನಿಧಾನವಾಗಿ ತಂತಿಯನ್ನು ಹಿಡಿದು ಗೋಡೆಯ ಹಿಂಬದಿಗೆ ಬಂದ. ಮರುದಿನದ ಸಂತೆಗೆ ಬಂದ ಒಂದಷ್ಟು ಎತ್ತಿನಗಾಡಿಗಳು ನಿಂತಿದ್ದವು. ಅವುಗಳಿಂದ ಇಳಿಸಿದ ತರಕಾರಿ ಮೂಟೆಗಳನ್ನು ಗೋಡೆಯ ಪಕ್ಕದಲ್ಲೇ ಪಾಪಣ್ಣನಿಗಾಗಿಯೇ ಎಂಬಂತೆ ಜೋಡಿಸಲಾಗಿತ್ತು. ಅದರ ಮೇಲೆ ನೆಗೆದ ಪಾಪಣ್ಣ ಕೈಯಲ್ಲಿ ಸುರಿಯುತ್ತಿದ್ದ ರಕ್ತವನ್ನು ಬಿದ್ದಿದ್ದ ಖಾಲಿ ಚೀಲವೊಂದಕ್ಕೆ ಒರೆಸಿ ಸಂತೆ ಮೈದಾನವನ್ನು ದಾಟಿ ಕತ್ತಲಲ್ಲಿ ನೆಡೆಯತೊಡಗಿದ.




No comments:

Post a Comment