Tuesday, March 20, 2018

ಚಂದಿರನ ಕಂಬನಿ


ಚಂದಿರನ ಕಂಬನಿ



“ಯಾವಾಗ್ಲೂ ನನಗ್ಯಾಕೆ ರಾತ್ರಿ ಪಾಳಿ?”
“ಇರುತಾಳೆ ನನ್ನಾಕೆ ಒಬ್ಬಳೇ ಮನೇಲಿ?”
“ಕೈಯಳತೆಯಲಿರದಿರೆ
ಕೈಹಿಡಿದವಳ ಸೆರಗು?
ಇದ್ದೇನು ಫಲ ಬಂತು
ಕೋಟಿ ತಾರೆಗಳ ಬೆರಗು?”
ಕೊರಗುವನು ಚಂದಿರ ಪುನಃ ಪುನಃ
ಪಾಪ ಅವನದೊಂತರ ಚಿರವಿರಹ
ಕುಡಿದು ತೇಲಾಡವನು
ಜೊತೆಗೆ ತಾರೆಗಳ ಕಂಪನಿ
ಅತ್ತು ಗೋಳಾಡುವನು
ಭುವಿಗೆಲ್ಲಾ ಚೆಲ್ಲುವುದು ಕಂಬನಿ

ಭುವಿಗೆಲ್ಲವೆಂದರೆ ಭುವಿಗೆಲ್ಲಾ..!
ಗಿರಿ ಶಿಖರ ಬೆಟ್ಟಗಳ ಮೇಲೆ,
ಬೆಟ್ಟದ ಮೇಲೆ ನೆಟ್ಟ
ಗಾಳಿ ಮಿಷೀನುಗಳ ಮೇಲೆ
ಕಡಲ ಒಡಲಲಿ ತೇಲುತಿದ್ದ
ಹಾಯಿ ದೋಣಿಯ ಮೇಲೆ
ದೋಣಿ ಹುಟ್ಟಿನ ಮೇಲೆ
ಚರ್ಚು ಬೆಲ್ಲಿನ ಮೇಲೆ
ಬೇಂಚು ಕಲ್ಲಿನ ಮೇಲೆ
ಹುಲ್ಲು ಬಣವೆಗಳ ಮೇಲೆ
ಬಯಲು ಕಣಿವೆಗಳ ಮೇಲೆ
ಮೊಬೈಲು ಟವರುಗಳ ಮೇಲೆ
ಕರೆಂಟು ವಯರುಗಳ ಮೇಲೆ,
ಸ್ಟೇಷನು, ಆಸ್ಪತ್ರೆ, ಸ್ಕೂಲು,
ಮನೆ ಛಾವಣಿಗಳ ಮೇಲೆ,
ಅಲ್ಲೇ ಕುಡಿದು ಬಿದ್ದಿದ್ದ
ಬ್ಯಾಚುಲರುಗಳ ಮೇಲೆ, ಅವರ
ಚಾಪೆ ದಿಂಬು ಚಾದರಗಳ ಮೇಲೆ
ಹೀಗೆ ಎಲ್ಲೆಂದರಲ್ಲಿ ಬಿದ್ದು
ಭುವಿಯ ಒದ್ದೆಯಾಗಿಸಿತ್ತು
ಚಂದಿರನ ಕಂಬನಿ

ಮತ್ತೊಂದೆಡೆ
ಮೈಮೇಲೆ ಬಿದ್ದ ಹನಿಗಳ
ಸೀರೆಯಂಚಿನ ಮೇಲೆ
ಸಿಂಗರಿಸಿಕೊಂಡಿತ್ತು ಹಸಿರೆಲೆ.
ಸೀರೆ ಸೊಬಗು ಹೆಚ್ಚಾಯ್ತು
ಸೂರ್ಯ ಡ್ಯೂಟಿಗೆ ಬರುತಲೇ.
ಬೆಳೆಗೆದ್ದು ವಾಕಿಗೆಂದು
ಪಾರ್ಕಿಗೆ ಬಂದವರು
(ಕಂಡವರ ಕಣ್ಣೀರ ಕ್ಲಿಕ್ಕಿಸಿ
ಖುಷಿಪಡುವ ಕಿರಾತಕರು)
ಮೊಬೈಲು ಕ್ಯಾಮರಾದಲಿ
ಸೆರೆಹಿಡಿದರು ಆ ಚಿತ್ರವನು
ಹಬ್ಬಿಸಿದರು ಊರ ತುಂಬಾ
ಲಕ್ಷ ಲೈಕು ಶೇರುಗಳಾದರು
ಯಾರು ಕೇಳುವವರಿರಲಿಲ್ಲ
ಕೇಳಿ ಒರೆಸುವವರಿರಲಿಲ್ಲ
ಚಂದಿರನ ಕಂಬನಿ

ಯಾರು ಇರಲಿಲ್ಲವೆಂದಲ್ಲ.
ರಸ್ತೆ ಬದಿಯಲ್ಲೆ ನಿಂತ
ಕಾರು, ಲಾರಿಯ ವೈಪರುಗಳು,
ಮಾಲು, ಹೋಟಲುಗಳಲಿ
ಮಾರ್ನಿಂಗ್ ಡ್ಯೂಟಿಗೆ
ಬರುವ ಕ್ಲೀನರುಗಳು,
ಕ್ಲೀನರುಗಳು ಕೈಕೊಟ್ಟಾಗ
ಕೆಲವೊಮ್ಮೆ ಓನರುಗಳು
ಕೈಯಾರೆ ಒರೆಸುತಿದ್ದರು
ಚಂದಿರನ ಕಂಬನಿ
ಕೆಲವೊಮ್ಮೆ ಶಪಿಸುತ್ತಿದ್ದರು
“ಹಾಳಾದ್ದು ಈ ಇಬ್ಬನಿ”

- ತ್ರಿವಿಕ್ರಮ



No comments:

Post a Comment