Wednesday, February 14, 2018

ಮೆಹಂದಿ ಬಣ್ಣದ ನೈಲ್ ಪಾಲಿಷು

ಮೆಹಂದಿ ಬಣ್ಣದ ನೈಲ್ ಪಾಲಿಷು


ಮಡಿಕೇರಿ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿದ್ದ ಕಾಫಿ ಶಾಪೊಂದರ ಬಳಿ ಕಾರು ನಿಲ್ಲಿಸಿದ ಜಯಂತ. ಕೆಳಗಿಳಿದ ಚೈತ್ರ ಆಕಾಶ ನೋಡಿದಳು. ಸಂಜೆಯ ಸೂರ್ಯ ಮೋಡಗಳ ಹಿಂದೆ ಸರಿದಿದ್ದ. ಆತನ ಬಿಸಿಲಿನ ಅಡ್ಡಬಂದ ತಪ್ಪಿಗೇನೋ ಎಂಬಂತೆ ಮೋಡಗಳು ತಾವೂ ನಿಧಾನವಾಗಿ ಕಪ್ಪಾಗತೊಡಗಿದ್ದವು. ಮಳೆ ಬರುವಂತೆ ಕಂಡಿತು. ಗಾಟ್ ಸೆಕ್ಷನ್ ದಾಟಿ ಬಂದಿದ್ದರು. ಬೇಗ ಮನೆ ಸೇರಬಹುದಿತ್ತು. ಇಲ್ಲಿ ಗಾಡಿ ನಿಲ್ಲಿಸಿದ್ದೇಕೆ ಎಂದುಕೊಂಡಳು ಚೈತ್ರ. ಡ್ರೈವ್ ಮಾಡಿ ನಿದ್ದೆ ಹತ್ತಿದಂತಾಗಿತ್ತೇನೋ, ಜಯಂತ ಮೈಮುರಿಯುತ್ತಾ ಕಾಫಿ ಶಾಪ್ ಕಡೆಗೆ ಹೊರಟ.

ಜಯಂತ ಕಾಫಿ ಶಾಪಿನ ಬಾಗಿಲ ಬಳಿಗೆ ಹೋಗಿ ನಿಂತವನು ಹಿಂದೆ ತಿರುಗಿ ಅಲ್ಲೇ ನಿಂತ ಚೈತ್ರಾಳ ಕಡೆ ಪ್ರಶ್ನಾರ್ಥಕವಾಗಿ ನೋಡಿದ. ಚೈತ್ರ ಹೊರಗೆ ಹಾಕಿದ್ದ ಟೇಬಲ್ಲಿನ ಬಳಿಗೆ ನೆಡೆದು ಇಲ್ಲೇ ಕೂರೋಣ ಎಂಬಂತೆ ಸನ್ನೆ ಮಾಡಿದಳು. ವೇಟರನ್ನು ಕರೆದ ಜಯಂತ ತಾನೂ ಹೋಗಿ ಚೇರ್ ಎಳೆದುಕೊಂಡು ಕುಳಿತ. ತನ್ನ ವ್ಯಾನಿಟಿ ಬ್ಯಾಗಿನಿಂದ ಪೋನ್ ಹೊರಗೆ ತೆಗೆದ ಚೈತ್ರ ಕೈ ಮೇಲೆತ್ತಿ ನೆಟ್ ವರ್ಕ್ ಹುಡುಕಲು ಪ್ರಯತ್ನಿಸುತ್ತಿದ್ದಳು. ಜಯಂತ ಅವಳನ್ನೇ ನೋಡುತ್ತಾ ಕುಳಿತ.

ಮೆನು ಕಾರ್ಡ್ ತಂದ ವೇಟರ್ ಅದನ್ನು ಜಯಂತನಿಗೆ ನೀಡಿದ. ಜಯಂತ ಒಂದು ಕಾಫಿ ಆರ್ಡರ್ ಮಾಡಿ ಚೈತ್ರಾಳ ಕಡೆಗೆ ನೋಡಿದ.

“ನನಗೆ ಐಸ್ ಕ್ರೀಮ್ ತಿನ್ನಬೇಕೆನ್ನಿಸುತ್ತಿದೆ” ದುಪ್ಪಟ್ಟವನ್ನು ಹೊದ್ದುಕೊಳ್ಳುತ್ತಾ ಹೇಳಿದಳು.

“ಇಷ್ಟೊಂದು ಥಂಡಿಯಿದೆ, ಐಸ್ ಕ್ರೀಂ ಬೇಕಾ?” ಜಯಂತ ಕೇಳಿದ.

ಚೈತ್ರ ಮತ್ತೇನು ಹೇಳುವುದು ಎಂಬಂತೆ ಮೆನು ನೋಡತೊಡಗಿದಳು. ಏನು ಇಷ್ಟವಾಗಲಿಲ್ಲವೆಂಬಂತೆ ಮೆನು ಟೇಬಲ್ಲಿನ ಮೇಲಿಟ್ಟು ‘ನನಗೂ ಕಾಫಿ’ ಎಂದಳು. ವೇಟರ್ ಆರ್ಡರ್ ತೆಗೆದುಕೊಂಡು ಹೋದ. ಜಯಂತ ಮತ್ತೊಮ್ಮೆ ಆಕಳಿಸಿ ಪೋನ್ ತೆಗೆದು ಮೇಲ್ ಚೆಕ್ ಮಾಡುತ್ತಾ ಕುಳಿತ. ಚೈತ್ರಾಳಿಗೆ ಆ ಸಂಜೆ, ಗಾಳಿ, ಮೋಡಗಳು, ಕಾಫಿಶಾಪು ಎಲ್ಲವೂ ಬೋರಾದಂತೆ ಅನ್ನಿಸಿತು.

“ಜಯ್, ಈ ನೈಲ್ ಪಾಲಿಷ್ ಹೇಗಿದೆ?” ಚೈತ್ರ ತನ್ನ ಕೈಗಳನ್ನು ಮುಂದೆ ಚಾಚಿ ಕೇಳಿದಳು

“ಚೆನ್ನಾಗಿದೆ” ಇದ್ದಕ್ಕಿದ್ದಂತೆ ಬಂದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ.

“ನೆನ್ನೆ ಮೆಹಂದಿಗೆ ಮ್ಯಾಚ್ ಆಗಲಿ ಅಂತ ರೆಡ್ ಹಾಕಿಕೊಂಡಿದ್ದು. ಆದರೆ ಇವತ್ತು ಮೆಹಂದಿ ಸ್ವಲ್ಪ ಡಾರ್ಕ್ ಆದಂತೆ ಕಾಣಿಸುತ್ತಿದೆ’ ಕೈಗಳನ್ನು ಹಿಂದೆ ಮುಂದೆ ತಿರುಗಿಸುತ್ತಾ ತೋರಿಸಿದಳು.

"ಈಗಲೂ ಮ್ಯಾಚ್ ಆಗಿದೆಯಲ್ಲಾ, ಚೆನ್ನಾಗಿದೆ” ಎಂದು ಹೇಳಿ ಮೊಬೈಲ್ ನೋಡುವುದನ್ನು ಮುಂದುವರೆಸಿದ.


ಚೈತ್ರಾಳಿಗೆ ಅವನ ನಿರಾಸಕ್ತಿಯನ್ನು ಕಂಡು ಕಿರಿಕಿರಿಯಾಯಿತು. "ಜಯ್, ನೆನ್ನೆ ಸ್ವಲ್ಪ ರೆಡ್ ಇತ್ತು. ಈಗ ಕಂಪ್ಲೀಟ್ ಮರೂನ್ ಆಗಿದೆ. ನೈಲ್ ಪಾಲಿಷ್ ಮ್ಯಾಚ್ ಆಗ್ತಿಲ್ಲಾ” ಎಂದಳು.

“ಹೌದಾ? ನನಗೇನು ಅಂತ ಡಿಫರೆನ್ಸ್ ಕಾಣಿಸಲಿಲ್ಲ” ಜಯಂತ ಕತ್ತು ಎತ್ತದೇ ಹೇಳಿದ.

“ಹೌದೌದು ನಿನಗೆ ಕಾಣಿಸುವುದಿಲ್ಲ ಬಿಡು” ವ್ಯಂಗ್ಯವಾಗಿ ಹೇಳಿದಳು.

ಈ ಬಾರಿ ಜಯಂತ ಕತ್ತೆತ್ತಲೇ ಬೇಕಾಯಿತು. “ಚೈ ಪ್ಲೀಸ್ ಸಾಕು ಮಾಡು. ನನಗೆ ಅಂತ ಡಿಫರೆನ್ಸ್ ಕಾಣಿಸಲಿಲ್ಲ, ಈಗಲೂ ಕಾಣಿಸುತ್ತಿಲ್ಲ. ಅದನ್ನೇ ಹೇಳಿದೆ.” ಮೊಬೈಲ್ ಒಳಗಿಡುತ್ತಾ ಹೇಳಿದ.

"ನಿನಗೆ ಕಾಣಿಸುವುದಿಲ್ಲ. ನಿನ್ನ ತಲೆಲೀ ಅದೇ ತುಂಬಿಕೊಂಡಿದೆ. ಹುಟ್ಟೋ ಸೂರ್ಯ ಗ್ರೀನ್ ಕಲರ್ ಇದ್ರೂ ನಿಂಗೆ ಡಿಫರೆನ್ಸ್ ಕಾಣಿಸೋದಿಲ್ಲ”

“ಅಯ್ಯೋ ಪ್ಲೀಸ್ ಲಿವ್ ಇಟ್. ಏನಾದ್ರೂ ಖುಷಿ ಖುಷಿಯಾಗಿ ಮಾತನಾಡೋಣ್ವಾ?

“ನಾನು ಖುಷಿ ಖುಷಿಯಾಗಗಿನೇ ನೈಲ್ ಪಾಲಿಷ್ ಬಗ್ಗೆ ಮಾತನಾಡಿದ್ದು ತಾನೆ? ಆದರಿಂದಲೂ ನಿನಗೆ ಬೇಜಾರಾಯ್ತಲ್ಲ”

ಅಷ್ಟರಲ್ಲಿ ವೇಟರ್ ಕಾಫಿ ತಂದಿದ್ದರಿಂದ ಮಾತು ನಿಲ್ಲಿಸಿದರು. ವೇಟರ್ ಇಬ್ಬರ ಮುಂದೆಯೂ ಕಾಫೀ ತಂದಿಟ್ಟು ಹೋದ.

“ಬೇಜಾರಲ್ಲ ಚೈ, ಅರ್ಥ ಮಾಡ್ಕೊ. ಗೊತ್ತಿಲ್ಲ ಅಂತ ಹೇಳಿದೆ ಅಷ್ಟೆ.”

"ಇಟ್ಸ್ ಓಕೆ. ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ನೆನ್ನೆ ಮೆಹಂದಿ ರೆಡ್ ಇತ್ತು. ಇವತ್ತು ಸ್ವಲ್ಪ ಡಾರ್ಕ್ ಆಗಿ ಮರೂನ್ ಕಾಣಿಸುತ್ತಿದೆ. ನೆನ್ನೆ ಹೀಟ್ ಆಗಿರಬೇಕು. ಎನಿ ವೇ, ಅಂತ ಡಿಫರೆನ್ಸ್ ಏನಿಲ್ಲ." ಜಯಂತ ಏನೋ ಹೇಳಲು ಬಾಯಿ ತೆರೆದವನು ಸುಮ್ಮನಾದ. ಚೈತ್ರ ಇದನ್ನು ನೋಡಿಯೂ ನೋಡದಂತಿದ್ದಳು. ಕೆಲಹೊತ್ತು ಇಬ್ಬರೂ ತಮ್ಮ ಕಪ್ ಒಳಗೆ ಸ್ಪೂನ್ ತಿರುಗಿಸುವ ಶಬ್ದ ಮಾತ್ರ ಕೇಳಿಸುತ್ತಿತ್ತು.

"ಕಾಫಿ ಚೆನ್ನಾಗಿದೆ" ಚೈತ್ರ ಮೌನವನ್ನು ಮುರಿದಳು.

ಜಯಂತ ಕೂಡ ಹೌದೆಂಬಂತೆ ತಲೆಯಾಡಿಸಿದ. ಚೈತ್ರ ನಸುನಕ್ಕಳು.

"ಚೈ, ನಾನು ಹೇಳೋದು ನಿನ್ನ ಒಳ್ಳೆದಕ್ಕೆ. ಯಾಕೆ ಅರ್ಥ ಮಾಡ್ಕೊಳೋದಿಲ್ಲ? ಅದು ತುಂಬಾ ಸಿಂಪಲ್. ನಿನಗೆ ಆಗಿದ್ದು ಗೊತ್ತಾಗೋದು ಇಲ್ಲ."

ಚೈತ್ರ ಏನೂ ಮಾತನಾಡದೆ ತಲೆ ತಗ್ಗಿಸಿದಳು. ಕಾಲಿನಲ್ಲಿದ್ದ ಮೆಹಂದಿ ನೋಡಿಕೊಂಡಳು. ಮತ್ತೆ ಕೈಯಲ್ಲಿದ್ದ ಮೆಹಂದಿ ನೋಡಿಕೊಂಡಳು. ಜಯಂತ ಮಾತು ಮುಂದುವರೆಸಿದ.

ನೀನಿನ್ನು ಚಿಕ್ಕೋಳು. ಇದು ತುಂಬಾ ಬೇಗ ಅನ್ಸಲ್ವಾ ನಿಂಗೇನೆ? ನಾವಿನ್ನು ಸ್ವಲ್ಪ ದಿನ ಆರಾಮಾಗಿರೋದು ಬೇಡ್ವಾ?"

“ಓಹ್ ಅದನ್ನ ತಗೊಂಡ್ರೆ ಆರಾಮಾಗಿ ಇರಬಹುದಲ್ವಾ?"

"ಹೌದು, ಈಗ ಇದೊಂದು ತಲೆನೋವು ಕಡಿಮೆ ಆದ್ರೆ ಆಮೇಲೆ ಯೋಚನೆ ಇಲ್ಲ. ಆರಾಮಾಗಿರೋಣಾ"

"ಓಹೋ, ನಿನ್ನ ತಲೆ ನೋವು ಕಡಿಮೆ ಆಗೋಕೆ ನಾನು ಟ್ಯಾಬ್ಲೆಟ್ ತಗೋಬೇಕಾ?’ ಎಂದು ನಕ್ಕಳು. ಅವಳ ಮಾತಿನಲ್ಲಿದ್ದದ್ದೋ ತುಂಟತನವೋ, ವ್ಯಂಗ್ಯವೋ, ಸಿಟ್ಟೋ ತಿಳಿಯಲಿಲ್ಲ ಜಯಂತನಿಗೆ. ಜಯಂತ ಮತ್ತೆ ಮೌನವಾದ. ಬೇಸರಗೊಂಡಂತೆ ಕಂಡಿತು. ಚೈತ್ರಳಿಗೆ ತಾನು ಮಾತನಾಡಿದ್ದು ಸರಿ ಎನ್ನಿಸಲಿಲ್ಲ.

"ನಮಗೆ ನಿಜವಾಗ್ಲು ಇದೆಲ್ಲಾ ಬೇಕಾ ಜೈ" ಕೊರಗುತ್ತಾ ಕೇಳಿದಳು.

"ನನಗೇನೋ ಬೇಕು ಅನ್ನಿಸುತ್ತೆ"

"ಆದರೂ ನನಗೇನೋ ಒಂಥರ ಭಯ"

"ಮ್ಚ್.. ಭಯ ಪಡೋದೇನಿದೆ? ಇದೆಲ್ಲಾ ತುಂಬಾ ಕಾಮನ್. ಎಷ್ಟೊಂದು ಜನ ಯೂಸ್ ಮಾಡ್ತಾರೆ." ಅಸಹನೆಯಿಂದ ಹೇಳದ ಜಯಂತ.

"ನಂಗೂ ಗೊತ್ತು ಮಾಡ್ತಾರೆ. ಆಮೇಲೆ ಅವರೆಲ್ಲಾ ಫುಲ್ ಆರಾಮಾಗಿದ್ದಾರೆ." ಚೈತ್ರ ಮತ್ತೆ ಅವನನ್ನು ಛೇಡಿಸಿದಳು.

“ನೋಡು ನಿನಗೆ ಇಷ್ಟ ಇಲ್ಲಾ ಅಂದ್ರೆ ಬೇಡ. ನಾನೇನು ನಿಂಗೆ ಫೋರ್ಸ್ ಮಾಡ್ತಿಲ್ಲ. ನಿಂಗೆ ಕಷ್ಟ ಅಂತ ಹೇಳಿದೆ ಅಷ್ಟೆ’

“ಸರಿ ನಾನು ಒಪ್ಪಿದ್ರೆ, ಆಮೇಲೂ ನಾವಿಬ್ರೂ ಖುಷಿಯಾಗಿರ್ತಿವಲ್ಲಾ? ಮೊದಲಿನ ಹಾಗೆ ನನ್ನನ್ನ ಲವ್ ಮಾಡ್ತಿಯಾ ಅಲ್ವಾ?

"ನಾನು ಈಗ್ಲೂ ಲವ್ ಮಾಡ್ತಿದ್ದೀನಿ, ನಿಂಗೂ ಗೊತ್ತು"

"ಗೊತ್ತು, ಆದ್ರೆ ಆಗ ನಾನು ನನ್ನ ಮೆಹಂದಿ ಬಗ್ಗೆ, ನೈಲ್ ಪಾಲಿಷ್ ಬಗ್ಗೆ ಮಾತನಾಡಿದ್ರೆ ಏನೂ ಬೇಜಾರಾಗಲ್ಲ ತಾನೇ?"

"ಬೇಜಾರಗಲ್ಲ. ನನಗೆ ಈಗ್ಲೂ ಬೇಜಾರಾಗ್ತಿಲ್ಲ. ಆದ್ರೆ ಸ್ವಲ್ಪ ಟೆನ್ಷನಲಿದ್ದೇನೆ ಅಷ್ಟೆ. ಅದಕ್ಕೆ ಹಾಗೆ ಮಾತನಾಡಿದೆ."

“ಪಾಪ ನೀನು ಅಷ್ಟೊಂದು ಟೆನ್ಷನ್ ಮಾಡಿಕೊಳ್ಳೋದು ಬೇಡ. ತಗೋತಿನಿ ಬಿಡು. ಹೇಗೂ ನನ್ನ ಆಸೆಗೆಲ್ಲಾ ಏನು ಬೆಲೆ ಇಲ್ಲ” ಚೈತ್ರ ಬೇಸರದಲ್ಲಿ ಹೇಳಿದಳು.

"ಏನ್ ನಿನ್ನ ಮಾತಿನ ಅರ್ಥ?"

"ನನ್ನ ಆಸೆಗೆ ಬೆಲೆ ಇಲ್ಲ ಅಂದೆ"

"ಗಾಡ್, ಚೈತ್ರ..! ನಾನ್ಯಾವಾಗ ಹಾಗೆ ಹೇಳಿದೆ?"

"ನೀನು ಹೇಳಲಿಲ್ಲ, ನಾನೇ ಹೇಳ್ತಿದ್ದೀನಲ್ಲ"

"ನೀನು ಹೀಗೆಲ್ಲಾ ಮಾತನಾಡೋದಾದ್ರೆ ಬೇಕಾಗಿಲ್ಲ ಬಿಡು."

ಚೈತ್ರಾ ಚೇರ್ ಹಿಂದೆ ಸರಿಸಿ ಎದ್ದು ನಿಂತಳು. ಒಂದು ಮಳೆ ಹನಿ ಅವಳ ಕಿರುಬೆರಳ ಮೇಲೆ ಬಿದ್ದಿತು.

“ಜೈ, ಯಾವತ್ತು ನಮ್ಮ ಬದುಕಿಂದ ಖುಷಿ ಕಳೆದುಹೋಗಲ್ಲ ಅಲ್ಲ?"

"ಇಲ್ಲ, ಚೈ ನಾವಿಬ್ರು ಖುಷಿಯಾಗಿರ್ತಿವಿ"

"ನಿಜವಾಗ್ಲೂ?"

"ನಿಜವಾಗ್ಲೂ"

“ಆದರೆ ಒಂದು ಸರಿ ಕಳ್ಕೊಂಡ್ರೆ ಮತ್ತೆ ಯಾವತ್ತೂ ಅದು ವಾಪಸ್ ಬರೋದಿಲ್ಲ ಜೈ”

ಜಯಂತ ಎದ್ದು ಅವಳ ಬಳಿಗೆ ಬಂದ. ಅವಳ ಭುಜದ ಮೇಲೆ ಕೈ ಇಟ್ಟು ಹೇಳಿದ “ನೀನ್ಯಾಕೆ ಹಾಗೆ ಅನ್ಕೊತ್ಯಾ? ಇನ್ನೊಂದೆರಡು ವರ್ಷ ಬಿಟ್ಟು ಮುಂದೆ ಯಾವಾಗಾದ್ರೂ ಬೇಕಾದ್ರೆ ಇನ್ನೊಂದು..” .

"ಇನ್ನೊಂದ್ ಕಾಫಿ ಕುಡ್ಯೋಣ್ವಾ?" ಚೈತ್ರ ಅವನ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಹೇಳಿದಳು.

"ಸರಿ ಕುಡಿಯೋಣಾ, ಆದ್ರೆ ಒಂದು ತಿಳ್ಕೋ…" ಜಯಂತ ಮತ್ತೇನೋ ಹೇಳಲು ಬಾಯ್ತೆರೆದ. ಅಷ್ಟರಲ್ಲಿ,

"ತಿಳ್ಕೊತಿನಿ.. ಪ್ಲೀಸ್ ಈಗ ಮಾತನಾಡೋದು ನಿಲ್ಸೋಣಾ" ಎಂದಳು ಚೈತ್ರ.

"ಮಳೆ ಶುರುವಾಯ್ತು ಒಳಗಡೆ ಹೋಗೋಣಾ ಬಾ”

ದುಪ್ಪಟವನ್ನು ತಲೆಯ ಮೇಲೆ ಎಳೆದುಕೊಂಡು ಒಳಕ್ಕೆ ನೆಡೆದಳು ಚೈತ್ರ. ಬೇಗನೇ ಕತ್ತಲಾಗಿದ್ದರಿಂದ ಕಾಫಿ ಶಾಪ್ ಒಳಗೆ ಲೈಟ್ ಹಾಕುತ್ತಿದ್ದರು. ಒಳಗೆ ಬಂದ ಚೈತ್ರ ಟೇಬಲೊಂದರಲ್ಲಿ ಕುಳಿತಳು. ಜಯಂತ್ ವಾಷ್ ರೂಮಿಗೆ ಹೋದ. ಶಾಪಿನ ಮತ್ತೊಂದು ಮೂಲೆಯಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳ ಜೊತೆ ಕುಳಿತಿದ್ದರು. ಪುಟ್ಟ ಮಗುವೊಂದು ಟೇಬಲ್ ಮಾಲೆ ಕುಳಿತು ಟಿಶ್ಯೂ ಪೇಪರನ್ನು ಬಾಯಿಯಲ್ಲಿ ಹಾಕಿಕೊಳ್ಳುತ್ತಿತ್ತು. ಅದರ ತಾಯಿ ಅದನ್ನು ಕಿತ್ತಿಟ್ಟು ಮಗುವನ್ನು ಕೆಳಗಿಳಿಸಿ ಕೂರಿಸಿದಳು. ಚೈತ್ರ ಅವರನ್ನೇ ನೋಡುತ್ತಾ ಕುಳಿತಿದ್ದಳು. ಜಯಂತ ಬಂದ ಮೇಲೆ ಮತ್ತೊಂದು ರೌಂಡ್ ಕಾಫಿ ಬಂದಿತು. ಹೊರಗೆ ಗಾಜಿನ ಮೇಲೆ ಒಂದೊಂದೇ ಹನಿಗಳು ಬೀಳತೊಡಗಿದವು. ಇಬ್ಬರೂ ಕಾಫಿ ಕುಡಿಯುತ್ತಾ ಮಳೆ ಹನಿಗಳನ್ನೇ ನೋಡತೊಡಗಿದರು.

"ನಿನಗೆ ಇಷ್ಟೊಂದು ಬೇಜಾರಾಗೋದಾದ್ರೆ ಬೇಡ ಚೈ. ನನಗೆ ನಿನ್ನ ಖುಷಿ ಇಂಪಾರ್ಟಂಟ್. ನಿನಗೆ ಅದು ಇಂಪಾರ್ಟಂಟ್ ಅನ್ನೋದಾದ್ರೆ, ಫೈನ್. ಆದೇನಾಗತ್ತೋ ಆಗ್ಲಿ."

"ಹಾಗಿದ್ರೆ ನಿಂಗೆ ಅದು ಇಂಪಾರ್ಟಂಟ್ ಅಲ್ವಾ?"

"ನನಗೆ ಇಂಪಾರ್ಟೆಂಟ್ ಅಲ್ಲಾ ಅಂತ ಅಲ್ಲ. ನೀನದನ್ನ ಹ್ಯಾಂಡಲ್ ಮಾಡ್ತಿಯಾ ಅಂತ. ನೀನು ಕಷ್ಟಪಡೋದನ್ನ ನೋಡೋಕ್ಕಾಗಲ್ಲ"

"ಹಾಗಿದ್ರೆ ನೀನೇ ಯಾಕೆ ಇಷ್ಟೊಂದು ಕಷ್ಟ ಕೊಡ್ತಿದ್ದೀಯಾ?"

“ಕಷ್ಟ ಕೊಡ್ತಿಲ್ಲ ಚೈ, ನಿಂಗೆ ಅರ್ಥ ಮಾಡಿಸೋಕೆ ನಾನೇ ಕಷ್ಟ ಪಡ್ತಿದ್ದೀನಿ ಅಷ್ಟೆ ನೀನೇ ಅರ್ಥ ಮಾಡ್ಕೊತಿಲ್ಲ."

"ಜಯ್ ನಂಗೋಸ್ಕರ ಒಂದು ಕೆಲ್ಸ ಮಾಡ್ತಿಯಾ?"

"ನಾನು ನಿನಗೋಸ್ಕರ ಏನು ಬೇಕಾದರೂ ಮಾಡ್ತೀನಿ"

"ಹಾಗಾದ್ರೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಸ್ವಲ್ಪ ಬಾಯಿ ಮುಚ್ಚಿಕೊಂಡಿರ್ತಿಯಾ?"

"ಸಾರಿ ಚೈ, ನಾನಿನ್ನು ಅದರ ಬಗ್ಗೆ ಏನೂ ಕೇಳೋದಿಲ್ಲ. ನಿನ್ನಿಷ್ಟ. ಬಟ್ ನೆನಪಿರಲಿ, ಇವತ್ತು ಲಾಸ್ಟ್ ಡೇ."

"ನಾನೀಗ ಕಿರುಚಿಕೊಳ್ತೀನಿ ಅಷ್ಟೆ"

ಜಯಂತ ಮತ್ತೆ ಮಾತನಾಡಲಿಲ್ಲ. ಕತ್ತು ಬಗ್ಗಿಸಿಕೊಂಡು ಕುಳಿತುಬಿಟ್ಟ. ಹೊರಗೆ ಮಳೆ ಹೆಚ್ಚಾಗುತ್ತಿತ್ತೋ ಕಡಿಮೆಯಾಗುತ್ತಿತ್ತೋ ತಿಳಿಯುತ್ತಿರಲಿಲ್ಲ. ದೂರದಲ್ಲಿ ಕುಳಿತಿದ್ದ ಅಪ್ಪ ಅಮ್ಮ ನಾವಿಬ್ಬರು ನಮಗಿಬ್ಬರು ಎಂದು ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮಳೆಯಲ್ಲೇ ಕಾರಿನ ಬಳಿಗೆ ಓಡಿದರು. ಒಮ್ಮೆ ಕರೆಂಟ್ ಹೋಗಿ ಮತ್ತೆ ಬಂದಿತು. ಜಯಂತ ಕಾಫಿ ಮುಗಿಸಿ ಕಪ್ ಕೆಳಗಿಟ್ಟ.

ಚೈತ್ರ ಮೇಲೆದ್ದು ನಿಂತಳು. ಜಯಂತ ಬಿಲ್ ಕೊಡಲು ಪರ್ಸ್ ತೆಗೆದಾಗ ತಾವು ಉಳಿದುಕೊಳ್ಳಬೇಕಿದ್ದ ಹೋಟೆಲಿನವರು ನೀಡಿದ್ದ ಗಿಫ್ಟ್ ಓಚರುಗಳು ಕೆಳಗೆ ಬಿದ್ದವು. ಜಯಂತ ಅದನ್ನು ಮತ್ತೆ ಪರ್ಸಿನೊಳಗೆ ತುರುಕುತ್ತಾ ಅವಳನ್ನು ನೋಡಿದ. ಚೈತ್ರ ನಕ್ಕಳು. ಜಯಂತ ತಾನೂ ನಗುತ್ತಾ ಮೇಲೆದ್ದು ನಿಂತ. ಇಬ್ಬರೂ ಮಳೆಯಲ್ಲೆ ಓಡಿ ಬಂದು ಕಾರು ಹತ್ತಿ ಕುಳಿತರು. ಚೈತ್ರಾ ತಾನು ತಲೆ ಒರೆಸಿಕೊಂಡು ದುಪ್ಪಟವನ್ನು ಜಯಂತನಿಗೆ ನೀಡಿದಳು.

"ಆರ್ ಯು ಓಕೆ ಜೈ?"

"ನಾನು ಕಂಪ್ಲೀಟ್ಲೀ ಓಕೆ. ಬಟ್ ಐ ಆಮ್ ರಿಯಲೀ ವರೀಡ್ ಅಬೌಟ್ ಯು"

ಜಯಂತನ ಮಾತು ಕೇಳಿ ಚೈತ್ರ ನಿದ್ರೆ ಬಂದವಳಂತೆ ನಟಿಸಿ ಸೀಟಿನ ಮೇಲೆ ಕಣ್ಣು ಮುಚ್ಚಿಕೊಂಡು ಬಿದ್ದಳು. ಜಯಂತ ದುಪ್ಪಟ್ಟ ಅವಳ ಮುಖಕ್ಕೆ ಎಸೆದ. ಚೈತ್ರ ಜೋರಾಗಿ ಗೊರಕೆ ಹೊಡೆಯತೊಡಗಿದಳು.

"ಓಹ್ ರಾತ್ರಿ ನಿದ್ದೆ ಇಲ್ವಲ್ಲಾ ಅದಕ್ಕೆ ಪಾಪ ಬೇಗ ನಿದ್ದೆ ಬಂದ್ಬಿಡ್ತೇನೋ" ಜಯಂತ ನಗುತ್ತಾ ಕಾರು ಸ್ಟಾರ್ಟ್ ಮಾಡಿದ.

ಚೈತ್ರ ಮಲಗಿದ್ದಲ್ಲೇ ನಕ್ಕಳು. ಜಯಂತ ತಾನು ನಗುತ್ತಾ ಕೈ ಚಾಚಿದ. ಚೈತ್ರ ಆತನ ಕೆ ಹಿಡಿದುಕೊಂಡಳು. ಜಯಂತ ಅವಳ ಮೆಹಂದಿ ಗೆರೆಗಳ ಮೇಲೆ ಬೆರಳಾಡಿಸಿದ. ಕಾರು ಬೆಂಗಳೂರಿನ ಕಡೆಗೆ ಹೊರಟಿತು. ಮಳೆ ಹಾಗು ಕತ್ತಲು ಒಬ್ಬರನ್ನೊಬ್ಬರು ತಬ್ಬಿಕೊಂಡು ಇವರನ್ನು ಹಿಂಬಾಲಿಸಿದವು.


(ಅರ್ನೆಸ್ಟ್ ಹೆಮ್ಮಿಂಗ್ ವೇಯವರ 'ಹಿಲ್ಸ್ ಲೈಕ್ ವೈಟ್ ಎಲೆಫಂಟ್ಸ್' ಕಥೆಯಿಂದ ಪ್ರೇರಿತವಾದದ್ದು.)

No comments:

Post a Comment