Tuesday, May 23, 2017

ವೈಟಿಗಾಗಿ ವೈಟಿಂಗು


 ವೈಟಿಗಾಗಿ ವೈಟಿಂಗು
(ವೈಟ್  ಪ್ರಾಬ್ಲಮ್ - ಪಾರ್ಟ್ 2)

ಅವಳಿಗೊಂದೇ ಕೊರಗು :

ನೀನ್ಯಾಕಿಷ್ಟು ಸಣ್ಣಗಿರುವೆ?
ಸೊಂಟಕ್ಕೆ ಸುತ್ತಿದ ಬೆಲ್ಟಿಗೂ
ಗಿಲ್ಟು ಫೀಲಾಗುವಷ್ಟು..?
ನಿನ್ನ ಸೈಜಿಗೆಂದಾದರೂ
ಸಿಕ್ಕಿರುವುದುಂಟೇನು
ರೆಡಿ ಮೇಡ್ ಪ್ಯಾಂಟು?
ಆ ವೈಟಿಂಗ್ ಮಿಷೀನು
ನಾಲ್ಕು ವರುಷದ ಕೆಳಗೆ
ನಲವತ್ಮೂರು ತೋರಿದ್ದೇ ಲಾಸ್ಟು
ನೀ ದಪ್ಪಗಾಗುವ ಗಳಿಗೆ
ಎಂದು ಬರುವುದೋ ಎಂದು
ವೈಟು ಮಾಡುವುದು ವೇಸ್ಟು..!

ಜಿಮ್ಮು ಸೇರಿದೆ, ಅರ್ಧಕ್ಕೆ ಬಿಟ್ಟೆ
ಬೀರು ಹೀರಿದೆ, ಬರಲಿಲ್ಲ ಹೊಟ್ಟೆ
ತಿಂಗಳಿಗೊಮ್ಮೆ ತಿಂದರೆ ಸಾಕೆ
ಮೀನು, ಮಾಂಸ, ಮೊಟ್ಟೆ?
ಬೇಯಿಸಿಕೊಂಡು ತಿನ್ನಲಾರೆ
ಮನೆಗೆ ತಂದು ಸೊಪ್ಪು ತರಕಾರಿ
ಬೇಸರವಾಗಿದೆ ಎನ್ನುವೇ
ದಿನಾ ಅಲೆದು ಹೋಟಲ್ ದಾರಿ
ಹೀಗೆ ಇಲ್ಲ ಸಲ್ಲದ ಕಾರಣ ಕೊಡುವೇ
ಆದರೂ ನನಗೆ ಗೊತ್ತಿಲ್ಲವೇ, ನೀನು
ಅನ್ನ ತಿಂದರೆ ಹಲ್ಲಿಗೆ ಕೆಲಸವೆಂದು
ಮುದ್ದೆ ನುಂಗುವ ಸೋಂಬೇರಿ

ನಾ ಹೇಳಿದ್ದು ಏನು ತಾನೆ
ಮಾಡಲಾಗುವುದು ನಿನ್ನ ಕೈಲಿ?
ಏನೆ ಮಾಡಿದರೂ ಡಿಫರೆಂಟು
ನಿನಗೆ ನಿನ್ನದೇ ವಿಚಿತ್ರ ಶೈಲಿ,
ಹೋಗು, ಎದ್ದು ಹೋಗು
ಕಾಳಿದಾಸನು ಕಾಳಿಮಾತೆಯ
ಕಾಲಿಗೆರಗಿ ವರ ಪಡೆದಂತೆ
ಬೇರೆ ಏನಾದರು ಟ್ರೈ ಮಾಡು
ಅನ್ನಪೂರ್ಣೇಶ್ವರಿ ದೇವಿಯ
ಅಡುಗೆ ಮನೆಯಲಿ ಅವಿತು
ತುತ್ತು ತಿನಿಸುವಂತೆ ಬೇಡು
ಕೈಮುಗಿದು ಹಾಡನ್ನು ಹಾಡು
ಕಾಳಿದಾಸ ಕವಿರತ್ನನಾದಂತೆ
ನೀ ಕೂಡ ದಪ್ಪಗಾಗುವವರೆಗೆ
ಮರಳಿ ಯತ್ನವ ಮಾಡು

ಥೂ ಹೋಗೋ..!
ನಿನಗೆ ಆ ದೇವರು ವರ ಕೊಟ್ಟು
ನೀ ನನ್ನ ವರನಾಗುವುದಯಾವಾಗ?
ಇಪ್ಪತ್ಮೂರಾಯ್ತು, ಇಪ್ಪತ್ನಾಲ್ಕಾಯ್ತು
ನನಗೂ ನೋಡಿನೋಡಿ ಸಾಕಾಯ್ತು
ಈ ಬಿಳಿ ಬಣ್ಣ ಅಸಾಧಾರಣ ಮೈಕಟ್ಟು
ನಮ್ಮಪ್ಪನನು ಒಪ್ಪಿಸಲಿಕ್ಕಾದರೂ
ದಪ್ಪಗಾಗಪ್ಪ ತಂದೆ  ದಯವಿಟ್ಟು

ನೀ ದಪ್ಪಗಾದ ಕೂಡಲೇ
ಕಟ್ಟಿಕೊಳ್ಳುವೆ ನಿನ್ನ ನನ್ನಾಣೆ
ಕಟ್ಟಿಬಿಡು ತಾಳಿ ನಿಂತಲ್ಲೇ
ವೇಟಿಂಗ್ ಮಿಷೀನೇ ಹಸೆಮಣೆ..!

- ತ್ರಿವಿಕ್ರಮ

No comments:

Post a Comment