Thursday, April 06, 2017

ಎ ನೈಸ್ ಪೊಯಮ್




ಊರು ಊರುಗಳ ನಡುವೆ
ಕರಿ ಸುಂದರಿಯೊಬ್ಬಳು
ಉರಿ ಬಿಸಿಲಲ್ಲಿ ಮಲಗಿಹಳು
ಆ ಊರಿನಿಂದೀವೂರಿಗೆ
ಈ ಊರಿನಿಂದಾವೂರಿಗೆ
ಹೋಗಿ ಬರುವವರೆಲ್ಲರೂ
ಅವಳ ನೈಸಾದ ಮೈಯ
ಸವರುತ್ತಾ ಸಾಗಿಹರು

ಕಾರಿನಲ್ಲಿ ಬಂದವರು
ಲಾರಿಯನ್ನು ತಂದವರು
ತಡರಾತ್ರಿಯಲಿ ಗಾಡಿ ಬಿಡುವ
ಕೆಂಪು ಕೆಸಾರ್ಟೀಸಿಯ ಡ್ರೈವರು
ಹೀಗೆ ಬಂದು ಹಾಗೆ ಹೋಗುವ
ಅವಸರದ ಮಂತ್ರಿವರ್ಯರು
ಸದಾ ಉದ್’ವೇಗ’ದಲ್ಲಿರುವ ಯುವಕರು
ಮುಪ್ಪಿನಲೂ ಸಪ್ಪೆಯಾಗದ ಮುದುಕರು
ದುಡಿದು ಬಂದವರು, ಕುಡಿದು ಬಂದವರು
ಹೀಗೆ ಒಬ್ಬರಿಬ್ಬರಲ್ಲ,
ಬಂದು ಹೋಗುವ ಜನ ಸಾವಿರಾರು
ಪಾಪ ಅವಳಿಗಿನ್ನೂ
ತುಂಬಿದೆಯೋ ಇಲ್ಲವೋ ಹದಿನಾರು

ಬಂದು ಹೋದವರ ಲೆಕ್ಕವಿಲ್ಲವೆಂದಲ್ಲ
ಅಲ್ಲೊಬ್ಬನಿದ್ದಾನೆ, ಸಾಹುಕಾರ
ನಿಲ್ಲಿಸುವನು ಬಂದವರನಡ್ಡಗಟ್ಟಿ,
ಮುಂದೆ ಹೋಗಬೇಕು ಸುಂಕಕಟ್ಟಿ
ಅವನಿಗೂ ಗೊತ್ತಿದೆ,
ಇನ್ನು ಹೆಚ್ಚು ದಿನವಿರುವುದಿಲ್ಲ
ಅವಳ ಮೇಲಿನ ಅಧಿಕಾರ
ಸಮಯ ಬಂದಾಗ
ವರಿಸುವುದವಳನು ಸರಕಾರ

- ತ್ರಿವಿಕ್ರಮ


No comments:

Post a Comment