Tuesday, June 28, 2016

ಲೇಟೆಸ್ಟು ಬಂಧನ

ಲೇಟೆಸ್ಟು ಬಂಧನ

ಕೇಳ್ರಪ್ಪೋ ಕೇಳಿ :

ಮತ್ತೆ ಜಾರಿಯಾಗಿದೆ ನನಗೆ
ಹೊಸ ಹಾರ್ಟಲ್ಲಿ ಸೆರೆಮನೆ ವಾಸ
ಒಮ್ಮೆ ಜಾರಿಬಿದ್ದು ಮೇಲೆದ್ದಿದ್ದರೂ
ಮತ್ತೆ ಸುತ್ತಿಕೊಂಡಿದೆ ಪ್ರೇಮಪಾಶ
ಏನು ತಾನೇ ಮಾಡೋದು?
ಎಲ್ಲಾ ಅವಳ ಸಹವಾಸ ದೋಷ..!

ಹೊಸ ಪರಿಚಯವೇನಲ್ಲ
ಅವಳೊಂದು ಹಳೆಯ ನೆನಪು
ಬಾಳ ಜಂಜಾಟದಲ್ಲಿ
ಪ್ರೀತಿ ಪರದಾಟದಲ್ಲಿ
ಉಂಟಾಗಿತ್ತು ಕೊಂಚ ಗ್ಯಾಪು
ನಾನೆಂದು ಊಹಿಸಿರಲಿಲ್ಲ
ಅವಳು ಮರಳಿ ಬರಬಹುದೆಂದು
ಹಿಡಿದು ನನ್ನೆದೆಗೆ ಮ್ಯಾಪು

ಅವಳು ಬಂದಳು;
ಪ್ರೀತಿಯಲೊಮ್ಮೆ ಎಡವಿ
ಬಿದ್ದದ್ದ ನನ್ನ ಮೈದಡವಿ
ಮುದ್ದು ಮಾಡಿದಳು
ಎದೆಯೊಡೆದಾಗ ಆಗಿದ್ದ
ಮಾಯದ ಗಾಯಕ್ಕೆ
ಮದ್ದು ಮಾಡಿದಳು
ಹೊಸ ಪ್ರೀತಿ ಪಾಠವ ಕಲಿಸಿ
ತಿದ್ದಿ ಬುದ್ಧಿ ಹೇಳಿದಳು

ಎಣಿಸಿದರೆ ನನಗಿದು
ಸುಮಾರು ಆರನೇ ಪ್ರೀತಿ
ಆದರೂ ನನಗಿಂತಲೂ
ಅವಳಿಗೆ ಅನುಭವ ಜಾಸ್ತಿ
ನಿಮಗ್ಯಾರಿಗೂ ತಿಳಿದಿರದು
ಅವಳೆಂಥಹಾ ಪುಣ್ಯಾತ್ಗಿತ್ತಿ..!

ಮೊದಮೊದಲು ನಾ
ಭಾವಿಸಿದೆ ನಮ್ಮ ನಡುವಿನ
ಭಾವನಗೆಳು ಕೃತಕವೆಂದು
ಅನುಮಾನಿಸಿದೆ ಆ ಸುಖದ
ಅನುಭವಗಳು ಕ್ಷಣಿಕವೆಂದು
ಆದರೆ ನನಗಾಗಿ ಕಾದಿತ್ತು
ಕಲ್ಪನೆಗೂ ಮೀರಿದ ಕೌತುಕವೊಂದು
ಒಮ್ಮೊಮ್ಮೆ ಸುಳ್ಳು ಕೂಡ
ಆಗುವುದು ಹಸಿ ಸತ್ಯ
ಆಹ್ವಾನವಿತ್ತಳು ಸ್ವೀಕರಿಸಲು
ಅವಳ ಒಲವಿನ ಆತಿಥ್ಯ

(ಅವಳೋ
ಸೌಂದರ್ಯದ ಸೊಕ್ಕು ಮುರಿದು
ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ರೂಪಸಿ
ನಾನೋ
ಬಸ್ ಸ್ಟಾಂಡಿನಲಿ ಬರದ ರೈಲಿಗೆ
ಬೆಳಗಾನ ಕಾದು ಕೂತಿದ್ದ ಬೇವರ್ಸಿ)

ನಾನೂ ಯೋಚಿಸಿದೆ :
ಹುಡುಗಿಯೂ ಸೂಪರ್
ಮುಗಿದು ಹೋಗುವ ಮುನ್ನ
ಇಂಥ ಒಳ್ಳೆ ಆಫರ್
ಹೃದಯಾನ ಮಾರಿಯಾದರೂ
ಜೀವನದ ಯಾನದಲಿ
ಜೊತೆ ಬರುವೆನಂದು
ಸೈನ್ ಮಾಡಿಕೊಟ್ಟೆ ಪೇಪರ್

ಪ್ರೀತಿ ಲೀಕಾಗಿದ್ದ
ಬಾಳ ನೌಕೆಗೀಗ
ಮತ್ತೆ ತುಂಬಿಸಿಹಳು ಇಂಧನ
ನನಗವಳು ಲೈಕಾಗಿ
ನಾನವಳಿಗೆ ಲಾಕಾಗಿ
ಶುರುವಾಗಿದೆ ‘ಲೇಟೆಸ್ಟು ಬಂಧನ’

(ಹಾಕ್ರೋ ಸ್ಟೆಪ್ಪು)

-ತ್ರಿವಿಕ್ರಮ

No comments:

Post a Comment