Sunday, June 19, 2016

ನಾನು ನನ್ನ ಪೋನು

 ನಾನು ನನ್ನ ಪೋನು


(ಕನಸಲ್ಲಿ ಕೇಳಿದ್ದು)
ಏಳು ಎದ್ದೇಳು, ಹೇಳು..!
ನಾ ಹೇಗೆ ಮರೆಯಲಿ
ನೀ ಮಾಡಿ ಹೋದ ಗಾಯ?
ಏಕೆ ಮಾಡಿದೆ ನನಗಿಂತ ಅನ್ಯಾಯ?
ನಿನಗೆ ನನ್ನ ನೆನಪಾದರೂ ಇದೆಯಾ?
ಇಷ್ಟು ಬೇಗ ಮರೆತುಬಿಟ್ಟೆಯಾ?
ಅಯ್ಯೋ ನಾ ಹಡುಗಿಯಲ್ಲಯ್ಯಾ
ನಿನ್ನ ಹಳೇ ಪೋನು ನೋಕಿಯಾ
ಏನೋ ಹೇಳೋದಿದೆ ಕೇಳ್ತಿಯಾ?
 
***
 
(ಎದ್ದಮೇಲೆ ಹೇಳಿದ್ದು)
ಮುಗಿಯುತ್ತಿರಲಿಲ್ಲ ಮಾತು
ಇಳಿಸಂಜೆಯಲಿ ಕುಳಿತುಬಿಟ್ಟರೆ
ಮಾತನಾಡುತ್ತಾ ಮನಸ್ಸು ಬಿಚ್ಚಿ
ನಾ ಸುಸ್ತಾಗಿ ಮಲಗಿದರೂ
ಮತ್ತೆ ಮೇಲೇಳಿಸುತ್ತಿದ್ದೆ
ನನ್ನೆದಗೆ ಚಾರ್ಜರ್ ಚುಚ್ಚಿ
ಹೊತ್ತುಗೊತ್ತಿಲ್ಲದೆ ಕಿವಿಗೊತ್ತಿ ನೀ ನನ್ನ ಬಳಸಿದೆ
ಹೀಟಾಗಿದ್ದರೂ ನಾ ನಿನ್ನ ಹಿತವನ್ನೇ ಬಯಸಿದೆ

ಮಾಡುತ್ತಿರಲಿ ಊಟ
ಕೇಳುತ್ತಿರಲಿ ಪಾಠ
ನನ್ನೆಡೆಗೆ ನೆಟ್ಟಿರುತ್ತಿತ್ತು ನೋಟ
ನಿರಂತರ ನೆಡೆಯುತಿತ್ತು
ಕೀಪ್ಯಾಡಿನೊಡನೆ ಕೈಬೆರಳ ಆಟ
ಅವಳಿದ್ದಾಗ ಡೇ ಅಂಡ್ ನೈಟು
ನೆಡಯೆಯುತ್ತಲೇ ಇರುತಿತ್ತು ಚಾಟು
ಅವಳು ಬಿಟ್ಟು ಹೋದಳು,
ನಾ ಪ್ಯಾಥೋಸಾಂಗು ಹಾಡಬೇಕಾಯ್ತು
ಆದಾಗಲೆಲ್ಲಾ ನೀನು ಟೈಟು..!

ಆ ನಿನ್ನ ನಲ್ಲೆ ತೊರೆದಾಗ
ಇದ್ದೆ ನಿನ್ನ ಜೊತೆಯಲ್ಲೆ
ನಾನಾಲಿಸಿದ್ದೆ ನೀವಾಡಿದ್ದ
ಪ್ರತಿ ಪೋಲಿ ಪಿಸುಮಾತು
ಪ್ರೀತಿಯನುಳಿಸಲು ನೀ
ಮಾಡಿದ ಕಸರತ್ತು ನನಗಷ್ಟೆ ಗೊತ್ತು
ನೀನಿನ್ನು ಪ್ರಯತ್ನಿಸಬೇಕಿತ್ತು
ಏಕೆ ನಿಲ್ಲಿಸಿದೆ ಸೋತು?
ಹೋಗಲಿ ಬಿಡು ಆಗಿದ್ದಾಯಿತು
ಸದ್ಯ ಆದಮೇಲಾದರೂ ನಿಮ್ಮ ಬ್ರೇಕಪ್ಪು
ಹೆಚ್ಚಾಗಿಬಿಡ್ತು ನನ್ನ ಬ್ಯಾಟರಿ ಬ್ಯಾಕಪ್ಪು..!

ನನ್ನ ಕಣ್ಣೆದುರಲ್ಲಿ ನೀ
ನೋಡಬಾರದ್ದು ನೋಡಿರುವೆ
ಆಡಬಾರದ್ದು ಆಡಿರುವೆ
ಮಾಡಬಾರದ್ದನ್ನೆಲ್ಲಾ ಮಾಡಿರುವೆ
ಯಾರಿಗೂ ಹೇಳೋದಿಲ್ಲ ಮಚ್ಚಾ
ಇದು ನಿನ್ನಾ ನನ್ನ ಸೀಕ್ರೆಟ್ಟು
‘ಪ್ರಾಮಿಸ್’ ಸುತ್ತಾ ಬ್ರಾಕೆಟ್ಟು
ಆದರೆ ಒಂದು ರಿಕ್ವೆಸ್ಟು
ಹೋಗದಿರು ನನ್ನ ಮರೆತು
ಸದಾ ನನ್ನೆದೆಯ ಮೇಲಿರಲಿ
ನಿನ್ನ ಕೈಬೆರಳ ಗುರುತು..!

ಇಂತಿ ನಿನ್ನ ಪ್ರೀತಿಯಾ
ನೋಕಿಯಾ ಲೂಮಿಯಾ


-ತ್ರಿವಿಕ್ರಮ


No comments:

Post a Comment