Tuesday, June 14, 2016

ಸ್ನೇಹಲೋ(ಲ್)ಕ

 ಸ್ನೇಹಲೋ(ಲ್)ಕ


‘ಒಂದು ಕೊಂಡರೆ ಒಂದು ಉಚಿತ’
ಎಂದು ಕೊಂಡ ಚೂಡಿದಾರ
ಬಣ್ಣ ಬಿಡುವುದು ಖಚಿತ.
ಆ ಬಣ್ಣದ ಚೂಡಿದಾರ ತೊಟ್ಟ
ಹೆಣ್ಣುಗಳು ಕಣ್ಣೆದುರಿಗರಲು
ವ್ಯಕ್ತಿತ್ವಗಳೂ ಬಿಟ್ಟು ಬಿಡುವವು ಬಣ್ಣ
ಅಲ್ಲಿ ಸ್ನೇಹವೆಂಬ ಪದ ಗೌಣ
ಓಹೋ ನೀನೊಬ್ಬ ಪ್ರಾಣ ಸ್ನೇಹಿತ..!
ಆದರೆ ‘ಅವರಿದ್ದಾಗ’ ನಿನಗೆ
ಅವರ ಸನಿಹವೇ ಹಿತ.

ಒಪ್ಪಲಿ, ಒಪ್ಪದಿರಲಿ
ಸತ್ಯ ಕಹಿಯಾದದ್ದು
ಇಟ್ಟುಕೊಳ್ಳಲಾಗದು
ನಾಲಿಗೆಯ ತುದಿಯಲಿ
ಬಹಳಷ್ಟು ಹೊತ್ತು.
ಅಂತೂ ಇಂತು
ಅಮಲಲ್ಲಿ ಹೊರಗೆ ಬಂತು.

ಆ ನಡುರಾತ್ರಿಯಲಿ
ನುಡಿದ ಸತ್ಯ ಕಿಡಿಯಾಗಿ ಹೊತ್ತಿ
ಕಣ್ಣೀರ ಧಾರೆ ಹರಿಸುತ್ತಾ ನೀ
ಎದ್ದು ಹೊರಟುಬಿಟ್ಟೆ ಬೀದಿಯಲಿ
ಕಣ್ಣೀರೊರೆಸಿ ಕರೆತಂದು ಬೆಂಕಿಯಾರಿಸಿ
ಕೆಂಡವ ಮುಚ್ಚಿಟ್ಟರು ಬೂದಿಯಲಿ.
ಮತ್ತೊಂದು ಪೆಗ್ಗು ಕೊಟ್ಟು
ಮಲಗಿಸಿಕೊಂಡರು ಮಗ್ಗುಲಲಿ.
ಅಬ್ಬಬ್ಬಾ ಎಂಥಹಾ ದೊಂಬರಾಟ..!
ನಾ ಕಲಿತುಕೊಂಡೆ ಒಂದು ಹೊಸ ಪಾಠ.

ನೀ ಮತ್ತಿನಲ್ಲಾಡಿದ ಮಾತು
ಮತ್ತೆ ಮತ್ತೆ ನೆನಪಾಗಿ
ಎದೆಗೆ ಚುಚ್ಚುತ್ತಿರುವಾಗ
ನಾ ಮುಚ್ಚು ಮರೆಯಿರದೆ
ಮನ ಬಿಚ್ಚಿ ಮಾತನಾಡಿದ್ದಕ್ಕೆ
ಇರುವೆ ಕಚ್ಚಿದಂತಾದರೆ
ಆ ದೇವರ ಮೇಲಾಣೆ
ಅದಕ್ಕೆ ನಾನಲ್ಲ ಹೊಣೆ

ನಾ ಚುಚ್ಚಿ ಮಾತನಾಡುವೆ, ಏಕೆಂದರೆ
ನಿನ್ನಂತೆ ಬೆಣ್ಣೆ ಹಚ್ಚಿ ಮಾತನಾಡಲಾರೆ..!

-ತ್ರಿವಿಕ್ರಮ





No comments:

Post a Comment