Friday, January 08, 2016

ಜನವರಿ ಎಂಟು

 ಜನವರಿ ಎಂಟು
                                           
‘ಜನವರಿ ಎಂಟು’
ಕ್ಯಾಲಂಡರ್ ತಿರುಗಿಸಲು
ಬಿಚ್ಚಿಕೊಳ್ಳತೊಡಗಿತು
ನೂರಿಪ್ಪತ್ತೆಂಟು
ನೆನಪುಗಳ ಗಂಟು.

ಎಂಟು ವರುಷದ ಕೆಳಗೆ
ಪುಟ್ಟ ಡೈರಿಯ ಪುಟದಲ್ಲಿ
ಆ ಜನವರಿ ಎಂಟು
ಎಂಟು ವರುಷದ ಬಳಿಕ
ಕೆಟ್ಟು ನಿಂತ ಮನಸಲ್ಲಿ
ಈ ಜನವರಿ ಎಂಟು
ಎರಡು ಎಷ್ಟೊಂದು ಡಿಫರೆಂಟು.!

ನಿನಗಲ್ಲಿ,
ಹೊಸ ಪ್ರೀತಿಯ ನೆರಳಲ್ಲಿ
ಇಪ್ಪತ್ತೆರಡು ತುಂಬಿದ ಸಡಗರ.
ನನಗಿಲ್ಲಿ,
ಹಳೆ ಪ್ರೇಮಿಯ ಹೆಸರಲ್ಲಿ
ಶುಭ ಹಾರೈಸಲು ಮುಜುಗರ.
ಇಷ್ಟಕ್ಕೂ ನನಗಾಗಲಿ
ನನ್ನ ಹಾರೈಕೆಯಾಗಲಿ
ನಿನ್ನಲ್ಲಿ ಬೆಲೆ ಎಲ್ಲಿ ಉಂಟು?
ಛೇ..! ನನಗ್ಯಾಕೆ ಈ ಗತಿ ಬಂತು?
ಸುಮ್ಮನಿದ್ದುಬಿಡಲೇ ಇದೆಲ್ಲವನು ಬಿಟ್ಟು?

ಹೇಗೆ ಬಿಟ್ಟಿರಲಿ?
ಎಂಟು ವರುಷ ಪ್ರೀತಿಸಿ
ಎಂಟಾಣೆಯ ಬೆಲೆ ಕೊಡದೆ
ಎದೆಯಲ್ಲಿ ಕುಂಟೆಬಿಲ್ಲೆಯಾಡಿ
ಒಂಟಿ ಮಾಡಿ ಮತ್ತೊಬ್ಬನ
ಅಂಟಿಕೊಂಡರೂ ನೀನೆಂದರೆ
ನನಗೊಂಥರ ಸೆಂಟಿಮೆಂಟು..!

ಸತ್ತರೂ ತಿಥಿ ಮಾಡದೆ ಬಿಟ್ಟ
ಈ ಪ್ರೀತಿ ಎಂಬ ಪ್ರೇತ
ಹುಟ್ಟಿಸುವ ಉಸಿರುಗಟ್ಟಿಸುವ
ಇಂತಹ ನೂರೆಂಟು
ಸೆಂಟಿಮೆಂಟುಗಳ ಎದೆಯಲಿಟ್ಟು
ಸೈಲೆಂಟಾಗಿ ಬಾಳುತಿರುವೆ.

ಪ್ರತಿ ವರುಷ ಮತ್ತೆ ಬರುವ ಎಂಟಕ್ಕಾಗಿ ಕಾಯುವೆ..!
ನಿನಗ್ಯಾವ ತಂಟೆ ಮಾಡದೆ ಒಂಟಿಯಾಗಿ ಸಾಯುವೆ..!

                                                                                                                    - ತ್ರಿವಿಕ್ರಮ

No comments:

Post a Comment