Wednesday, December 30, 2015

ಮಾಂತ್ರಿಕ



ಮಾಂತ್ರಿಕ


ಸೆಲೂನಿನೊಳಹೊಕ್ಕಲು
ಸೀಟು ಕೊಡವಿ ಕೂರಿಸಿ
ಕನ್ನಡಿಯೊಳಗಿರುವ
ನಿಮ್ಮನ್ನೇ ನಿಮಗೆ ತೋರಿಸಿ
ನೋಡನೋಡುತ್ತಿರುವಂತೆ
ನೀವು ನೀವಲ್ಲದಂತೆ ಮಾಡಬಲ್ಲ
ಇವನು ಬರಿಯ ಕ್ಷೌರಿಕನಲ್ಲ
ಇವನು ಮಾಂತ್ರಿಕ.

ಕತ್ತರಿಯ ಕಚಕಚನೆ ಆಡಿಸುತ
ತೋರುವನು ಕೈ ಚಳಕ
ಕೇಶರಾಶಿಯೊಳಗಾಡುವ ಕಲೆ
ಇವನಿಗೆ ಕರತಲಾಮಲಕ.
ಹಣಿಗೆಯಲಿ ಹೆಣೆಯುವ
ತಲೆಮೇಲೆ ಹೊಸ ಕ್ರಾಪು.
ಗಡ್ಡ ಗಿಡ್ಡವಾಗಿಸುವ, ಮಾಡುವ
ಮೀಸೆಯ ತುದಿ ಚೂಪು.

ನಾವು ನೀವೇನು
ತಲತಲಾಂತರಗಳಿಂದ
ತಲೆಗಳುರುಳಿಸಿ ಮೆರೆದ
ಎಲ್ಲ ರಾಜ ಮಹರಾಜರೂ
ತಿಂಗಳಿಗೊಮ್ಮೆ ಆಗಲೇಬೇಕು
ಇವನÀÀ ಮುಂದೆ ಹಾಜರು.
ಇವನಿಗೆ ತಲೆ ಬಾಗಲೇಬೇಕು
ಕೈಯಲ್ಲಿ ಹಿಡಿದಾಗ ರೇಜರು.

ಅವನ ಪಾಲಿಗೆ ತಲೆ
ಶಿಲ್ಪಿ ಕೆತ್ತುವ ಶಿಲೆ.
ಮೂಡಿಸುವನು ತನ್ನ ಕಲೆ
ನಂನಿಮ್ಮ ತಲೆಗಳ ಮೇಲೆ.
ಕತ್ತರಿಯನು ಕೈಗಿಡಲು
ಕತ್ತೆಯನು ಕುದುರೆಯಾಗಿಸಬಲ್ಲ.
ಇವನು ಬರಿಯ ಕ್ಷೌರಿಕನಲ್ಲ
ಇವನು ಮಾಂತ್ರಿಕ.

-ತ್ರಿವಿಕ್ರಮ
 


No comments:

Post a Comment