Monday, January 11, 2016

ಕವಿತೆ ಬರೆಯುತ್ತೇನೆ ನಾನು

ಕವಿತೆ ಬರೆಯುತ್ತೇನೆ ನಾನು

ಕವಿತೆ ಬರೆಯುತ್ತೇನೆ ನಾನು;
ನಿನ್ನ ನೆನಪುಗಳ ಗೆದ್ದು ಮೇಲೆದ್ದು
ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ಪ್ರೆಮಕಾವ್ಯಗಳು
ನೆನಪಿನ ಜ್ವಾಲೆಗಾಹುತಿಯಾಗಿರುವಾಗ
ನಾ ಬರೆಯುವ ಕವಿತೆ
ನಿನ್ನ ನೆನಪುಗಳ ಗೆಲ್ಲಬಹುದೆಂಬ
ಕೊಲ್ಲಬಹುದೆಂಬ ಭ್ರಾಂತಿ ನನಗಿಲ್ಲ.

ಕವಿತೆ ಬರೆಯುತ್ತೇನೆ ನಾನು;
ನೆನಪಿನ ದೋಣಿಯ ಯಾನ ಮುಗಿಸಿ
ತೀರ ಸೇರುವೆನೆಂಬ ಆಸೆಯಿಂದಲ್ಲ.
ಕೊನೆಯಿರದ ನೆನಪಿನ ಕಡಲಿನಲಿ
ತೇಲುತಲೇ ಇರುವೆನು ನಾನು
ನೀ ತೊರೆದಾಗಿನಿಂದಲೂ.
ಆಗೊಮ್ಮೆ ಈಗೊಮ್ಮೆ
ದೋಣಿಯಿಂದಾಚೆಗೆ ಜಿಗಿದು
ಈಜಲೆತ್ನಿಸಿ, ತೇಲಾಡಿ, ಓಲಾಡಿ,
ಮುಳುಗಿ ಉಸಿರುಗಟ್ಟಿ ಒದ್ದಾಡಿದ್ದೇನೆ.
ಕಡೆಗೆ ‘ಪ್ರೀತಿ ಮಧುರ
ನೆನಪುಗಳು ಅವiರ’ ಎನ್ನುತಾ
ಮತ್ತೆ ದೋಣಿ ಹತ್ತಿ ಕೂತಿದ್ದೇನೆ.

ನನಗೆ ಗೊತ್ತು ನಿನ್ನ ನೆನಪುಗಳಿಗೆ
ನೀಗಲಾರದ ದಾಹ.
ಎಷ್ಟು ಕವಿತೆಗಳ ಗೀಚಿದರೂ
ತಿದ್ದಿದರೂ, ತೀಡಿದರೂ, ಬೇಸತ್ತು
ಹಾಳೆ ಹರಿದೆಸೆದರೂ
ಇದಕೆ ಇನ್ನು ಬೇಕು
ಇನ್ನು ಬೇಕೆನ್ನುವ ಬಯಕೆ.

ಕವಿತೆ ಬರೆಯುತ್ತೇನೆ ನಾನು;
ನಿನ್ನ ನೆನಪುಗಳಿಗೆ
ಕಡಿವಾಣ ಹಾಕಬಲ್ಲೆನೆಂಬ
ವಿಶ್ವಾಸದಿಂದಲ್ಲ.
ಬರೆದಷ್ಟು ಹೊತ್ತು
ನೆನಪುಗಳ ಹಾಳೆಯಲಿ ತುಂಬಿಟ್ಟು
ನಿಶ್ಚಿಂತೆಯಿಂದಿರಬಹುದೆಂಬ
ಸಣ್ಣದೊಂದು ಆಸೆಯಿಂದ.
ಹಾಳೆ ಹರಿದೆಸೆಯಲು
ನಾನು ಮತ್ತದೇ ನಾನು
ನನ್ನೊಳಗೆ ನೀನು.

                                                                                             -ತ್ರಿವಿಕ್ರಮ

(ಜಿ.ಎಸ್.ಶಿವರುದ್ರಪ್ಪನವರ ‘ನನ್ನ ಹಣತೆ’ ಕವಿತೆಯಿಂದ ಪ್ರೇರಿತವಾಗಿ ಬರೆದದ್ದು)

No comments:

Post a Comment