Wednesday, November 14, 2018

ಕಾರ್ನರ್ ಸೀಟಿನ ಕಥೆಗಳು


ಕಾರ್ನರ್ ಸೀಟಿನ ಕಥೆಗಳು



ಮಧ್ಯಂತರ

ತೆರೆಯ ಮೇಲೆ ಮಧ್ಯಂತರ ಎಂಬ ಅಕ್ಷರಗಳು ಕಾಣುತ್ತಿದ್ದ ಹಾಗೆ, ಅಂಟಿ ಕುಳಿತಿದ್ದ ಪ್ರೇಮಿಗಳ ಮಧ್ಯ - ಅಂತರವೂ ಹೆಚ್ಚಾಯಿತು. ದೀಪಗಳು ಹೊತ್ತಿಕೊಂಡವು. ಸಿನಿಮಾ ಅಷ್ಟೇನೂ ಚೆನ್ನಾಗಿರದಿದ್ದರಿಂದ ಇದ್ದವರು ಕೆಲವೇ ಜನ. ಅದರಲ್ಲೊಂದಿಬ್ಬರು ಮೇಲೆದ್ದು ನಗುತ್ತಾ, ತಮ್ಮ ತಮ್ಮಲ್ಲೇ ಮಾತನಾಡುತ್ತಾ ಬಾಗಿಲುಗಳ ಕಡೆ ನೆಡೆದರು. ಇನ್ನು ಕೆಲವರು ಕೂತಲ್ಲಿಯೇ ಕೂತು ಜೇಬಿನಿಂದ ಮೊಬೈಲ್ ಹೊರತೆಗೆದರು, ಒಂದಿಬ್ಬರು ಹುಡುಗರು ಸಿನಿಮಾಗೆ ಬರುವ ಬದಲು ಬಾರಿಗಾದರೂ ಹೋಗಬಹುದಿತ್ತು ಎಂದು ಬೈದುಕೊಳ್ಳುತ್ತಾ ನನ್ನ ಎದುರೆ ನೆಡೆದು ಹೋದರು. ಇಲ್ಲಿ ಕುಳಿತಿದ್ದ ಪ್ರೇಮಿಗಳು ಹೋಗುವುದೋ ಬೇಡವೋ ಎಂದು ಒಂದಷ್ಟು ಚರ್ಚೆ ಮಾಡಿ ಕೊನೆಗೆ ಎದ್ದು ಹೊರನೆಡೆದರು. ಅವರು ಹೋದ ಮೇಲೆ ನಾನೂ ಆಕಳಿಸಿ ಕೂತಲ್ಲೇ ನಿಟ್ಟುಸಿರು ಬಿಟ್ಟೆ. ಇನ್ನು ಹತ್ತು ನಿಮಿಷಗಳ ವಿರಾಮ ನನಗೆ.

ನಾನು ಎಫ್ 22 ನಂಬರಿನ ಮೂಲೆಯ ಸೀಟು, ಅರ್ಥಾತ್ ಕಾರ್ನರ್ ಸೀಟು.

‘ಕಾರ್ನರ್ ಸೀಟು’ ಎಂದು ನನ್ನ ಅನ್ವರ್ಥನಾಮವನ್ನು ಕೇಳುತ್ತಿದ್ದಂತೇ ಎಲ್ಲರ ಮುಖದಲ್ಲೂ ವಿಷಯ ಅರ್ಥವಾದಂತೆ ಅದೊಂದು ನಗು ಹಾದು ಹೋಗುತ್ತದೆ. ಗೆಳೆಯನ ಕಂಪ್ಯೂಟರಿನಲ್ಲಿ ನಲವತ್ತು ಜಿಬಿ ಗಾತ್ರದ ಸ್ಟಡಿ ಮೆಟೀರಿಯಲ್ ಎಂಬ ಫೋಲ್ಡರನ್ನು ನೋಡಿದಾಗಲೋ, ಹನಿಮೂನ್ ಮುಗಿಸಿ ಹೋದವರ ರೂಮು ಕ್ಲೀನು ಮಾಡಲು ರೂಂ ಬಾಯ್ ಒಳಗೆ ಹೋದಾಗಲೋ ಬರುವಂತಹ ತುಂಟ ನಗು. ಪರವಾಗಿಲ್ಲ, ನನಗೆ ಅದರಲ್ಲೇನು ಮುಜುಗರವಿಲ್ಲ. ಕುಬೇರ ಮೂಲೆಯಲ್ಲಿಟ್ಟರೇ ತಾನೆ ತಿಜೋರಿ ತುಂಬುವುದು? ಹಾಗೆಯೇ ಟಾಕೀಸಿನ ಮೂಲೆಯಲಿ ಕೂತರೆನೇ, ತುಂಟತನ ಹೊರಗೆ ಬರುವುದು. ಹೌದು, ನನ್ನಲ್ಲಿಗೆ ಬರುವವರಲ್ಲಿ ಬಹುಪಾಲು ಮಂದಿ ತುಂಟರೇ. ಅವರಲ್ಲಿ ಹಾಲು ಕದಿಯಲು ಬಂದ ಬೆಕ್ಕಿನ ಅವಸರ, ಕರೆಂಟು ಹೋದಾಗ ಕ್ಯಾಂಡಲ್ಲು ಹುಡುಕುವ ಕೈಗಳ ಚಾತುರ್ಯ, ನಡುರಾತ್ರಿಯಲಿ ದಾರಿ ತಪ್ಪಿದವವರ ಭಯ, ದೂರದಲ್ಲಿ ಕಾಣುವ ಬೆಳಕನ್ನು ಹಿಂಬಾಲಿಸಿ ಹೋಗುವವರ ಕುತೂಹಲ, ಎಲ್ಲವೂ ಇದೆ. ಹೀಗೆ ಸಿನಿಮಾದ ಮುಂದೆ ನೆಡೆಯುವ ಲೈವ್ ಸಿನಿಮಾಗಳಿಗೆ ಪ್ರೇಕ್ಷಕ ನಾನು. ಕತ್ತಲೆಯೊಳಗೆ ನೆಡೆಯುವ ಈ ಕಣ್ಣಾಮುಚ್ಚಾಲೆ ಆಟಗಳಿಗೆ ಅಂಪೈರು ನಾನು.

ಕಂಡವರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವ ಈ ನನ್ನ ಚಟವನ್ನು ಕಂಡು ಮೂಗು ಮುರಿಯಬಹುದು. ಆದರೆ ನೀವೇ ನನ್ನ ಜಾಗದಲ್ಲಿ ನಿಂತು ಯೋಚಿಸಿ. (ಆಯ್ತು ನಿಲ್ಲಬೇಡಿ ಕೂತು ಯೋಚಿಸಿ). ನೀವೊಂದು ಸಿನಿಮಾವನ್ನು ಒಂದು ಸಲ ನೋಡಬಹುದು, ಎರಡು ಸಲ ನೋಡಬಹುದು. ಬಹಳ ಚೆನ್ನಾಗಿದ್ದರೆ ಹತ್ತು ಸಲ ನೋಡಬಹುದು. ಆದರೆ ನಾನು ಸಿನಿಮಾ ಚೆನ್ನಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ನಾಲ್ಕು ಸಲ ನೋಡಲೇಬೇಕು. ಹಿಟ್ ಸಿನಿಮಾವಾದರೆ, ಐವತ್ತು ದಿನ ನೂರು ದಿನಗಳವರೆಗೂ ನನಗೆ ಮುಕ್ತಿಯಿಲ್ಲ. ನನಗಿನ್ನೆಷ್ಟು ಜಿಗುಪ್ಸೆಯಾಗಬಹುದು? ಅದರಿಂದ ಹೊರಗೆ ಬರುವ ಒಂದೇ ಒಂದು ದಾರಿಯೆಂದರೆ ನನ್ನಲ್ಲಿಗೆ ಬಂದು ಕುಳಿತವರ ಕಥೆಗಳಿಗೆ ಕಿವಿಯಾಗುವುದು,

ಒಬ್ಬೊಬ್ಬರದು ಒಂದೊಂದು ಕಥೆಗಳು. ಆದರೆ ಸಾಮಾನ್ಯವಾಗಿ ಈ ಎಲ್ಲಾ ಕಥೆಗಳ ಕ್ಯಾಟಗರಿ ಒಂದೇ. ಏಕೆಂದರೆ ಇದರಲ್ಲಿ ಬಹುತೇಕ ಕಥೆಗಳು ಪಿಸುಮಾತಿನಲ್ಲಿ ಶುರುವಾಗಿ ಬಿಸಿಯುಸಿರಿನಲ್ಲಿ ಮುಂದುವರೆದು ನಸು ನಾಚಿಕೆಯಲ್ಲಿ ಕೊನೆಯಾಗುತ್ತವೆ. ಅವನ ರಸಿಕತೆ, ಅವಳ ಭಾವುಕತೆ, ಇಬ್ಬರನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡ ಕತ್ತಲಿನ ಜಾಗರೂಕತೆ, ಅಕ್ಕಪಕ್ಕದ ಸೀಟುಗಳಲಿ ಕುಳಿತವರ ಸಿನಿಕತೆ, ಇವೆಲ್ಲವೂ ಇದರಲ್ಲಿವೆ. ಹೇಳುವವರಿಗೆ ಈ ಕಥೆ ಮುಜುಗರ ತಂದರೂ, ಕೇಳುವವರಿಗೆ ಎಂದಿಗೂ ಈ ಕಥೆಗಳ ಬಗ್ಗೆ ಕುತೂಹಲ ಬತ್ತುವುದಿಲ್ಲ. ನಾನು ಮೊದಲೇ ಹೇಳಿದಂತೆ ಯಾವ ಮುಜುಗರವಿಲ್ಲದೇ ಒಂದಷ್ಟು ಕಥೆಗಳನ್ನು ಹೇಳುವೆ ಕೇಳಿ.

#@#

ಕಥೆ ೧

ಇತ್ತೀಚಿನ ಕಥೆಯೊಂದರಿಂದ ಪ್ರಾರಂಭಿಸುತ್ತೇನೆ. ಅವರಿಬ್ಬರೂ ಒಂದೇ ಆಫೀಸಿನವರಿರಬೇಕು, ಕೆಲಸದ ಶಿಫ್ಟು ಮುಗಿಸಿ ನೈಟು ಷೋಗೆ ಬಂದಿದ್ದರು. ತೋಳಿನ ಮೇಲೆ ಹೂವಿನ ಟ್ಯಾಟೂ ಇದ್ದ ಹಿಂದಿ ಹುಡುಗಿಗೆ ಕನ್ನಡದ ಒಂದೊಂದು ಸಂಭಾಷಣೆಯನ್ನೂ ಹಿಂದಿಗೆ ಅನುವಾದಿಸಿ ಹೇಳುತ್ತಿದ್ದ ಆ ಕನ್ನಡಕದ ಹುಡುಗ. ಅವನ ಮಾತುಗಳನ್ನು ಕೇಳಿ ಅವಳು ಬಿದ್ದು ಬಿದ್ದು ನಗುತ್ತಿದ್ದರೆ, ತನ್ನದೇ ಜೋಕಿಗೆ ನಗುತ್ತಿದ್ದಾಳೆಂಬಂತೆ ಖುಷಿಯಿಂದ ಬೀಗುತ್ತಿದ್ದ. ಬಿಟ್ಟಿದ್ದರೆ ಪೂರ್ತಿ ಸಿನಿಮಾವನ್ನೆ ಹಿಂದಿಗೆ ಡಬ್ ಮಾಡಿಬಿಡುತ್ತಿದ್ದನೇನೋ, ಅಷ್ಟರಲ್ಲಿ ಸುಂದರವಾದ ರೊಮ್ಯಾಂಟಿಕ್ ಹಾಡೊಂದು ಶುರುವಾಯಿತು, ಅವನು ಮಾತು ನಿಲ್ಲಿಸಿಬಿಟ್ಟ. ಅವಳು ಏನಾಯಿತೆಂಬಂತೆ ಇವನತ್ತ ತಿರುಗಿದಳು. ಟಾಕೀಸಿನ ಡಿಟಿಎಸ್ ಸ್ಪೀಕರುಗಳಲ್ಲಿ ಹಾಡು ಕೇಳುತ್ತಿದ್ದರೆ ಅದಕ್ಕೆ ತಕ್ಕಂತೆ ಇಲ್ಲಿ ಇವನ ಕೈಬೆರಳುಗಳು ಅವಳ ತೋಳ ಮೇಲೆ ಸಂಗೀತ ನುಡಿಸತೊಗಿದವು. ಎಲ್ಲಿಯೂ ಲಯ ತಪ್ಪದ ಅವನ ರಾಗಕ್ಕೆ ಇವಳು ಮಿಡಿದು ಶೃತಿಯಾದಳು. ಅವನ ರಸಿಕತೆಗೆ ರತಿಯಾದಳು. ಕನ್ನಡದ ಈ ಹೇರಿಕೆಯನ್ನು ಹಿಂದಿ ವಿರೋಧಿಸಲಿಲ್ಲ. ಕೆಲವು ನಿಮಿಷಗಳ ಕಾಲ ದೇಹದೊಳಗೆ ಉಚ್ವಾಸ ನಿಶ್ವಾಸಗಳ ಹಗ್ಗ ಜಗ್ಗಾಟ ನೆಡೆದು ಕಡೆಯಲ್ಲಿ ಇಬ್ಬರೂ ಸೋತಿದ್ದರು, ಇಬ್ಬರೂ ಗೆದ್ದಿದ್ದರು. ಕತ್ತಲು ಕಳೆದು ಮುಂಜಾನೆಗೆ ಹೂವರಳುವಂತೆ, ನಡುರಾತ್ರಿಯಲಿ ಥಿಯೇಟರಿನ ದೀಪಗಳುರಿದಾಗ ಅವಳ ಗುಳಿಕೆನ್ನೆಗಳಲಿ ಕೆಂಪು ಕೆಂಪಾದ ಹೂವರಳಿದ್ದವು. ಹಣೆಯ ಮೇಲೆ ಇಬ್ಬನಿಯಂತೆ ಬೆವರ ಹನಿ.

ಕಥೆ ೨

ಮುಂದಿನ ಕಥೆ ಅದೊಂದು ಮಾರ್ನಿಂಗ್ ಷೋಗೆ ಕಾಲೇಜಿಗೆ ಬಂಕು ಹಾಕಿ ಯೂನಿಫಾರ್ಮಿನಲೇ ಬಂದಿದ್ದ ಅವರಿಬ್ಬರದು. ಅದೆಷ್ಟು ನಿದ್ದೆಗೆಟ್ಟ ರಾತ್ರಿಗಳ ವಾಟ್ಸಾಪ್ ಮೆಸೇಜುಗಳ ಫಲವೋ, ಅಂತೂ ಇಬ್ಬರೂ ಒಂದಾಗಿ ಸಿನಿಮಾಗೆ ಬಂದಿದ್ದರು. ಬುಕ್ ಮಾಡುವಾಗಲೇ ಖಾಲಿಯಿದ್ದ ಕಾರ್ನರ್ ಸೀಟು ಹುಡುಕಿ ಬುದ್ಧಿವಂತಿಕೆ ಮೆರೆದಿದ್ದ ಹುಡುಗ. ಅವಳು ಕ್ರೈಸ್ತರ ಹುಡುಗಿ. ಕತ್ತಿನಲ್ಲಿ ಕ್ರಾಸ್ ಇತ್ತು. ಬಹುಶಃ ಇಬ್ಬರೂ ಅದೇ ಮೊದಲು ಸಿನಿಮಾಗೆ ಜೊತೆಗೆ ಬಂದಿದ್ದಿರಬೇಕು. ಚಿತ್ರದುದ್ದಕ್ಕೂ ಭಯದಿಂದ ಮುದುರಿ ಕುಳಿತಿದ್ದಳು. ಪೋನು ವೈಬ್ರೇಟಾದರೆ ಬೆಚ್ಚಿಬೀಳುತ್ತಿದ್ದಳು. ಆಗಾಗ ವಾಚು ನೋಡುತ್ತಿದ್ದಳು. ವಾಷ್ ರೂಮಿಗೆ ಎದ್ದು ಹೋಗಬೇಕಾದೀತು ಎಂದು ಆತ ತಂದುಕೊಟ್ಟ ಜ್ಯೂಸನ್ನೂ ಮುಟ್ಟಲಿಲ್ಲ. ಸೆಕೆಂಡ್ ಹಾಫ್ ಶುರುವಾಯಿತು. ಹುಡುಗ ಕೇಳಲೋ ಬೇಡವೋ ಎನ್ನುವಂತೆ ಪಿಸುಮಾತಿನಲ್ಲೇ ಪಪ್ಪಿಯೊಂದಕ್ಕೆ ಬೇಡಿಕೆಯಿಟ್ಟ. ಅವಳು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಸಾಧ್ಯವೇ ಇಲ್ಲವೆಂದಳು. ಹಲವು ಗುಸುಗುಸು ಪಿಸುಪಿಸುಗಳ ನಂತರ ಅವಳು ಕೊಡುವುದಿಲ್ಲವೆಂದು, ಆತನೇ ಕೊಡಬೇಕೆಂದು ನಿರ್ಧಾರವಾಗಿ ಅವಳು ಧೈರ್ಯ ತಂದುಕೊಂಡು ಸಂಕೋಚಗಳಿಂದ ಹ್ಯಾಂಡ್ ರೆಸ್ಟಿನ ಮೇಲೆ ಒರಗಿ ಕೂರುವಂತೆ ಮುಂದೆ ಭಾಗಿ ಕೆನ್ನೆ ಕೊಟ್ಟಳು. ತುಟಿ ಕೊಡುವಳೆಂದು ನಿರೀಕ್ಷಿಸಿದ್ದ ಹುಡುಗನಿಗೆ ನಿರಾಸೆಯಾದರೂ ಕಣ್ಣ ಮುಂದಿದ್ದ ಕೆನ್ನೆಯೂ ಹಿಂದೆ ಹೋಗುವುದರೊಳಗೆ ರಪಕ್ಕನೇ ಮುತ್ತಿಕ್ಕಿದ. ಕಿವಿಗೆ ಅಷ್ಟು ಸನಿಹದಲ್ಲೇ ಕೇಳಿದ ಆ ಮುತ್ತಿನ ಸದ್ದಿಗೆ ಬಾಂಬು ಸಿಡಿದವಳಂತೆ ಬೆಚ್ಚಿಬಿದ್ದು ಹಿಂದೆ ಸೀಟಿಗೊರಗಿ ಎದುಸಿರು ಬಿಡುತ್ತಿದ್ದರೇ. ಅವನು ಏನೋ ಸಾಧಿಸಿದವನಂತೆ ಹೆಮ್ಮೆಯಿಂದ ನಿಟ್ಟುಸಿರು ಬಿಟ್ಟ. ಸಿನಿಮಾ ಪರದೆಯನ್ನೇ ನೋಡುತ್ತಾ ಕುಳಿತ ಅವಳು ಅವನನ್ನು ಮತ್ತೆ ತಿರುಗಿ ನೋಡಲಿಲ್ಲ. ಅವಳನ್ನೇ ನೋಡುತ್ತಾ ಕುಳಿತ ಅವನು ಮತ್ತೆ ಸಿನಿಮಾ ನೋಡಲಿಲ್ಲ.

ಕಥೆ ೩

ಇದು ಕೆಲವು ವರುಷಗಳ ಹಿಂದಿನ ಕಥೆ. ಪರೀಕ್ಷೆ ಮುಗಿಸಿ ರಜೆಗೆ ಊರಿಗೆ ಹೋಗುತ್ತಿದ್ದ ಪ್ರೇಮಿಗಳಿಬ್ಬರು ಟ್ರೈನು ಹೊರಡಲು ಸಮಯವಿದ್ದುದರಿಂದ ಕೈಯಲ್ಲಿ ದೊಡ್ಡ ದೊಡ್ಡ ಲಗೇಜುಗಳನ್ನು ಹಿಡಿದು ಸಿನಿಮಾ ನೋಡಲು ಬಂದಿದ್ದರು. ಅವರೇನಾದರೂ ರೈಲ್ವೇ ಸ್ಟೇಷನ್ನಿನಲ್ಲಿ ಇಷ್ಟು ಲಗೇಜುಗಳೊಂದಿಗೆ ಕುಳಿತಿದ್ದರೆ, ಎಲ್ಲಿಗೋ ಓಡಿಹೋಗಲು ತಯಾರಾದವರಂತೆ ಕಾಣುತ್ತಿದ್ದರು. ಬಹುಶಃ ಅವರು ಹೀಗೆ ರಜೆಗೆ ಹೋಗುವುದು ಅದೇ ಮೊದಲ ಸಲವಾಗಿರಲಿಲ್ಲ. ಟಾಕೀಸಿನ ಕತ್ತಲಲಿ ಅಕ್ಕಪಕ್ಕದಲಿ ಕುಳಿತಾಗ ಮುತ್ತು ನೀಡಲು ಎಷ್ಟು ಡಿಗ್ರಿಯವರೆಗೆ ತಿರುಗಬೇಕು, ಸೊಂಟದಲ್ಲಿ ಕೈ ಜಾರಿಸಲು ಸೀಟಿನಲ್ಲಿ ಎಷ್ಟು ಇಂಚು ಕೆಳಗೆ ಜಾರಬೇಕು ಎಂಬ ಸಂಪೂರ್ಣ ಲೆಕ್ಕಾಚಾರಗಳು ಇದ್ದಂತಿತ್ತು. ರಜೆ ಮುಗಿಯುವವರೆಗೆ ಅದೆಷ್ಟು ದಿನಗಳ ಕಾಲ ದೂರವಿರಬೇಕಿತ್ತೋ ಏನೋ ಸಿನಿಮಾ ಪ್ರಾರಂಭವಾದ ಕೂಡಲೇ ಇಬ್ಬರೂ ಅಷ್ಟೂ ದಿನಗಳಿಗಾಗುವಷ್ಟು ನೆನಪುಗಳನ್ನು ಕಲೆಹಾಕತೊಡಗಿದರು. ಅವನ ಕೈಬೆರಳುಗಳು ಯುದ್ಧಕ್ಕೆ ಹೊರಟ ಕಾಲಾಳುಗಳಂತೆ ಅವಳ ದೇಹದ ಮೂಲೆ ಮೂಲೆಗಳನ್ನೆಲ್ಲಾ ಆಕ್ರಮಿಸುತ್ತಿರಲು, ಆತ ನೆನಪುಗಳನ್ನು ದೋಚುತ್ತಾ ಶ್ರೀಮಂತನಾದನು, ಶರಣಾದ ಅವಳು ಯಾವ ಪ್ರತಿರೋಧವಿಲ್ಲದೇ ಬೆರಳುಗಳು ಬಂದಲ್ಲಿಗೆ ದಾರಿ ಮಾಡಿಕೊಟ್ಟು ತನ್ನನ್ನೇ ಅರ್ಪಿಸಿಕೊಂಡು ಅವನ ಸಾಮಂತಳಾದಳು. ಸಿನಿಮಾವಿನ್ನೂ ಮುಗಿದಿರಲಿಲ್ಲ, ಆದರೆ ಟ್ರೈನಿಗೆ ಸಮಯವಾಗಿತ್ತು. ಇಬ್ಬರೂ ನಡುವಿನಲ್ಲೆ ಎದ್ದು ಹೊರಟರು. ಕೈಲಿದ್ದ ಲಗೇಜಿನ ಜೊತೆಗೆ ಎದೆಯೊಳಗೆ ನೂರಾರು ನಾಟಿ ನೆನಪುಗಳ ಲಗೇಜು ಭರ್ತಿಯಾಗಿತ್ತು.

ಕಥೆ ೪

ನನ್ನಲ್ಲಿಗೆ ಬರುವವರು ಪ್ರೇಮಿಗಳಷ್ಟೇ ಅಲ್ಲ. ಒಮ್ಮೊಮ್ಮೆ ಮದುವೆಯಾದ ದಂಪತಿಗಳು ಇಲ್ಲಿ ಬಂದು ಕೂರುವುದಿದೆ. (ಬೇರೆ ಬೇರೆಯವರ ಜೊತೆಗೆ ಮದುವೆಯಾಗಿದ್ದವರೂ ಬರುವುದುಂಟು, ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ) ಕಳೆದ ತಿಂಗಳು ನವವಿವಾಹಿತರಿಬ್ಬರು ಬಂದಿದ್ದರು. ಹೊಸದಾಗಿ ಮದುವೆಯಾಗಿದ್ದರಲ್ಲವೇ, ಅತ್ತೆ ಮನೆಯಲ್ಲಿ ಬಯಸಿದ ಏಕಾಂತ ಸಿಕ್ಕಂತಿರಲಿಲ್ಲ. ಅವರಿಬ್ಬರ ಹಣೆಬರಹದಲ್ಲಿ ಹನಿಮೂನು ಬರೆದಂತಿರಲಿಲ್ಲ. ದೇವಸ್ಥಾನಕ್ಕೆ ಪೂಜೆಗೋ, ಆಸ್ಪತ್ರೆಯ ಚೆಕಪ್ಪಿಗೋ ಹೋಗುವೆವೆಂದು ಹಳೆ ಸಿನಿಮಾದವರ ಹಾಗೆ ಸುಳ್ಳು ಹೇಳಿ ಬಂದಂತಿತ್ತು. ಹೆಂಡತಿಯಿನ್ನೂ ಚಿಕ್ಕವಳು. ಚೂರು ಬಾಯಿಬಡುಕಿ, ಗಂಡ ಮೂವತ್ತು ದಾಟಿದ ಮೌನೇಶ್ವರ. ಇಬ್ಬರಲ್ಲೂ ಆಗಷ್ಟೇ ಸಲುಗೆ ಮೊಳಕೆ ಹೊಡೆದು ಬೆಳೆಯುತ್ತಿತ್ತು. ಅವಳಿನ್ನು ಅವನನ್ನು ಏನೆಂದು ಕರೆಯಬೇಕೆಂದು ನಿರ್ಧರಿಸಿದಂತಿರಲಿಲ್ಲ. ಅದರ ಬಗ್ಗೆಯೇ ಚರ್ಚೆ ನೆಡೆಯುತ್ತಿತ್ತು. ಅಷ್ಟರಲ್ಲಿ ಸಿನಿಮಾ ಶುರುವಾಯಿತು. ನೋಡಿದರೆ ಸಿನಿಮಾದಲ್ಲಿದ್ದ ಹೀರೋ ಹೆಸರೂ, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹೀರೋ ಹೆಸರೂ ಎರಡೂ ಒಂದೇ. ಸಿನಿಮಾದಲ್ಲಿ ಅವನ ಹೆಸರು ಬಂದಾಗಲೆಲ್ಲಾ ಇವಳೂ ಅದೇ ಧಾಟಿಯಲ್ಲಿ ಅವನ ಹೆಸರನ್ನು ಕೂಗುತ್ತಾ ರೇಗಿಸತೊಡಗಿದಳು. ಗಂಡ ನೋಡುವ ತನಕ ನೋಡಿ, ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಮುತ್ತಿಟ್ಟುಬಿಟ್ಟ. ಇದನ್ನು ನಿರೀಕ್ಷಿಸದ ಅವಳಿಗೆ ಒಮ್ಮೆಲೆ ರೋಮಾಂಚನವಾಯಿತು. ಮಾತು ನಿಂತುಹೋಯಿತು. ಅಮ್ಮನ ಮುಂದೆ ನಿಂತು ಮಾತನಾಡಲೂ ಹೆದರುವ ತನ್ನ ಗಂಡನಿಗೆ ಇಷ್ಟೊಂದು ಧೈರ್ಯವೇ ಎನ್ನಿಸಿತು. ಅವಳ ನಾಚಿದ್ದನ್ನು ಕಂಡು ಒಳಗೊಳಗೆ ಹಿಗ್ಗಿದ ಪತಿಮಹಾಶಯ ಕೈಯನ್ನು ಚಾಚಿ ಕೆನ್ನೆಯ ಬಳಿಗೆ ತಂದಾಗ ಅದನ್ನು ಎರಡು ಕೈಗಳಲ್ಲಿ ಕೆಳಗೆ ತಂದು ಉಳಿದದ್ದನ್ನು ಮನೆಯಲ್ಲಿ ಮುಂದುವರೆಸುವಂತೆ ಕಣ್ಣಲ್ಲೇ ಬೇಡಿಕೊಂಡಳು ಹೆಂಡತಿ. ಆತ ತನ್ನ ತಾಕತ್ತು ತೋರಿಸಿದವನಂತೆ, ಆಯ್ತು ಎನ್ನುತ್ತಾ ಮೀಸೆ ತಿರುವಿ ಸಿನಿಮಾ ನೋಡತೊಡಗಿದ, ಅವಳು ಮನಸ್ಸಿನಲ್ಲೇ ಮನೆ ದೇವರನ್ನು ನೆನಪಿಸಿಕೊಂಡಿದ್ದಳು.

ನಿಮಗೆ ಈ ಕಥೆಗಳು ಹೊಸದಾಗಿದ್ದರೇ ನಿಮ್ಮನ್ನು ಒಂದು ಪ್ರಶ್ನೆ ಕಾಡುತ್ತಿರಬಹುದು, ನನ್ನಲ್ಲಿ ಬಂದು ಕುಳಿತ ಮಾತ್ರಕ್ಕೆ ಅವರೇನು ಅದೃಷ್ಯರಾಗಿಬಿಡುತ್ತಾರಾ? ನಾನೇನು ಮಾಯಾ ಕುರ್ಚಿಯಾ ಎಂದು. ಖಂಡಿತ ಇಲ್ಲ. ನನ್ನನ್ನು ಹಾಗೆ ಮಾಯಾ ಕುರ್ಚಿಯೆಂದುಕೊಂಡು ಕುಳಿತು ಸಿಕ್ಕಿಬಿದ್ದವರೂ ಇದ್ದಾರೆ. ಅದೊಮ್ಮೆ ಪಕ್ಕದಲ್ಲಿ ಸೀನಿಯರ್ ಸಿಟಿಜನ್ ಒಬ್ಬರು ಕುಳಿತಿದ್ದಾರೆಂಬ ಪರಿವೆಯೂ ಇಲ್ಲದೇ ಯೌವನದ ಹೊಳೆ ಹರಿಸುತ್ತಿದ್ದ ಜೋಡಿಯೊಂದಕ್ಕೆ ಅಂಕಲ್ ಇಡೀ ಟಾಕೀಸಿಗೆ ಕೇಳುವಂತೆ ಉಗಿದು ಉಪ್ಪು ಹಾಕಿದ್ದರು. ಹೊಳೆಗೆ ಅಣೆಕಟ್ಟು ಕಟ್ಟಿದ್ದರು. ಇನ್ನೊಮ್ಮೆ ಸಿನಿಮಾದ ಕ್ಲೈಮ್ಯಾಕ್ಸಿನ ಹಿನ್ನಲೆ ಸಂಗೀತದ ಹಿನ್ನಲೆಯಲ್ಲಿ ಪ್ರೇಮಿಗಳು ಕ್ಲೈಮ್ಯಾಕ್ಸ್ ತಲುಪುತ್ತಿದ್ದ ಸದ್ದುಗಳು, ಇದ್ದಕ್ಕಿದ್ದಂತೆ ಸಂಗೀತ ನಿಂತಾಗ ಚಿತ್ರಮಂದಿರದಲೆಲ್ಲಾ ವ್ಯಾಪಿಸಿ ಇಡೀ ಚಿತ್ರ ಮಂದಿರ ನನ್ನ ಕಡೆಗೆ ತಿರುಗಿತ್ತು. ಪ್ರೇಮಿಗಳಿಗೆ ರಸಭಂಗವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ತುಂಬಿದ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮುಗಿದು ಕೆಲವೇ ನಿಮಿಷದಲಿ ಲೋಕವನೇ ಮರೆತು ತುಟಿಗೆ ತುಟಿಯೊತ್ತಿದ್ದ ಪ್ರೇಮಿಗಳ ಮೇಲೆ ವಾಚ್ ಮನ್ ಕೆಂಪಣ್ಣ ಬಂದು ಟಾರ್ಚು ಬಿಟ್ಟಾಗ ಕೆಂಪಗಿದ್ದ ಆ ಹೊರರಾಜ್ಯದ ಜೋಡಿ ಮತ್ತಷ್ಟು ಕೆಂಪಾಗಿ ಹೋಗಿದ್ದರು. ಕೆಂಪಣ್ಣನಿಗೆ ಇದೆಲ್ಲಾ ಸಾಮಾನ್ಯವಾಗಿದ್ದರಿಂದ ಮೆಲ್ಲಗೆ ಗೊಣಗಿಕೊಳ್ಳುತ್ತಾ ತಾನು ಇತರೆ ಸೀಟುಗಳ ಕಡೆಗೆ ಟಾರ್ಚು ಬಿಡುತ್ತಾ ಮುಂದೆ ಹೋದ. ಆದರೆ ನಾಚಿಕೆಯಾದ ಆ ಇಬ್ಬರೂ ಅಲ್ಲಿ ಕೂರಲಾರದೇ ಅವಸರದಲ್ಲಿ ಎದ್ದು ಹೊರಗೆ ಹೊರಟು ಕತ್ತಲೆಯಲ್ಲಿ ಎತ್ತೆತ್ತಲೋ ಸಾಗಿ ಯಾರದೋ ಕಾಲೆಡವಿ ಬಿದ್ದು, ಮತ್ಯಾರದೋ ಕಾಲು ತುಳಿದು ಬಾಗಿಲಿನ ಕಡೆಗೆ ಕೆಂಪಣ್ಣನೇ ಮತ್ತೆ ಬಂದು ಬ್ಯಾಟರಿ ಬಿಟ್ಟು ಅವರಿಗೆ ಹೊರಕ್ಕೆ ದಾರಿ ತೋರಿಸಿದ್ದ.

#@#

ಹೇಳುತ್ತಾ ಹೋದರೆ, ಈ ಕಥೆಗಳಿಗೆ ಕೊನೆಯೇ ಇಲ್ಲ. ವರ್ಷಕ್ಕೆ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆಯೋ ಅದರ ಹತ್ತರಷ್ಟು ಕಥೆಗಳು ನನ್ನ ಬಳಿಯಿವೆ. ಇಲ್ಲಿ ಕೂತಿದ್ದು ಎದ್ದು ಹೋದ ಸಾವಿರಾರು ಜನರ ಕಥೆಗಳು. ಇಲ್ಲಿ ಕುಳಿತಿರುವಷ್ಟು ಹೊತ್ತು ಅದು ಅವರ ಕಥೆಗಳು. ಅವರು ಎದ್ದು ಹೋದ ಮೇಲೆ ಅವರ ಕಥೆಗಳು ನನ್ನ ಕಥೆಗಳು. ನಾ ನಿಮಗೆ ಹೇಳಬೇಕಾದ ಕಥೆಗಳು. ಹೇಳದಿದ್ದರೇ ಕತ್ತಲಲ್ಲೇ ಕಳೆದು ಹೋಗುವ ಕಥೆಗಳು.

ಸದ್ಯಕ್ಕಿಷ್ಟು ಸಾಕು. ಸಿನಿಮಾ ಮತ್ತೆ ಶುರುವಾಗುತ್ತಿದೆ. ಅಗೋ, ಆ ಜೋಡಿ ಪಾಪ್‌ಕಾರ್ನು, ಕೂಲ್‌ಡ್ರಿಂಕು ಹಿಡಿದು ಇತ್ತಲೇ ಬರುತ್ತಿದೆ. ಈ ಏಸಿಯ ಚಳಿಯಲ್ಲೂ ತಾವು ಬೆಚ್ಚಾಗಾಗಿ ನನ್ನನ್ನೂ ಬಿಸಿ ಮಾಡುತ್ತಾ ಮತ್ತೊಂದು ಹೊಸ ಕಥೆ ಹೇಳಲು.

No comments:

Post a Comment