Friday, November 02, 2018

ಡೈರೀಸ್ ಆಫ್ ದಾಳಿ ಪಾಪಣ್ಣ - 4


ಅಧ್ಯಾಯ – 4 – ಮತ್ತೆ ಪರಾರಿಯಾದ ಪಾಪಣ್ಣ



ಹಿಂದಿನ ಭಾಗದಲ್ಲಿ : ಪಾಪಣ್ಣನಿಗೆ ಬಸುರಿಯಾಗಿದ್ದ ಮಣಿಕರ್ಣಿಕಾಳನ್ನು ಕಾಣುವ ಬಯಕೆ ಹೆಚ್ಚಾಗಿ, ಹೆರಿಗೆಯ ಸಮಯದಲ್ಲಿ ಅವಳ ಜೊತೆಯಲ್ಲಿರಬೇಕೆಂಬ ಆಸೆಯಿಂದ, ಅದೊಂದು ರಾತ್ರಿ ಜೈಲಿನ ಗೋಡೆ ಹಾರಿ ಪಲಾಯನ ಮಾಡುತ್ತಾನೆ.

          ಗಂಟೆ ಸುಮಾರು ಮೂರು ಮುಕ್ಕಾಲಾಗಿತ್ತು. ದುರ್ಗದ ರಸ್ತೆಗಳು ನಿರ್ಜನವಾಗಿದ್ದವು. ಪಾಪಣ್ಣ ಕೋಟೆ ಬೀದಿಯನ್ನು ಸುತ್ತಿ ಬಂದು ಗೋಪಾಲ ಸ್ವಾಮಿ ಹೊಂಡದಲ್ಲಿಳಿದು ತಣ್ಣಗೆ ಕೊರೆಯುತ್ತಿದ್ದ ನೀರಿನ್ನು ಮುಖಕ್ಕೆರಚಿಕೊಂಡ. ಕೈಗೆ ಜೈಲು ಗೋಡೆಯ ತಂತಿಗಳು ಚುಚ್ಚಿದ್ದ ಗಾಯ ಚುರ್ರೆಂದಿತು. ಚಳಿ ತಾಳಲಾರದೆ ದೇವಸ್ಥಾನದ ಪಡಸಾಲೆಯಲ್ಲಿ ಹುಡುಕಿದಾಗ ಯಾವುದೋ ಹರಿದ ಕಂಬಳಿ ಸಿಕ್ಕಿತು. ಹೊದ್ದುಕೊಂಡು ಮತ್ತೆ ಹೊಂಡದ ಬದಿಯಲ್ಲಿ ಬಂದು ಕುಳಿತ. ಹಿಂದಿದ್ದ ಕೋಟೆಯ ಕಲ್ಲಿನ ನೆರಳುಗಳು ಅವನನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡಂತೆ ಅನ್ನಿಸಿತು. ಜೈಲಿನಲ್ಲೀಗ ಏನಾಗುತ್ತಿರಬಹುದು? ಇಷ್ಟು ಹೊತ್ತಿಗಾಗಲೇ ತಾನು ತಪ್ಪಿಸಿಕೊಂಡ ಸುದ್ದಿ ಗೊತ್ತಾಗಿರಬಹುದೇ? ನೈಟು ಡ್ಯೂಟಿಯಲ್ಲಿದ್ದ ಜಿತೇಂದ್ರ ಮತ್ತೆ ತನ್ನ ಕೋಣೆಯ ಬಳಿಗೆ ಹೋಗಿರಬಹುದೇ? ಗೊತ್ತಾದ ಕೂಡಲೇ ಮೊದಲು ಏನು ಮಾಡಿರಬಹುದು? ಜೈಲರ್ ಬಳಿ ಹೋಗಿರಬಹುದು. ಶಿವಶಂಕರ ಅರ್ಧ ನಿದ್ದೆಯಲ್ಲಿಯೇ ಎದ್ದು ಜೀತೇಂದ್ರನಿಗೆ ಉಗಿದು ಉಪ್ಪು ಹಾಕುತ್ತಾ ಜೈಲಿಗೆ ಓಡಿ ಬಂದಿರಬಹುದು. ಗಂಟಲು ಕೆಟ್ಟ ಆ ಹಳೇ ಸೈರನ್ನುಗಳನ್ನು ಕೂಗಿಸಲು ಆರ್ಡರ್ ಮಾಡಿರಬಹುದು. ಬೆಚ್ಚಿ ಬಿದ್ದವನಂತೆ ಎದ್ದು ನಿಂತು ಜೈಲಿನ ಕಡೆಗೆ ನೋಡಿದ. ಜಾವದ ನಿಶ್ಯಬ್ದದ ಹೊರತಾಗಿ ಬೇರ್ಯಾವ ಸದ್ದೂ ಕೇಳಿಸಲಿಲ್ಲ.

ಬೆಳಕು ಹರಿಯಲು ಸ್ವಲ್ಪ ಸಮಯ ಬಾಕಿ ಇತ್ತು. ಪಾಪಣ್ಣನಿಗೆ ಮಣಿಕರ್ಣಿಕಾಳ ನೆನಪಾಯಿತು. ಹೇಗಿದ್ದಾಳೋ ಏನೋ, ಗಿರಿಜಾಳ ಬಸುರಿನಲ್ಲಿ ಅವಳನ್ನು ತಂಗಿಯಂತೆ ನೋಡಿಕೊಂಡಿದ್ದವಳು. ಈಗ ಅವಳ ಆರೈಕೆಗೆ ಯಾರಿದ್ದಾರೋ, ಆದಷ್ಟು ಬೇಗ ಅವಳನ್ನು ನೋಡಬೇಕು ಎಂದುಕೊಂಡ. ಆದರೆ ಅವಳ ಮನೆ ದುರ್ಗದ ಯಾವ ಭಾಗದಲ್ಲಿ ಇರಬಹುದೆಂಬ ಕಿಂಚಿತ್ ಸುಳಿಹು ಅವನಿಗಿರಲಿಲ್ಲ. ಅವಳನ್ನು ಹುಡುಕುತ್ತಾ ಊರೆಲ್ಲಾ ಅಲೆಯುವುದೂ ಸಾಧ್ಯವಿರಲಿಲ್ಲ. ಪೋಲಿಸರು ಯಾವ ಕ್ಷಣದಲ್ಲಾದರೂ ಹುಡುಕಾಟ ಶುರು ಮಾಡಬಹುದಿತ್ತು. ತಾನು ಅವರ ಕೈಗೆ ಸಿಗದಂತೆ ಮಣಿಯನ್ನು ಪತ್ತೆ ಹಚ್ಚುವುದು ಅಸಾಧ್ಯವಾಗಿತ್ತು. ಯೋಚಿಸುತ್ತಾ ಕುಳಿತ ಪಾಪಣ್ಣನಿಗೆ ಉಪಾಯವೊಂದು ಹೊಳೆಯತು. ಇಡೀ ಚಿತ್ರದುರ್ಗಕ್ಕೆ ಇದ್ದದ್ದೊಂದು ಸರ್ಕಾರಿ ಆರೋಗ್ಯ ಕೇಂದ್ರ. ದುರ್ಗದಲ್ಲೇ ಇದ್ದಳಾದರೆ ಬಸುರಿಯಾಗಿದ್ದ ಮಣಿಕರ್ಣಿಕಾ ಅಲ್ಲಿಗೆ ಔಷಧಿಗಾಗಿ ಬರಲೇಬೇಕಿತ್ತು. ತಾನಲ್ಲಿಗೆ ರೋಗಿಯಾಗಿ ಹೋಗಿ ಹಾಸಿಗೆ ಹಿಡಿದು ಮಲಗಿದರೆ ಮಣಿ ತನಗೆ ಸಿಕ್ಕೇ ಸಿಗುತ್ತಾಳೆ ಎಂದುಕೊಂಡು ಬೆಳಕು ಹರಿಯುವ ತನಕ ಕಾದು ದೇವರಿಗೆ ಕೈಮುಗಿದು, ಆಸ್ಪತ್ರೆಯ ಕಡೆಗೆ ಹೊರಟ.

ಜೈಲಿನಲ್ಲಿದ್ದಾಗಲೇ ಬಡಕಲಾಗಿ ರೋಗಿಯಂತಾಗಿದ್ದ ಪಾಪಣ್ಣನಿಗೆ ಆಸ್ಪತ್ರೆಯಲ್ಲಿ ದಾಖಲಾಗುವುದೇನು ಹೆಚ್ಚು ಕಷ್ಟವಾಗಲಿಲ್ಲ. ಬಹಳ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದೇನೆಂದ್ದು ಡಾಕ್ಟರ ಮುಂದೆ ಬಿದ್ದು ಒದ್ದಾಡಿದಾಗ ಔಷಧಿ ಕೊಟ್ಟು ಎರಡು ದಿನದ ಮಟ್ಟಿಗೆ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲಾಯಿತು. ಎರಡು ದಿನ ನಾಲ್ಕು ದಿನವಾಗಿ ವಾರವೇ ಕಳೆಯಿತು. ಸರ್ಕಾರಿ ಆಸ್ಪತ್ರೆಯಾದ್ದರಿಂದ ಯಾರೂ ಅಷ್ಟಾಗಿ ಪಾಪಣ್ಣನ ಬಗ್ಗೆ ಅಷ್ಟು ಚಿಂತೆ ಮಾಡಿದಂತೆ ಕಾಣಲಿಲ್ಲ. ಆದರೆ ಪಾಪಣ್ಣನಿಗೆ ಮಣಿಕರ್ಣಿಕಾಳದ್ದೇ ಚಿಂತೆಯಾಗಿತ್ತು, ಅವಳೇನಾದರೂ ತನ್ನ ಸಂಬಂಧಿಕರ ಊರಿಗೆ ಹೋಗಿದ್ದರೆ? ಏಕೋ ಆಸ್ಪತ್ರೆಯಲ್ಲಿ ಕಾಯುವುದು ವ್ಯರ್ಥವೆನ್ನಿಸಿತು. ಅದಲ್ಲದೇ ಆಸ್ಪತ್ರೆ ಅಷ್ಟು ಸುರಕ್ಷಿತವೂ ಆಗಿರಲಿಲ್ಲ. ಆದಷ್ಟು ಬೇಗ ಬೇರೇನಾದರೂ ಮಾಡಬೇಕೆಂದು ಯೋಚಿಸತೊಡಗಿದ.

ಮರುದಿನ ಸಂಜೆ ಆಸ್ಪತ್ರೆಯ ದಾದಿಯರು ಮನೆಗೆ ಹೊರಡುವ ಸಮಯ. ಪಾಪಣ್ಣ ಡಾಕ್ಟರು ಕೊಟ್ಟು ಹೋದ ಗುಳಿಗೆಯನ್ನು ಕಿಟಕಿಯಿಂದ ಆಚೆಗೆ ಎಸೆದು ಇತ್ತ ತಿರುಗಬೇಕು. ಎದುರಿನಿಂದ ಸಾಕ್ಷಾತ್ ಮಣಿಕರ್ಣಿಕಾಳೇ ನೆಡೆದು ಬರುತ್ತಿದ್ದಳು. ಪಾಪಣ್ಣನಿಗೆ ಕಣ್ಣಿಂದಲೇ ನಂಬಲಾಗಲಿಲ್ಲ. ತನ್ನ ರೋಗವೆಲ್ಲಾ ವಾಸಿಯಾದವನಂತೆ ಮೈಕೊಡವಿ ಮೇಲೆದ್ದು ಬಾಗಿಲ ಬಳಿಗೆ ಓಡಿದ. ಮಣಿಕರ್ಣಿಕಾ ಒಳಗೆ ಬಂದಳು. ತುಸು ದಪ್ಪವೆನ್ನಿಸಿದರೂ, ಮೈ ಕೈ ತುಂಬಿಕೊಂಡು ಲಕಲಕ ಹೊಳೆಯುತ್ತಿದ್ದಳು. ಅವಳನ್ನು ಕಂಡ ಪಾಪಣ್ಣನಿಗೆ ಸ್ವರ್ಗವೇ ಕಂಡಂತಾಗಿ ಮೈಮರೆತು ನಿಂತ. ಮಣಿಕರ್ಣಿಕಾ ಒಳಗೆ ಬಂದು ಡಾಕ್ಟರ ಬಳಿ ಮಾತನಾಡಿ ಔಷಧಿ ತೆಗೆದುಕೊಂಡವಳು ದಾದಿಯರೊಡನೆ ಸ್ವಲ್ಪ ಹೊತ್ತು ಹರಟೆ ಹೊಡೆದು ನಂತರ ಹೊರಗೆ ಹೊರಟಳು. ಅವಳು ಬಾಗಿಲಿನಿಂದ ಹೊರಗೆ ಹೋದ ಮೇಲೆ ಹತ್ತು ಎಣಿಸಿ ತಾನೂ ಹೊರಬಿದ್ದು ಅವಳನ್ನು ಹಿಂಬಾಲಿಸತೊಡಗಿದ.

ಆದರೆ ಖಾಕಿ ಬಟ್ಟೆಯಲ್ಲಿದ್ದ ಪೇದೆಗಳಿಬ್ಬರು ಆತನ ಹಿಂದೆ ಇದ್ದದ್ದು ಅವನಿಗೆ ತಿಳಿಯಲೇ ಇಲ್ಲ.

***

ಪಾಪಣ್ಣ ಜೈಲಿನಿಂದ ತಪ್ಪಿಸಿಕೊಂಡ ಸುದ್ದಿಯನ್ನು ಕೇಳಿ ಶಿವಶಂಕರನಿಗೆ ತಲೆ ಕೆಟ್ಟು ಹೋಯಿತು, ಆ ಸುದ್ದಿ ಹೊರಗೆ ತಲುಪದಂತೆ ಪಾಪಣ್ಣನನ್ನು ಹುಡುಕಲು ಏರ್ಪಾಡು ಮಾಡಿದ್ದ. ಇದ್ಯಾವುದು ಅರಿಯದ ಮಣಿಕರ್ಣಿಕಾ ಮುಂದಿನ ಭಾನುವಾರ ಬಿರಿಯಾನಿ ಮಾಡಿ ಸರ್ವೇಶನ ಕೈಲಿ ಜೈಲಿಗೆ ಕೊಟ್ಟು ಕಳುಹಿಸಿದ್ದಳು. ಶಿವಶಂಕರ ಪಾಪಣ್ಣನನ್ನು ಭೇಟಿ ಮಾಡಲು ಸಾಧ್ಯವಿಲ್ಲವೆಂದು ಸಬೂಬು ಹೇಳಿ ಬಿರಿಯಾನಿಯನ್ನು ತಾನೇ ತಿಂದು ಸರ್ವೇಶನಿಗೆ ಡಬ್ಬಿ ವಾಪಸ್ಸು ಕೊಟ್ಟು ಆತನ ಹಿಂದೆ ಪೇದೆಗಳನ್ನು ಬಿಟ್ಟಿದ್ದ. ಅವನನ್ನು ಹಿಂಬಾಲಿಸಿದ ಪೇದೆಗಳು ಪಾಪಣ್ಣನಿಗೆ ಬಿರಿಯಾನಿ ಕಳಿಸಿದ್ದು ಮಣಿಕರ್ಣಿಕಾ ಎಂದು ತಿಳಿದಾಗ ಕೆಂಡಮಂಡಲನಾಗಿದ್ದ. ನಿಧಾನವಾಗಿ ಅವನಿಗೆ ಎಲ್ಲವೂ ಅರ್ಥವಾಯಿತು. ಮಣಿಯ ಬಸುರಿಗೆ ಪಾಪಣ್ಣನೇ ಕಾರಣವಾದರೆ ಆತ ಅವಳನ್ನು ಕಾಣಲು ಬಂದೇ ಬರುವನೆಂದು ಊಹಿಸಿ ಮಣಿಯ ಮನೆಯ ಬಳಿ ಪೇದೆಗಳನ್ನು ಬಿಟ್ಟಿದ್ದ. ಅವಳೆಲ್ಲಿಗೆ ಹೋದರೂ ಬಾಲದಂತೆ ಹಿಂಬಾಲಿಸುತ್ತಿದ್ದ ಪೇದೆಗಳಿಗೆ ಆಸ್ಪತ್ರೆಯ ಬಳಿ ಮಣಿಯ ಹಿಂಬಾಲಿಸಿದ ಪಾಪಣ್ಣನನ್ನು ಕಂಡು ಲಾಟರಿ ಹೊಡೆದಂತಾಗಿ ಲಾಟಿ ತಿರುಗಿಸುತ್ತಾ ಖುಷಿಯಿಂದ ಅವನನ್ನು ಹಿಂಬಾಲಿಸಿದ್ದರು.

***
ಮಣಿಕರ್ಣಿಕಾ ರಸ್ತೆ ಬದಿಯಲ್ಲಿ ನೆಡೆಯುತ್ತಿದ್ದವಳು, ಇದ್ದಕ್ಕಿದ್ದಂತೆ ನಿಂತು ಏನೋ ನೆನಪಾದವಳಂತೆ ಹಿಂದಕ್ಕೆ ತಿರುಗಿ ಬಂದು ರಸ್ತೆ ಬದಿಯಲ್ಲಿ ಮಾರುತ್ತಿದ್ದ ಮಾವಿನಕಾಯಿ ವ್ಯಾಪಾರ ಮಾಡತೊಡಗಿದಳು. ಪಾಪಣ್ಣ ಅವಳಿಗೆ ಕಾಣದಂತೆ ಮರೆಯಾಗಿ ನಿಂತ. ಹಿಂದೆ ಇದ್ದ ಪೇದೆ ಸತೀಶ ಇದೇ ಸರಿಯಾದ ಸಮಯವೆಂದು ಹಿಡಿಯಲು ಮುನ್ನುಗ್ಗಿದ.

ಆದರೆ ಅವನನ್ನು ತಡೆದ ಮತ್ತೊಬ್ಬ ಪೇದೆ ಚೆನ್ನಪ್ಪ ‘ನಾವಿಬ್ರೇ ಅವನನ್ನ ಹಿಡಿಯೋದ್ ಸರಿಯಾಗಲ್ಲ. ಓಡೋದ್ರೆ ಕಷ್ಟ’ ಹೆಂಗೂ ಅವನು ಆಯಮ್ಮನ ಮನೆಗೆ ಹೋಗ್ತಾವ್ನೇ. ನಾನು ಹಿಂದೆ ಹೋಗ್ತೀನಿ’ ನೀನು ಹೋಗಿ ಸಾಹೇಬ್ರನ್ನ, ನಾಲ್ಕೈದು ಜನನ್ನ ಕರ್ಕಂಡ್ ಬಾ’ ಎಂದ.

‘ಏ ಒಬ್ಬನ್ ಹಿಡ್ಯಕ್ಕೆ, ನಾಲ್ಕೈದು ಜನಾನಾ?, ಬಾರಯ್ಯ ನಾನಿದಿನಿ’ ಎಂದು ಮುಂದೆ ಹೆಜ್ಜೆ ಇಟ್ಟ ಸತೀಶ.

‘ಹೇಳ್ದಷ್ಟ್ ಮಾಡಲೇ, ಅವನತ್ರ ಏನಾದ್ರೂ ಕತ್ತಿಗಿತ್ತಿ ಇದ್ದು, ಹೊಟ್ಟೆಗೆ ಹೆಟ್ಬುಟ್ರೆ ಏನ್ ಮಾಡ್ತಿಯಾ?’ ಎಂದು ಚೆನ್ನಪ್ಪ.
ಸತೀಶ ಏನೋ ಯೋಚಿಸಿ ‘ನೀನೇ ಹೋಗು, ನಾನೇ ಫಾಳೋ ಮಾಡ್ತಿನಿ’ ಎಂದ.

‘ನಾನ್ ಸೀನಿಯರ್ರು. ನಾ ಹೇಳಿದ್ ನೀನ್ ಮಾಡಬೇಕು, ಹೋಗ್ತಾ ಇರು’ ಎಂದು ದರ್ಪದಿಂದ ಗದರಿದ.
ಸತೀಶ ಚೆನ್ನಪ್ಪನನ್ನು ಬೈದುಕೊಳ್ಳತ್ತಾ ಜೈಲಿನ ಕಡೆಗೆ ಹೊರಟ. ಮಣಿಕರ್ಣಿಕಾ ಮಾವಿನ ಕಾಯಿ ಕೊಂಡು ಮನೆ ಕಡೆಗೆ ನೆಡೆಯತೊಡಗಿದಳು. ಮುಂದೆ ಮಣಿ, ಅವಳ ಹಿಂದೆ ಪಾಪಣ್ಣ, ಆತನ ಹಿಂದೆ ಪೇದೆ ಚೆನ್ನಪ್ಪ.

ಕತ್ತಲು ನಿಧಾನವಾಗಿ ಆವರಿಸುತ್ತಿತ್ತು. ಮನೆ ತಲುಪಿದ ಮಣಿಕರ್ಣಿಕಾ ಹಣೆಯ ಮೇಲಿನ ಬೆವರು ಒರೆಸುತ್ತಾ ಬಾಗಿಲು ತಟ್ಟಿದಳು. ಬಾಗಿಲು ತೆಗೆದ ಸರ್ವೇಶ ಅವಳ ಕೈಲಿದ್ದ ಬ್ಯಾಗು ತೆಗೆದುಕೊಂಡು ಒಳಗೆ ಹೋದ. ಮಣಿ ಒಳಗೆ ಹೋಗಿ ಇನ್ನೇನು ಬಾಗಿಲು ಹಾಕಬೇಕು, ಪಾಪಣ್ಣ ಹಿಂದಿನಿಂದ ಸೀದಾ ಒಳಗೆ ನುಗ್ಗಿ ಬಾಗಿಲು ಮುಚ್ಚಿದ. ಮಣಿ ಕಿಟಾರನೇ ಕಿರುಚಿದಳು. ಸರ್ವೇಶ ‘ಏಏಏನಾಯ್ತಕ್ಕೋ..’ ಎಂದು ಕೂಗುತ್ತಾ ಬ್ಯಾಗು ಕೈಯಲ್ಲಿ ಹಿಡಿದೇ ಹೊರಗೆ ಓಡಿಬಂದ. ಪಾಪಣ್ಣ ಅವಳ ಬಾಯಿಯನ್ನು ಮುಚ್ಚಿಹಿಡಿದು ಹೊದ್ದುಕೊಂಡಿದ್ದ ಕಂಬಳಿಯನ್ನು ಕೆಳಗೆ ಬಿಟ್ಟ. ಇಬ್ಬರಿಗೂ ಪಾಪಣ್ಣನನ್ನು ಕಂಡು ದಿಗ್ಭ್ರಮೆಯಾಯಿತು. ಮಣಿಯಂತೂ ಮಾತೇ ಹೊರಡದೇ ಅವನನ್ನು ತಬ್ಬಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಪಾಪಣ್ಣ ನಿಧಾನವಾಗಿ ಅವಳ ಬೆನ್ನು ಸವರುತ್ತಾ ಸಮಾಧಾನ ಮಾಡಿದ. ಹಿಂದೆ ನಿಂತಿದ್ದ ಸರ್ವೇಶನನ್ನು ಕಂಡು ಮುಗುಳ್ನಕ್ಕ.

ಮಣಿ ಸುಧಾರಿಸಿಕೊಂಡು ಕಣ್ಣೀರು ಒರೆಸಿಕೊಳ್ಳುತ್ತಾ ಹಿಂದಕ್ಕೆ ಬಂದು ಪಾಪಣ್ಣನನ್ನು ಕಣ್ತುಂಬಾ ನೋಡಿದಳು. ಕೊನೆಯ ಬಾರಿ ಜೈಲಿನಲ್ಲಿ ಎಲ್ಲಾ ಕಳೆದುಕೊಂಡಂತಿದ್ದ ಪಾಪಣ್ಣ ಈಗ ಸಾಕಷ್ಟು ಬದಲಾಗಿದ್ದ, ಗಡ್ಡ ಮೀಸೆಗಳು ಹಾಗೆಯೇ ಇದ್ದರೂ ಕಣ್ಣುಗಳಲ್ಲಿ ಮಣಿಕರ್ಣಿಕಾಳನ್ನು ಕಂಡು ಹೊಸದೊಂದು ಸಂತಸವಿತ್ತು. ಮಣಿಯ ಕಣ್ಣುಗಳಲ್ಲೂ ಪಾಪಣ್ಣನನ್ನು ಕಂಡು ಅದೇ ಸಂತಸ ಪ್ರತಿಫಲಿಸುತ್ತಿತ್ತು. ಆ ಸಂತೋಷದ ನಡುವೆಯೂ ಅವಳ ಮನದಲ್ಲಿ ನೂರಾರು ಪ್ರಶ್ನೆಗಳು ಬಂದವು,

ಆದರೆ ಮೊದಲು ನಾಲಿಗೆಯಿಂದ ಹೊರಬಿದ್ದಿದ್ದು ‘ಹೇಗೆ ಬಂದಿರಿ?’

ಪಾಪಣ್ಣ ಅವಳ ಭುಜವನ್ನು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ‘ನಿಮ್ಮುನ್ ನೋಡ್ಬೇಕ್ ಅನ್ನುಸ್ತು, ಸೀದಾ ಬೇಲಿ ಹಾರ್ಕಂಡ್ ಬಂದ್ಬುಟೆ’ ಎಂದ.

ಮಣಿ ನಾಚುತ್ತಾ ತಲೆತಗ್ಗಿಸಿದಳು. ಭುಜದ ಮೇಲಿದ್ದ ಪಾಪಣ್ಣನ ಕೈಯನ್ನು ತೆಗೆದು ತುಂಬಿದ್ದ ಹೊಟ್ಟೆಯ ಮೇಲೆ ಇರಿಸಿಕೊಂಡಳು. ಏಕೋ ಗೊತ್ತಿಲ್ಲ, ಪಾಪಣ್ಣನಿಗೆ ಅದನ್ನು ಮುಟ್ಟಿದ ಕೂಡಲೇ ಮೊದಲ ಹೆಂಡತಿ ಗಿರಿಜಾಳ ನೆನಪಾಯಿತು. ಅವಳ ಹೊಟ್ಟೆಯನ್ನು ಹೀಗೆ ಜೈಲಿನ ಸರಳುಗಳ ನಡುವಿನಿಂದ ಸವರಿದ್ದು, ಆಮೇಲೆ ಮಗು ಜನಿಸಿದಾಗ ಖುಷಿಪಟ್ಟಿದ್ದು, ಮತ್ತೆ ಅದು ಸತ್ತಾಗ ಕಣ್ಣೀರಿಟ್ಟಿದ್ದು ಎಲ್ಲವೂ ಒಮ್ಮೆ ಕಣ್ಮುಂದೆ ಬಂದು ಹೋಯಿತು. ಅವಳ ಮುಂದೆ ಕುಸಿದು ಕುಳಿತು ‘ನಿಮ್ಗೆ ಹೆರಿಗೆ ಆಗೋಗಂಟ ನಿಮ್ ಜೊತೆಗೆ ಇರ್ತಿನಿ ಮೇಡಮ್ಮೋರೆ, ಎಲ್ಗೂ ಹೋಗಕಿಲ್ಲಾ, ಎಂದು ಅವಳ ಒಡಲನ್ನು ತಬ್ಬಿಕೊಂಡು ಕಣ್ಣಿರಿಟ್ಟ.

ಆಗಲೇ ಬಾಗಿಲು ತಟ್ಟಿದ ಸದ್ದಾಯಿತು. ಪಾಪಣ್ಣ ಬೆಚ್ಚಿಬಿದ್ದ.

ಹಿಂದೆಯೆ ಚೆನ್ನಪ್ಪನ ಧ್ವನಿ ಬಂದಿತು ‘ಪಾಪಣ್ಣ ಒಳಗಿದ್ಯಾ ಅಂತ ಗೊತ್ತು, ಬಾಗ್ಲು ತಗಿ’

ಶಿವಶಂಕರ, ಮತ್ತು ಇನ್ನಷ್ಟು ಜನ ಪೋಲಿಸರನ್ನು ಕರೆದುಕೊಂಡು ಬರಲು ಹೊರಟ ಸತೀಶನಿಗೆ ಚೆನ್ನಪ್ಪ ತಾನೊಬ್ಬನೇ ಪಾಪಣ್ಣನನ್ನು ಹಿಡಿದು ಸಾಹೇಬರಿಂದ ಶಹಬಾಸಗಿರಿ ತೆಗೆದುಕೊಳ್ಳುವ ಪ್ಲಾನು ಮಾಡಿದ್ದಾನೆಂಬ ಆಲೋಚನೆ ಬಂದಿತು. ‘ಛೇ, ತಾನು ಮೂರ್ಖನಂತೆ ಅವನೊಬ್ಬನನ್ನೇ ಬಿಟ್ಟು ಬರಬಾರದಿತ್ತು’ ಎಂದುಕೊಂಡು ಅರ್ಧ ದಾರಿಯಲ್ಲೇ ವಾಪಸ್ಸು ಬಂದಿದ್ದ. ಚೆನ್ನಪ್ಪನಿಗೆ ಅವನ ಈ ಉದ್ಧಟತನವನ್ನು ಕಂಡು ಮೈಯೆಲ್ಲಾ ಉರಿದರೂ ಹೆಚ್ಚು ಸಮಯವಿಲ್ಲದೇ ಇದ್ದಿದ್ದರಿಂದ, ಕೂಡಲೇ ಏನಾದರೂ ಮಾಡಬೇಕೆಂದು ಮನೆಯ ಬಾಗಿಲು ತಟ್ಟಿದ್ದ.

‘ಮಣಿಯಮ್ಮ ಬಾಗ್ಲು ತೆಗೆದುಬಿಡು, ಆಟ ಆಡ್ಬೇಡ’ ಮತ್ತೆ ಕೂಗುತ್ತಾ ಬಾಗಿಲು ಬಡಿದ ಚೆನ್ನಪ್ಪ.

ಪಾಪಣ್ಣನ ಮೈಯಲ್ಲ ಬೆವತು ಹೋಯಿತು. ಕೂಡಲೇ ಮೇಲೆದ್ದು ಅತ್ತಿತ್ತ ನೋಡುತ್ತಾ ಮೆಲ್ಲಗೆ ಕೇಳಿದ, ‘ಬಚ್ಚಿಟ್ಕಳಕ್ ಎಲ್ಲಾದ್ರೂ ಜಾಗ ಐತಾ?’

ಮಣಿಕರ್ಣಿಕಾಳಿಗೆ ನಿಂತಲ್ಲೇ ತರತರ ನಡುಗುತ್ತಿದ್ದಳು. ‘ನೀವು ಸರೆಂಡರ್ ಆಗೋದು ಒಳ್ಳೆದು’ ಎಂದು ನಡುಗುವ ದನಿಯಲ್ಲಿ ಹೇಳಿದಳು.

ಪಾಪಣ್ಣ ಅವಳನ್ನೊಮ್ಮೆ ದಿಟ್ಟಿಸಿ ನೋಡಿ ಇಲ್ಲವೆನ್ನುವಂತೆ ತಲೆಯಾಡಿಸುತ್ತಾ ‘ಇಲ್ಲ ಮೇಡಮ್ನೋರೆ ನಿಮ್ ಹೆರಿಗೆ ಆಗೊಗಂಟ ನಾನ್ ಈ ಪೋಲಿಸ್ನೋರ ಕೈಗೆ ಸಿಗಿದಿಲಾ’ ಎಂದು ಅತ್ತಿತ್ತಾ ಓಡಾಡತೊಡಗಿದ.

‘ಸರೆಂಡರ್ ಆಗು ಪಾಪಣ್ಣ, ನಮ್ ಹತ್ರ ಬಂದೂಕಿದೆ, ಸುಟ್ಟುಬಿಡ್ತಿವಿ’ ಸತೀಶ ಹೊರಗಿನಿಂದ ಧಮಕಿ ಹಾಕಿದ.

ಅವರಿಬ್ಬರೇ ಮತ್ತೆ ಮತ್ತೆ ಮಾತನಾಡುತ್ತಿದ್ದರಿಂದ ಹೊರಗೆ ತುಂಬಾ ಜನವಿಲ್ಲವೆಂದು ಪಾಪಣ್ಣನಿಗೆ ಅರಿವಾಯಿತು. ಮಣಿಕರ್ಣಿಕಾ ಇನ್ನೂ ಅಳುತ್ತಲೇ ಇದ್ದಳು. ಏನೂ ಆಗುವುದಿಲ್ಲವೆಂದು ಅವಳಿಗೆ ಸಮಾಧಾನ ಮಾಡಿ ಸುತ್ತಮುತ್ತಲೂ ನೋಡಿದ. ಸರ್ವೇಶನ ಕೈಲಿದ್ದ ಮಾವಿನ ಕಾಯಿಯ ಚೀಲ ಕಾಣಿಸಿತು. ತಕ್ಷಣ ಏನೋ ಯೋಚಿಸಿ ಕೆಳಗೆ ಬಿದ್ದಿದ್ದ ಕಂಬಳಿಯೊಳಗೆ ಮೂರ್ನಾಲ್ಕು ದಪ್ಪದಪ್ಪ ಮಾವಿನ ಕಾಯಿ ಹಾಕಿ ಸುತ್ತಿಟ್ಟ. ಮಣಿಕರ್ಣಿಕಾಳಿಗೆ ಧೈರ್ಯ ಹೇಳಿ ಒಳಗೆ ಕಳುಹಿಸಿ ಸರ್ವೇಶನಿಗೆ ಬಾಗಿಲು ತೆಗೆಯುವಂತೆ ಹೇಳಿದ. ತಾನು ಕೈಲಿ ಮಾವಿನ ಕಾಯಿ ಹಿಡಿದು ಬಾಗಿಲ ಎದುರು ಕುಳಿತ. ಸರ್ವೇಶ ಭಯದಿಂದಲೇ ಹಿಂದೆ ಹಿಂದೆ ನೋಡುತ್ತಾ ಬಾಗಿಲು ತೆಗೆದ.

ಬಾಗಿಲು ತಳ್ಳಿ ಮೊದಲು ಒಳನುಗ್ಗಿದ ಸತೀಶನ ಮುಖಕ್ಕೆ ರಪ್ಪನೆ ಮಾವಿನ ಕಾಯಿಯೊಂದು ಬಡಿದು ಅಪ್ಪಚ್ಚಿಯಾಯಿತು. ಅವನ ಹಿಂದೆಯೇ ಒಳಗೆ ಬಂದ ಚೆನ್ನಪ್ಪನ ತಲೆಗೂ ಮಾವಿನ ಕಾಯಿ ಬಡಿಯಿತು. ಏನಾಗುತ್ತಿದೆ ಎಂದು ಅವರಿಬ್ಬರಿಗೆ ಅರಿವಾಗುಷ್ಟರಲ್ಲಿ ಮಿಂಚಿನಂತೆ ಮುನ್ನುಗ್ಗಿದ ಪಾಪಣ್ಣ ಮಾವಿನಕಾಯಿ ಸುತ್ತಿದ್ದ ಕಂಬಳಿಯನ್ನು ಬಲವಾಗಿ ಬೀಸುತ್ತಾ ಪೇದೆಗಳ ತಲೆ, ಬೆನ್ನು, ಭುಜ, ಹೊಟ್ಟೆ, ತಿಕ ಹೀಗೆ ಎಲ್ಲೆಂದರಲ್ಲಿ ಬಾರಿಸತೊಡಗಿದ. ಚೆನ್ನಪ್ಪ ಹಾಗು ಸತೀಶ ನೆಲಕ್ಕೆ ಬಿದ್ದು ನೋವಿನಿಂದ ಚೀರತೊಡಗಿದರು. ಗಲಾಟೆ ಕೇಳಿ ಮಣಿಕರ್ಣಿಕಾ ಹೊರಗೆ ಓಡಿಬಂದು ಆಶ್ಚರ್ಯದಿಂದ ಪಾಪಣ್ಣನ ಈ ಪ್ರತಾಪವನ್ನು ನೋಡುತ್ತಾ ನಿಂತಳು. ಚೆನ್ನಾಗಿ ಥಳಿಸಿದ್ದಾದ ಮೇಲೆ ಅರೆಕ್ಷಣ ಸುಮ್ಮನೇ ನಿಂತು ಮಣಿಕರ್ಣಿಕಾಳತ್ತ ನೋಡಿದ ಪಾಪಣ್ಣ ಮನೆಯಿಂದ ಹೊರಬಿದ್ದು ಕತ್ತಲೆಯಲ್ಲಿ ಓಡತೊಡಗಿದ. ಚೆನ್ನಪ್ಪ ಸತೀಶ ಸುಧಾರಿಸಿಕೊಂಡು ಮೇಲೆದ್ದು ನೋವಿನಿಂದ ನರಳುತ್ತಾ ಆತನ ಹಿಂದೆ ಓಡತೊಡಗಿದರು.

(ಮುಂದುವರೆಯುವುದು)

No comments:

Post a Comment