Sunday, February 21, 2016

ಸಿಟ್ಟಿಗೊಂದು ಸಾನೆಟ್ಟು

ಸಿಟ್ಟಿಗೊಂದು ಸಾನೆಟ್ಟು
 

ನಿನ್ನ ಸೃಷ್ಟಿ ಮಾಡವಾಗ ಬ್ರಹ್ಮ ಮಾಡಿಬಿಟ್ಟ ಸಣ್ಣ ಲೋಪ
ಮೂಗು ಸ್ವಲ್ಪ ಉದ್ದ ಮಾಡಿ ಅದರ ತುದಿಯಲಿಟ್ಟ ಕೋಪ.
ನಿನ್ನ ಕೋಪ ನನಗೆ ವರದೊಡನೆ ಕೊಟ್ಟ ಬಿಟ್ಟಿ ಶಾಪ
ಈಗ ನನಗೆ ನಾನೇ ಅಂದುಕೊಳ್ಳಬೇಕು ‘ಅಯ್ಯೊ ಪಾಪ’.

ನನಗೋ ಸದಾ ನಿನ್ನ ರೇಗಿಸುತಾ ತರಲೆ ಮಾಡುವ ಚಾಳಿ
ತರಲೆ ತಲೆಕೆಳಾಗಾಗಲು ಕೆರಳಿ ನೀನಾಗುವೆ ಮಹಾಕಾಳಿ..!
ತಪ್ಪು ಮಾಡಿ ಬೆಪ್ಪ ಕುರಿಯಂತೆ ನಾ ಸಿಗುವೆ ನಿನ್ನ ಕೈಲಿ
ನಿನ್ನ ಕೋಪ ತಾಪಗಳಿಗೆ ನಾ ತಾನೆ ಆಗಬೇಕು ಬಲಿ?

ತಪ್ಪಾಯ್ತು ಮಾರಾಯ್ತಿ..! ನನ್ನ ತಂಟೆ ತರಲೆ ಎಲ್ಲಾ ಬಿಟ್ಟು
ಬೇಡುತಿರುವೆನು, ಕೊಂಚ ಕಡಿಮೆ ಮಾಡಿಕೊಳ್ಳೆ ನಿನ್ನ ಸಿಟ್ಟು
ಮಾಡಿದ ತಪ್ಪಿಗೆ ನೂರಿಪ್ಪತ್ತು ಮುತ್ತಿನ ತಪ್ಪು ಕಾಣಿಕೆ ಕೊಟ್ಟು
ಅದರೊಡನೆ ಬರೆದಿರುವೆ ಈ ಹದಿನಾಲ್ಕು ಸಾಲುಗಳ ಸಾನೆಟ್ಟು

ಇನ್ನೊಮ್ಮೆ ಕೇಳುವೆ, ಕ್ಷಮಿಸುಬಿಡೆ ಚಿನ್ನಮ್ಮ ಸಾರಿ
ಕೊಂಚ ಕರುಣೆಯ ತೋರೆ, ಕ್ಷಮಯಾಧರಿತ್ರಿ ನೀ ನಾರಿ





- ತ್ರಿವಿಕ್ರಮ



No comments:

Post a Comment