Sunday, December 25, 2016

ಪುನರಪಿ ವಿರಹಂ - ಪುನರಪಿ ಬರಹಂ


ಮೀಟು ಮಾಡುವುದೆರಡು ದಿನ
ಲೇಟಾಗಿಹೋದರೂ
ಲೈಟಾಗಿ ಶುರುವಾಗುವುದಲ್ಲ ವಿರಹ?
ಆರಕ್ಕೆ ತೆರೆವ ಬಾರಿಗೆ
ಮೂರಕ್ಕೆ ಬಂದು ನಿಂತ
ಕುಡುಕನ ದಾಹದ ತರಹ

ಆಗ ಬರುವೆ ಈಗ ಬರುವೆ-
ನೆನ್ನುತ ನೀ ಹಾರಿಸಿದ ಕಾಗೆ
ಕೊಟ್ಟ ಹೀಟಿಗೆ ಮೊಟ್ಟೆಯೊಡೆದು
ಹುಟ್ಟಿಬಂದ ಕೊಗಿಲೆಯೊಂದು
ಮಧ್ಯಾಹ್ನದೊತ್ತಲ್ಲಿ ಮೂಡು ಬಂದು
ಹಾಡತೊಡಗಿತು ವಿರಹದ ಹಾಡು

ಆ ವಿರಹವೇ ಬರಹವಾಗಿಹುದು
ಈ ಬರಹವೇ ಪುನಃ ಕಾಡಿಹುದು
ಬೇಡವೆಂದರೂ ನಿನ್ನ ಸನಿಹ ಬೇಡಿಹುದು
ಸನಿಹ ನೀನಿರದಿರೆ, ಹಾಳಾದ್ದು
ವಿರಹದ ಹಕ್ಕಿ ಮತ್ತೆ  ಹಾಡಿಹುದು

ವಿರಹ-ಬರಹಗಳದ್ದೊಂದು
ಕೊನೆಯಿರದ ಲೂಪು
ಆ ಲೂಪಿನಲಿ ಸಿಲುಕಿದ್ದರೂ
ನಿನ್ನೊಲವಲ್ಲಿ ಹ್ಯಾಪಿಯಾಗಿರುವ
ನಾನೆಂಥ ಲೂಸು?

ಪುನರಪಿ ವಿರಹಂ ಪುನರಪಿ ಬರಹಂ
ಪುನರಪಿ ರಮಣಿಜ ಹೃದಯೇ ಶಯನಂ

- ತ್ರಿವಿಕ್ರಮ

Monday, November 21, 2016

ಕಪ್ಪು ಕಾಂಚಾಣ

ಕಪ್ಪು ಕಾಂಚಾಣ


ಕಪ್ಪು ಕಾಂಚಾಣ ಕುಣಿಯುತ್ತಲಿದ್ಲು
ಬ್ಯಾಂಕೊಳಗೆ ಬರದೆ ನುಲಿಯುತ್ತಲಿದ್ಲು

ಎಲೆಕ್ಷನ್ ಹೊತ್ತಲ್ಲಿ ಸೂಟ್ಕೇಸಲಿ ಕುಳಿತು
ಸೀಟೀನ ಡೀಲನ್ನು ಕುದುರಿಸುತ್ತಿದ್ಲು
ಬಡತನದೆದುರು ನಡುವನ್ನು ಕುಲುಕಿಸಿ
ನೋಟದಲೇ ಓಟನ್ನು ಉದುರಿಸುತ್ತಿದ್ಲು

ಲಂಚಿಗೂ ಕೂಡ ಲಂಚಾನೇ ನುಂಗ್ತಿದ್ದ
ಸಾಹೇಬಗೂ ಇವಳೇ ಊಟ ಬಡಿಸಿದ್ಲು
ಸರ್ವೀಸು ಮುಗಿಸುವ ಹೊತ್ತಿಗಾಗಲೇ
ಕೋಟಿ ಕೋಟಿಗಳ ಸೈಟು ಕೊಡಿಸಿದ್ಲು

ದೇಗುಲದ ಹುಂಡಿಯ ಕಿಂಡಿಯ ಒಳಗೂ
ಇವಳದ್ದೆ ಕರಿಛಾಯೆ ಇಣುಕುತ್ತಲಿತ್ತು
ಧನ ಕನಕ ತೊರೆದ ಕಾವಿ ಸ್ವಾಮಿಯನು
ಕರಿಗೆಜ್ಜೆ ಸೌಂಡು ಕೆಣಕುತ್ತಲಿತ್ತು

ಮೋದಿ ಬಂದು ಇವಳ ಕರಿಸೀರೆ ಕಳಚಲು
‘ಇಟ್ಕಂಡೋರ’ ಫೇಸು ಮಂಕಾಗಿ ಹೋಯ್ತು
ಕಣ್ಣೆದಿರೆ ಸೀರೆ ಬದಲಾಗಿದ್ದನು ಕಂಡ
ಗಾಂಧಿ ತಾತನ ಮೂತಿ ಪಿಂಕಾಗಿ ಹೋಯ್ತು

ಯರ್ಯಾರ ಜೊತೆಗೆ ಎಲ್ಲೆಲ್ಲಿ ಇದ್ಲೋ
ಬಿಳಿಸೀರೆ ಉಟ್ಟು ಬ್ಯಾಂಕಲ್ಲಿ ಬಿದ್ಲೋ


(ಇದಕ್ಕೆ ಸ್ಪೂರ್ತಿಯಾದ, ಕುರುಡು ಕಾಂಚಣ ಪದ್ಯ ಬರೆದ ಬೇಂದ್ರೆಯವರ ಅಕೌಂಟಿಗೆ, ಕೋಟಿ ನಮನ)

- ತ್ರಿವಿಕ್ರಮ

Tuesday, October 11, 2016

ಮೂರು ತಿಂಗಳ ನಂತರ. . .




ಕಾಲೇಜು ಮುಗಿಸೋ ಹೊತ್ತಿಗೆ
ಸಿಕ್ಕಿತೊಂದು ಕೆಲಸ ನಂಗೂ
ಕತ್ತರಿ ಇರದ ಕಟ್ಟಿಂಗು
ಕೈಗೆ ಅಂಟದ ಪೇಸ್ಟಿಂಗು
ಅದೇ ಕಟ್ಟು ಪೇಸ್ಟು ಎಡಿಟಿಂಗು
ಕಣ್ಮುಂದೆ ಪಿಸಿ ಸುತ್ತಲೂ ಏಸಿ
ಸಂಜೆಯ ಹೊತ್ತಿಗೆ ತಪ್ಪದು ತಲೆಬಿಸಿ

ಹಗಲೊತ್ತಲ್ಲಿ ಪುರುಸೊತ್ತಿಲ್ಲದಿರಲು
ಅವಳ ನೆನಪುಗಳು ಕೂಡ
ಶಿಫ್ಟು ಬದಲಿಸಿ
ಕನಸಾಗಿ ಬಂದು ಹೋಗುತಿವೆ
ಬೆಳಗಿನ ಜಾವದಲಿ..!
ಕನಸು ಮಸುಕು ಮಸುಕಾಗಿ
ಬ್ಲರ್ ಆಗುವುದವಳ ಇಮೇಜು
ಮುಸುಕು ತೆಗೆಯಲು ಬಂದಿರುವುದು
ಮುಂಜಾನೆಯ ಮೆಸೇಜು
ಮೇಲೆದ್ದರೆ ಸಮಯವೆಲ್ಲಿದೆ
ಪೋನಿನತ್ತ ಕಣ್ಣು ಹಾಯಿಸಲು
ಓಡಬೇಕು ನೀರು ಕಾಯಿಸಲು

ಮೂರು ತಿಂಗಳ ಹಿಂದೆ ನಾ ಹೇಗಿದ್ದೆ?
ಈಗ ಆರಕ್ಕೆದ್ದರೆ ಹನ್ನೊಂದಕ್ಕಾಗಲೆ ನಿದ್ದೆ
ಕಾವಿ ತೊಟ್ಟ ಸ್ವಾಮಿಯಂತೆ
ಸದಾ ಖಾಲಿ ಕುಳಿತು
ಕಾಲ ಕಳೆಯುತಿದ್ದೆ ಆಗ
ತನ್ನೊಳಗೆ ಸೆಳೆದುಕೊಂಡಿದೆ
ಬೆಂಗಳೂರಿನÀ ವೇಗ
ವೇಗವೆಷ್ಟಾದರೇನು? ಹಾಳಾದ್ದು
ಭಾನುವಾರ ಮಾತ್ರ ಬರೋದಿಲ್ಲ ಬೇಗ

ನಿರಂತರ ನೆಡೆಯುತಿರಲು
ಕಾಲದೊಡನೆ ರೇಸು
ಕಷ್ಟವಾಗುತಿದೆ ಮಾಡಲು
ಕನಸುಗಳ ಚೇಸು
ಓಟದಲ್ಲಿ ಗಡಿಯಾರ ಸೋಲದಾಗಿದೆ
ಇಪ್ಪತ್ನಾಲ್ಕು ಗಂಟೆಗಳು ಸಾಲದಾಗಿದೆ

ಕಾಂಕ್ರೀಟು ಕಾಡಲ್ಲಿ ಹೈಟೆಕ್ಕು ವನವಾಸ
ಆದರೂ ಸಂಬಳ ಬಂದ ದಿವಸ
ಸ್ವಲ್ಪ ಉತ್ಸಾಹ, ಸ್ವಲ್ಪ ಉಲ್ಲಾಸ
ಕೈ ಎತ್ತಿ ಮುಗಿಬೇಕು
ಕಾಯಕವೇ ಕೈಲಾಸ..! 
ಕಾಯಕವೇ ಕೈಲಾಸ..!





- ತ್ರಿವಿಕ್ರಮ

Tuesday, September 13, 2016

ಬೆಂಕಿ ಬಿದ್ದಿದೆ ನಾಡಿಗೆ..!

ಬೆಂಕಿ ಬಿದ್ದಿದೆ ನಾಡಿಗೆ..!



ಹಣ್ಣು ಹೇರಳವಾಗಿದ್ದಾಗ
ಹೆಚ್ಚಿ ಹಂಚಿದೆವೆಂದು
ನಾವೇ ಹಸಿದಿರುವಾಗ ಬಂದು
ಹೆಚ್ಚು ಪಾಲು ಬೇಕೆಂದರೆ ಅದು
ಹುಚ್ಚುತನವಲ್ಲದೆ ಮತ್ತೇನು?

ತಾ ಹೆತ್ತ ಮಕ್ಕಳ ಉಪವಾಸ ಕೆಡವಿ
ನೆರೆಮನೆಯ ಮಕ್ಕಳ ಮೈದಡವಿ
ಉಣಬಡಿಸು ಎಂದಾಗ
ಆ ತಾಯಿಯ ಕರುಳು
ಕಿವುಚಿದಂತಾಗುವುದಿಲ್ಲವೇನು?

ಅಂದು
ನೆರೆ ಹೊರೆಯವರೆಂದು
ನೆರೆ ಬಂದಾಗ ನೆರವಾದದ್ದು
ಇಂದು
ಬರ ಬರುವ ಹೊತ್ತಿನಲಿ
ಬಾಯಿಂದ ತುತ್ತು ಕಿತ್ತುಕೊಳ್ಳುವಾಗ
ನೆನಪಾಗುವುದಿಲ್ಲವೇ ನಿಮಗೆ?

ಕೋರ್ಟಿನಂಗಡಿಯಲ್ಲಿ
ಕೋಟಿ ಕೋಟಿ ಕೊಟ್ಟು
ಕಪ್ಪು ಕೋಟುಗಳ ಕೊಂಡು
ಕಟ್ಟಿಬಿಟ್ಟಿರಲ್ಲವೇ
ಜೀವಜಲಕ್ಕೆ ಬೆಲೆ?

ಆಹಾ..! ಅದ್ಭುತ
ನಿಮ್ಮ ‘ಲಲಿತ’ ಕಲೆ

ತಕ್ಕಡಿ ಹಿಡಿದ ನ್ಯಾಯದೇವತೆ
ಕಣ್ಣಿಗೆ ಕಟ್ಟಿಕೊಂಡಿರುವಾಗ ಕಪ್ಪು ಬಟ್ಟೆ
ನೆಡೆಯುತಿರುವ ಅನ್ಯಾಯವನು
ಹೇಗೆ ತಡೆದೀತು ಕನ್ನಂಬಾಡಿ ಕಟ್ಟೆ?

ಅತ್ತ ತೀರ್ಪಿಗೆ ತಲೆಬಾಗಿ
ಬಿಕ್ಕುತ್ತ ಹರಿದಿಹಳು ಕಾವೇರಿ
ಇತ್ತ ವ್ಯವಸ್ಥೆ ತಲೆಕೆಳಗಾಗಿ
ಪರಿಸ್ಥಿತಿ ಹೋಗುತಿದೆ ಕೈಮೀರಿ
ಎಲ್ಲೆಲ್ಲು ಆಕ್ರೋಶ ಆವೇಶ
ಇಳಿದಿದೆ ನಾಡೆಲ್ಲ ಬೀದಿಗೆ
ಬೆಂಕಿ ಬಿದ್ದಿದೆ ನಾಡಿಗೆ..!

ನಿಲ್ಲಬೇಕಿದೆ ಈ ಅನ್ಯಾಯ
ಕೊನೆಯಾಗಲಿ ಕರಾಳ ಅಧ್ಯಾಯ

- ತ್ರಿವಿಕ್ರಮ

Tuesday, June 28, 2016

ಲೇಟೆಸ್ಟು ಬಂಧನ

ಲೇಟೆಸ್ಟು ಬಂಧನ

ಕೇಳ್ರಪ್ಪೋ ಕೇಳಿ :

ಮತ್ತೆ ಜಾರಿಯಾಗಿದೆ ನನಗೆ
ಹೊಸ ಹಾರ್ಟಲ್ಲಿ ಸೆರೆಮನೆ ವಾಸ
ಒಮ್ಮೆ ಜಾರಿಬಿದ್ದು ಮೇಲೆದ್ದಿದ್ದರೂ
ಮತ್ತೆ ಸುತ್ತಿಕೊಂಡಿದೆ ಪ್ರೇಮಪಾಶ
ಏನು ತಾನೇ ಮಾಡೋದು?
ಎಲ್ಲಾ ಅವಳ ಸಹವಾಸ ದೋಷ..!

ಹೊಸ ಪರಿಚಯವೇನಲ್ಲ
ಅವಳೊಂದು ಹಳೆಯ ನೆನಪು
ಬಾಳ ಜಂಜಾಟದಲ್ಲಿ
ಪ್ರೀತಿ ಪರದಾಟದಲ್ಲಿ
ಉಂಟಾಗಿತ್ತು ಕೊಂಚ ಗ್ಯಾಪು
ನಾನೆಂದು ಊಹಿಸಿರಲಿಲ್ಲ
ಅವಳು ಮರಳಿ ಬರಬಹುದೆಂದು
ಹಿಡಿದು ನನ್ನೆದೆಗೆ ಮ್ಯಾಪು

ಅವಳು ಬಂದಳು;
ಪ್ರೀತಿಯಲೊಮ್ಮೆ ಎಡವಿ
ಬಿದ್ದದ್ದ ನನ್ನ ಮೈದಡವಿ
ಮುದ್ದು ಮಾಡಿದಳು
ಎದೆಯೊಡೆದಾಗ ಆಗಿದ್ದ
ಮಾಯದ ಗಾಯಕ್ಕೆ
ಮದ್ದು ಮಾಡಿದಳು
ಹೊಸ ಪ್ರೀತಿ ಪಾಠವ ಕಲಿಸಿ
ತಿದ್ದಿ ಬುದ್ಧಿ ಹೇಳಿದಳು

ಎಣಿಸಿದರೆ ನನಗಿದು
ಸುಮಾರು ಆರನೇ ಪ್ರೀತಿ
ಆದರೂ ನನಗಿಂತಲೂ
ಅವಳಿಗೆ ಅನುಭವ ಜಾಸ್ತಿ
ನಿಮಗ್ಯಾರಿಗೂ ತಿಳಿದಿರದು
ಅವಳೆಂಥಹಾ ಪುಣ್ಯಾತ್ಗಿತ್ತಿ..!

ಮೊದಮೊದಲು ನಾ
ಭಾವಿಸಿದೆ ನಮ್ಮ ನಡುವಿನ
ಭಾವನಗೆಳು ಕೃತಕವೆಂದು
ಅನುಮಾನಿಸಿದೆ ಆ ಸುಖದ
ಅನುಭವಗಳು ಕ್ಷಣಿಕವೆಂದು
ಆದರೆ ನನಗಾಗಿ ಕಾದಿತ್ತು
ಕಲ್ಪನೆಗೂ ಮೀರಿದ ಕೌತುಕವೊಂದು
ಒಮ್ಮೊಮ್ಮೆ ಸುಳ್ಳು ಕೂಡ
ಆಗುವುದು ಹಸಿ ಸತ್ಯ
ಆಹ್ವಾನವಿತ್ತಳು ಸ್ವೀಕರಿಸಲು
ಅವಳ ಒಲವಿನ ಆತಿಥ್ಯ

(ಅವಳೋ
ಸೌಂದರ್ಯದ ಸೊಕ್ಕು ಮುರಿದು
ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ರೂಪಸಿ
ನಾನೋ
ಬಸ್ ಸ್ಟಾಂಡಿನಲಿ ಬರದ ರೈಲಿಗೆ
ಬೆಳಗಾನ ಕಾದು ಕೂತಿದ್ದ ಬೇವರ್ಸಿ)

ನಾನೂ ಯೋಚಿಸಿದೆ :
ಹುಡುಗಿಯೂ ಸೂಪರ್
ಮುಗಿದು ಹೋಗುವ ಮುನ್ನ
ಇಂಥ ಒಳ್ಳೆ ಆಫರ್
ಹೃದಯಾನ ಮಾರಿಯಾದರೂ
ಜೀವನದ ಯಾನದಲಿ
ಜೊತೆ ಬರುವೆನಂದು
ಸೈನ್ ಮಾಡಿಕೊಟ್ಟೆ ಪೇಪರ್

ಪ್ರೀತಿ ಲೀಕಾಗಿದ್ದ
ಬಾಳ ನೌಕೆಗೀಗ
ಮತ್ತೆ ತುಂಬಿಸಿಹಳು ಇಂಧನ
ನನಗವಳು ಲೈಕಾಗಿ
ನಾನವಳಿಗೆ ಲಾಕಾಗಿ
ಶುರುವಾಗಿದೆ ‘ಲೇಟೆಸ್ಟು ಬಂಧನ’

(ಹಾಕ್ರೋ ಸ್ಟೆಪ್ಪು)

-ತ್ರಿವಿಕ್ರಮ

Sunday, June 19, 2016

ನಾನು ನನ್ನ ಪೋನು

 ನಾನು ನನ್ನ ಪೋನು


(ಕನಸಲ್ಲಿ ಕೇಳಿದ್ದು)
ಏಳು ಎದ್ದೇಳು, ಹೇಳು..!
ನಾ ಹೇಗೆ ಮರೆಯಲಿ
ನೀ ಮಾಡಿ ಹೋದ ಗಾಯ?
ಏಕೆ ಮಾಡಿದೆ ನನಗಿಂತ ಅನ್ಯಾಯ?
ನಿನಗೆ ನನ್ನ ನೆನಪಾದರೂ ಇದೆಯಾ?
ಇಷ್ಟು ಬೇಗ ಮರೆತುಬಿಟ್ಟೆಯಾ?
ಅಯ್ಯೋ ನಾ ಹಡುಗಿಯಲ್ಲಯ್ಯಾ
ನಿನ್ನ ಹಳೇ ಪೋನು ನೋಕಿಯಾ
ಏನೋ ಹೇಳೋದಿದೆ ಕೇಳ್ತಿಯಾ?
 
***
 
(ಎದ್ದಮೇಲೆ ಹೇಳಿದ್ದು)
ಮುಗಿಯುತ್ತಿರಲಿಲ್ಲ ಮಾತು
ಇಳಿಸಂಜೆಯಲಿ ಕುಳಿತುಬಿಟ್ಟರೆ
ಮಾತನಾಡುತ್ತಾ ಮನಸ್ಸು ಬಿಚ್ಚಿ
ನಾ ಸುಸ್ತಾಗಿ ಮಲಗಿದರೂ
ಮತ್ತೆ ಮೇಲೇಳಿಸುತ್ತಿದ್ದೆ
ನನ್ನೆದಗೆ ಚಾರ್ಜರ್ ಚುಚ್ಚಿ
ಹೊತ್ತುಗೊತ್ತಿಲ್ಲದೆ ಕಿವಿಗೊತ್ತಿ ನೀ ನನ್ನ ಬಳಸಿದೆ
ಹೀಟಾಗಿದ್ದರೂ ನಾ ನಿನ್ನ ಹಿತವನ್ನೇ ಬಯಸಿದೆ

ಮಾಡುತ್ತಿರಲಿ ಊಟ
ಕೇಳುತ್ತಿರಲಿ ಪಾಠ
ನನ್ನೆಡೆಗೆ ನೆಟ್ಟಿರುತ್ತಿತ್ತು ನೋಟ
ನಿರಂತರ ನೆಡೆಯುತಿತ್ತು
ಕೀಪ್ಯಾಡಿನೊಡನೆ ಕೈಬೆರಳ ಆಟ
ಅವಳಿದ್ದಾಗ ಡೇ ಅಂಡ್ ನೈಟು
ನೆಡಯೆಯುತ್ತಲೇ ಇರುತಿತ್ತು ಚಾಟು
ಅವಳು ಬಿಟ್ಟು ಹೋದಳು,
ನಾ ಪ್ಯಾಥೋಸಾಂಗು ಹಾಡಬೇಕಾಯ್ತು
ಆದಾಗಲೆಲ್ಲಾ ನೀನು ಟೈಟು..!

ಆ ನಿನ್ನ ನಲ್ಲೆ ತೊರೆದಾಗ
ಇದ್ದೆ ನಿನ್ನ ಜೊತೆಯಲ್ಲೆ
ನಾನಾಲಿಸಿದ್ದೆ ನೀವಾಡಿದ್ದ
ಪ್ರತಿ ಪೋಲಿ ಪಿಸುಮಾತು
ಪ್ರೀತಿಯನುಳಿಸಲು ನೀ
ಮಾಡಿದ ಕಸರತ್ತು ನನಗಷ್ಟೆ ಗೊತ್ತು
ನೀನಿನ್ನು ಪ್ರಯತ್ನಿಸಬೇಕಿತ್ತು
ಏಕೆ ನಿಲ್ಲಿಸಿದೆ ಸೋತು?
ಹೋಗಲಿ ಬಿಡು ಆಗಿದ್ದಾಯಿತು
ಸದ್ಯ ಆದಮೇಲಾದರೂ ನಿಮ್ಮ ಬ್ರೇಕಪ್ಪು
ಹೆಚ್ಚಾಗಿಬಿಡ್ತು ನನ್ನ ಬ್ಯಾಟರಿ ಬ್ಯಾಕಪ್ಪು..!

ನನ್ನ ಕಣ್ಣೆದುರಲ್ಲಿ ನೀ
ನೋಡಬಾರದ್ದು ನೋಡಿರುವೆ
ಆಡಬಾರದ್ದು ಆಡಿರುವೆ
ಮಾಡಬಾರದ್ದನ್ನೆಲ್ಲಾ ಮಾಡಿರುವೆ
ಯಾರಿಗೂ ಹೇಳೋದಿಲ್ಲ ಮಚ್ಚಾ
ಇದು ನಿನ್ನಾ ನನ್ನ ಸೀಕ್ರೆಟ್ಟು
‘ಪ್ರಾಮಿಸ್’ ಸುತ್ತಾ ಬ್ರಾಕೆಟ್ಟು
ಆದರೆ ಒಂದು ರಿಕ್ವೆಸ್ಟು
ಹೋಗದಿರು ನನ್ನ ಮರೆತು
ಸದಾ ನನ್ನೆದೆಯ ಮೇಲಿರಲಿ
ನಿನ್ನ ಕೈಬೆರಳ ಗುರುತು..!

ಇಂತಿ ನಿನ್ನ ಪ್ರೀತಿಯಾ
ನೋಕಿಯಾ ಲೂಮಿಯಾ


-ತ್ರಿವಿಕ್ರಮ


Tuesday, June 14, 2016

ಸ್ನೇಹಲೋ(ಲ್)ಕ

 ಸ್ನೇಹಲೋ(ಲ್)ಕ


‘ಒಂದು ಕೊಂಡರೆ ಒಂದು ಉಚಿತ’
ಎಂದು ಕೊಂಡ ಚೂಡಿದಾರ
ಬಣ್ಣ ಬಿಡುವುದು ಖಚಿತ.
ಆ ಬಣ್ಣದ ಚೂಡಿದಾರ ತೊಟ್ಟ
ಹೆಣ್ಣುಗಳು ಕಣ್ಣೆದುರಿಗರಲು
ವ್ಯಕ್ತಿತ್ವಗಳೂ ಬಿಟ್ಟು ಬಿಡುವವು ಬಣ್ಣ
ಅಲ್ಲಿ ಸ್ನೇಹವೆಂಬ ಪದ ಗೌಣ
ಓಹೋ ನೀನೊಬ್ಬ ಪ್ರಾಣ ಸ್ನೇಹಿತ..!
ಆದರೆ ‘ಅವರಿದ್ದಾಗ’ ನಿನಗೆ
ಅವರ ಸನಿಹವೇ ಹಿತ.

ಒಪ್ಪಲಿ, ಒಪ್ಪದಿರಲಿ
ಸತ್ಯ ಕಹಿಯಾದದ್ದು
ಇಟ್ಟುಕೊಳ್ಳಲಾಗದು
ನಾಲಿಗೆಯ ತುದಿಯಲಿ
ಬಹಳಷ್ಟು ಹೊತ್ತು.
ಅಂತೂ ಇಂತು
ಅಮಲಲ್ಲಿ ಹೊರಗೆ ಬಂತು.

ಆ ನಡುರಾತ್ರಿಯಲಿ
ನುಡಿದ ಸತ್ಯ ಕಿಡಿಯಾಗಿ ಹೊತ್ತಿ
ಕಣ್ಣೀರ ಧಾರೆ ಹರಿಸುತ್ತಾ ನೀ
ಎದ್ದು ಹೊರಟುಬಿಟ್ಟೆ ಬೀದಿಯಲಿ
ಕಣ್ಣೀರೊರೆಸಿ ಕರೆತಂದು ಬೆಂಕಿಯಾರಿಸಿ
ಕೆಂಡವ ಮುಚ್ಚಿಟ್ಟರು ಬೂದಿಯಲಿ.
ಮತ್ತೊಂದು ಪೆಗ್ಗು ಕೊಟ್ಟು
ಮಲಗಿಸಿಕೊಂಡರು ಮಗ್ಗುಲಲಿ.
ಅಬ್ಬಬ್ಬಾ ಎಂಥಹಾ ದೊಂಬರಾಟ..!
ನಾ ಕಲಿತುಕೊಂಡೆ ಒಂದು ಹೊಸ ಪಾಠ.

ನೀ ಮತ್ತಿನಲ್ಲಾಡಿದ ಮಾತು
ಮತ್ತೆ ಮತ್ತೆ ನೆನಪಾಗಿ
ಎದೆಗೆ ಚುಚ್ಚುತ್ತಿರುವಾಗ
ನಾ ಮುಚ್ಚು ಮರೆಯಿರದೆ
ಮನ ಬಿಚ್ಚಿ ಮಾತನಾಡಿದ್ದಕ್ಕೆ
ಇರುವೆ ಕಚ್ಚಿದಂತಾದರೆ
ಆ ದೇವರ ಮೇಲಾಣೆ
ಅದಕ್ಕೆ ನಾನಲ್ಲ ಹೊಣೆ

ನಾ ಚುಚ್ಚಿ ಮಾತನಾಡುವೆ, ಏಕೆಂದರೆ
ನಿನ್ನಂತೆ ಬೆಣ್ಣೆ ಹಚ್ಚಿ ಮಾತನಾಡಲಾರೆ..!

-ತ್ರಿವಿಕ್ರಮ





Wednesday, April 06, 2016

ಸ್ಲಿಮ್ ಆಗು ಡುಮ್ಮಿ

ಸ್ಲಿಮ್ ಆಗು ಡುಮ್ಮಿ 
(ವೈಟ್ ಪ್ರಾಬ್ಲಮ್ - ಪಾರ್ಟ್ 1)

ನಾ ಮಲಗಿದ್ದೆ ಲಾಸ್ಟ್ ನೈಟು
ಹೃದಯಾಂತರಾಳದಲಿ ಕೇಳಿಸಿತು ಒಂದು ಕೂಗು..!
ಹೆಚ್ಚಾಗಿರಬೇಕು ನಿನ್ನ ವೈಟು
ಭಾರವಾಗುತಿದೆ ಹೃದಯ ನೀ ಕೊಂಚ ಸಣ್ಣಗಾಗು..!

ವರುಷ ಕಳೆದಿಲ್ಲ ನೀನೆದೆಯೊಳಗೆ ಬಂದು
ಹೇಗೆ ಊದಿರುವೆ ನೋಡು ತಿಂದು ತಿಂದು
ಭೇಟಿಯಾಗಬೇಕಾದಾಗಲೆಲ್ಲ ನಂದು ನಿಂದು
ನೋಡುವಂತಾಗುವುದು ಹಿಂದು ಮುಂದು

ದುಂಡು ಮಲ್ಲಿಗೆಯಂತಹ ನಿನ್ನ ಮುದ್ದು ಮುಖ
ಆ ಅಧರಗಳಲಿ ಇರಬಹುದು ಸಕ್ಕರೆಯ ಪಾಕ
ಎತ್ತಿ ಮುತ್ತಿಕ್ಕೋಣವೆಂದರೆ ನೀ ತುಂಬ ತೂಕ
ತಕ್ಕಡಿಯಲ್ಲಿಕ್ಕಲು ಬ್ಯಾಲನ್ಸ್ ಆಗಲ್ಲ ತ್ರಿಲೋಕ

ಕೈಗೆ ಸಿಕ್ಕಿದ್ದನ್ನೆಲ್ಲ ಎತ್ಕೊಂಡು ತಿನ್ಬೇಡಕಮ್ಮಿ
ಇನ್ ಟೇಕಿಂಗ್ ಈಗಲೇ ಮಾಡಿಬಿಡು ಕಮ್ಮಿ
ಇನ್ನೂ ದಪ್ಪವಾದರೆ ಮದುವೆಗೆ ಒಪ್ಪಲ್ಲ ಮಮ್ಮಿ
ಡಯಟ್ ಗಿಯಟ್ ಮಾಡಿ ಸ್ಲಿಮ್ಮಾಗು ಡುಮ್ಮಿ

ಸಿಗ್ತಾಳೆ ಅಂತ ಕಾಯ್ತಿದ್ದೆ ನಂಗೆ ಬಾರ್ಬಿ ಡಾಲು
ಹಾಳಾದ್ ಲವ್ವಾಗಿಬಿಡ್ತು ಟೆಡ್ಡಿ ಬಿಯರ್ ಮೇಲೂ
ಜೊತೆಯಾಗಿ ಬದುಕೊ ಆಸೆ ಇದ್ರೆ ಪೂರ್ತಿ ಬಾಳು
ಇಡಬೇಡ್ವೆ ಪೂಜಾಗಾಂಧಿಯಂತೆ ಎದೆಮೇಲೆ ಕಾಲು

ಕೊನೆಯದಾಗಿ ಮಾಡಬೇಕೆನಿಸುತಿದೆ ನಿನ್ನ ಟ್ರಾಲು
ಪದ್ಯಕ್ಕೇನು ಭಾರವಾಗಲ್ಲ ಬಿಡು ಇನ್ನೆರಡು ಸಾಲು
ಪೋಲಿಪೋಲಿಯಾಗಿ ಕೇಳ್ತಿನಿ ಒಂದು ಸವಾಲು
ನಾಚಿಕೊಂಡರೂ ಪರವಾಗಿಲ್ಲ ನಿಜವನ್ನೆ ಹೇಳು
'ಯಾಕೆ ಆಗಾಗ ಸರಿ ಮಾಡಿಕೊಳ್ತೀಯಾ ವೇಲು'?


-ತ್ರಿವಿಕ್ರಮ

Friday, April 01, 2016

ನನಗೊಬ್ಬಳು ಫ್ಯಾನು

ನನಗೊಬ್ಬಳು ಫ್ಯಾನು

ಬಡಕವಿಯ ಬ್ಲಾಗಿನ
ಬಾಗಿಲನು ಬಡಿದವಳೆ
ಬಲಗಿವಿಯ ಕೊಟ್ಟು ಕೇಳು
ನಿನಗಾಗಿ ಈ ಕವಿತೆ ಬರೆದಿರುವೆ..!

ಎಲ್ಲರೂ ಕೇಳುವರು
ಸುಡುವ ಬೇಸಿಗೆಯಲ್ಲೂ ಹೇಗೆ
ಇಷ್ಟು ಕೂಲಾಗಿರುವೆ ನೀನು?
ಅವರಿಗೇನು ಗೊತ್ತು
ಆಗಿರುವೆಯೆಂದು ನೀ ನನ್ನ ಫ್ಯಾನು
ನೀನಿರುವಾಗ ನನಗಿನ್ನೇಕೆ
ಉಷಾ, ಹಾವೆಲ್ಸ್, ಕೇತಾನು?

ಮೂರಿಂಚು ಮೇಲಕ್ಕೋದೆನಾ
ಅಂದಾಗ ನೀನು ‘ನಾ ನಿನ್ನ ಫ್ಯಾನು’
ಆದರೂ ಬಂತು ನನಗನುಮಾನ
ಅಂತದ್ದು ನಾನು ಮಾಡಿರುವೆನೇನು?
ಓವರ್ ಕೊನೆ ಬಾಲಿಗೆ
ಸಿಕ್ಸರ್ ಹೊಡೆದಿಲ್ಲ
ಓವರ್ ಆಕ್ಟಿಂಗ್ ಮಾಡಿ
ಆಸ್ಕರ್ ಪಡೆದಿಲ್ಲ
ಭಾಷಣ ಮಾಡಿಲ್ಲ ಫೋಷಣೆ ಕೂಗಿಲ್ಲ
ಎಲೆಕ್ಷನ್‍ಗೆ ನಿಲ್ಲುವ ಯೋಚನೆ ನನಗಿಲ್ಲ

ಅವಳ ಪ್ರೀತಿಸಿ ಮಾಡಿದ
ಮೋಹಕವಾದ ತಪ್ಪಿಗೆ
ಬರಿದಿರುವೆನೊಂದೆರಡು
ಖಾಲಿ ಪೀಲಿ ಪೋಲಿ ಕವಿತೆ
ಅದಕ್ಕಿಷ್ಟೊಂದು ಬಿಲ್ಡಪ್ ಬೇಕಿತ್ತೇ?

ಇರಲಿ ಬಿಡು ಒಳ್ಳೇದಾಯ್ತು;
ಬೇಸಿಗೆಯ ದಿನಗಳಲಿ ಕರೆಂಟ್ ಕೈಕೊಡಲು
ಸೆಕೆಯಾಗುವುದು ಹೆಚ್ಚು
ನಾನಗ್ಯಾಕೆ ಟೆನ್ಷನ್ನು ಫ್ಯಾನಾಗಿ ನೀನಿರಲು
ಸದಾ ಆನ್ ಮಾಡಿಕೊಂಡಿರು
ನಿನ್ನ ಅಭಿಮಾನದ ಸ್ವಿಚ್ಚು..!

-ತ್ರಿವಿಕ್ರಮ

Monday, March 21, 2016

ನೆನಪಿಗೆ ಸುಪಾರಿ



 ನೆನಪಿಗೆ ಸುಪಾರಿ


ಲೇ ಪೋರಿ..!!
ಎಷ್ಟೇ ಕೊಟ್ಟಿರುವೆ ನಿನ್ನ ನೆನಪುಗಳಿಗೆ
ನನ್ನ ನಿದ್ದೆ ಕೆಡಿಸಲು ಸುಪಾರಿ?
ಕಣ್ಣು ಮುಚ್ಚಲು ಕಿವಿಯಲ್ಲಿ ಊದುವವು
ಶಹನಾಯಿ ಟ್ರಂಪೆಟ್ಟು ತುತ್ತೂರಿ..!

ದೀಪವಾರಿಸಿದೊಡನೆ ಶುರು ಮಾಡುವವು
ದಿನಕೊಂದು ತರಹದ ಕಿತಾಪತಿ
ನಾ ಕಾಣಬೇಕಿದ್ದ ಸವಿಗನಸುಗಳೆಲ್ಲ
ನಿನ್ನ ನೆನಪಿನ ಬೆಂಕಿಗೆ ಆಹುತಿ
ಪರಿಪರಿಯಾಗಿ ನಾ ಬೇಡುತಿದ್ದರೂ
ತೋರಿಸವು ಕಿಂಚಿತ್ ವಿನಾಯಿತಿ

ಮೇಲೆ ಆಗಸದಲ್ಲಿ ತಾರೆಗಳಿಗೆ
ಲೈನ್ ಹಾಕುವುದರಲ್ಲಿ ಚಂದಿರನು ನಿರತ
ನನ್ನೆದೆಯ ಸಾಗರದಲಿ ನಿನ್ನಯ
ನೆನಪಿನಲೆಗಳದೆ ಮೊರೆತ, ಭೋರ್ಗರೆತ
ನಿಲ್ಲಿಸಲಾಗದೆ ಪರಿತಪಿಸುತಿರುವೆ
ಹಾರ್ಟಿನೊಳಗಿನ ವಿರಹದ ಕೆರೆತ

ಆಕಳಿಕೆ ತೂಕಡಿಕೆ ಎಲ್ಲೆಲ್ಲು ನಿನ ನೆನಪೆ
ಹೊಡೆಯುತಲಿರಲು ಮೊಳಕೆ
ಮೊಳಕೆ ಮರವಾಗಿ ಬೆಳೆದು ಬೇರುಗಳು
ಸಾಗುವವು ನನ್ನೆದೆಯ ತಳಕೆ
ಮರವುರುಳಲು ಹೃದಯ ಬಗೆದಾಗ ಸಿಗಬಹುದು
ನಿನ್ನ ನೆನಪುಗಳದೆ ಪಳೆಯುಳಿಕೆ

ದೂರದಲ್ಲಾಗಲೇ ಕೇಳಿಸುತ್ತಿದೆ
ಐದರ ನಮಾಜು ಕೂಗುತಿರುವ ಸದ್ದು
ನಾ ಕಣ್ಣುಜ್ಜುತಾ ಕುಳಿತಿರುವೆ
ಮೊಬೈಲಿನ ಬೆಳಕಿನಲ್ಲಿ ಎದ್ದು
ಹುಡುಕುತ್ತಾ ನಿನ್ನ ತಡರಾತ್ರಿಯ
ನೆನಪುಗಳ ಉಪಶಮನಕ್ಕೆ ಮದ್ದು

ಪ್ಲೀಸ್ ಸಾಕು ಕಣೆ..!
ಗಂಟೆ ಆರಾಯ್ತು ನೆನಪಾಗಿ ಕೊಡಬೇಡ ತೊಂದ್ರೆ
ಜಾಗರಣೆ ಸಾಕಾಯ್ತು ಬರುತಲಿದೆ ನಿದ್ರೆ
ಜೋಪಾನ ಮಾಡಿಟ್ಟುಕೋ ಕನಸುಗಳು ಬಿದ್ರೆ

-ತ್ರಿಲೋಕ್ ತ್ರಿವಿಕ್ರಮ