Showing posts with label ಚಂದಿರ. Show all posts
Showing posts with label ಚಂದಿರ. Show all posts

Tuesday, March 20, 2018

ಚಂದಿರನ ಕಂಬನಿ


ಚಂದಿರನ ಕಂಬನಿ



“ಯಾವಾಗ್ಲೂ ನನಗ್ಯಾಕೆ ರಾತ್ರಿ ಪಾಳಿ?”
“ಇರುತಾಳೆ ನನ್ನಾಕೆ ಒಬ್ಬಳೇ ಮನೇಲಿ?”
“ಕೈಯಳತೆಯಲಿರದಿರೆ
ಕೈಹಿಡಿದವಳ ಸೆರಗು?
ಇದ್ದೇನು ಫಲ ಬಂತು
ಕೋಟಿ ತಾರೆಗಳ ಬೆರಗು?”
ಕೊರಗುವನು ಚಂದಿರ ಪುನಃ ಪುನಃ
ಪಾಪ ಅವನದೊಂತರ ಚಿರವಿರಹ
ಕುಡಿದು ತೇಲಾಡವನು
ಜೊತೆಗೆ ತಾರೆಗಳ ಕಂಪನಿ
ಅತ್ತು ಗೋಳಾಡುವನು
ಭುವಿಗೆಲ್ಲಾ ಚೆಲ್ಲುವುದು ಕಂಬನಿ

ಭುವಿಗೆಲ್ಲವೆಂದರೆ ಭುವಿಗೆಲ್ಲಾ..!
ಗಿರಿ ಶಿಖರ ಬೆಟ್ಟಗಳ ಮೇಲೆ,
ಬೆಟ್ಟದ ಮೇಲೆ ನೆಟ್ಟ
ಗಾಳಿ ಮಿಷೀನುಗಳ ಮೇಲೆ
ಕಡಲ ಒಡಲಲಿ ತೇಲುತಿದ್ದ
ಹಾಯಿ ದೋಣಿಯ ಮೇಲೆ
ದೋಣಿ ಹುಟ್ಟಿನ ಮೇಲೆ
ಚರ್ಚು ಬೆಲ್ಲಿನ ಮೇಲೆ
ಬೇಂಚು ಕಲ್ಲಿನ ಮೇಲೆ
ಹುಲ್ಲು ಬಣವೆಗಳ ಮೇಲೆ
ಬಯಲು ಕಣಿವೆಗಳ ಮೇಲೆ
ಮೊಬೈಲು ಟವರುಗಳ ಮೇಲೆ
ಕರೆಂಟು ವಯರುಗಳ ಮೇಲೆ,
ಸ್ಟೇಷನು, ಆಸ್ಪತ್ರೆ, ಸ್ಕೂಲು,
ಮನೆ ಛಾವಣಿಗಳ ಮೇಲೆ,
ಅಲ್ಲೇ ಕುಡಿದು ಬಿದ್ದಿದ್ದ
ಬ್ಯಾಚುಲರುಗಳ ಮೇಲೆ, ಅವರ
ಚಾಪೆ ದಿಂಬು ಚಾದರಗಳ ಮೇಲೆ
ಹೀಗೆ ಎಲ್ಲೆಂದರಲ್ಲಿ ಬಿದ್ದು
ಭುವಿಯ ಒದ್ದೆಯಾಗಿಸಿತ್ತು
ಚಂದಿರನ ಕಂಬನಿ

ಮತ್ತೊಂದೆಡೆ
ಮೈಮೇಲೆ ಬಿದ್ದ ಹನಿಗಳ
ಸೀರೆಯಂಚಿನ ಮೇಲೆ
ಸಿಂಗರಿಸಿಕೊಂಡಿತ್ತು ಹಸಿರೆಲೆ.
ಸೀರೆ ಸೊಬಗು ಹೆಚ್ಚಾಯ್ತು
ಸೂರ್ಯ ಡ್ಯೂಟಿಗೆ ಬರುತಲೇ.
ಬೆಳೆಗೆದ್ದು ವಾಕಿಗೆಂದು
ಪಾರ್ಕಿಗೆ ಬಂದವರು
(ಕಂಡವರ ಕಣ್ಣೀರ ಕ್ಲಿಕ್ಕಿಸಿ
ಖುಷಿಪಡುವ ಕಿರಾತಕರು)
ಮೊಬೈಲು ಕ್ಯಾಮರಾದಲಿ
ಸೆರೆಹಿಡಿದರು ಆ ಚಿತ್ರವನು
ಹಬ್ಬಿಸಿದರು ಊರ ತುಂಬಾ
ಲಕ್ಷ ಲೈಕು ಶೇರುಗಳಾದರು
ಯಾರು ಕೇಳುವವರಿರಲಿಲ್ಲ
ಕೇಳಿ ಒರೆಸುವವರಿರಲಿಲ್ಲ
ಚಂದಿರನ ಕಂಬನಿ

ಯಾರು ಇರಲಿಲ್ಲವೆಂದಲ್ಲ.
ರಸ್ತೆ ಬದಿಯಲ್ಲೆ ನಿಂತ
ಕಾರು, ಲಾರಿಯ ವೈಪರುಗಳು,
ಮಾಲು, ಹೋಟಲುಗಳಲಿ
ಮಾರ್ನಿಂಗ್ ಡ್ಯೂಟಿಗೆ
ಬರುವ ಕ್ಲೀನರುಗಳು,
ಕ್ಲೀನರುಗಳು ಕೈಕೊಟ್ಟಾಗ
ಕೆಲವೊಮ್ಮೆ ಓನರುಗಳು
ಕೈಯಾರೆ ಒರೆಸುತಿದ್ದರು
ಚಂದಿರನ ಕಂಬನಿ
ಕೆಲವೊಮ್ಮೆ ಶಪಿಸುತ್ತಿದ್ದರು
“ಹಾಳಾದ್ದು ಈ ಇಬ್ಬನಿ”

- ತ್ರಿವಿಕ್ರಮ



Monday, March 21, 2016

ನೆನಪಿಗೆ ಸುಪಾರಿ



 ನೆನಪಿಗೆ ಸುಪಾರಿ


ಲೇ ಪೋರಿ..!!
ಎಷ್ಟೇ ಕೊಟ್ಟಿರುವೆ ನಿನ್ನ ನೆನಪುಗಳಿಗೆ
ನನ್ನ ನಿದ್ದೆ ಕೆಡಿಸಲು ಸುಪಾರಿ?
ಕಣ್ಣು ಮುಚ್ಚಲು ಕಿವಿಯಲ್ಲಿ ಊದುವವು
ಶಹನಾಯಿ ಟ್ರಂಪೆಟ್ಟು ತುತ್ತೂರಿ..!

ದೀಪವಾರಿಸಿದೊಡನೆ ಶುರು ಮಾಡುವವು
ದಿನಕೊಂದು ತರಹದ ಕಿತಾಪತಿ
ನಾ ಕಾಣಬೇಕಿದ್ದ ಸವಿಗನಸುಗಳೆಲ್ಲ
ನಿನ್ನ ನೆನಪಿನ ಬೆಂಕಿಗೆ ಆಹುತಿ
ಪರಿಪರಿಯಾಗಿ ನಾ ಬೇಡುತಿದ್ದರೂ
ತೋರಿಸವು ಕಿಂಚಿತ್ ವಿನಾಯಿತಿ

ಮೇಲೆ ಆಗಸದಲ್ಲಿ ತಾರೆಗಳಿಗೆ
ಲೈನ್ ಹಾಕುವುದರಲ್ಲಿ ಚಂದಿರನು ನಿರತ
ನನ್ನೆದೆಯ ಸಾಗರದಲಿ ನಿನ್ನಯ
ನೆನಪಿನಲೆಗಳದೆ ಮೊರೆತ, ಭೋರ್ಗರೆತ
ನಿಲ್ಲಿಸಲಾಗದೆ ಪರಿತಪಿಸುತಿರುವೆ
ಹಾರ್ಟಿನೊಳಗಿನ ವಿರಹದ ಕೆರೆತ

ಆಕಳಿಕೆ ತೂಕಡಿಕೆ ಎಲ್ಲೆಲ್ಲು ನಿನ ನೆನಪೆ
ಹೊಡೆಯುತಲಿರಲು ಮೊಳಕೆ
ಮೊಳಕೆ ಮರವಾಗಿ ಬೆಳೆದು ಬೇರುಗಳು
ಸಾಗುವವು ನನ್ನೆದೆಯ ತಳಕೆ
ಮರವುರುಳಲು ಹೃದಯ ಬಗೆದಾಗ ಸಿಗಬಹುದು
ನಿನ್ನ ನೆನಪುಗಳದೆ ಪಳೆಯುಳಿಕೆ

ದೂರದಲ್ಲಾಗಲೇ ಕೇಳಿಸುತ್ತಿದೆ
ಐದರ ನಮಾಜು ಕೂಗುತಿರುವ ಸದ್ದು
ನಾ ಕಣ್ಣುಜ್ಜುತಾ ಕುಳಿತಿರುವೆ
ಮೊಬೈಲಿನ ಬೆಳಕಿನಲ್ಲಿ ಎದ್ದು
ಹುಡುಕುತ್ತಾ ನಿನ್ನ ತಡರಾತ್ರಿಯ
ನೆನಪುಗಳ ಉಪಶಮನಕ್ಕೆ ಮದ್ದು

ಪ್ಲೀಸ್ ಸಾಕು ಕಣೆ..!
ಗಂಟೆ ಆರಾಯ್ತು ನೆನಪಾಗಿ ಕೊಡಬೇಡ ತೊಂದ್ರೆ
ಜಾಗರಣೆ ಸಾಕಾಯ್ತು ಬರುತಲಿದೆ ನಿದ್ರೆ
ಜೋಪಾನ ಮಾಡಿಟ್ಟುಕೋ ಕನಸುಗಳು ಬಿದ್ರೆ

-ತ್ರಿಲೋಕ್ ತ್ರಿವಿಕ್ರಮ

Saturday, February 06, 2016

ಚಂದಿರನ ತುಂಡು


ಚಂದಿರನ ತುಂಡು


ಸುದ್ದಿ ತಿಳಿಯಿತೇ ಇಂದು?
ಭೂಮಿಗೆ ಬಿದ್ದಿದೆಯಂತೆ
ಚಂದಿರನ ತುಂಡು.

ಕೋಟಿ ತಾರೆಗಳ ಸೇರಿ
ಹುಡುಕುತಿವೆ ಅದನು
ಭೂಮಿಗೆ ಬಂದು.

ನನಗನ್ನಿಸುತ್ತದೆ ಬಹುಶಃ
ಇಲ್ಲಿ ಬಂದಿವೆ ಅವು
ನಿನ್ನನು ಕಂಡು.

ಚಂದಿರ ಹೇಳಿದ್ದಾನಂತೆ
ನೀ ಸಿಗುತಲೆ ಹಿಂದೆ
ತರಬೇಕು ಎಂದು.

ಏನೆಂದುಕೊಂಡಿವೆ ಅವು
ನಿನಗಾರು ಇಲ್ಲವೆಂದೆ
ಹಿಂದು ಮುಂದು?

ನಾ ಜೊತೆ ಇರುವವರೆಗೂ
ನಿನಗೇನು ಮಾಡದು
ತಾರೆಗಳ ದಂಡು.

ಬಾ ಬಚ್ಚಿಡುವೆ ಎದೆಯಲ್ಲಿ
ನಿನ್ನ ಕೊಂಡೊಯ್ಯಲಿ
ನನ್ನನ್ನು ಕೊಂದು..!

-ತ್ರಿವಿಕ್ರಮ