Showing posts with label ಸನ್ನಿ ಲಿಯೋನೆ. Show all posts
Showing posts with label ಸನ್ನಿ ಲಿಯೋನೆ. Show all posts

Wednesday, January 24, 2018

ಸೋನಾ ಮಸೂರಿ ಬಣ್ಣ.. ಸನ್ನಿ ಲಿಯೋನೇ ಮೈಕಟ್ಟು..

ಸೋನಾ ಮಸೂರಿ ಬಣ್ಣ.. ಸನ್ನಿ ಲಿಯೋನೇ ಮೈಕಟ್ಟು..


ಕಾಣೆಯಾಗಿದ್ದಾಳೆ..!

ಹೆಸರು : ಕಾಂಚನಾ
     ಏಜು ಸುಮಾರು ಹದಿನೆಂಟು
ಸೋನಾ ಮಸೂರಿ ಬಣ್ಣ.
     ಸನ್ನಿ ಲಿಯೋನೇ ಮೈಕಟ್ಟು.

ಬಂದದ್ದು ಎಲ್ಲಿಂದ ನೆನಪಿಲ್ಲ
    ಇದ್ದದ್ದು ನಮ್ಮಯ ನಡುವಲ್ಲೇ
ಯಾರೇ ಬಂದು ಕರೆದರೂ
    ಎಂದು ಅಂದಿರಲಿಲ್ಲ ‘ನಾ ಒಲ್ಲೆ’

ಆರಕ್ಕೇರದ ಮೂರಕ್ಕಿಳಿಯದ
     ಐದು ಅಡಿ ಮೂರಿಂಚು ಎತ್ತರ.
ಕಂಡು ಕಾಣದ ಕರಿ ಮಚ್ಚೆ ಇತ್ತು
     ಮೊನಾಚಾದ ಮೂಗಿನ ಹತ್ತಿರ.

ಬಂಧು ಬಳಗ ಯಾರು ಇರಲಿಲ್ಲ
      ಆಕೆ ಬದುಕೆ ಖಾಲಿ ರೈಲುಬೋಗಿ
ಜನ ಏರಿ ಇಳಿಯುತಿದ್ದರು, ಎಂದೂ
      ರಾತ್ರಿ ಕಳೆದಿದ್ದೇ ಇಲ್ಲ ಒಂಟಿಯಾಗಿ

ತಿಳಿದಿದ್ದ ಭಾಷೆಗಳು ಯಾವುದೋ
       ಎಲ್ಲ ಸಹಿಸುತಿದ್ದಳು ಮೌನವಾಗಿ
ಅರಿವೆಯಿದ್ದರೆ ಗುರುತು ಸಿಕ್ಕಲಾರದು
       ಎಲ್ಲರೂ ನೋಡಿದ್ದರಂತೆ ಬೆತ್ತಲಾಗಿ

ಬಸುರಾಗಿದ್ದರು ಆಗಿರಬಹುದು
      ತಿಂಗಳಿಂದ ಆಗಿರಲಿಲ್ಲ ಹೊರಗೆ
ಕೈಲಿ ಮಗುವಿದ್ದರು ಇರಬಹುದು
      ಆಗಿ ಹೋಗಿದ್ದರೆ ಆಗಲೇ ಹೆರಿಗೆ

ಚಳಿಗಾಲದಲೂ ಬೆವರಿ ಬೇಸತ್ತ
ಆಕೆ ಬದುಕು ಜಿಗುಟು ಜಿಗುಟು 
ಎತ್ತ ಹೋದಳೋ, ಏಕೆ ಹೋದಳೋ
ಈಗ ಬಿಡಿಸಲಾಗದ ಒಗಟು

ಯಾರಿಗಾದರೂ ಆಕೆ ಸಿಕ್ಕರೆ
ಕರೆ ತನ್ನಿರಿ ಈ ವಿಳಾಸಕ್ಕೆ
ಕಾಂಚನ ಕೇರಾಫ್ ಕಾಂಚಣ
ಮೂರು ಗೇಣು ಕೈಲಾಸಕ್ಕೆ

ಪ್ರಕಟಣೆ ಮುಕ್ತಾಯವಾಯಿತು.


-ತ್ರಿವಿಕ್ರಮ