Showing posts with label ಕಥೆಗಳು. Show all posts
Showing posts with label ಕಥೆಗಳು. Show all posts

Tuesday, December 18, 2018

ಮ್ಯಾರಥಾನ್ ಗಾಂಧಿ


ಮ್ಯಾರಥಾನ್ ಗಾಂಧಿ


ನಾಥೂರಾಮನ ಕೈಯಲ್ಲಿದ್ದ ಬೆರೆಟ್ಟಾ ಎಂ34 ಪಿಸ್ತೂಲಿನಿಂದ ಪಾಯಿಂಟ್ ಬ್ಲಾಂಕ್ ರೇಂಜಿನಲ್ಲಿ ಗುಂಡೊಂದು ಸಿಡಿಯಿತು. ಅದರ ಹಿಂದೆಯೇ ಇನ್ನೊಂದು, ಮತ್ತೊಂದು..!

ಗಾಂಧೀಜಿ ಬೆಚ್ಚಿ ತನ್ನತ್ತಲೇ ಮುಖ ಮಾಡಿದ್ದ ಪಿಸ್ತೂಲಿನ ಕಡೆಗೆ ನೋಡಿದರು. ಆದರೆ ಅದರಿಂದ ಹೊರಬರುತ್ತಿದ್ದ ಗುಂಡುಗಳು ಕೇವಲ ಗುಂಡುಗಳಾಗಿರಲಿಲ್ಲ. ಅದರಲ್ಲಿದ್ದದ್ದು ಇಬ್ಭಾಗವಾದ ದೇಶದ ನಡುವೆ ಸಿಕ್ಕಿಕೊಂಡು ತಮ್ಮದೆಲ್ಲವನ್ನೂ ಕಳೆದುಕೊಂಡವರ ದುಃಖ, ಎರಡು ದೇಶಗಳಲ್ಲಿ ತಾವು ಎಲ್ಲಿಗೂ ಸೇರದೇ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವರ ಅಸಹಾಯಕತೆ, ಯಾರೋ ಮಾಡಿದ ತಪ್ಪಿಗೆ, ಯಾರದ್ದೋ ಅಧಿಕಾರದ ಲಾಲಸೆಗೆ, ತಮ್ಮ ಜೀವನ ಬಲಿ ಕೊಟ್ಟವರ ದ್ವೇಷ, ರೋಷ, ಆಕ್ರೋಷಗಳು. ಇವೆಲ್ಲವೂ ಸೇರಿ ನಾಥೂರಾಮನ ಕೈಲಿದ್ದ ಪಿಸ್ತೂಲಿನ ಮೂರು ಗುಂಡುಗಳಾಗಿ ಬಂದು ಇನ್ನೇನು ಗಾಂಧೀಜಿಯ ಎದೆ ಸೀಳಬೇಕು, ಅಷ್ಟರಲ್ಲಿ..

ಗಾಂಧೀಜಿ ಕೂಡಲೇ ಕೈಯಲ್ಲಿದ್ದ ಕೋಲನ್ನು ಮೇಲೆಸೆದು ಹಿಂದೆ ತಿರುಗಿ ಓಡತೊಡಗಿದರು. ನಾಥೂರಾಮನ ಗುಂಡುಗಳು ಹಿಂಬಾಲಿಸತೊಡಗಿದವು. ಗಾಂಧೀಜಿಯವರ ಪಕ್ಕದಲ್ಲಿದ್ದ ಮನುಬೆನ್ ಮತ್ತು ಅಭಾ, ಸುತ್ತಲೂ ಪ್ರಚಾರಕ್ಕೆಂದು ನೆರೆದಿದ್ದ ಅನುಯಾಯಿಗಳು, ಗುಂಡು ಹಾರಿಸಿದ ನಾಥೂರಾಮ, ಎಲ್ಲರೂ ಏನಾಯಿತು ಎಂದು ನೋಡುವಷ್ಟರಲ್ಲಿ, ಅವರು ಬಿರ್ಲಾ ಭವನದಿಂದ ಬಹಳ ದೂರ ಓಡಿಹೋಗಿದ್ದರು. ಕಾಲಿನಲ್ಲಿದ್ದ ಚಪ್ಪಲಿ, ಮೈಮೇಲೆ ಹೊದ್ದಿದ್ದ ಅಂಗವಸ್ತ್ರ, ಕಣ್ಣಿನ ಕನ್ನಡಕ ಅದೆಲ್ಲೆಲ್ಲಿ ಹಾರಿ ಬಿದ್ದವೋ, ಗಾಂಧೀಜಿ ಎದ್ದು ಬಿದ್ದು ಓಡತೊಡಗಿದ್ದರು. ತಾನು ಎತ್ತ ಓಡುತ್ತಿದ್ದೇನೆಂಬ ಪರಿವೆಯೂ ಇಲ್ಲದೇ ಓಡುತ್ತಿದ್ದ ಅವರು ದೆಹಲಿಯನ್ನೆಲ್ಲಾ ಸುತ್ತಿ, ಪಂಜಾಬಿನ ಕಡೆಗೆಲ್ಲೋ ಓಡತೊಡಗಿದರು. ಆ ಮೂರು ಗುಂಡುಗಳು ಬಿಡದೇ ಹಿಂಬಾಲಿಸುತ್ತಲೇ ಇದ್ದವು.

ಇತ್ತ ಗುಂಡು ಹಾರಿಸಿದ ನಾಥೂರಾಮನಿಗೆ ಮೊದಲು ಬಿರ್ಲಾ ಭವನದಲ್ಲಿದ್ದ ಜನರೆಲ್ಲಾ ಚೆನ್ನಾಗಿ ಥಳಿಸಿದರು. ಗಾಂಧೀಜಿ ಇರುವ ತನಕ ತಮ್ಮನ್ನು ಕಚ್ಚಿದ ಇರುವೆಯನ್ನೂ ಕೊಲ್ಲದೇ ಅಹಿಂಸಾ ತತ್ವವನ್ನು ಪಾಲಿಸುತ್ತಿದ್ದ ಅವರು ಗಾಂಧೀಜಿ ಓಡುತ್ತಲೇ ನಾಥೂರಾಮನ ಮೇಲೆ ಮುಗಿಬಿದ್ದರು. ಆಳಿಗೊಂದೇಟು ಎಂಬಂತೆ ಹೊಡೆಯುವವರೆ. ಅಷ್ಟರಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿ ಅವನನ್ನು ಬಂಧಿಸಿ ಕರೆದೊಯ್ದರು. ನ್ಯಾಯಲಯದ ಮುಂದೆ ಹಾಜರಿಪಡಿಸಿದರು. ವಿಚಾರಣೆ ನೆಡೆಯಿತು. ನಾಥೂರಾಮ ಗುಂಡು ಹಾರಿಸಿದ್ದನಾದರೂ ಅವು ಗಾಂಧಿಯನ್ನು ಕೊಲ್ಲುವ ತನಕ ಯಾವ ತೀರ್ಪನ್ನೂ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ತಾನು ಹಾರಿಸಿದ ಗುಂಡುಗಳು ಇಂದಲ್ಲ ನಾಳೆ ಗಾಂಧಿಯನ್ನು ಕೊಲ್ಲುತ್ತದೆ ಎಂಬ ಆತ್ಮವಿಶ್ವಾಸದಿಂದ ನಾಥೂರಾಮನೂ ಕಾಯತೊಡಗಿದ.

ಈ ಓಟ ಮುಗಿಯುವುದಿಲ್ಲವೆಂದು ಅರಿವಾದ ಗಾಂಧೀಜೀ ಹಿಂದೆ ತಿರುಗಿ ಗುಂಡುಗಳ ಜೊತೆಗೆ ಸಂಧಾನ ಮಾಡಿಕೊಳ್ಳಲು ಪ್ರಯತ್ನಿಸಿದರು. ‘ದೇಶ ವಿಭಜನೆಯಲ್ಲಿ ತನ್ನ ತಪ್ಪೇನಿಲ್ಲ, ಆ ಪರಿಸ್ಥಿತಿಯಲ್ಲಿ ಅದು ಅವಶ್ಯಕವಾಗಿತ್ತು’ ಎಂದು ತಿಳಿಹೇಳಿದರು. ‘ಪಾಕಿಸ್ತಾನಕ್ಕೆ ಹಣ ಸಹಾಯ ಮಾಡಿದ್ದರಲ್ಲಿ ತನಗೆ ಒಂದು ಪೈಸೆ ಲಾಭವಿಲ್ಲ, ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಷ್ಟೇ ತನ್ನ ಉದ್ದೇಶವಾಗಿತ್ತು’ ಎಂದು ಪರಿಪರಿಯಾಗಿ ವಿವರಿಸಿದರು. ‘ಈ ದೇಶ ಇಬ್ಭಾಗವಾದರೆ ಅದು ತನ್ನ ಗೋರಿಯ ಮೇಲೆಯೇ ಎಂದು ಒಮ್ಮೆ ಹೇಳಿದ್ದನ್ನೂ ಒತ್ತಿ ಒತ್ತಿ ಹೇಳಿ ತಾನು ವಿಭಜನೆಯ ಪರವಾಗಿ ಇರಲಿಲ್ಲ ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಆದರೆ ಗುಂಡುಗಳಿಗೆ ತಮ್ಮ ಗುರಿ ತಲುಪುವುದರ ಹೊರತಾಗಿ ಮತ್ಯಾವುದರ ಕಡೆಗೂ ಲಕ್ಷ್ಯವಿರದಿದ್ದನ್ನು ಅರಿತ ಗಾಂಧೀಜಿ ಸುಮ್ಮನೇ ಓಡತೊಡಗಿದರು.

ಗಾಂದೀಜಿಯ ಈ ಸಾವಿನ ಮ್ಯಾರಥಾನ್ ಸುದ್ದಿ ದೇಶದಲ್ಲೆಲ್ಲಾ ಹಬ್ಬಿತು. ರೇಡಿಯೋಗಳಲ್ಲಿ ಗಾಂಧಿ ಯಾವ ಊರಿನಲ್ಲಿ ಓಡುತ್ತಿದ್ದಾರೆ ಎಂದು ಗಂಟೆಗೊಮ್ಮೆ ಸುದ್ದಿ ಬಿತ್ತರವಾಗತೊಡಗಿತು. ನೆಡೆಯಲೂ ಶಕ್ತಿ ಇಲ್ಲದೇ ಕೋಲನ್ನೂರುತ್ತಲೋ, ಬೇರೆಯವರ ಹೆಗಲ ಮೇಲೆ ಕೈಯಿರಿಸಿಕೊಂಡೋ ನೆಡೆಯುತ್ತಿದ್ದ ಎಪ್ಪತ್ತೇಳರ ಮುದುಕಪ್ಪ ಆಯಾಸವೇ ಇಲ್ಲದಂತೆ ಓಡುತ್ತಿದ್ದಿದ್ದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಈ ಬಗ್ಗೆ ಎಲ್ಲೆಡೆ ಬಹಳಷ್ಟು ಚರ್ಚೆಗಳಾದವು. ಅವರ ಈ ಅಶ್ವಶಕ್ತಿಗೆ ವರುಷಗಳಿಂದ ತನ್ನ ಮೇಲೆಯೆ ಮಾಡಿಕೊಳ್ಳುತ್ತಿದ್ದ ವಿಶೇಷ ಯೋಗ, ಪ್ರಯೋಗಗಳೇ ಕಾರಣವಿರಬಹುದು ಎಂದು ಜನ ಮಾತನಾಡಿಕೊಂಡರು. ಗಾಂಧೀಜಿಯವರು ಊರಿಂದ ಊರಿಗೆ ಓಡುತ್ತಿದ್ದರೆ, ಮುಂದೆ ಯಾವ ಊರಿಗೆ ಓಡಬಹುದೆಂದು ಊಹಿಸುತ್ತಿದ್ದ ಜನ ಆ ಊರು ತಲುಪಿ ಅವರ ಓಟವನ್ನು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ನೋಡುತ್ತಿದ್ದರು. ಕೆಲವರಂತೂ ಅವರು ಎಷ್ಟು ನಿಮಿಷದಲ್ಲಿ ಊರು ದಾಟಬಹುದು, ಮುಂದೆ ಯಾವ ಊರಿಗೆ ಹೋಗಬಹುದು, ಗುಂಡು ಯಾವ ಊರಿನಲ್ಲಿ ಅವರ ಮೈ ಸೇರಬಹುದೆಂದು ತಮ್ಮ ತಮ್ಮಲ್ಲೇ ಹಣ ಕಟ್ಟಿಕೊಂಡು ಜೂಜಾಡಿದರು. ಇಂಥಹವರನ್ನೆಲ್ಲಾ ಪೊಲೀಸರು ಅವರನ್ನು ರಾಷ್ಟ್ರದ್ರೋಹದ ಆರೋಪದ ಮೇಲೆ ಬಂಧಿಸಿದರು.

ಗಾಂಧಿ ನೂರಾರು ಕಿ.ಮೀ ಓಡಿಯಾಗಿತ್ತು. ಮಹಾತ್ಮರನ್ನು ಕೊಲ್ಲಲು ಗುಂಡುಗಳು ಹಿಂದೆ ಬಿದ್ದಿರುವಾಗ ತಾವು ಸುಮ್ಮನಿರುವುದು ಸೂಕ್ತವಲ್ಲವೆಂದು ಮಂತ್ರಿಮಂಡಲ ಸಭೆ ಸೇರಿತು. ದೇಶ ವಿಭಜನೆಗೆ ಕಾರಣವಾದವರು ಯಾರಾದರೂ ಗಾಂಧೀಜಿಯ ಹಿಂದೆ ಬಿದ್ದಿದ್ದ ಗುಂಡುಗಳಿಗೆ ಬಲಿಯಾಗುವುದರಿಂದ ಗಾಂಧೀಜಿಯವರ ಸಾವನ್ನು ತಪ್ಪಿಸಬಹುದೆಂದು ನಿರ್ಧಾರಿಸಲಾಯಿತು. ‘ಪ್ರತಿಯೊಬ್ಬ ಹಿಂದೂವಿಗೂ ಅಖಂಡ ಭಾರತದ ಕನಸಿತ್ತು. ದೇಶ ವಿಭಜನೆಗಾಗಿ ಪಟ್ಟು ಹಿಡಿದು ಕುಳಿತದ್ದು ಮುಸ್ಲೀಂ ಲೀಗಿನವೇರೇ ಇದಕ್ಕೆ ನೇರ ಹೊಣೆಯಾದ್ದರಿಂದ ಹಿಂದೂಗಳು ಪ್ರಾಣತ್ಯಾಗ ಮಾಡುವ ಪ್ರಶ್ನೆಯೇ ಇಲ್ಲವೆಂದು ವಿರೋಧ ಪಕ್ಷದವರು ವಾದಿಸಿದರು. ಆಡಳಿತ ಪಕ್ಷದವರಿಗೆ ಇದು ಸರಿ ಎನ್ನಿಸಿತು. ಯಾರಾದರೂ ಮುಸ್ಲೀಮರೇ ತಲೆದಂಡ ಮಾಡಬೇಕೆಂದು ಕೂಡಲೇ ಭಾರತದಿಂದ ಪಾಕಿಸ್ತಾನಕ್ಕೆ ಟೆಲಿಗ್ರಾಂ ಹೋಯಿತು. ‘ನಾವೇನೋ ಪ್ರಾಣ ನೀಡಲು ಸಿದ್ಧರಿದ್ದೇವೆ. ಆದರೆ ಗಾಂಧೀಜಿಯವರಿಗೆ ಪ್ರತಿಯೊಬ್ಬ ಮುಸ್ಲೀಮರ ಪ್ರಾಣವೂ ತುಂಬಾ ಅಮೂಲ್ಯವಾಗಿತ್ತು. ತನ್ನ ಜೀವ ಉಳಿಸಿಕೊಳ್ಳಲು ಆ ಮಹಾತ್ಮ ಎಂದಿಗೂ ಮುಸ್ಲೀಮರನ್ನು ಬಲಿ ಕೊಡಲಿಕ್ಕಿಲ್ಲ’ ಎಂದು ಮರುತ್ತರ ಬರೆದರು. ಆಡಳಿತ ಪಕ್ಷದವರಿಗೆ ಇದೂ ಸರಿ ಎನ್ನಿಸಿತು. ಕಡೆಗೆ ಯಾರನ್ನು ಬಲಿ ಕೊಡುವುದೆಂಬ ವಿಷಯ ಇತ್ಯರ್ಥವಾಗದೇ ಎಲ್ಲರೂ ಪ್ರಧಾನ ಮಂತ್ರಿಯ ಕಡೆಗೆ ನೋಡಿದರು. 

‘’ಹಣ್ಣು ಹಂಚಿ ತಿನ್ನು, ದೇಶ ಒಡೆದು ಆಳು’’ ಎಂದು ಬ್ರಿಟೀಷರು ಉಡುಗೊರೆಯಾಗಿ ಕೊಟ್ಟಿದ್ದ ಡೈರಿಯೊಂದಲ್ಲಿ ಬರೆದುಕೊಂಡಿದ್ದ ವಾಕ್ಯವನ್ನು ಉಲ್ಲೇಖಿಸುತ್ತಾ ಭಾಷಣ ಪ್ರಾರಂಭಿಸಿದರು ಮಾನ್ಯ ಪ್ರಧಾನಿಗಳು. ನಂತರ ಬಹಳ ಗಂಭೀರವಾದ ಧ್ವನಿಯಲ್ಲಿ ದೇಶವನ್ನು ಸೇಬಿನ ಹಣ್ಣಿಗೆ ಹೋಲಿಸುತ್ತಾ, ಹೇಗೆ ಅದನ್ನು ಭಾಗ ಮಾಡಿ ತಿಂದಾಗ ಮಾತ್ರ ಮುಂದಿನ ದಿನಗಳಲ್ಲಿ ಯಾವ ಕಿತ್ತಾಟವಿಲ್ಲದೇ ಎಲ್ಲರೂ ಸವಿಯಲು ಸಾಧ್ಯವಿದೆಯೆಂದು ಹೇಳಿದರು. ಈ ಬಗ್ಗೆ ಗಾಂಧೀಜಿಯವರಿಗಿದ್ದ ಆ ದೂರದೃಷ್ಟಿಯನ್ನು ಶ್ಲಾಘಿಸಿ, ಅವರ ನಿಲುವನ್ನು ಸಮರ್ಥಿಸಿಕೊಂಡರು. ಕೊನೆಯಲ್ಲಿ ‘ಸದಾ ದೇಶದ ಒಳಿತನ್ನೇ ಬಯಸಿ, ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ ಆ ಮಹಾತ್ಮನಿಗೆ ಮಾತ್ರ ಆ ಗುಂಡುಗಳಿಗೆ ಎದೆಯೊಡ್ಡುವ ಯೋಗ್ಯತೆ ಇದಯೇ ಹೊರತು ನಮ್ಮಂತಹ ಸಾಮಾನ್ಯ ಆತ್ಮಗಳಿಗಲ್ಲ. ಅವರನ್ನು ಕಳೆದುಕೊಳ್ಳುವ ದೇಶ ಅನಾಥವಾಗುತ್ತದೆ ನಿಜ, ಆದರೆ ಇಲ್ಲಿಯವರೆಗೂ ಮಹಾತ್ಮರಾಗಿದ್ದ ಅವರು ನಮ್ಮ ಮನಸ್ಸಿನಲ್ಲಿ ಹುತಾತ್ಮರಾಗುತ್ತಾರೆ’ ಎಂದು ಗದ್ಗದಿತರಾಗಿ ತಮ್ಮ ಸುದೀರ್ಘ ಭಾಷಣವನ್ನು ಮುಗಿಸಲು ನೆರೆದಿದ್ದ ಸಭೀಕರಲ್ಲಿ ಮೌನ ಆವರಿಸಿತ್ತು. ಮರುಕ್ಷಣ ಚಪ್ಪಾಳೆಯ ಧ್ವನಿ ಮುಗಿಲು ಮುಟ್ಟಿತು.

ಆ ಚಪ್ಪಾಳೆಯ ಧ್ವನಿಯ ಓವರ್ ಲ್ಯಾಪಿನಲ್ಲಿಯೇ ಗಾಂಧಿ ಓಡುತ್ತಾ ಓಡುತ್ತಾ ಭಾರತ ಪಾಕಿಸ್ತಾನದ ಗಡಿ ತಲುಪಿದರು. ಪಾಕಿಸ್ತಾನದಿಂದ ಹಿಂದೂಗಳನ್ನು ಕೊಲ್ಲಲು ಬೆನ್ನತ್ತಿ ಬರುತ್ತಿದ್ದ ಮುಸ್ಲೀಮರು, ಭಾರತದಿಂದ ತಲೆಮರೆಸಿ ಓಡುತ್ತಿದ್ದ ಮುಸ್ಲೀಮರ ತಲೆ ಕಡಿಯಲು ಬಂದ ಹಿಂದೂಗಳು ಈ ಗಲಾಟೆಯ ನಡುವೆ ಓಡಿ ಧೋತಿ ಉಟ್ಟು ಓಡಿಬಂದ ಗಾಂಧಿಜಿಯನ್ನು ಕಂಡು ಒಂದು ಕ್ಷಣ ಅವಕ್ಕಾಗಿ ನಿಂತು ನೋಡಿದರು. ನಂತರ ತಮಗೆ ಸಂಬಂಧವಿಲ್ಲ ಎಂಬಂತೆ ಕೊಲ್ಲುವುದನ್ನು ಮುಂದುವರೆಸಿದರು. ಗಾಂಧೀಜಿ ಅವರಿಗೆ ‘ಈ ಕ್ರೌರ್ಯವೆಲ್ಲಾ ತನಗೆ ಇಷ್ಟವಿಲ್ಲ, ನಿಲ್ಲಿಸಿ, ನಿಲ್ಲಿಸಿ’ ಎಂದು ಕೂಗಿ ಹೇಳಲು ಪ್ರಯತ್ನಿಸಿದರು. ಆದರೆ ಯಾರೂ ಅವರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ತಾನೆಲ್ಲಿ ಎಡವಿದೆನೆಂದು ಗಾಂಧೀಜಿಯವರಿಗೆ ನಿಧಾನವಾಗಿ ಅರಿವಾಗತೊಡಗಿತು. ಓಡುತ್ತಾ ಓಡುತ್ತಾ ಅವರ ಕಾಲುಗಳು ಸೋತು ಅಲ್ಲಿ ಬಿದ್ದಿದ್ದ ಯಾವುದೋ ಶವವನ್ನು ಎಡವಿ ಮುಗ್ಗರಿಸಿದರು. ಹೇಗೋ ಸಾವರಿಸಿಕೊಂಡು ಮೇಲೆದ್ದರು. ಮತ್ತೆ ಓಡಲು ಇನ್ನೇನು ಹಿಂದೆ ತಿರುಗಬೇಕು. ಅಷ್ಟರಲ್ಲಿ ತಾವು ಎಡವಿದ ಶವದ ಮೇಲೆ ಅವರ ಕಣ್ಣು ಬಿದ್ದಿತು.

ಗಾಂಧೀಜಿಗೆ ತಾವು ಕಣ್ಣಿಂದ ಕಂಡದ್ದನ್ನು ನಂಬಲಾಗಲಿಲ್ಲ. ಅಲ್ಲಿದ್ದದ್ದು ಸ್ವತಃ ಅವರದ್ದೇ ಶವ. ಅವರದ್ದೇ ಸಣಕಲು ದೇಹದ, ಬೋಳು ತಲೆಯ ಅರೆನಗ್ನ ಶವ. ಗಾಂಧೀಜಿ ಬೆಚ್ಚಿ ಬಿದ್ದು ಅತ್ತಿತ್ತ ಕಣ್ಣು ಹಾಯಿಸಿದರೆ ಸುತ್ತಲೂ ಬಿದ್ದಿರುವ ಪ್ರತಿ ಶವವೂ ಅವರದ್ದೇ. ಆ ಶವಗಳನ್ನು ಆಯುಧ ಹಿಡಿದು ಹೊಡೆದು ಉರುಳಿಸುತ್ತಿರುವುದು ಕೂಡ ಅವರೇ. ಇದನ್ನೆಲ್ಲಾ ನೋಡುತ್ತಾ ನಿಂತ ಗಾಂಧೀಜಿಯವರಿಗೆ ಕಣ್ಣು ಕತ್ತಲೆ ಬಂದಂತಾಯಿತು. ಅಲ್ಲಿಂದ ದೂರ ಓಡೋಣವೆಂದರೆ ಹಜ್ಜೆ ಕಿತ್ತಿಡಲು ಸಾಧ್ಯವಾಗಲಿಲ್ಲ. ಏನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಹಿಂಬಾಲಿಸಿ ಬಂದ ನಾಥೂರಾಮನ ಗುಂಡುಗಳು ಕಡೆಗೂ ಗಾಂಧಿಜಿಯವರ ಎದೆಯನ್ನು ಸೀಳಿದ್ದವು. ಗಾಂಧೀಜಿ ಎದೆ ಹಿಡಿದುಕೊಂಡು ಕೆಳಗುರುಳಿದರು.

ಅವರು ‘ಹೇ ರಾಮ್’ ಎಂದದ್ದು ಯಾರಿಗೂ ಕೇಳಿಸಲಿಲ್ಲ.

-      ತ್ರಿಲೋಕ್ ತ್ರಿವಿಕ್ರಮ

Wednesday, November 14, 2018

ಕಾರ್ನರ್ ಸೀಟಿನ ಕಥೆಗಳು


ಕಾರ್ನರ್ ಸೀಟಿನ ಕಥೆಗಳು



ಮಧ್ಯಂತರ

ತೆರೆಯ ಮೇಲೆ ಮಧ್ಯಂತರ ಎಂಬ ಅಕ್ಷರಗಳು ಕಾಣುತ್ತಿದ್ದ ಹಾಗೆ, ಅಂಟಿ ಕುಳಿತಿದ್ದ ಪ್ರೇಮಿಗಳ ಮಧ್ಯ - ಅಂತರವೂ ಹೆಚ್ಚಾಯಿತು. ದೀಪಗಳು ಹೊತ್ತಿಕೊಂಡವು. ಸಿನಿಮಾ ಅಷ್ಟೇನೂ ಚೆನ್ನಾಗಿರದಿದ್ದರಿಂದ ಇದ್ದವರು ಕೆಲವೇ ಜನ. ಅದರಲ್ಲೊಂದಿಬ್ಬರು ಮೇಲೆದ್ದು ನಗುತ್ತಾ, ತಮ್ಮ ತಮ್ಮಲ್ಲೇ ಮಾತನಾಡುತ್ತಾ ಬಾಗಿಲುಗಳ ಕಡೆ ನೆಡೆದರು. ಇನ್ನು ಕೆಲವರು ಕೂತಲ್ಲಿಯೇ ಕೂತು ಜೇಬಿನಿಂದ ಮೊಬೈಲ್ ಹೊರತೆಗೆದರು, ಒಂದಿಬ್ಬರು ಹುಡುಗರು ಸಿನಿಮಾಗೆ ಬರುವ ಬದಲು ಬಾರಿಗಾದರೂ ಹೋಗಬಹುದಿತ್ತು ಎಂದು ಬೈದುಕೊಳ್ಳುತ್ತಾ ನನ್ನ ಎದುರೆ ನೆಡೆದು ಹೋದರು. ಇಲ್ಲಿ ಕುಳಿತಿದ್ದ ಪ್ರೇಮಿಗಳು ಹೋಗುವುದೋ ಬೇಡವೋ ಎಂದು ಒಂದಷ್ಟು ಚರ್ಚೆ ಮಾಡಿ ಕೊನೆಗೆ ಎದ್ದು ಹೊರನೆಡೆದರು. ಅವರು ಹೋದ ಮೇಲೆ ನಾನೂ ಆಕಳಿಸಿ ಕೂತಲ್ಲೇ ನಿಟ್ಟುಸಿರು ಬಿಟ್ಟೆ. ಇನ್ನು ಹತ್ತು ನಿಮಿಷಗಳ ವಿರಾಮ ನನಗೆ.

ನಾನು ಎಫ್ 22 ನಂಬರಿನ ಮೂಲೆಯ ಸೀಟು, ಅರ್ಥಾತ್ ಕಾರ್ನರ್ ಸೀಟು.

‘ಕಾರ್ನರ್ ಸೀಟು’ ಎಂದು ನನ್ನ ಅನ್ವರ್ಥನಾಮವನ್ನು ಕೇಳುತ್ತಿದ್ದಂತೇ ಎಲ್ಲರ ಮುಖದಲ್ಲೂ ವಿಷಯ ಅರ್ಥವಾದಂತೆ ಅದೊಂದು ನಗು ಹಾದು ಹೋಗುತ್ತದೆ. ಗೆಳೆಯನ ಕಂಪ್ಯೂಟರಿನಲ್ಲಿ ನಲವತ್ತು ಜಿಬಿ ಗಾತ್ರದ ಸ್ಟಡಿ ಮೆಟೀರಿಯಲ್ ಎಂಬ ಫೋಲ್ಡರನ್ನು ನೋಡಿದಾಗಲೋ, ಹನಿಮೂನ್ ಮುಗಿಸಿ ಹೋದವರ ರೂಮು ಕ್ಲೀನು ಮಾಡಲು ರೂಂ ಬಾಯ್ ಒಳಗೆ ಹೋದಾಗಲೋ ಬರುವಂತಹ ತುಂಟ ನಗು. ಪರವಾಗಿಲ್ಲ, ನನಗೆ ಅದರಲ್ಲೇನು ಮುಜುಗರವಿಲ್ಲ. ಕುಬೇರ ಮೂಲೆಯಲ್ಲಿಟ್ಟರೇ ತಾನೆ ತಿಜೋರಿ ತುಂಬುವುದು? ಹಾಗೆಯೇ ಟಾಕೀಸಿನ ಮೂಲೆಯಲಿ ಕೂತರೆನೇ, ತುಂಟತನ ಹೊರಗೆ ಬರುವುದು. ಹೌದು, ನನ್ನಲ್ಲಿಗೆ ಬರುವವರಲ್ಲಿ ಬಹುಪಾಲು ಮಂದಿ ತುಂಟರೇ. ಅವರಲ್ಲಿ ಹಾಲು ಕದಿಯಲು ಬಂದ ಬೆಕ್ಕಿನ ಅವಸರ, ಕರೆಂಟು ಹೋದಾಗ ಕ್ಯಾಂಡಲ್ಲು ಹುಡುಕುವ ಕೈಗಳ ಚಾತುರ್ಯ, ನಡುರಾತ್ರಿಯಲಿ ದಾರಿ ತಪ್ಪಿದವವರ ಭಯ, ದೂರದಲ್ಲಿ ಕಾಣುವ ಬೆಳಕನ್ನು ಹಿಂಬಾಲಿಸಿ ಹೋಗುವವರ ಕುತೂಹಲ, ಎಲ್ಲವೂ ಇದೆ. ಹೀಗೆ ಸಿನಿಮಾದ ಮುಂದೆ ನೆಡೆಯುವ ಲೈವ್ ಸಿನಿಮಾಗಳಿಗೆ ಪ್ರೇಕ್ಷಕ ನಾನು. ಕತ್ತಲೆಯೊಳಗೆ ನೆಡೆಯುವ ಈ ಕಣ್ಣಾಮುಚ್ಚಾಲೆ ಆಟಗಳಿಗೆ ಅಂಪೈರು ನಾನು.

ಕಂಡವರ ಮಾತುಗಳನ್ನು ಕದ್ದು ಕೇಳಿಸಿಕೊಳ್ಳುವ ಈ ನನ್ನ ಚಟವನ್ನು ಕಂಡು ಮೂಗು ಮುರಿಯಬಹುದು. ಆದರೆ ನೀವೇ ನನ್ನ ಜಾಗದಲ್ಲಿ ನಿಂತು ಯೋಚಿಸಿ. (ಆಯ್ತು ನಿಲ್ಲಬೇಡಿ ಕೂತು ಯೋಚಿಸಿ). ನೀವೊಂದು ಸಿನಿಮಾವನ್ನು ಒಂದು ಸಲ ನೋಡಬಹುದು, ಎರಡು ಸಲ ನೋಡಬಹುದು. ಬಹಳ ಚೆನ್ನಾಗಿದ್ದರೆ ಹತ್ತು ಸಲ ನೋಡಬಹುದು. ಆದರೆ ನಾನು ಸಿನಿಮಾ ಚೆನ್ನಾಗಿದ್ದರೂ ಇಲ್ಲದಿದ್ದರೂ ದಿನಕ್ಕೆ ನಾಲ್ಕು ಸಲ ನೋಡಲೇಬೇಕು. ಹಿಟ್ ಸಿನಿಮಾವಾದರೆ, ಐವತ್ತು ದಿನ ನೂರು ದಿನಗಳವರೆಗೂ ನನಗೆ ಮುಕ್ತಿಯಿಲ್ಲ. ನನಗಿನ್ನೆಷ್ಟು ಜಿಗುಪ್ಸೆಯಾಗಬಹುದು? ಅದರಿಂದ ಹೊರಗೆ ಬರುವ ಒಂದೇ ಒಂದು ದಾರಿಯೆಂದರೆ ನನ್ನಲ್ಲಿಗೆ ಬಂದು ಕುಳಿತವರ ಕಥೆಗಳಿಗೆ ಕಿವಿಯಾಗುವುದು,

ಒಬ್ಬೊಬ್ಬರದು ಒಂದೊಂದು ಕಥೆಗಳು. ಆದರೆ ಸಾಮಾನ್ಯವಾಗಿ ಈ ಎಲ್ಲಾ ಕಥೆಗಳ ಕ್ಯಾಟಗರಿ ಒಂದೇ. ಏಕೆಂದರೆ ಇದರಲ್ಲಿ ಬಹುತೇಕ ಕಥೆಗಳು ಪಿಸುಮಾತಿನಲ್ಲಿ ಶುರುವಾಗಿ ಬಿಸಿಯುಸಿರಿನಲ್ಲಿ ಮುಂದುವರೆದು ನಸು ನಾಚಿಕೆಯಲ್ಲಿ ಕೊನೆಯಾಗುತ್ತವೆ. ಅವನ ರಸಿಕತೆ, ಅವಳ ಭಾವುಕತೆ, ಇಬ್ಬರನ್ನೂ ತನ್ನೊಳಗೆ ಬಚ್ಚಿಟ್ಟುಕೊಂಡ ಕತ್ತಲಿನ ಜಾಗರೂಕತೆ, ಅಕ್ಕಪಕ್ಕದ ಸೀಟುಗಳಲಿ ಕುಳಿತವರ ಸಿನಿಕತೆ, ಇವೆಲ್ಲವೂ ಇದರಲ್ಲಿವೆ. ಹೇಳುವವರಿಗೆ ಈ ಕಥೆ ಮುಜುಗರ ತಂದರೂ, ಕೇಳುವವರಿಗೆ ಎಂದಿಗೂ ಈ ಕಥೆಗಳ ಬಗ್ಗೆ ಕುತೂಹಲ ಬತ್ತುವುದಿಲ್ಲ. ನಾನು ಮೊದಲೇ ಹೇಳಿದಂತೆ ಯಾವ ಮುಜುಗರವಿಲ್ಲದೇ ಒಂದಷ್ಟು ಕಥೆಗಳನ್ನು ಹೇಳುವೆ ಕೇಳಿ.

#@#

ಕಥೆ ೧

ಇತ್ತೀಚಿನ ಕಥೆಯೊಂದರಿಂದ ಪ್ರಾರಂಭಿಸುತ್ತೇನೆ. ಅವರಿಬ್ಬರೂ ಒಂದೇ ಆಫೀಸಿನವರಿರಬೇಕು, ಕೆಲಸದ ಶಿಫ್ಟು ಮುಗಿಸಿ ನೈಟು ಷೋಗೆ ಬಂದಿದ್ದರು. ತೋಳಿನ ಮೇಲೆ ಹೂವಿನ ಟ್ಯಾಟೂ ಇದ್ದ ಹಿಂದಿ ಹುಡುಗಿಗೆ ಕನ್ನಡದ ಒಂದೊಂದು ಸಂಭಾಷಣೆಯನ್ನೂ ಹಿಂದಿಗೆ ಅನುವಾದಿಸಿ ಹೇಳುತ್ತಿದ್ದ ಆ ಕನ್ನಡಕದ ಹುಡುಗ. ಅವನ ಮಾತುಗಳನ್ನು ಕೇಳಿ ಅವಳು ಬಿದ್ದು ಬಿದ್ದು ನಗುತ್ತಿದ್ದರೆ, ತನ್ನದೇ ಜೋಕಿಗೆ ನಗುತ್ತಿದ್ದಾಳೆಂಬಂತೆ ಖುಷಿಯಿಂದ ಬೀಗುತ್ತಿದ್ದ. ಬಿಟ್ಟಿದ್ದರೆ ಪೂರ್ತಿ ಸಿನಿಮಾವನ್ನೆ ಹಿಂದಿಗೆ ಡಬ್ ಮಾಡಿಬಿಡುತ್ತಿದ್ದನೇನೋ, ಅಷ್ಟರಲ್ಲಿ ಸುಂದರವಾದ ರೊಮ್ಯಾಂಟಿಕ್ ಹಾಡೊಂದು ಶುರುವಾಯಿತು, ಅವನು ಮಾತು ನಿಲ್ಲಿಸಿಬಿಟ್ಟ. ಅವಳು ಏನಾಯಿತೆಂಬಂತೆ ಇವನತ್ತ ತಿರುಗಿದಳು. ಟಾಕೀಸಿನ ಡಿಟಿಎಸ್ ಸ್ಪೀಕರುಗಳಲ್ಲಿ ಹಾಡು ಕೇಳುತ್ತಿದ್ದರೆ ಅದಕ್ಕೆ ತಕ್ಕಂತೆ ಇಲ್ಲಿ ಇವನ ಕೈಬೆರಳುಗಳು ಅವಳ ತೋಳ ಮೇಲೆ ಸಂಗೀತ ನುಡಿಸತೊಗಿದವು. ಎಲ್ಲಿಯೂ ಲಯ ತಪ್ಪದ ಅವನ ರಾಗಕ್ಕೆ ಇವಳು ಮಿಡಿದು ಶೃತಿಯಾದಳು. ಅವನ ರಸಿಕತೆಗೆ ರತಿಯಾದಳು. ಕನ್ನಡದ ಈ ಹೇರಿಕೆಯನ್ನು ಹಿಂದಿ ವಿರೋಧಿಸಲಿಲ್ಲ. ಕೆಲವು ನಿಮಿಷಗಳ ಕಾಲ ದೇಹದೊಳಗೆ ಉಚ್ವಾಸ ನಿಶ್ವಾಸಗಳ ಹಗ್ಗ ಜಗ್ಗಾಟ ನೆಡೆದು ಕಡೆಯಲ್ಲಿ ಇಬ್ಬರೂ ಸೋತಿದ್ದರು, ಇಬ್ಬರೂ ಗೆದ್ದಿದ್ದರು. ಕತ್ತಲು ಕಳೆದು ಮುಂಜಾನೆಗೆ ಹೂವರಳುವಂತೆ, ನಡುರಾತ್ರಿಯಲಿ ಥಿಯೇಟರಿನ ದೀಪಗಳುರಿದಾಗ ಅವಳ ಗುಳಿಕೆನ್ನೆಗಳಲಿ ಕೆಂಪು ಕೆಂಪಾದ ಹೂವರಳಿದ್ದವು. ಹಣೆಯ ಮೇಲೆ ಇಬ್ಬನಿಯಂತೆ ಬೆವರ ಹನಿ.

ಕಥೆ ೨

ಮುಂದಿನ ಕಥೆ ಅದೊಂದು ಮಾರ್ನಿಂಗ್ ಷೋಗೆ ಕಾಲೇಜಿಗೆ ಬಂಕು ಹಾಕಿ ಯೂನಿಫಾರ್ಮಿನಲೇ ಬಂದಿದ್ದ ಅವರಿಬ್ಬರದು. ಅದೆಷ್ಟು ನಿದ್ದೆಗೆಟ್ಟ ರಾತ್ರಿಗಳ ವಾಟ್ಸಾಪ್ ಮೆಸೇಜುಗಳ ಫಲವೋ, ಅಂತೂ ಇಬ್ಬರೂ ಒಂದಾಗಿ ಸಿನಿಮಾಗೆ ಬಂದಿದ್ದರು. ಬುಕ್ ಮಾಡುವಾಗಲೇ ಖಾಲಿಯಿದ್ದ ಕಾರ್ನರ್ ಸೀಟು ಹುಡುಕಿ ಬುದ್ಧಿವಂತಿಕೆ ಮೆರೆದಿದ್ದ ಹುಡುಗ. ಅವಳು ಕ್ರೈಸ್ತರ ಹುಡುಗಿ. ಕತ್ತಿನಲ್ಲಿ ಕ್ರಾಸ್ ಇತ್ತು. ಬಹುಶಃ ಇಬ್ಬರೂ ಅದೇ ಮೊದಲು ಸಿನಿಮಾಗೆ ಜೊತೆಗೆ ಬಂದಿದ್ದಿರಬೇಕು. ಚಿತ್ರದುದ್ದಕ್ಕೂ ಭಯದಿಂದ ಮುದುರಿ ಕುಳಿತಿದ್ದಳು. ಪೋನು ವೈಬ್ರೇಟಾದರೆ ಬೆಚ್ಚಿಬೀಳುತ್ತಿದ್ದಳು. ಆಗಾಗ ವಾಚು ನೋಡುತ್ತಿದ್ದಳು. ವಾಷ್ ರೂಮಿಗೆ ಎದ್ದು ಹೋಗಬೇಕಾದೀತು ಎಂದು ಆತ ತಂದುಕೊಟ್ಟ ಜ್ಯೂಸನ್ನೂ ಮುಟ್ಟಲಿಲ್ಲ. ಸೆಕೆಂಡ್ ಹಾಫ್ ಶುರುವಾಯಿತು. ಹುಡುಗ ಕೇಳಲೋ ಬೇಡವೋ ಎನ್ನುವಂತೆ ಪಿಸುಮಾತಿನಲ್ಲೇ ಪಪ್ಪಿಯೊಂದಕ್ಕೆ ಬೇಡಿಕೆಯಿಟ್ಟ. ಅವಳು ಅವನನ್ನೊಮ್ಮೆ ದುರುಗುಟ್ಟಿ ನೋಡಿ ಸಾಧ್ಯವೇ ಇಲ್ಲವೆಂದಳು. ಹಲವು ಗುಸುಗುಸು ಪಿಸುಪಿಸುಗಳ ನಂತರ ಅವಳು ಕೊಡುವುದಿಲ್ಲವೆಂದು, ಆತನೇ ಕೊಡಬೇಕೆಂದು ನಿರ್ಧಾರವಾಗಿ ಅವಳು ಧೈರ್ಯ ತಂದುಕೊಂಡು ಸಂಕೋಚಗಳಿಂದ ಹ್ಯಾಂಡ್ ರೆಸ್ಟಿನ ಮೇಲೆ ಒರಗಿ ಕೂರುವಂತೆ ಮುಂದೆ ಭಾಗಿ ಕೆನ್ನೆ ಕೊಟ್ಟಳು. ತುಟಿ ಕೊಡುವಳೆಂದು ನಿರೀಕ್ಷಿಸಿದ್ದ ಹುಡುಗನಿಗೆ ನಿರಾಸೆಯಾದರೂ ಕಣ್ಣ ಮುಂದಿದ್ದ ಕೆನ್ನೆಯೂ ಹಿಂದೆ ಹೋಗುವುದರೊಳಗೆ ರಪಕ್ಕನೇ ಮುತ್ತಿಕ್ಕಿದ. ಕಿವಿಗೆ ಅಷ್ಟು ಸನಿಹದಲ್ಲೇ ಕೇಳಿದ ಆ ಮುತ್ತಿನ ಸದ್ದಿಗೆ ಬಾಂಬು ಸಿಡಿದವಳಂತೆ ಬೆಚ್ಚಿಬಿದ್ದು ಹಿಂದೆ ಸೀಟಿಗೊರಗಿ ಎದುಸಿರು ಬಿಡುತ್ತಿದ್ದರೇ. ಅವನು ಏನೋ ಸಾಧಿಸಿದವನಂತೆ ಹೆಮ್ಮೆಯಿಂದ ನಿಟ್ಟುಸಿರು ಬಿಟ್ಟ. ಸಿನಿಮಾ ಪರದೆಯನ್ನೇ ನೋಡುತ್ತಾ ಕುಳಿತ ಅವಳು ಅವನನ್ನು ಮತ್ತೆ ತಿರುಗಿ ನೋಡಲಿಲ್ಲ. ಅವಳನ್ನೇ ನೋಡುತ್ತಾ ಕುಳಿತ ಅವನು ಮತ್ತೆ ಸಿನಿಮಾ ನೋಡಲಿಲ್ಲ.

ಕಥೆ ೩

ಇದು ಕೆಲವು ವರುಷಗಳ ಹಿಂದಿನ ಕಥೆ. ಪರೀಕ್ಷೆ ಮುಗಿಸಿ ರಜೆಗೆ ಊರಿಗೆ ಹೋಗುತ್ತಿದ್ದ ಪ್ರೇಮಿಗಳಿಬ್ಬರು ಟ್ರೈನು ಹೊರಡಲು ಸಮಯವಿದ್ದುದರಿಂದ ಕೈಯಲ್ಲಿ ದೊಡ್ಡ ದೊಡ್ಡ ಲಗೇಜುಗಳನ್ನು ಹಿಡಿದು ಸಿನಿಮಾ ನೋಡಲು ಬಂದಿದ್ದರು. ಅವರೇನಾದರೂ ರೈಲ್ವೇ ಸ್ಟೇಷನ್ನಿನಲ್ಲಿ ಇಷ್ಟು ಲಗೇಜುಗಳೊಂದಿಗೆ ಕುಳಿತಿದ್ದರೆ, ಎಲ್ಲಿಗೋ ಓಡಿಹೋಗಲು ತಯಾರಾದವರಂತೆ ಕಾಣುತ್ತಿದ್ದರು. ಬಹುಶಃ ಅವರು ಹೀಗೆ ರಜೆಗೆ ಹೋಗುವುದು ಅದೇ ಮೊದಲ ಸಲವಾಗಿರಲಿಲ್ಲ. ಟಾಕೀಸಿನ ಕತ್ತಲಲಿ ಅಕ್ಕಪಕ್ಕದಲಿ ಕುಳಿತಾಗ ಮುತ್ತು ನೀಡಲು ಎಷ್ಟು ಡಿಗ್ರಿಯವರೆಗೆ ತಿರುಗಬೇಕು, ಸೊಂಟದಲ್ಲಿ ಕೈ ಜಾರಿಸಲು ಸೀಟಿನಲ್ಲಿ ಎಷ್ಟು ಇಂಚು ಕೆಳಗೆ ಜಾರಬೇಕು ಎಂಬ ಸಂಪೂರ್ಣ ಲೆಕ್ಕಾಚಾರಗಳು ಇದ್ದಂತಿತ್ತು. ರಜೆ ಮುಗಿಯುವವರೆಗೆ ಅದೆಷ್ಟು ದಿನಗಳ ಕಾಲ ದೂರವಿರಬೇಕಿತ್ತೋ ಏನೋ ಸಿನಿಮಾ ಪ್ರಾರಂಭವಾದ ಕೂಡಲೇ ಇಬ್ಬರೂ ಅಷ್ಟೂ ದಿನಗಳಿಗಾಗುವಷ್ಟು ನೆನಪುಗಳನ್ನು ಕಲೆಹಾಕತೊಡಗಿದರು. ಅವನ ಕೈಬೆರಳುಗಳು ಯುದ್ಧಕ್ಕೆ ಹೊರಟ ಕಾಲಾಳುಗಳಂತೆ ಅವಳ ದೇಹದ ಮೂಲೆ ಮೂಲೆಗಳನ್ನೆಲ್ಲಾ ಆಕ್ರಮಿಸುತ್ತಿರಲು, ಆತ ನೆನಪುಗಳನ್ನು ದೋಚುತ್ತಾ ಶ್ರೀಮಂತನಾದನು, ಶರಣಾದ ಅವಳು ಯಾವ ಪ್ರತಿರೋಧವಿಲ್ಲದೇ ಬೆರಳುಗಳು ಬಂದಲ್ಲಿಗೆ ದಾರಿ ಮಾಡಿಕೊಟ್ಟು ತನ್ನನ್ನೇ ಅರ್ಪಿಸಿಕೊಂಡು ಅವನ ಸಾಮಂತಳಾದಳು. ಸಿನಿಮಾವಿನ್ನೂ ಮುಗಿದಿರಲಿಲ್ಲ, ಆದರೆ ಟ್ರೈನಿಗೆ ಸಮಯವಾಗಿತ್ತು. ಇಬ್ಬರೂ ನಡುವಿನಲ್ಲೆ ಎದ್ದು ಹೊರಟರು. ಕೈಲಿದ್ದ ಲಗೇಜಿನ ಜೊತೆಗೆ ಎದೆಯೊಳಗೆ ನೂರಾರು ನಾಟಿ ನೆನಪುಗಳ ಲಗೇಜು ಭರ್ತಿಯಾಗಿತ್ತು.

ಕಥೆ ೪

ನನ್ನಲ್ಲಿಗೆ ಬರುವವರು ಪ್ರೇಮಿಗಳಷ್ಟೇ ಅಲ್ಲ. ಒಮ್ಮೊಮ್ಮೆ ಮದುವೆಯಾದ ದಂಪತಿಗಳು ಇಲ್ಲಿ ಬಂದು ಕೂರುವುದಿದೆ. (ಬೇರೆ ಬೇರೆಯವರ ಜೊತೆಗೆ ಮದುವೆಯಾಗಿದ್ದವರೂ ಬರುವುದುಂಟು, ಅದರ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ) ಕಳೆದ ತಿಂಗಳು ನವವಿವಾಹಿತರಿಬ್ಬರು ಬಂದಿದ್ದರು. ಹೊಸದಾಗಿ ಮದುವೆಯಾಗಿದ್ದರಲ್ಲವೇ, ಅತ್ತೆ ಮನೆಯಲ್ಲಿ ಬಯಸಿದ ಏಕಾಂತ ಸಿಕ್ಕಂತಿರಲಿಲ್ಲ. ಅವರಿಬ್ಬರ ಹಣೆಬರಹದಲ್ಲಿ ಹನಿಮೂನು ಬರೆದಂತಿರಲಿಲ್ಲ. ದೇವಸ್ಥಾನಕ್ಕೆ ಪೂಜೆಗೋ, ಆಸ್ಪತ್ರೆಯ ಚೆಕಪ್ಪಿಗೋ ಹೋಗುವೆವೆಂದು ಹಳೆ ಸಿನಿಮಾದವರ ಹಾಗೆ ಸುಳ್ಳು ಹೇಳಿ ಬಂದಂತಿತ್ತು. ಹೆಂಡತಿಯಿನ್ನೂ ಚಿಕ್ಕವಳು. ಚೂರು ಬಾಯಿಬಡುಕಿ, ಗಂಡ ಮೂವತ್ತು ದಾಟಿದ ಮೌನೇಶ್ವರ. ಇಬ್ಬರಲ್ಲೂ ಆಗಷ್ಟೇ ಸಲುಗೆ ಮೊಳಕೆ ಹೊಡೆದು ಬೆಳೆಯುತ್ತಿತ್ತು. ಅವಳಿನ್ನು ಅವನನ್ನು ಏನೆಂದು ಕರೆಯಬೇಕೆಂದು ನಿರ್ಧರಿಸಿದಂತಿರಲಿಲ್ಲ. ಅದರ ಬಗ್ಗೆಯೇ ಚರ್ಚೆ ನೆಡೆಯುತ್ತಿತ್ತು. ಅಷ್ಟರಲ್ಲಿ ಸಿನಿಮಾ ಶುರುವಾಯಿತು. ನೋಡಿದರೆ ಸಿನಿಮಾದಲ್ಲಿದ್ದ ಹೀರೋ ಹೆಸರೂ, ಪಕ್ಕದ ಸೀಟಿನಲ್ಲಿ ಕುಳಿತಿದ್ದ ಹೀರೋ ಹೆಸರೂ ಎರಡೂ ಒಂದೇ. ಸಿನಿಮಾದಲ್ಲಿ ಅವನ ಹೆಸರು ಬಂದಾಗಲೆಲ್ಲಾ ಇವಳೂ ಅದೇ ಧಾಟಿಯಲ್ಲಿ ಅವನ ಹೆಸರನ್ನು ಕೂಗುತ್ತಾ ರೇಗಿಸತೊಡಗಿದಳು. ಗಂಡ ನೋಡುವ ತನಕ ನೋಡಿ, ಅವಳನ್ನು ಹತ್ತಿರಕ್ಕೆ ಎಳೆದುಕೊಂಡು ಮುತ್ತಿಟ್ಟುಬಿಟ್ಟ. ಇದನ್ನು ನಿರೀಕ್ಷಿಸದ ಅವಳಿಗೆ ಒಮ್ಮೆಲೆ ರೋಮಾಂಚನವಾಯಿತು. ಮಾತು ನಿಂತುಹೋಯಿತು. ಅಮ್ಮನ ಮುಂದೆ ನಿಂತು ಮಾತನಾಡಲೂ ಹೆದರುವ ತನ್ನ ಗಂಡನಿಗೆ ಇಷ್ಟೊಂದು ಧೈರ್ಯವೇ ಎನ್ನಿಸಿತು. ಅವಳ ನಾಚಿದ್ದನ್ನು ಕಂಡು ಒಳಗೊಳಗೆ ಹಿಗ್ಗಿದ ಪತಿಮಹಾಶಯ ಕೈಯನ್ನು ಚಾಚಿ ಕೆನ್ನೆಯ ಬಳಿಗೆ ತಂದಾಗ ಅದನ್ನು ಎರಡು ಕೈಗಳಲ್ಲಿ ಕೆಳಗೆ ತಂದು ಉಳಿದದ್ದನ್ನು ಮನೆಯಲ್ಲಿ ಮುಂದುವರೆಸುವಂತೆ ಕಣ್ಣಲ್ಲೇ ಬೇಡಿಕೊಂಡಳು ಹೆಂಡತಿ. ಆತ ತನ್ನ ತಾಕತ್ತು ತೋರಿಸಿದವನಂತೆ, ಆಯ್ತು ಎನ್ನುತ್ತಾ ಮೀಸೆ ತಿರುವಿ ಸಿನಿಮಾ ನೋಡತೊಡಗಿದ, ಅವಳು ಮನಸ್ಸಿನಲ್ಲೇ ಮನೆ ದೇವರನ್ನು ನೆನಪಿಸಿಕೊಂಡಿದ್ದಳು.

ನಿಮಗೆ ಈ ಕಥೆಗಳು ಹೊಸದಾಗಿದ್ದರೇ ನಿಮ್ಮನ್ನು ಒಂದು ಪ್ರಶ್ನೆ ಕಾಡುತ್ತಿರಬಹುದು, ನನ್ನಲ್ಲಿ ಬಂದು ಕುಳಿತ ಮಾತ್ರಕ್ಕೆ ಅವರೇನು ಅದೃಷ್ಯರಾಗಿಬಿಡುತ್ತಾರಾ? ನಾನೇನು ಮಾಯಾ ಕುರ್ಚಿಯಾ ಎಂದು. ಖಂಡಿತ ಇಲ್ಲ. ನನ್ನನ್ನು ಹಾಗೆ ಮಾಯಾ ಕುರ್ಚಿಯೆಂದುಕೊಂಡು ಕುಳಿತು ಸಿಕ್ಕಿಬಿದ್ದವರೂ ಇದ್ದಾರೆ. ಅದೊಮ್ಮೆ ಪಕ್ಕದಲ್ಲಿ ಸೀನಿಯರ್ ಸಿಟಿಜನ್ ಒಬ್ಬರು ಕುಳಿತಿದ್ದಾರೆಂಬ ಪರಿವೆಯೂ ಇಲ್ಲದೇ ಯೌವನದ ಹೊಳೆ ಹರಿಸುತ್ತಿದ್ದ ಜೋಡಿಯೊಂದಕ್ಕೆ ಅಂಕಲ್ ಇಡೀ ಟಾಕೀಸಿಗೆ ಕೇಳುವಂತೆ ಉಗಿದು ಉಪ್ಪು ಹಾಕಿದ್ದರು. ಹೊಳೆಗೆ ಅಣೆಕಟ್ಟು ಕಟ್ಟಿದ್ದರು. ಇನ್ನೊಮ್ಮೆ ಸಿನಿಮಾದ ಕ್ಲೈಮ್ಯಾಕ್ಸಿನ ಹಿನ್ನಲೆ ಸಂಗೀತದ ಹಿನ್ನಲೆಯಲ್ಲಿ ಪ್ರೇಮಿಗಳು ಕ್ಲೈಮ್ಯಾಕ್ಸ್ ತಲುಪುತ್ತಿದ್ದ ಸದ್ದುಗಳು, ಇದ್ದಕ್ಕಿದ್ದಂತೆ ಸಂಗೀತ ನಿಂತಾಗ ಚಿತ್ರಮಂದಿರದಲೆಲ್ಲಾ ವ್ಯಾಪಿಸಿ ಇಡೀ ಚಿತ್ರ ಮಂದಿರ ನನ್ನ ಕಡೆಗೆ ತಿರುಗಿತ್ತು. ಪ್ರೇಮಿಗಳಿಗೆ ರಸಭಂಗವಾಗಿತ್ತು. ಮೊನ್ನೆ ಮೊನ್ನೆಯಷ್ಟೇ ತುಂಬಿದ ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಮುಗಿದು ಕೆಲವೇ ನಿಮಿಷದಲಿ ಲೋಕವನೇ ಮರೆತು ತುಟಿಗೆ ತುಟಿಯೊತ್ತಿದ್ದ ಪ್ರೇಮಿಗಳ ಮೇಲೆ ವಾಚ್ ಮನ್ ಕೆಂಪಣ್ಣ ಬಂದು ಟಾರ್ಚು ಬಿಟ್ಟಾಗ ಕೆಂಪಗಿದ್ದ ಆ ಹೊರರಾಜ್ಯದ ಜೋಡಿ ಮತ್ತಷ್ಟು ಕೆಂಪಾಗಿ ಹೋಗಿದ್ದರು. ಕೆಂಪಣ್ಣನಿಗೆ ಇದೆಲ್ಲಾ ಸಾಮಾನ್ಯವಾಗಿದ್ದರಿಂದ ಮೆಲ್ಲಗೆ ಗೊಣಗಿಕೊಳ್ಳುತ್ತಾ ತಾನು ಇತರೆ ಸೀಟುಗಳ ಕಡೆಗೆ ಟಾರ್ಚು ಬಿಡುತ್ತಾ ಮುಂದೆ ಹೋದ. ಆದರೆ ನಾಚಿಕೆಯಾದ ಆ ಇಬ್ಬರೂ ಅಲ್ಲಿ ಕೂರಲಾರದೇ ಅವಸರದಲ್ಲಿ ಎದ್ದು ಹೊರಗೆ ಹೊರಟು ಕತ್ತಲೆಯಲ್ಲಿ ಎತ್ತೆತ್ತಲೋ ಸಾಗಿ ಯಾರದೋ ಕಾಲೆಡವಿ ಬಿದ್ದು, ಮತ್ಯಾರದೋ ಕಾಲು ತುಳಿದು ಬಾಗಿಲಿನ ಕಡೆಗೆ ಕೆಂಪಣ್ಣನೇ ಮತ್ತೆ ಬಂದು ಬ್ಯಾಟರಿ ಬಿಟ್ಟು ಅವರಿಗೆ ಹೊರಕ್ಕೆ ದಾರಿ ತೋರಿಸಿದ್ದ.

#@#

ಹೇಳುತ್ತಾ ಹೋದರೆ, ಈ ಕಥೆಗಳಿಗೆ ಕೊನೆಯೇ ಇಲ್ಲ. ವರ್ಷಕ್ಕೆ ಎಷ್ಟು ಸಿನಿಮಾಗಳು ಬಿಡುಗಡೆಯಾಗುತ್ತವೆಯೋ ಅದರ ಹತ್ತರಷ್ಟು ಕಥೆಗಳು ನನ್ನ ಬಳಿಯಿವೆ. ಇಲ್ಲಿ ಕೂತಿದ್ದು ಎದ್ದು ಹೋದ ಸಾವಿರಾರು ಜನರ ಕಥೆಗಳು. ಇಲ್ಲಿ ಕುಳಿತಿರುವಷ್ಟು ಹೊತ್ತು ಅದು ಅವರ ಕಥೆಗಳು. ಅವರು ಎದ್ದು ಹೋದ ಮೇಲೆ ಅವರ ಕಥೆಗಳು ನನ್ನ ಕಥೆಗಳು. ನಾ ನಿಮಗೆ ಹೇಳಬೇಕಾದ ಕಥೆಗಳು. ಹೇಳದಿದ್ದರೇ ಕತ್ತಲಲ್ಲೇ ಕಳೆದು ಹೋಗುವ ಕಥೆಗಳು.

ಸದ್ಯಕ್ಕಿಷ್ಟು ಸಾಕು. ಸಿನಿಮಾ ಮತ್ತೆ ಶುರುವಾಗುತ್ತಿದೆ. ಅಗೋ, ಆ ಜೋಡಿ ಪಾಪ್‌ಕಾರ್ನು, ಕೂಲ್‌ಡ್ರಿಂಕು ಹಿಡಿದು ಇತ್ತಲೇ ಬರುತ್ತಿದೆ. ಈ ಏಸಿಯ ಚಳಿಯಲ್ಲೂ ತಾವು ಬೆಚ್ಚಾಗಾಗಿ ನನ್ನನ್ನೂ ಬಿಸಿ ಮಾಡುತ್ತಾ ಮತ್ತೊಂದು ಹೊಸ ಕಥೆ ಹೇಳಲು.

Wednesday, June 20, 2018

ಅಳಿಯ ಅಲ್ಲ ಮಗನ ಗಂಡ


ಅಳಿಯ ಅಲ್ಲ ಮಗನ ಗಂಡ




‘ಆ ಹುಡುಗನ ಹೆಸರು ಮಂಜುನಾಥ ಅಂತ, ನಮ್ಮ ಶ್ರೀಹರಿ ಉಪನಯನದಲ್ಲಿ ನಾನವನ್ನ ಮೊದಲು ನೋಡಿದ್ದು’ ವಾಸು ಅಂಕಲ್ ಗೋಡೆಯ ಮೇಲಿದ್ದ ಶ್ರೀಹರಿಯ ಪೋಟೋವನ್ನೇ ದಿಟ್ಟಿಸಿ ನೋಡುತ್ತಾ ನೆನಪಿಸಿಕೊಂಡರು. ಆತನ ಪೋಟೋ ನೋಡುತ್ತಾ ಅವರು ಫ್ಲಾಷ್ ಬ್ಯಾಕಿಗೆ ಹೋದದ್ದು ಸಿನಿಮೀಯ ರೀತಿಯಲ್ಲಿ ಇತ್ತು. ವಸುಧಾ ಆ ಪೋಟೋ ನೋಡಿದಳು. ಆ ಪೋಟೋದಲ್ಲಿ ಶ್ರೀಹರಿಗೆ ಐದು ಆರು ವಯಸ್ಸಿರಬಹುದು. ದುಂಡು ದುಂಡಗೆ ಒಳ್ಳೆ ಬಿಳಿ ಆಲುಗಡ್ಡೆಯ ತರ ಇದ್ದ. ಮ್ಯಾಟ್ರಿಮನಿ ಸೈಟಿನಲ್ಲಿ ಹಾಕಿದ ಪೋಟೋದಲ್ಲೂ ಥೇಟು ಅದೇ ದುಂಡು ಮುಖವೇ ಇದ್ದದ್ದಲ್ಲವೇ. ವಸುಧಾ ಅದೇ ಫೋಟೋ ನೋಡುತ್ತಾ ಅವಳ ಫ್ಲಾಷ್ ಬ್ಯಾಕಿಗೆ ಹೋದಳು.

ಭಾರತ್ ಮ್ಯಾಟ್ರಿಮನಿಯಲ್ಲಿ ಮೂವತ್ತು ದಾಟಿದ್ದ ಹುಡುಗಿಯರಿಗೂ ಒಳ್ಳೊಳ್ಳೆ ಗಂಡುಗಳು ಸಿಗುತ್ತಾರೆಂದು ವಸುಧಾಳ ಸೋದರತ್ತೆ ಒತ್ತಿ ಒತ್ತಿ ಹೇಳಿ ಅಕೌಂಟ್ ಕ್ರಿಯೇಟ್ ಮಾಡಿಸಿದ್ದರು. ದಿನಪತ್ರಿಕೆಯೊಂದರಲ್ಲಿ ರಿಪೋರ್ಟರ್ ಆಗಿದ್ದ ವಸುಧಾಗೆ ಯಾವತ್ತೂ ಮದುವೆಯಾಗಬೇಕು ಎಂದು ಅನ್ನಿಸಿರಲಿಲ್ಲ. ಹಾಗಂತ ಆಗಬಾರದು ಅಂತಲೂ ಇರಲಿಲ್ಲ. ಅತ್ತೆಯ ಒತ್ತಾಯಕ್ಕೆ ಹುಟ್ಟಿದ ಅಕೌಂಟಿನಿಂದ ಪ್ರತಿದಿನವೂ ಬರುತ್ತಿದ್ದ ಇಮೇಲುಗಳನ್ನು ಕಂಡು ಅದೊಂದು ದಿನ ಹಾಗೆ ಸುಮ್ಮನೆ ಕುತೂಹಲಕ್ಕೆ ಚೆಕ್ ಮಾಡಿದ್ದಳು. ಬಂದಿದ್ದ ರಿಕ್ವೆಸ್ಟುಗಳಲ್ಲೆಲ್ಲಾ ಸ್ವಂತ ಬ್ಯೂಟಿ ಪಾರ್ಲರ್ ನೆಡೆಸುತ್ತಿದ್ದ ಬ್ರಾಹ್ಮಣ ವರ ಶ್ರೀಹರಿಯ ಪ್ರೋಫೈಲು ಇಂಟರೆಸ್ಟಿಂಗ್ ಆಗಿ ಕಂಡಿತ್ತು. ಹುಡುಗ ನೋಡಲು ರೋಜಾ ಸಿನಿಮಾದ ಅರವಿಂದ ಸ್ವಾಮಿಯಂತಿದ್ದ. ವಸುಧಾಳಿಗೆ ಇಷ್ಟವಾಯ್ತು. ಕೂಡಲೇ ಕರೆ ಮಾಡದೇ ಎರಡು ದಿನ ತನ್ನನ್ನು ತಾನೇ ಸತಾಯಿಸಿಕೊಂಡರೂ ನಂತರ ತಡೆಯಲಾರದೆ ಅವನಿಗೆ ಮೆಸೇಜ್ ಮಾಡಿದಳು. ಆದಾದ ಮೇಲೆ ಎಲ್ಲಾ ಬೇಗ ಬೇಗನೆ ನೆಡೆದು ವಾಟ್ಸಪ್ಪಿನಲ್ಲಿ ಪೋಟೋ ವಿನಿಮಯಗಳಾಗಿ ಮೂರು ವಾರ ಕಳೆದು ಶ್ರೀಮಾನ್ ಶ್ರೀಹರಿಯವರು ಕುಟುಂಬ ಸಮೇತರಾಗಿ ವಧು ಪರೀಕ್ಷೆಗೆ ಬಂದಿದ್ದರು.

ಜಾತಕ ಕೂಡಿತ್ತು. ಮಾತು ಕತೆ ನೆಡೆದಿತ್ತು. ಮಾಡಿದ್ದ ಕೇಸರಿಬಾತು ಸ್ವಲ್ಪ ಜಾಸ್ತಿಯೇ ಸಿಹಿಯಾಗಿತ್ತು. ಎಲ್ಲವೂ ಸರಿಯಾಗಿ ಜ್ಯೋಯಿಸರು ಡೀಲು ಕುದುರಿಸುವುದರಲ್ಲಿದ್ದರು. ಆಗಲೇ ಇಬ್ಬರೂ ಪ್ರೈವೇಟ್ ಆಗಿ ಮಾತನಾಡಲು ಹೋಗಿದ್ದು. ವಸುಧಾ ಮೊದಲೆ ಬಾಯಿಬಡುಕಿ. ಬಾಲ್ಕನಿಗೆ ಕಾಲಿಡುತ್ತಿದ್ದ ಹಾಗೆಯೇ ಅದೇನೋ ಹೇಳಲು ಬಾಯಿತೆರೆದಳು. ಆದರೆ ಶ್ರೀಹರಿ ಅವಳಿಗಿಂತಲೂ ಮೊದಲು ಮಾತನಾಡಿದ.

‘ನೋಡಿ ಮಿಸ್ ವಸುಧಾ, ಸುತ್ತಿ ಬಳಸಿ ಹೇಳದೇ ನೇರ ವಿಷಯಕ್ಕೆ ಬರ್ತೀನಿ’ ಅಲ್ಲಿಯವರೆಗೂ ನಗುಮುಖದಲ್ಲಿದ್ದ ಆತ ಇದ್ದಕ್ಕಿದ್ದಂತೆ ಸೀರಿಯಸ್ ಆಗಿ ಮಾತನಾಡಿದ. ‘ನನಗೆ ಈ ಮದುವೆ ಇಷ್ಟ ಇಲ್ಲ. ‘ಆಕ್ಚುಯಲಿ, ಐ ಆಮ್ ಅಲ್ ರೆಡಿ ಇನ್ ಎ ರಿಲೇಷನ್ ಶಿಪ್’  ನೇರವಾಗಿ ವಿಷಯ ಹೇಳಿ ಅವಳ ಮುಖದಲ್ಲಾಗುವ ಬದಲಾವಣೆಗೆ ಕಾಯತೊಡಗಿದ.

‘ಇಷ್ಟು ಕ್ಯೂಟ್ ಆಗಿರೋ ಹುಡುಗನ್ನ ಹುಡುಗೀರು ಇಷ್ಟು ದಿನ ಬಿಡ್ತಾರಾ’ ಅಂತ ಮನಸ್ಸಿನಲ್ಲೇ ಅಂದುಕೊಂಡ, ನೊಂದುಕೊಂಡ ವಸುಧಾ, ಮುಖ ಸಣ್ಣಗೆ ಮಾಡಿ ‘ಅಯ್ಯೋ ಇದ್ರೆ ಮನೇಲಿ ಹೇಳಬೇಕು ತಾನೆ? ಅದನ್ನ ಬಿಟ್ಟು ಮ್ಯಾಟ್ರುಮನಿ ಸೈಟಲ್ಲಿ ಅಕೌಂಟ್ ಯಾಕ್ರೀ ಕ್ರಿಯೇಟ್ ಮಾಡ್ಕೊಂಡಿದೀರಾ?’ ಎಂದು ಕೇಳಿದಳು

‘ಪ್ಲೀಸ್ ಕೋಪ ಮಾಡ್ಕೋಬೇಡಿ, ಅದನ್ನ ಅಪ್ಪ ಅಮ್ಮನೇ ಹ್ಯಾಂಡಲ್ ಮಾಡ್ತಾರೆ, ಅವರೇ ಹುಡುಗೀನು ಸೆಲೆಕ್ಟ್ ಮಾಡೋದು, ನೋಡೋಕೆ ಬರದೆ ರಿಜೆಕ್ಟ್ ಮಾಡಿದ್ರೆ ಕಾರಣ ಹೇಳಬೇಕು ಅಂತ ಇಲ್ಲಿಯವರೆಗೂ ಬಂದೆ’.

‘ಹೀಗೆ ಎಷ್ಟು ಜನ ಹುಡುಗೀರ ಮನೇಲಿ ಕೇಸರಿಬಾತ್ ತಿಂದು ಬಾಲ್ಕನಿಯಲ್ಲಿ ನಿಮ್ಮ ಲವ್ ಮ್ಯಾಟರ್ ಹೇಳಿದೀರಾ?’

‘ನೀವು ಮೂರನೇ ಹುಡುಗಿ. ಬೇರೆ ಬೇರೆ ಹುಡುಗಿಯರಿಗೆ ಬೇರೆ ಬೇರೆ ರೀಸನ್ ಹೇಳಿದ್ದೆ. ಬಟ್ ನಿಮ್ಮ ಹತ್ರ ನಿಜನೇ ಹೇಳಬೇಕು ಅನ್ನಿಸ್ತು, ಹೇಳ್ಕೊಂಡೆ. ಹೋಪ್ ಯು ಅಂಡರಸ್ಟಾಂಡ್’’

‘ಓಹೋ ಈಗೇನು ಸತ್ಯ ಹರೀಶ್ಚಂದ್ರ ಮೈಮೇಲೆ ಬಂದಿದ್ದಾ? ಹೀಗೆ ಮಾಡೋದ್ರು ಬದಲು ಡೈರೆಕ್ಟಾಗಿ ಹುಡುಗಿಯನ್ನ ಕರ್ಕೊಂಡು ಹೋಗಿ ಅಪ್ಪ ಅಮ್ಮನ ಎದುರು ನಿಲ್ಲಿಸಿ ಹೇಳಬೇಕು ತಾನೆ?’ ವಸುಧಾಳ ದನಿ ಪಕ್ಕದ ರೋಡಿಗೂ ಕೇಳಿಸುವಷ್ಟು ಜೋರಾಗಿತ್ತು.

‘ಹುಡುಗಿ ಆಗಿದ್ರೆ ಹೇಳಬಹುದಿತ್ತು, ಬಟ್’ ಒಂದು ಚಿಕ್ಕ ವಿರಾಮ ತೆಗೆದುಕೊಂಡ ಶ್ರೀಹರಿ ಹೇಳಲೋ ಬೇಡವಂತೆ ಯೋಚಿಸಿ ಆಚೀಚೇ ನೋಡುತ್ತಾ ಹೇಳಿದ ‘ಇಟ್ಸ್ ಎ ಹೋಮೋಸೆಕ್ಸುಯಲ್ ರಿಲೇಷನ್ ಶಿಪ್’

ವಸುಧಾಳಿಗೆ ಶಾಕ್ ಆಯಿತು. ಅವನನ್ನೊಮ್ಮೆ ದಿಟ್ಟಿಸಿ ನೋಡಿದಳು. ಮ್ಯಾಟ್ರಿಮನಿ ಸೈಟಲ್ಲಿ ಸಿಗುವ ಗಂಡುಗಳು ಬೋಡು ತಲೆಯಿದ್ದರೂ ವಿಗ್ ಹಾಕಿಕೊಂಡೋ, ಶೋಕಿಗೆ ಬಾಡಿಗೆ ಕಾರು ತೆಗೆದುಕೊಂಡೋ ಅಥವಾ ಡೂಪ್ಲಿಕೇಟ್ ಸ್ಯಾಲರಿ ಸರ್ಟಿಫಿಕೇಟುಗಳನ್ನು ತಂದೋ ಮೋಸ ಮಾಡುತ್ತಾರೆಂದು ಅವರಿವರು ಹೇಳಿದ್ದರು. ಆದರೆ ಈ ರೀತಿಯೂ ಆಗಬಹುದೆಂದು ಊಹಿಸಿರಲಿಲ್ಲ. ಒಳಗೊಳಗೆ ಇಷ್ಟು ಚಂದದ ಹುಡುಗ ತನ್ನ ಕೈತಪ್ಪಿ ಹೋದನಲ್ಲ ಎಂಬ ಹೊಟ್ಟೆ ಕಿಚ್ಚಾಯಿತು. ಇನ್ಯಾವ ಹೆಣ್ಣು ಜಾತಿಗೂ ಈತ ದಕ್ಕುವುದಿಲ್ಲವೆಂದು ಬೇಸರವಾಯಿತು. ಈತ ಹೀಗೆ ಮನೆಯವರಿಗೆ ಹೆದರಿ ಕಡೆಗೆ ಹುಡುಗಿಯನ್ನು ಕಟ್ಟಿಕೊಂಡು ಅವಳ ಬಾಳು ಹಾಳು ಮಾಡುವನೆಂದು ಸಾಮಾಜಿಕ ಕಳಕಳಿ ಜಾಸ್ತಿಯಾದವಳಂತೆ ಸೀದಾ ಕೆಳಗೆ ಹೋದವಳೇ, ಮುಂದಿನ ಪರಿಣಾಮಗಳನ್ನು ಯೋಚಿಸದೇ ಇದ್ದದ್ದು ಇದ್ದ ಹಾಗೆ ಎದೆಗೆ ಒದ್ದಂತೆ ಹೇಳಿ ಬಂದವರ ಎದುರೆಲ್ಲಾ ರಂಪ ರಾದ್ಧಾಂತ ಮಾಡಿಬಿಟ್ಟಳು. ಶ್ರೀಹರಿಯ ತಂದೆ ತಾಯಿಗೆ ವಿಷಯ ಕೇಳಿ ಆಘಾತದ ಜೊತೆಗೆ ಅವಮಾನವಾಗಿ ಅಲ್ಲಿ ನಿಲ್ಲಲಾರದೇ ಹೊರಟುಹೋದರು. ಬಂದಿದ್ದ ವಸುಧಾಳ ನೆಂಟರು ಈಕೆ ಜರ್ನಲಿಸ್ಟ್ ಆಗಿದ್ದು ಸಾರ್ಥಕವಾಯಿತು, ಮೊದಲೇ ಮಹಡಿ ಮೇಲೆ ಹೋಗಿ ಆತನಿಂದ ವಿಷಯ ಬಾಯಿ ಬಿಡಿಸಿದಳೆಂದು ಸಮಾಧಾನಪಟ್ಟುಕೊಂಡರು. ವಸುಧಾ ಅಂದು ರಾತ್ರಿಯೇ ಮ್ಯಾಟ್ರಿಮನಿ ಅಕೌಂಟು ಡಿಲೀಟು ಮಾಡಿಬಿಟ್ಟಳು.

ಆದಾಗಿ ಕೆಲವು ದಿನ ತಾನು ಸರಿಯಾದುದನ್ನೇ ಮಾಡಿದ್ದೇನೆ ಎಂದು ತನ್ನಲ್ಲೇ ಸುಳ್ಳು ಹೇಳಿಕೊಳ್ಳುತ್ತಿದ್ದ ವಸುಧಾಗೆ ಮೊನ್ನೆಯಿಂದೇಕೋ ತಾನು ಹಾಗೆ ಮಾತನಾಡಬಾರದಿತ್ತು ಎನ್ನಿಸತೊಡಗಿತ್ತು. ಪಾಪ ಅವನೇನು ತಪ್ಪು ಮಾಡಿರಲಿಲ್ಲ, ಮದುವೆಗೆ ಮೊದಲೇ ಇದ್ದ ವಿಷಯ ಹೇಳಿಕೊಂಡಿದ್ದ, ಅದಕ್ಕೆ ತಾನು ಫಸ್ಟ್ ನೈಟಿನಲ್ಲಿ ವಿಷಯ ಗೊತ್ತಾದಷ್ಟು ರಿಯಾಕ್ಟ್ ಮಾಡಬಾರದಿತ್ತು ಎನ್ನಿಸಿತು. ತಿಂಗಳ ನಂತರ ಕ್ಷಮೆ ಕೇಳಬೇಕೆಂದೆನಿಸಿ ಶ್ರೀಹರಿಗೆ ಕರೆ ಮಾಡಿದ್ದಳು. ಆದರೆ ಆತ ಪೋನು ಕಟ್ ಮಾಡಿದ್ದ. ಮತ್ತೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಮಾಡಿದ್ದ. ವಸುಧಾ ಹಠಮಾರಿ. ಆತನ ವಿಳಾಸ ಹುಡುಕಿ ನೇರ ಮನೆಯ ಬಾಗಿಲಿಗೆ ಹುಡುಕಿಕೊಂಡು ಬಂದಿದ್ದಳು. ಶ್ರೀಹರಿ ಮನೆಯಲ್ಲಿರಲಿಲ್ಲ. ಬಾಗಿಲು ತೆರೆದ ಶ್ರೀಹರಿಯ ಅಮ್ಮನಿಗೆ ಅವಳನ್ನು ಅಲ್ಲೆ ಉಗಿದು ಓಡಿಸೋಣವೆನ್ನಿಸಿತು. ಆದರೆ ಅವಳ ಮುಖದಲ್ಲಿದ್ದ ದೈನ್ಯತಾ ಭಾವವನ್ನು ಕಂಡು ಮನಸ್ಸು ಬರಲಿಲ್ಲ. ವಸುಧಾ ಒಂದೆರಡು ನಿಮಿಷ ಮಾತನಾಡಬೇಕೆಂದು ಕೇಳಿದಾಗ ಒಳಗೆ ಕರೆದರು. ವಾಸು ಅಂಕಲ್ ಟಿವಿ ನೋಡುತ್ತಾ ಕುಳಿತಿದ್ದವರು, ವಸುಧಾ ಬಂದದ್ದು ಕಂಡು ಟಿವಿ ಆಫ್ ಮಾಡಿದರು. ಶಾಸ್ತ್ರಕ್ಕೆ ಕೊಟ್ಟ ಕಾಫಿ ಕುಡಿದಿದ್ದಾದದ ಮೇಲೆ ಮುಜುಗರದಿಂದಲೇ ಮಾತು ಆರಂಭಿಸಿದ ವಸುಧಾ ತಾನು ಅವತ್ತು ಹಾಗೆ ಮಾತನಾಡಿದ್ದಕ್ಕೆ ಕ್ಷಮೆ ಕೇಳಿದಳು. ಸ್ವಲ್ಪ ಹೊತ್ತು ಏನೂ ಮಾತನಾಡದೇ ಕುಳಿತಿದ್ದ ಅವರ ಅಂಕಲ್ ನಿಟ್ಟುಸಿರಿಟ್ಟು ಶ್ರೀಹರಿಯ ಪೋಟೋ ನೋಡಿದರು. ಆಗಲೇ ಅವರ ಫ್ಲಾಷ್ ಬ್ಯಾಕ್ ಬಿಚ್ಚಿಕೊಂಡದ್ದು.

‘ಮಂಜುನಾಥ ಮತ್ತೆ ಶ್ರೀಹರಿ, ಹೈಸ್ಕೂಲಿಂದಲೂ ಕ್ಲೋಸು ಫ್ರೆಂಡ್ಸು. ಇಬ್ಬರೂ ಮೂರು ಹೊತ್ತು ಅಂಟಿಕೊಂಡೇ ಇರೋರು. ಇವನು ಅವರ ಮನೆಗೆ ಹೋಗೋನು, ಅವನು ನಮ್ಮನೇಗೆ ಬರೋನು. ನಾಗರಬಾವಿಯಲ್ಲೆಲ್ಲೋ ಅವರ ಮನೆ.  ಲಿಂಗಾಯಿತರ ಜನ, ಹೇಗೂ ಮೀನೂ ಮಾಂಸ ತಿನ್ನಲ್ಲ, ಒಟ್ಟಿಗೆ ಇದ್ರೆ ಇರಲಿ ಬಿಡಿ ಅಂತ ನಾವೂ ಸುಮ್ಮನಿದ್ದು ಬಿಟ್ವಿ’ ವಾಸು ಅಂಕಲ್ ಫ್ಲಾಷ್ ಬ್ಯಾಕು ಮುಂದುವರೆಯಿತು. ವಸುಧಾಳಿಗೆ ಆಗಲೇ ಈ ಮಂಜುನಾಥ ಯಾರಿರಬಹುದೆಂಬುದರ ಕ್ಲೂ ಸಿಕ್ಕಿತ್ತು. ಸುಮ್ಮನೇ ಕೇಳಿಸಿಕೊಳ್ಳತೊಡಗಿದಳು.

‘ಆಮೇಲೆ ಕಾಲೇಜು ಮುಗಿತು, ಎಲ್ಲ ಹುಡುಗ್ರು ಇಂಜಿನಿಯರಿಂಗು ಮೆಡಿಕಲ್ಲು ಓದ್ತಿದ್ರೆ ಇವನು ಅದೇನೋ ಕೋರ್ಸು ಮಾಡಿ ಬ್ಯೂಟಿ ಪಾರ್ಲರ್ ಮಾಡ್ತೀನಿ ಅಂದ. ನಮಗೂ ಏನೋ ಅವನಿಷ್ಟ ಮಾಡಿಕೊಳ್ಳಲಿ ಅಂತ ಸಪೋರ್ಟ್ ಮಾಡಿದ್ವಿ. ಯಾವಾಗಲೂ ಹುಡುಗೀರ ತರ ಕ್ರೀಮು ಲೋಷನ್ನು ಅಂತ ಅದರದ್ದೇ ಚಿಂತೆ ಅವನಿಗೆ. ಅವರಮ್ಮನ ಮೇಲೆ ಅವನ ಎಕ್ಸಪರಿಮೆಂಟುಗಳು. ಅದಕ್ಕೆ ಒಬ್ಬಳನ್ನ ಕಟ್ಕೊಂಡು ಇದೆಲ್ಲಾ ಅವಳ ಮೇಲೆ ಮಾಡ್ಕೊ ಅಂತ ಹೆಣ್ಣು ನೋಡೋಕೆ ಶುರು ಮಾಡಿದ್ವಿ. ಆದ್ರೆ ಅವನೇ ಗಂಡು ನೋಡ್ಕೊಂಡು ಬಿಟ್ಟಿದ್ದ’ ಎಂದು ಹೇಳಿ ಅಂಕಲ್ ಮೌನವಾದರು.

ಕೆಳದಿದ್ದರೂ ಅವರು ಅಷ್ಟೆಲ್ಲಾ ಕಥೆ ಹೇಳಿದ ಮೇಲೆ ವಸುಧಾಳಿಗೆ ತಾನೂ ಏನಾದರೂ ಮಾತನಾಡಬೇಕೆನ್ನಿಸಿತು. ‘ಅದರಲ್ಲಿ ತಪ್ಪೇನಿಲ್ಲವಲ್ಲ ಅಂಕಲ್, ಇದು ಅವರವರ ಫಿಸಿಕಲ್ ನೀಡ್ಸ್ ಅಷ್ಟೆ. ಹುಡುಗ್ರು ಹುಡುಗ್ರನ್ನ, ಹುಡುಗೀರು ಹುಡುಗೀರನ್ನ ಓಪನ್ ಆಗಿ ಮದುವೆ ಆಗ್ತಿದ್ದಾರೆ ಈಗೆಲ್ಲಾ,’ ಎಂದಳು.

‘ಅಯ್ಯೋ ಅದೆಲ್ಲಾ ಬೇರೆ ದೇಶದಲ್ಲಮ್ಮಾ, ನಮ್ಮ ದೇಶದಲ್ಲಿ ಇದೆಲ್ಲಾ ಎಲ್ಲಿ ಒಪ್ಕೊತಾರೆ, ಥೂ ಅಸಹ್ಯ’ ಕಿಚನ್ನಿನ ಬಾಗಿಲಿನಲ್ಲಿದ್ದ ನಿರ್ಮಲಾ ಆಂಟಿ ಮೊದಲ ಬಾರಿಗೆ ಮಾತನಾಡಿದ್ದರು.

‘ಅದರಲ್ಲಿ ಅಸಹ್ಯ ಏನಿದೇ ಆಂಟಿ? ಇದೆಲ್ಲಾ ಹಿಂದೆ ಇಂದಾನು ಇದೆ. ಪುರಾಣದಲ್ಲಿ ವಿಷ್ಣು ಮೋಹಿನಿ ಆದಾಗ ಶಿವನಿಗೆ ಇಷ್ಟ ಆಗಲಿಲ್ಲವಾ? ಅದೆಲ್ಲಾ ಆಗಲೇ ಇತ್ತು. ಈಗ ಜನಕ್ಕೆ ಮುಜುಗರ ಅಷ್ಟೆ. ಎಲ್ಲಾ ಬದಲಾಗತ್ತೆ, ಇಲ್ಲೂ ಅದ್ರ ಬಗ್ಗೆ ಹೋರಾಟಗಳೆಲ್ಲಾ ನೆಡಿತಿವೆ’ ವಸುಧಾ ಪಕ್ಕಾ ಜರ್ನಲಿಸ್ಟ್ ಧಾಟಿಯಲ್ಲಿ ವಾದಿಸಿದಳು. ಇವಳೇನಾದರೂ ತನಗೆ ಸೊಸೆಯಾಗಿದ್ದರೆ ಇಬ್ಬರು ಹೇಗೆ ಜಗಳವಾಡಬಹುದಿತ್ತೆಂದು ನಿರ್ಮಲಾ ಆಂಟಿ ಕಲ್ಪಿಸಿಕೊಂಡರು.

‘ಆದ್ರೂ, ಕೇಳಿದವರಿಗೆಲ್ಲಾ ನಮ್ಮ ಶ್ರೀಹರಿ ಆ ವಿಷ್ಣುವಿನ ಅಪರಾವತಾರ ಅಂತ ಹೇಳೋಕಾಗತ್ತಾ?’ ಅಂಕಲ್ ಹೇಳಿದರೂ ಅವರು ತಮಾಷೆ ಮಾಡಿದರೋ, ಸೀರಿಯಸ್ ಆಗಿ ಹೇಳಿದರೋ ವಸುಧಾಳಿಗೆ ಗೊತ್ತಾಗಲಿಲ್ಲ.
‘ಹಾಗಲ್ಲ ಅಂಕಲ್, ಯಾರು ಏನಂತಾರೆ ಅಂತ ತಲೆ ಕೆಡಿಸಿಕೊಳ್ಳೋದಾ? ಈಗೆಲ್ಲಾ ಮೊದಲಿನ ಹಾಗಿಲ್ಲ. ಈಗೆಲ್ರೂ ಮಾಡ್ರನ್ ಆಗಿ ಥಿಂಕ್ ಮಾಡ್ತಾರೆ.’

ವಸುಧಾ ಇನ್ನು ಮುಂದಕ್ಕೆ ಹೇಳುತ್ತಿದ್ದಳು. ಅಷ್ಟರಲ್ಲಿ ಆಂಟಿ ಮಧ್ಯೆ ಬಾಯಿ ಹಾಕಿದರು. ‘ಅಯ್ಯೋ ನಾವು ಮಾಡ್ರನ್ನೇ ಕಣಮ್ಮ, ನಂದೂ ಫೇಸುಬುಕ್ಕಿದೆ, ಇವರೂ ಕರೆಂಟು ಬಿಲ್ಲು ಕಟ್ಟೋಕೆ ಕ್ಯೂ ನಿಲ್ಲಲ್ಲ, ಪೇಟಿಎಂನಲ್ಲೆ ಕಟ್ತಾರೆ, ಮೊನ್ನೆ ಮೊನ್ನೆ ತಾನೆ ಅಮೇಜಾನಿಂದ ಕುಕ್ಕರ್ ತರಿಸಿದೆ. ನೀ ಸಿಕ್ಕಿದೆಯಲ್ಲಾ ಆ ಮ್ಯಾಟ್ರಿಮನಿ ಸೈಟಲ್ಲೂ ನಾವೇ ಅಕೌಂಟು ಮಾಡಿದ್ದು. ಮನೆಗೊಬ್ಳು ಮುದ್ದು ಮುದ್ದಾಗಿರೋ ಸೊಸೆ ತರೋಣಾ ಅನ್ಕೊಂಡಿದ್ವಿ ಅಷ್ಟರಲ್ಲಿ..’ ಆಂಟಿ ನಿಲ್ಲಿಸಿದರು.

‘ಈ ನನ್ನ ಮಗ ಅಳಿಯನ್ನ ತಂದ್ಬಿಟ್ಟ.’ ಅಂಕಲ್ ಮುಂದುವರೆಸಿದರು.

‘ಥೂ ಅದೇನೆಂತ ಮಾತಾಡ್ತೀರಿ ನೀವು?’ ಅಳಿಯ ಅಂತೆ ಅಳಿಯ’ ಆಂಟಿ ಮುಜುಗರದಿಂದ ಒಳಗೆ ಹೋದರು.

‘ಒಳ್ಳೆ  ಕತೆ ಆಯ್ತಲ್ಲ, ಇನ್ನೇನು ಹೇಳಬೇಕು? ಅಳಿಯ ಅಲ್ಲದಿದ್ರೆ ಮಗನ ಗಂಡ ಅನ್ಬೇಕಲ್ಲಾ’ ಎಂದು ಮುಗುಳ್ನಕ್ಕು ವಸುಧಾಳನ್ನು ನೋಡಿದರು. ವಸುಧಾ ತಾನೂ ಮುಗುಳ್ನಕ್ಕು ಹೊರಡಲು ಎದ್ದು ನಿಂತಳು.


Wednesday, February 14, 2018

ಮೆಹಂದಿ ಬಣ್ಣದ ನೈಲ್ ಪಾಲಿಷು

ಮೆಹಂದಿ ಬಣ್ಣದ ನೈಲ್ ಪಾಲಿಷು


ಮಡಿಕೇರಿ - ಬೆಂಗಳೂರು ಹೆದ್ದಾರಿಯ ಪಕ್ಕದಲ್ಲಿದ್ದ ಕಾಫಿ ಶಾಪೊಂದರ ಬಳಿ ಕಾರು ನಿಲ್ಲಿಸಿದ ಜಯಂತ. ಕೆಳಗಿಳಿದ ಚೈತ್ರ ಆಕಾಶ ನೋಡಿದಳು. ಸಂಜೆಯ ಸೂರ್ಯ ಮೋಡಗಳ ಹಿಂದೆ ಸರಿದಿದ್ದ. ಆತನ ಬಿಸಿಲಿನ ಅಡ್ಡಬಂದ ತಪ್ಪಿಗೇನೋ ಎಂಬಂತೆ ಮೋಡಗಳು ತಾವೂ ನಿಧಾನವಾಗಿ ಕಪ್ಪಾಗತೊಡಗಿದ್ದವು. ಮಳೆ ಬರುವಂತೆ ಕಂಡಿತು. ಗಾಟ್ ಸೆಕ್ಷನ್ ದಾಟಿ ಬಂದಿದ್ದರು. ಬೇಗ ಮನೆ ಸೇರಬಹುದಿತ್ತು. ಇಲ್ಲಿ ಗಾಡಿ ನಿಲ್ಲಿಸಿದ್ದೇಕೆ ಎಂದುಕೊಂಡಳು ಚೈತ್ರ. ಡ್ರೈವ್ ಮಾಡಿ ನಿದ್ದೆ ಹತ್ತಿದಂತಾಗಿತ್ತೇನೋ, ಜಯಂತ ಮೈಮುರಿಯುತ್ತಾ ಕಾಫಿ ಶಾಪ್ ಕಡೆಗೆ ಹೊರಟ.

ಜಯಂತ ಕಾಫಿ ಶಾಪಿನ ಬಾಗಿಲ ಬಳಿಗೆ ಹೋಗಿ ನಿಂತವನು ಹಿಂದೆ ತಿರುಗಿ ಅಲ್ಲೇ ನಿಂತ ಚೈತ್ರಾಳ ಕಡೆ ಪ್ರಶ್ನಾರ್ಥಕವಾಗಿ ನೋಡಿದ. ಚೈತ್ರ ಹೊರಗೆ ಹಾಕಿದ್ದ ಟೇಬಲ್ಲಿನ ಬಳಿಗೆ ನೆಡೆದು ಇಲ್ಲೇ ಕೂರೋಣ ಎಂಬಂತೆ ಸನ್ನೆ ಮಾಡಿದಳು. ವೇಟರನ್ನು ಕರೆದ ಜಯಂತ ತಾನೂ ಹೋಗಿ ಚೇರ್ ಎಳೆದುಕೊಂಡು ಕುಳಿತ. ತನ್ನ ವ್ಯಾನಿಟಿ ಬ್ಯಾಗಿನಿಂದ ಪೋನ್ ಹೊರಗೆ ತೆಗೆದ ಚೈತ್ರ ಕೈ ಮೇಲೆತ್ತಿ ನೆಟ್ ವರ್ಕ್ ಹುಡುಕಲು ಪ್ರಯತ್ನಿಸುತ್ತಿದ್ದಳು. ಜಯಂತ ಅವಳನ್ನೇ ನೋಡುತ್ತಾ ಕುಳಿತ.

ಮೆನು ಕಾರ್ಡ್ ತಂದ ವೇಟರ್ ಅದನ್ನು ಜಯಂತನಿಗೆ ನೀಡಿದ. ಜಯಂತ ಒಂದು ಕಾಫಿ ಆರ್ಡರ್ ಮಾಡಿ ಚೈತ್ರಾಳ ಕಡೆಗೆ ನೋಡಿದ.

“ನನಗೆ ಐಸ್ ಕ್ರೀಮ್ ತಿನ್ನಬೇಕೆನ್ನಿಸುತ್ತಿದೆ” ದುಪ್ಪಟ್ಟವನ್ನು ಹೊದ್ದುಕೊಳ್ಳುತ್ತಾ ಹೇಳಿದಳು.

“ಇಷ್ಟೊಂದು ಥಂಡಿಯಿದೆ, ಐಸ್ ಕ್ರೀಂ ಬೇಕಾ?” ಜಯಂತ ಕೇಳಿದ.

ಚೈತ್ರ ಮತ್ತೇನು ಹೇಳುವುದು ಎಂಬಂತೆ ಮೆನು ನೋಡತೊಡಗಿದಳು. ಏನು ಇಷ್ಟವಾಗಲಿಲ್ಲವೆಂಬಂತೆ ಮೆನು ಟೇಬಲ್ಲಿನ ಮೇಲಿಟ್ಟು ‘ನನಗೂ ಕಾಫಿ’ ಎಂದಳು. ವೇಟರ್ ಆರ್ಡರ್ ತೆಗೆದುಕೊಂಡು ಹೋದ. ಜಯಂತ ಮತ್ತೊಮ್ಮೆ ಆಕಳಿಸಿ ಪೋನ್ ತೆಗೆದು ಮೇಲ್ ಚೆಕ್ ಮಾಡುತ್ತಾ ಕುಳಿತ. ಚೈತ್ರಾಳಿಗೆ ಆ ಸಂಜೆ, ಗಾಳಿ, ಮೋಡಗಳು, ಕಾಫಿಶಾಪು ಎಲ್ಲವೂ ಬೋರಾದಂತೆ ಅನ್ನಿಸಿತು.

“ಜಯ್, ಈ ನೈಲ್ ಪಾಲಿಷ್ ಹೇಗಿದೆ?” ಚೈತ್ರ ತನ್ನ ಕೈಗಳನ್ನು ಮುಂದೆ ಚಾಚಿ ಕೇಳಿದಳು

“ಚೆನ್ನಾಗಿದೆ” ಇದ್ದಕ್ಕಿದ್ದಂತೆ ಬಂದ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ.

“ನೆನ್ನೆ ಮೆಹಂದಿಗೆ ಮ್ಯಾಚ್ ಆಗಲಿ ಅಂತ ರೆಡ್ ಹಾಕಿಕೊಂಡಿದ್ದು. ಆದರೆ ಇವತ್ತು ಮೆಹಂದಿ ಸ್ವಲ್ಪ ಡಾರ್ಕ್ ಆದಂತೆ ಕಾಣಿಸುತ್ತಿದೆ’ ಕೈಗಳನ್ನು ಹಿಂದೆ ಮುಂದೆ ತಿರುಗಿಸುತ್ತಾ ತೋರಿಸಿದಳು.

"ಈಗಲೂ ಮ್ಯಾಚ್ ಆಗಿದೆಯಲ್ಲಾ, ಚೆನ್ನಾಗಿದೆ” ಎಂದು ಹೇಳಿ ಮೊಬೈಲ್ ನೋಡುವುದನ್ನು ಮುಂದುವರೆಸಿದ.


ಚೈತ್ರಾಳಿಗೆ ಅವನ ನಿರಾಸಕ್ತಿಯನ್ನು ಕಂಡು ಕಿರಿಕಿರಿಯಾಯಿತು. "ಜಯ್, ನೆನ್ನೆ ಸ್ವಲ್ಪ ರೆಡ್ ಇತ್ತು. ಈಗ ಕಂಪ್ಲೀಟ್ ಮರೂನ್ ಆಗಿದೆ. ನೈಲ್ ಪಾಲಿಷ್ ಮ್ಯಾಚ್ ಆಗ್ತಿಲ್ಲಾ” ಎಂದಳು.

“ಹೌದಾ? ನನಗೇನು ಅಂತ ಡಿಫರೆನ್ಸ್ ಕಾಣಿಸಲಿಲ್ಲ” ಜಯಂತ ಕತ್ತು ಎತ್ತದೇ ಹೇಳಿದ.

“ಹೌದೌದು ನಿನಗೆ ಕಾಣಿಸುವುದಿಲ್ಲ ಬಿಡು” ವ್ಯಂಗ್ಯವಾಗಿ ಹೇಳಿದಳು.

ಈ ಬಾರಿ ಜಯಂತ ಕತ್ತೆತ್ತಲೇ ಬೇಕಾಯಿತು. “ಚೈ ಪ್ಲೀಸ್ ಸಾಕು ಮಾಡು. ನನಗೆ ಅಂತ ಡಿಫರೆನ್ಸ್ ಕಾಣಿಸಲಿಲ್ಲ, ಈಗಲೂ ಕಾಣಿಸುತ್ತಿಲ್ಲ. ಅದನ್ನೇ ಹೇಳಿದೆ.” ಮೊಬೈಲ್ ಒಳಗಿಡುತ್ತಾ ಹೇಳಿದ.

"ನಿನಗೆ ಕಾಣಿಸುವುದಿಲ್ಲ. ನಿನ್ನ ತಲೆಲೀ ಅದೇ ತುಂಬಿಕೊಂಡಿದೆ. ಹುಟ್ಟೋ ಸೂರ್ಯ ಗ್ರೀನ್ ಕಲರ್ ಇದ್ರೂ ನಿಂಗೆ ಡಿಫರೆನ್ಸ್ ಕಾಣಿಸೋದಿಲ್ಲ”

“ಅಯ್ಯೋ ಪ್ಲೀಸ್ ಲಿವ್ ಇಟ್. ಏನಾದ್ರೂ ಖುಷಿ ಖುಷಿಯಾಗಿ ಮಾತನಾಡೋಣ್ವಾ?

“ನಾನು ಖುಷಿ ಖುಷಿಯಾಗಗಿನೇ ನೈಲ್ ಪಾಲಿಷ್ ಬಗ್ಗೆ ಮಾತನಾಡಿದ್ದು ತಾನೆ? ಆದರಿಂದಲೂ ನಿನಗೆ ಬೇಜಾರಾಯ್ತಲ್ಲ”

ಅಷ್ಟರಲ್ಲಿ ವೇಟರ್ ಕಾಫಿ ತಂದಿದ್ದರಿಂದ ಮಾತು ನಿಲ್ಲಿಸಿದರು. ವೇಟರ್ ಇಬ್ಬರ ಮುಂದೆಯೂ ಕಾಫೀ ತಂದಿಟ್ಟು ಹೋದ.

“ಬೇಜಾರಲ್ಲ ಚೈ, ಅರ್ಥ ಮಾಡ್ಕೊ. ಗೊತ್ತಿಲ್ಲ ಅಂತ ಹೇಳಿದೆ ಅಷ್ಟೆ.”

"ಇಟ್ಸ್ ಓಕೆ. ಗೊತ್ತಿಲ್ಲದಿದ್ದರೆ ಪರವಾಗಿಲ್ಲ. ನೆನ್ನೆ ಮೆಹಂದಿ ರೆಡ್ ಇತ್ತು. ಇವತ್ತು ಸ್ವಲ್ಪ ಡಾರ್ಕ್ ಆಗಿ ಮರೂನ್ ಕಾಣಿಸುತ್ತಿದೆ. ನೆನ್ನೆ ಹೀಟ್ ಆಗಿರಬೇಕು. ಎನಿ ವೇ, ಅಂತ ಡಿಫರೆನ್ಸ್ ಏನಿಲ್ಲ." ಜಯಂತ ಏನೋ ಹೇಳಲು ಬಾಯಿ ತೆರೆದವನು ಸುಮ್ಮನಾದ. ಚೈತ್ರ ಇದನ್ನು ನೋಡಿಯೂ ನೋಡದಂತಿದ್ದಳು. ಕೆಲಹೊತ್ತು ಇಬ್ಬರೂ ತಮ್ಮ ಕಪ್ ಒಳಗೆ ಸ್ಪೂನ್ ತಿರುಗಿಸುವ ಶಬ್ದ ಮಾತ್ರ ಕೇಳಿಸುತ್ತಿತ್ತು.

"ಕಾಫಿ ಚೆನ್ನಾಗಿದೆ" ಚೈತ್ರ ಮೌನವನ್ನು ಮುರಿದಳು.

ಜಯಂತ ಕೂಡ ಹೌದೆಂಬಂತೆ ತಲೆಯಾಡಿಸಿದ. ಚೈತ್ರ ನಸುನಕ್ಕಳು.

"ಚೈ, ನಾನು ಹೇಳೋದು ನಿನ್ನ ಒಳ್ಳೆದಕ್ಕೆ. ಯಾಕೆ ಅರ್ಥ ಮಾಡ್ಕೊಳೋದಿಲ್ಲ? ಅದು ತುಂಬಾ ಸಿಂಪಲ್. ನಿನಗೆ ಆಗಿದ್ದು ಗೊತ್ತಾಗೋದು ಇಲ್ಲ."

ಚೈತ್ರ ಏನೂ ಮಾತನಾಡದೆ ತಲೆ ತಗ್ಗಿಸಿದಳು. ಕಾಲಿನಲ್ಲಿದ್ದ ಮೆಹಂದಿ ನೋಡಿಕೊಂಡಳು. ಮತ್ತೆ ಕೈಯಲ್ಲಿದ್ದ ಮೆಹಂದಿ ನೋಡಿಕೊಂಡಳು. ಜಯಂತ ಮಾತು ಮುಂದುವರೆಸಿದ.

ನೀನಿನ್ನು ಚಿಕ್ಕೋಳು. ಇದು ತುಂಬಾ ಬೇಗ ಅನ್ಸಲ್ವಾ ನಿಂಗೇನೆ? ನಾವಿನ್ನು ಸ್ವಲ್ಪ ದಿನ ಆರಾಮಾಗಿರೋದು ಬೇಡ್ವಾ?"

“ಓಹ್ ಅದನ್ನ ತಗೊಂಡ್ರೆ ಆರಾಮಾಗಿ ಇರಬಹುದಲ್ವಾ?"

"ಹೌದು, ಈಗ ಇದೊಂದು ತಲೆನೋವು ಕಡಿಮೆ ಆದ್ರೆ ಆಮೇಲೆ ಯೋಚನೆ ಇಲ್ಲ. ಆರಾಮಾಗಿರೋಣಾ"

"ಓಹೋ, ನಿನ್ನ ತಲೆ ನೋವು ಕಡಿಮೆ ಆಗೋಕೆ ನಾನು ಟ್ಯಾಬ್ಲೆಟ್ ತಗೋಬೇಕಾ?’ ಎಂದು ನಕ್ಕಳು. ಅವಳ ಮಾತಿನಲ್ಲಿದ್ದದ್ದೋ ತುಂಟತನವೋ, ವ್ಯಂಗ್ಯವೋ, ಸಿಟ್ಟೋ ತಿಳಿಯಲಿಲ್ಲ ಜಯಂತನಿಗೆ. ಜಯಂತ ಮತ್ತೆ ಮೌನವಾದ. ಬೇಸರಗೊಂಡಂತೆ ಕಂಡಿತು. ಚೈತ್ರಳಿಗೆ ತಾನು ಮಾತನಾಡಿದ್ದು ಸರಿ ಎನ್ನಿಸಲಿಲ್ಲ.

"ನಮಗೆ ನಿಜವಾಗ್ಲು ಇದೆಲ್ಲಾ ಬೇಕಾ ಜೈ" ಕೊರಗುತ್ತಾ ಕೇಳಿದಳು.

"ನನಗೇನೋ ಬೇಕು ಅನ್ನಿಸುತ್ತೆ"

"ಆದರೂ ನನಗೇನೋ ಒಂಥರ ಭಯ"

"ಮ್ಚ್.. ಭಯ ಪಡೋದೇನಿದೆ? ಇದೆಲ್ಲಾ ತುಂಬಾ ಕಾಮನ್. ಎಷ್ಟೊಂದು ಜನ ಯೂಸ್ ಮಾಡ್ತಾರೆ." ಅಸಹನೆಯಿಂದ ಹೇಳದ ಜಯಂತ.

"ನಂಗೂ ಗೊತ್ತು ಮಾಡ್ತಾರೆ. ಆಮೇಲೆ ಅವರೆಲ್ಲಾ ಫುಲ್ ಆರಾಮಾಗಿದ್ದಾರೆ." ಚೈತ್ರ ಮತ್ತೆ ಅವನನ್ನು ಛೇಡಿಸಿದಳು.

“ನೋಡು ನಿನಗೆ ಇಷ್ಟ ಇಲ್ಲಾ ಅಂದ್ರೆ ಬೇಡ. ನಾನೇನು ನಿಂಗೆ ಫೋರ್ಸ್ ಮಾಡ್ತಿಲ್ಲ. ನಿಂಗೆ ಕಷ್ಟ ಅಂತ ಹೇಳಿದೆ ಅಷ್ಟೆ’

“ಸರಿ ನಾನು ಒಪ್ಪಿದ್ರೆ, ಆಮೇಲೂ ನಾವಿಬ್ರೂ ಖುಷಿಯಾಗಿರ್ತಿವಲ್ಲಾ? ಮೊದಲಿನ ಹಾಗೆ ನನ್ನನ್ನ ಲವ್ ಮಾಡ್ತಿಯಾ ಅಲ್ವಾ?

"ನಾನು ಈಗ್ಲೂ ಲವ್ ಮಾಡ್ತಿದ್ದೀನಿ, ನಿಂಗೂ ಗೊತ್ತು"

"ಗೊತ್ತು, ಆದ್ರೆ ಆಗ ನಾನು ನನ್ನ ಮೆಹಂದಿ ಬಗ್ಗೆ, ನೈಲ್ ಪಾಲಿಷ್ ಬಗ್ಗೆ ಮಾತನಾಡಿದ್ರೆ ಏನೂ ಬೇಜಾರಾಗಲ್ಲ ತಾನೇ?"

"ಬೇಜಾರಗಲ್ಲ. ನನಗೆ ಈಗ್ಲೂ ಬೇಜಾರಾಗ್ತಿಲ್ಲ. ಆದ್ರೆ ಸ್ವಲ್ಪ ಟೆನ್ಷನಲಿದ್ದೇನೆ ಅಷ್ಟೆ. ಅದಕ್ಕೆ ಹಾಗೆ ಮಾತನಾಡಿದೆ."

“ಪಾಪ ನೀನು ಅಷ್ಟೊಂದು ಟೆನ್ಷನ್ ಮಾಡಿಕೊಳ್ಳೋದು ಬೇಡ. ತಗೋತಿನಿ ಬಿಡು. ಹೇಗೂ ನನ್ನ ಆಸೆಗೆಲ್ಲಾ ಏನು ಬೆಲೆ ಇಲ್ಲ” ಚೈತ್ರ ಬೇಸರದಲ್ಲಿ ಹೇಳಿದಳು.

"ಏನ್ ನಿನ್ನ ಮಾತಿನ ಅರ್ಥ?"

"ನನ್ನ ಆಸೆಗೆ ಬೆಲೆ ಇಲ್ಲ ಅಂದೆ"

"ಗಾಡ್, ಚೈತ್ರ..! ನಾನ್ಯಾವಾಗ ಹಾಗೆ ಹೇಳಿದೆ?"

"ನೀನು ಹೇಳಲಿಲ್ಲ, ನಾನೇ ಹೇಳ್ತಿದ್ದೀನಲ್ಲ"

"ನೀನು ಹೀಗೆಲ್ಲಾ ಮಾತನಾಡೋದಾದ್ರೆ ಬೇಕಾಗಿಲ್ಲ ಬಿಡು."

ಚೈತ್ರಾ ಚೇರ್ ಹಿಂದೆ ಸರಿಸಿ ಎದ್ದು ನಿಂತಳು. ಒಂದು ಮಳೆ ಹನಿ ಅವಳ ಕಿರುಬೆರಳ ಮೇಲೆ ಬಿದ್ದಿತು.

“ಜೈ, ಯಾವತ್ತು ನಮ್ಮ ಬದುಕಿಂದ ಖುಷಿ ಕಳೆದುಹೋಗಲ್ಲ ಅಲ್ಲ?"

"ಇಲ್ಲ, ಚೈ ನಾವಿಬ್ರು ಖುಷಿಯಾಗಿರ್ತಿವಿ"

"ನಿಜವಾಗ್ಲೂ?"

"ನಿಜವಾಗ್ಲೂ"

“ಆದರೆ ಒಂದು ಸರಿ ಕಳ್ಕೊಂಡ್ರೆ ಮತ್ತೆ ಯಾವತ್ತೂ ಅದು ವಾಪಸ್ ಬರೋದಿಲ್ಲ ಜೈ”

ಜಯಂತ ಎದ್ದು ಅವಳ ಬಳಿಗೆ ಬಂದ. ಅವಳ ಭುಜದ ಮೇಲೆ ಕೈ ಇಟ್ಟು ಹೇಳಿದ “ನೀನ್ಯಾಕೆ ಹಾಗೆ ಅನ್ಕೊತ್ಯಾ? ಇನ್ನೊಂದೆರಡು ವರ್ಷ ಬಿಟ್ಟು ಮುಂದೆ ಯಾವಾಗಾದ್ರೂ ಬೇಕಾದ್ರೆ ಇನ್ನೊಂದು..” .

"ಇನ್ನೊಂದ್ ಕಾಫಿ ಕುಡ್ಯೋಣ್ವಾ?" ಚೈತ್ರ ಅವನ ಮಾತನ್ನು ಅರ್ಧಕ್ಕೆ ನಿಲ್ಲಿಸಿ ಹೇಳಿದಳು.

"ಸರಿ ಕುಡಿಯೋಣಾ, ಆದ್ರೆ ಒಂದು ತಿಳ್ಕೋ…" ಜಯಂತ ಮತ್ತೇನೋ ಹೇಳಲು ಬಾಯ್ತೆರೆದ. ಅಷ್ಟರಲ್ಲಿ,

"ತಿಳ್ಕೊತಿನಿ.. ಪ್ಲೀಸ್ ಈಗ ಮಾತನಾಡೋದು ನಿಲ್ಸೋಣಾ" ಎಂದಳು ಚೈತ್ರ.

"ಮಳೆ ಶುರುವಾಯ್ತು ಒಳಗಡೆ ಹೋಗೋಣಾ ಬಾ”

ದುಪ್ಪಟವನ್ನು ತಲೆಯ ಮೇಲೆ ಎಳೆದುಕೊಂಡು ಒಳಕ್ಕೆ ನೆಡೆದಳು ಚೈತ್ರ. ಬೇಗನೇ ಕತ್ತಲಾಗಿದ್ದರಿಂದ ಕಾಫಿ ಶಾಪ್ ಒಳಗೆ ಲೈಟ್ ಹಾಕುತ್ತಿದ್ದರು. ಒಳಗೆ ಬಂದ ಚೈತ್ರ ಟೇಬಲೊಂದರಲ್ಲಿ ಕುಳಿತಳು. ಜಯಂತ್ ವಾಷ್ ರೂಮಿಗೆ ಹೋದ. ಶಾಪಿನ ಮತ್ತೊಂದು ಮೂಲೆಯಲ್ಲಿ ಗಂಡ ಹೆಂಡತಿ ಇಬ್ಬರು ಮಕ್ಕಳ ಜೊತೆ ಕುಳಿತಿದ್ದರು. ಪುಟ್ಟ ಮಗುವೊಂದು ಟೇಬಲ್ ಮಾಲೆ ಕುಳಿತು ಟಿಶ್ಯೂ ಪೇಪರನ್ನು ಬಾಯಿಯಲ್ಲಿ ಹಾಕಿಕೊಳ್ಳುತ್ತಿತ್ತು. ಅದರ ತಾಯಿ ಅದನ್ನು ಕಿತ್ತಿಟ್ಟು ಮಗುವನ್ನು ಕೆಳಗಿಳಿಸಿ ಕೂರಿಸಿದಳು. ಚೈತ್ರ ಅವರನ್ನೇ ನೋಡುತ್ತಾ ಕುಳಿತಿದ್ದಳು. ಜಯಂತ ಬಂದ ಮೇಲೆ ಮತ್ತೊಂದು ರೌಂಡ್ ಕಾಫಿ ಬಂದಿತು. ಹೊರಗೆ ಗಾಜಿನ ಮೇಲೆ ಒಂದೊಂದೇ ಹನಿಗಳು ಬೀಳತೊಡಗಿದವು. ಇಬ್ಬರೂ ಕಾಫಿ ಕುಡಿಯುತ್ತಾ ಮಳೆ ಹನಿಗಳನ್ನೇ ನೋಡತೊಡಗಿದರು.

"ನಿನಗೆ ಇಷ್ಟೊಂದು ಬೇಜಾರಾಗೋದಾದ್ರೆ ಬೇಡ ಚೈ. ನನಗೆ ನಿನ್ನ ಖುಷಿ ಇಂಪಾರ್ಟಂಟ್. ನಿನಗೆ ಅದು ಇಂಪಾರ್ಟಂಟ್ ಅನ್ನೋದಾದ್ರೆ, ಫೈನ್. ಆದೇನಾಗತ್ತೋ ಆಗ್ಲಿ."

"ಹಾಗಿದ್ರೆ ನಿಂಗೆ ಅದು ಇಂಪಾರ್ಟಂಟ್ ಅಲ್ವಾ?"

"ನನಗೆ ಇಂಪಾರ್ಟೆಂಟ್ ಅಲ್ಲಾ ಅಂತ ಅಲ್ಲ. ನೀನದನ್ನ ಹ್ಯಾಂಡಲ್ ಮಾಡ್ತಿಯಾ ಅಂತ. ನೀನು ಕಷ್ಟಪಡೋದನ್ನ ನೋಡೋಕ್ಕಾಗಲ್ಲ"

"ಹಾಗಿದ್ರೆ ನೀನೇ ಯಾಕೆ ಇಷ್ಟೊಂದು ಕಷ್ಟ ಕೊಡ್ತಿದ್ದೀಯಾ?"

“ಕಷ್ಟ ಕೊಡ್ತಿಲ್ಲ ಚೈ, ನಿಂಗೆ ಅರ್ಥ ಮಾಡಿಸೋಕೆ ನಾನೇ ಕಷ್ಟ ಪಡ್ತಿದ್ದೀನಿ ಅಷ್ಟೆ ನೀನೇ ಅರ್ಥ ಮಾಡ್ಕೊತಿಲ್ಲ."

"ಜಯ್ ನಂಗೋಸ್ಕರ ಒಂದು ಕೆಲ್ಸ ಮಾಡ್ತಿಯಾ?"

"ನಾನು ನಿನಗೋಸ್ಕರ ಏನು ಬೇಕಾದರೂ ಮಾಡ್ತೀನಿ"

"ಹಾಗಾದ್ರೆ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಸ್ವಲ್ಪ ಬಾಯಿ ಮುಚ್ಚಿಕೊಂಡಿರ್ತಿಯಾ?"

"ಸಾರಿ ಚೈ, ನಾನಿನ್ನು ಅದರ ಬಗ್ಗೆ ಏನೂ ಕೇಳೋದಿಲ್ಲ. ನಿನ್ನಿಷ್ಟ. ಬಟ್ ನೆನಪಿರಲಿ, ಇವತ್ತು ಲಾಸ್ಟ್ ಡೇ."

"ನಾನೀಗ ಕಿರುಚಿಕೊಳ್ತೀನಿ ಅಷ್ಟೆ"

ಜಯಂತ ಮತ್ತೆ ಮಾತನಾಡಲಿಲ್ಲ. ಕತ್ತು ಬಗ್ಗಿಸಿಕೊಂಡು ಕುಳಿತುಬಿಟ್ಟ. ಹೊರಗೆ ಮಳೆ ಹೆಚ್ಚಾಗುತ್ತಿತ್ತೋ ಕಡಿಮೆಯಾಗುತ್ತಿತ್ತೋ ತಿಳಿಯುತ್ತಿರಲಿಲ್ಲ. ದೂರದಲ್ಲಿ ಕುಳಿತಿದ್ದ ಅಪ್ಪ ಅಮ್ಮ ನಾವಿಬ್ಬರು ನಮಗಿಬ್ಬರು ಎಂದು ಪುಟ್ಟ ಮಕ್ಕಳನ್ನು ಎತ್ತಿಕೊಂಡು ಮಳೆಯಲ್ಲೇ ಕಾರಿನ ಬಳಿಗೆ ಓಡಿದರು. ಒಮ್ಮೆ ಕರೆಂಟ್ ಹೋಗಿ ಮತ್ತೆ ಬಂದಿತು. ಜಯಂತ ಕಾಫಿ ಮುಗಿಸಿ ಕಪ್ ಕೆಳಗಿಟ್ಟ.

ಚೈತ್ರ ಮೇಲೆದ್ದು ನಿಂತಳು. ಜಯಂತ ಬಿಲ್ ಕೊಡಲು ಪರ್ಸ್ ತೆಗೆದಾಗ ತಾವು ಉಳಿದುಕೊಳ್ಳಬೇಕಿದ್ದ ಹೋಟೆಲಿನವರು ನೀಡಿದ್ದ ಗಿಫ್ಟ್ ಓಚರುಗಳು ಕೆಳಗೆ ಬಿದ್ದವು. ಜಯಂತ ಅದನ್ನು ಮತ್ತೆ ಪರ್ಸಿನೊಳಗೆ ತುರುಕುತ್ತಾ ಅವಳನ್ನು ನೋಡಿದ. ಚೈತ್ರ ನಕ್ಕಳು. ಜಯಂತ ತಾನೂ ನಗುತ್ತಾ ಮೇಲೆದ್ದು ನಿಂತ. ಇಬ್ಬರೂ ಮಳೆಯಲ್ಲೆ ಓಡಿ ಬಂದು ಕಾರು ಹತ್ತಿ ಕುಳಿತರು. ಚೈತ್ರಾ ತಾನು ತಲೆ ಒರೆಸಿಕೊಂಡು ದುಪ್ಪಟವನ್ನು ಜಯಂತನಿಗೆ ನೀಡಿದಳು.

"ಆರ್ ಯು ಓಕೆ ಜೈ?"

"ನಾನು ಕಂಪ್ಲೀಟ್ಲೀ ಓಕೆ. ಬಟ್ ಐ ಆಮ್ ರಿಯಲೀ ವರೀಡ್ ಅಬೌಟ್ ಯು"

ಜಯಂತನ ಮಾತು ಕೇಳಿ ಚೈತ್ರ ನಿದ್ರೆ ಬಂದವಳಂತೆ ನಟಿಸಿ ಸೀಟಿನ ಮೇಲೆ ಕಣ್ಣು ಮುಚ್ಚಿಕೊಂಡು ಬಿದ್ದಳು. ಜಯಂತ ದುಪ್ಪಟ್ಟ ಅವಳ ಮುಖಕ್ಕೆ ಎಸೆದ. ಚೈತ್ರ ಜೋರಾಗಿ ಗೊರಕೆ ಹೊಡೆಯತೊಡಗಿದಳು.

"ಓಹ್ ರಾತ್ರಿ ನಿದ್ದೆ ಇಲ್ವಲ್ಲಾ ಅದಕ್ಕೆ ಪಾಪ ಬೇಗ ನಿದ್ದೆ ಬಂದ್ಬಿಡ್ತೇನೋ" ಜಯಂತ ನಗುತ್ತಾ ಕಾರು ಸ್ಟಾರ್ಟ್ ಮಾಡಿದ.

ಚೈತ್ರ ಮಲಗಿದ್ದಲ್ಲೇ ನಕ್ಕಳು. ಜಯಂತ ತಾನು ನಗುತ್ತಾ ಕೈ ಚಾಚಿದ. ಚೈತ್ರ ಆತನ ಕೆ ಹಿಡಿದುಕೊಂಡಳು. ಜಯಂತ ಅವಳ ಮೆಹಂದಿ ಗೆರೆಗಳ ಮೇಲೆ ಬೆರಳಾಡಿಸಿದ. ಕಾರು ಬೆಂಗಳೂರಿನ ಕಡೆಗೆ ಹೊರಟಿತು. ಮಳೆ ಹಾಗು ಕತ್ತಲು ಒಬ್ಬರನ್ನೊಬ್ಬರು ತಬ್ಬಿಕೊಂಡು ಇವರನ್ನು ಹಿಂಬಾಲಿಸಿದವು.


(ಅರ್ನೆಸ್ಟ್ ಹೆಮ್ಮಿಂಗ್ ವೇಯವರ 'ಹಿಲ್ಸ್ ಲೈಕ್ ವೈಟ್ ಎಲೆಫಂಟ್ಸ್' ಕಥೆಯಿಂದ ಪ್ರೇರಿತವಾದದ್ದು.)

Wednesday, January 10, 2018

ಮೂಗಿನ ತುದಿಯಲ್ಲೇ ಸೈಟು

ಮೂಗಿನ ತುದಿಯಲ್ಲೆ ಸೈಟು


ಬಹುಶಃ ನಾನು ಆಗಿನ್ನೂ ಸಾನಿಯಾ ಮಿರ್ಜಾ ಫ್ಯಾನ್ ಆಗಿರಲಿಲ್ಲ..!

ನಾವು ಹೈಸ್ಕೂಲಿನಲ್ಲಿದ್ದಾಗ ಪುಸ್ತಕ ಮಾರಲು ಬರುತ್ತಿದ್ದವನೊಬ್ಬ ಹಳೆಯ ಸ್ಪೋರ್ಟ್ಸ್ ಪತ್ರಿಕೆಗಳನ್ನು ಕಡಿಮೆ ಬೆಲೆಗೆ ಮಾರುತ್ತಿದ್ದ. ನಾವು ಅದರಲ್ಲಿದ್ದ ಕ್ರಿಕೆಟ್ ತಾರೆಯರ ಪೋಟೋ ಸಂಗ್ರಹಿಸಲು ಅದನ್ನು ಕೊಳ್ಳುತ್ತಿದ್ದೆವು. ಅಂತಹ ಒಂದು ಹಳೆಯ ಮಲಯಾಳೀ ಪುಸ್ತಕದ ಪುಟಗಳ ನಡುವೆ ನಾನು ಮೊದಲು ಕಂಡದ್ದು ಈ ಹೈದರಬಾದಿನ ಸುಂದರಿಯನ್ನು. ಅಲ್ಲಿಯವರೆಗೂ ನಾನು ಅವಳನ್ನು ಸರಿಯಾಗಿ ನೋಡಿರಲಿಲ್ಲ. ಅವಳ ಆಟವನ್ನೂ ನೋಡಿರಲಿಲ್ಲ. ಆದರೂ ಸುಮ್ಮನೆ ಪೋಟೋ ಚೆನ್ನಾಗಿದೆಯೆಂದು ಇತರೆ ಪೋಟೋಗಳ ಜೊತೆಗೆ ಸಂಗ್ರಹಿಸಿ ಇಟ್ಟಿದ್ದೆ. ಇಟ್ಟು ಮರೆತುಬಿಟ್ಟಿದ್ದೆ.

ನಾಲ್ಕೈದು ವರ್ಷ ಕಳೆದಿತ್ತು. ಕಾಲೇಜಿನಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ಸಿಕ್ಕ ಸಿಕ್ಕವರ ಪೆನ್ಸಿಲ್ ಸ್ಕೆಚ್ಚುಗಳನ್ನು ಗೀಚುವ ಹುಚ್ಚು ಹತ್ತಿತ್ತು. ಮೊದಲು ನನ್ನವಳ  ಚಿತ್ರವನ್ನೇ ಬರೆದೆ. ಸುಮಾರಾಗಿತ್ತು. ಆದರೂ ಅವಳಿಗೇನು ಇಷ್ಟವಾಗಲಿಲ್ಲ. ‘ಥೂ ನಾನೇನು ಅಷ್ಟು ಕೆಟ್ಟದಾಗಿಲ್ಲ ಎಂದು ಬೈದುಬಿಟ್ಟಳು’. ಆದರೂ ನಾನು ಛಲಬಿಡದ ತ್ರಿವಿಕ್ರಮನಂತೆ ಬರೆಯುತ್ತಲೇ ಇದ್ದೆ. ಹೆಚ್ಚಾಗಿ ಸಿನಿಮಾ ತಾರೆಯರ ಚಿತ್ರ ಬರೆಯುತೊಡಗಿದೆ. ಯಾರಾದರೂ ನಾ ಬರೆದ ಚಿತ್ರವನ್ನು ಗುರುತು ಹಿಡಿದರೆಂದರೆ ನನಗೆ ಬಹಳ ಖುಷಿಯಾಗಿ ಮುಂದಿನ ಚಿತ್ರ ತಯಾರು ಮಾಡಿಕೊಳ್ಳುತ್ತಿದ್ದೆ. ಹೀಗೆ ಒಂದು ದಿನ ಸಿನಿಮಾ ತಾರೆಯರು ಬೋರಾಗಿ ಕ್ರಿಕೆಟಿಗರ ಚಿತ್ರಗಳನ್ನು ಬರೆಯಬೇಕೆನ್ನಿಸಿತು. ಆಗ ನನ್ನ ಈ ಕಲೆಕ್ಷನ್ ನೆನಪಿಗೆ ಬಂದಿತು. ಸೂಟ್ ಕೇಸ್ ಕೆಳಗಿಟ್ಟು ಧೂಳೊರೆಸಿ ಅದರಲ್ಲಿದ್ದ ಚಿತ್ರಗಳನ್ನು ಹುಡುಕತೊಡಗಿದೆ. ಸಚಿನ್, ದ್ರಾವಿಡ್, ಧೋನಿ ಅವರೆಲ್ಲರ ಮುಖಗಳ ಪೈಕಿ ಕಣ್ಣು ಕುಕ್ಕಿದ್ದು ಇದೇ ಸುಂದರಿ ಸಾನಿಯಾ ಮಿರ್ಜಾ.

ಪೋಟೋ ಕೈಗೆ ತೆಗೆದುಕೊಂಡು ನೋಡಿದೆ. ಬಹಳ ಸುಂದರವೆನಿಸಿದಳು. ಬರೆಯುತ್ತಾ ಹೋದಷ್ಟು ನನ್ನ ಬಗ್ಗೆ ನನಗೆ ಹೆಮ್ಮೆಯಾಯಿತು. ಖುಷಿ ಹೆಚ್ಚಾಗಿ ಬೆಳಗಿನ ಜಾವದವರೆಗೂ ಬರೆದು ಮಲಗಿಬಿಟ್ಟೆ. ಬೆಳಗ್ಗೆ ಎದ್ದು ನೋಡಿದರೆ ಪಕ್ಕದಲ್ಲಿ ಸಾನಿಯಾ. (ಎಷ್ಟು ಜನ ಹುಡುಗರಿಗೆ ಸಾನಿಯಾ ಪಕ್ಕದಲ್ಲಿ ಏಳುವ ಅವಕಾಶ ಸಿಗುತ್ತದೆ ಹೇಳಿ?)  ಖುಷಿಯಿಂದ ಒರಿಜಿನಲ್ ಪೋಟೋ ಜೊತೆಗೆ ನಾ ಬರೆದ ‘ಕಲಾಕೃತಿ’ಯನ್ನು ಹಿಡಿದು ನೋಡಿದೆ. ಎಲ್ಲಾ ಅದರಂತೆಯೆ ಇತ್ತು. ಆದರೂ ಏನೋ ಕಡಿಮೆಯಾಗಿತ್ತು. ‘ಎರಡು ಚಿತ್ರಗಳಲ್ಲಿರುವ ವ್ಯತ್ಯಾಸ ಗುರುತಿಸಿ’ ಎಂದು ಪತ್ರಿಕೆಗಳಲ್ಲಿ ಬರುತ್ತಿದ್ದ ಆಟದಂತೆ ಒಂದೊಂದೇ ಗುರುತಿಸಿದೆ. ಅವುಗಳ ನಡುವೆ ಕಂಡು ಕಾಣದೆ ಕುಳಿತಿತ್ತಲ್ಲ ಆ ಮುಗುತಿ…!

ಅಲ್ಲೇ ಹಾಸಿಗೆಯ ಮೇಲೆ ಕುಳಿತಲ್ಲಿಯೇ ಪೆನ್ಸಿಲ್ ತೆಗೆದುಕೊಂಡು ನನ್ನ ಸಾನಿಯಾಗೆ ಮೂಗಿನ ಮೇಲೊಂದು ಮುಗುತಿ ಇಟ್ಟೆ. ಏನಾಶ್ಚರ್ಯ..! ನಾನಿಟ್ಟ ಒಂದು ಮುಗುತಿ ಸಾನಿಯಾ ಸೌಂದರ್ಯವನ್ನು ನೂರು ಪಟ್ಟಾಗಿಸಿತ್ತು. ಅವಳನ್ನೇನಕ್ಕೆ ಮೂಗುತಿ ಸುಂದರಿ ಎನ್ನುವರೆಂದು ಆಗ ಅರಿವಾಯ್ತು. ಆ ದಿನದವರೆಗೆ ಸಾನಿಯಾ ಆಟಕ್ಕೆ ಸೋಲದಿದ್ದವನು, ಮೈಮಾಟಕ್ಕೆ ಸೋಲದಿದ್ದವನು, ಮೂಗುತಿಗೆ ಸೋತುಹೋಗಿದ್ದೆ. ಫ್ಯಾನಾಗಿ ಹೋಗಿದ್ದೆ.

ಅಷ್ಟೇ ಆಗಿದ್ದರೆ ಪರವಾಗಿಲ್ಲ, ತಲೆಗೊಂದು ಭಯಂಕರ ಯೋಚನೆ ಬಂದಿತು. ಕೆಲವು ದಿನಗಳ ಹಿಂದೆ ನನ್ನವಳ ಚಿತ್ರ ಬರೆದಿದ್ದೆನಲ್ಲಾ? ಅದನ್ನು ತೆಗೆದು ಅದಕ್ಕೂ ಒಂದು ಮುಗುತಿ ಇಟ್ಟುಬಿಟ್ಟೆ. ಅಬ್ಬಾ..! ಒಮ್ಮೆಲೇ ಮೈ ಜುಂ ಎಂದಿತು. ಸ್ವಲ್ಪ ದೊಡ್ಡದಾಗಿದ್ದ ಅವಳ ಮೂಗಿನ ಮೇಲೆ ಆ ಮೂಗುತಿ ಅದರದ್ದೇ ಒಂದು ಭಾಗ ಎಂಬಷ್ಟು ಠೀವಿಯಿಂದ ಕುಳಿತುಕೊಂಡಿತ್ತು. ಚಿತ್ರವೇ ನೋಡಲು ಇಷ್ಟು ಸುಂದರವಾಗಿರುವಾಗ ಅವಳ ಮೂಗಿನ ಮೇಲೆ ಮುಗುತಿಯಿದ್ದರೆ? ಅಂದು ರಾತ್ರಿ ಅವಳಿಗೆ ಪೋನ್ ಮಾಡಿದಾಗ ಚೆನ್ನಾಗಿ ನೈಸು ಮಾಡಿ ಮೂಗುತಿಯ ವಿಷಯ ಪ್ರಸ್ತಾಪಿಸಿದೆ. ಹಾಕಿಸಿಕೋ ಎಂದೆ. ಅವಳು ಸುತರಾಂ ಒಪ್ಪಲಿಲ್ಲ. ಮೂಗು ಚುಚ್ಚಿದರೆ ನೆಗಡಿಯಾದಾಗ ಬಹಳ ಕಷ್ಟವಾಗುತ್ತದೆ, ಹಾಗೆ ಹೀಗೆ ಎಂದು ಇಲ್ಲ ಸಲ್ಲದ ಕಾರಣಗಳನ್ನು ಹೇಳಿದಳು. ಕಡೆಗೆ ನಾ ಕೊಡುವ ಕಾಟ ತಡೆಯಲಾರದೆ, ರಜೆಗೆ ಹೋದಾಗ ಚುಚ್ಚಿಸಿಕೊಂಡು ಬರುವುದಾಗಿ ಹೇಳಿದಳು.

ಅವಳು ರಜೆಗೆ ಹೋದ ಮೇಲೆ ದಿನಾ ಅದನ್ನೇ ಕೇಳುತ್ತಿದ್ದೆ. ಜಗಳವಾಡುತ್ತಿದ್ದೆ. ಇವತ್ತು ನಾಳೆ ಎಂದು ಮುಂದೆ ಹಾಕುತ್ತಲೇ ಇದ್ದಳು. ಅದೊಂದು ಬೆಳಗ್ಗೆ

‘ಮೂಗು ಚುಚ್ಚಿಸಿಕೊಳ್ಳಲು ಹೋಗುತ್ತಿದ್ದೇನೆ, ನೋವಾಗಿ ಸತ್ರೆ ನಿಂಗೆ ಸಮಾಧಾನ” ಎಂದು ಮೆಸೇಜೊಂದು ಬಂತು.

“ಹೋಗ್ತಿರೋದು ಮೂಗು ಚುಚ್ಚಿಸೋಕೆ ಹೆರಿಗೆಗಲ್ಲಾ” ಎಂದು ರಿಪ್ಲೇ ಮಾಡಿದೆ.

ಥೂ ಎಂದು ಉಗಿದು ಹೋದಳು. ಅಷ್ಟೇ..! ದಿನ ಪೂರ್ತಿ ಪೋನು ಇಲ್ಲ, ಮೆಸೇಜು ಇಲ್ಲ. ನಾನೂ ಏನಾಯ್ತೋ ಏನೋ ಎಂದು ಆತಂಕದಲ್ಲಿ ಪ್ರಯತ್ನಿಸುತ್ತಲೇ ಇದ್ದೆ. ಗುಡ್ ಮಾರ್ನಿಂಗ್ ಗುಡ್ ನೈಟ್ ಮೆಸೇಜುಗಳ ಹೊರತಾಗಿ ಬೇರೆ ಮಾತಿಲ್ಲ, ಕಥೆಯಿಲ್ಲ. ಮತ್ತೆ ಎರಡು ದಿನವಾದ ಮೇಲೆ ಪೋನು ರಿಸಿವ್ ಮಾಡಿದಳು. ಧ್ವನಿ ಬಳಲಿದಂತಿತ್ತು. ಪಾಪ ಮೂಗು ಚುಚ್ಚಿಸಿಕೊಂಡಿದ್ದ ನೋವಿಗೆ ಎರಡು ದಿನ ಜ್ವರ ಬಂದು ಬಿಟ್ಟಿತ್ತು ನನ್ನ ಚೆಲುವೆಗೆ.

ರಜೆ ಕಳೆಯಿತು. ಅವರಿವರ ಮೂಗು ನೋಡುತ್ತಾ ಅವಳು ಬರುವುದನ್ನೇ ಕಾಯುತ್ತಿದ್ದವನು ಕೂಡಲೇ ಅವಳನ್ನು ನೋಡಲು  ಹೋದೆ. ಬಸ್ಸು ಇಳಿಯುತ್ತಿದ್ದಂತೆ ರೋಮಾಂಚನವಾಯಿತು. ಸೂರ್ಯನ ಬೆಳಕು ಮೂಗಿನ ಮೇಲೆ ಪಳಪಳ ಹೊಳೆಯುತ್ತಿತ್ತು. ಅವಳ ಮೂತಿಗೆ ನನ್ನ ಕಲ್ಪನೆಗೂ ಮೀರಿದ ಸೌಂದರ್ಯವನ್ನು ತಂದಿತ್ತು ಆ  ಮೂಗುತಿ. “ನಿನ್ ಮೂಗು ಮೇಲೆ ಒಂದು 60X40 ಸೈಟ್ ಬರೆದುಕೊಡೆ, ಮನೆ ಕಟ್ಕೊತಿನಿ” ಅಂತ ಛೇಡಿಸುತ್ತಿದ್ದ ಆ ಮೂಗಿನ ಮೇಲೆ ಈಗ ಸ್ವರ್ಗ ಕಟ್ಟಲು ಪಾಯ ತೆಗೆದು ಕಲ್ಲು ನೆಟ್ಟತ್ತಿಂತು. ಹಾಗೆಯೇ ನೋಡುತ್ತಾ ನಿಂತುಬಿಟ್ಟೆ.

“ಬರ್ತಿಯೋ ಇಲ್ಲೇ ನಿಂತಿರ್ತಿಯೋ” ಎಂದು ಕರೆದಳು. ಹಾಗೆಯೇ ಅವಳ ಎಡಬದಿಯಲ್ಲೇ ನೆಡೆಯತೊಡಗಿದೆ. ಅವಳಿಗೂ ಮೂಗುತಿಯನ್ನು ನೋಡುತ್ತಿದ್ದೇನೆಂದು ಗೊತ್ತಿದ್ದರೂ ಅದರ ಬಗ್ಗೆ ಏನೂ ಕೇಳದೆ ಜಂಭದಿಂದ ನೆಡೆಯುತ್ತಿದ್ದಳು.

“ಮತ್ತೆ? ಏನು ಸಮಾಚಾರ?” ಕೇಳಿದಳು.

“ನಮ್ಮ ಸೈಟ್ ರಿಜಿಸ್ಟ್ರೇಷನ್ ಆಗೋಯ್ತಲ್ಲ, ಅದೇ ಸಮಾಚಾರ” ಎಂದು ಹೇಳಿ ಕಣ್ ಹೊಡೆದೆ.

“ಯಾವ ಸೈಟು..” ಏನೋ ಕೇಳಲು ಹೊದವಳು ಮರುಕ್ಷಣ ನಾ ಹೇಳಿದ್ದು ಅರ್ಥವಾಗಿ ನಾಚಿದಳು. ಅಂದು ಕೆನ್ನೆಯ ಜೊತೆಗೆ ಮೂಗು ಕೆಂಪಾಗಿತ್ತು, ತೋಳಿಗೆ ಮೆಲ್ಲ ಗುದ್ದಿ ಮೂತಿ ತಿರುಗಿಸಿದಳು. ಜೊತೆಗೆ ಮೂಗುತಿಯೂ ತಿರುಗಿತು. ಆ ಕ್ಷಣಕ್ಕೆ ಭೂಮಿ ಮಾತ್ರ ತಿರುಗುವುದನ್ನು ನಿಲ್ಲಿಸಿಬಿಟ್ಟಿತ್ತು..!!

- ತ್ರಿವಿಕ್ರಮ

Wednesday, August 16, 2017

ದ್ವಾರಕೆಯ ದೋಸೆ, ಮತ್ತವಳ ನೆನಪು


ಸಂಜೆ ಯಾಕೋ ಬೋರಾಗ್ತಿತ್ತು. ಸುತ್ತಾಡಿ ಬರಲು ಹೋದವನಿಗೆ ಅಲ್ಲೇ ಇದ್ದ ಫಾಸ್ಟ್‌ಫುಡ್ ಗಾಡಿ ಕಂಡಿತು. ಸೀದಾ ಹೋಗಿ ಮಸಾಲೆದೋಸೆ ಹೇಳಿದೆ. ರಷ್ ಇರದಿದ್ದರಿಂದ ಆರ್ಡರ್ ಬೇಗ ಬಂತು. ಅದರ ಜೊತೆಗೆ ಇದ್ದಕಿದ್ದಂತೆ ಅವಳ ನೆನಪೂ ಬಂತು. ನನಗೆ ಅದೇನು ಹೊಸದಲ್ಲ. ನಗುತ್ತಾ ದೋಸೆ ಮಧ್ಯಕ್ಕೆ ಮುರಿದೆ. ಆಲುಗಡ್ಡೆ ಪಲ್ಯವನ್ನು ನಂಚಿಕೊಂಡು ಬಾಯಿಗಿಡುತ್ತಿದ್ದಂತೆ ಜಗತ್ತೆಲ್ಲಾ ಕಪ್ಪು ಬಿಳುಪಾಗತೊಡಗಿತು. ಇದೇನಪ್ಪಾ ಅಂದುಕೊಳ್ಳುತ್ತಿರುವಾಗಲೇ ಒಂದು ಫ್ಲಾಷ್‍ಬ್ಯಾಕ್ ಶುರುವಾಯಿತು.

ತುಮಕೂರಿನ ದ್ವಾರಕಾ ಹೋಟಲಿನ ಮೂಲೆಯಲ್ಲಿದ್ದ ಗಡಿಯಾರದ ಕೆಳಗಿನ ಟೇಬಲ್ಲು. ಆ ಕಾರ್ನರ್ ಟೇಬಲ್ಲು ಖಾಲಿಯಾಗುವವರೆಗೂ ಕಾದು ಬಂದು ಕುಳಿತಿದ್ವಿ. ಹೇಳಿ ಕೇಳಿ ನಾವಿಬ್ಬರೂ ಲವರ್ಸ್. ನಮಗೆ ಎಲ್ಲಿ ಹೋದರೂ ಕಾರ್ನರ್ ಸೀಟು, ಕಾರ್ನರ್ ಟೇಬಲ್ಲುಗಳೇ ಬೇಕು. ತಪ್ಪು ತಿಳ್ಕೊಳೋ ಅಂತದ್ದೇನಿಲ್ಲ. ನಾವಿದ್ದ ಟೇಬಲ್ ಮೂಲೆಯಲ್ಲಿದ್ದರಿಂದ ಹೋಟಲಿನ ವೇಟರ್‍ಗಳು ನಮ್ಮನ್ನು ಹುಡುಕಿಕೊಂಡು ಬಂದು ಆರ್ಡರ್ ತೆಗೆದುಕೊಳ್ಳಲು ಸಮಯ ಹಿಡಿಯುತ್ತಿತ್ತು. ವೇಟರ್‍ಗೆ ವೈಟಿಂಗ್ ಮಾಡೋ ನೆಪದಲ್ಲಿ ನಾವು ಚಾಟಿಂಗ್ ಮಾಡಬಹುದೆಂಬ ಲೆಕ್ಕಾಚಾರ. ಆದರೆ ಅವತ್ತು ಚಾಟಿಂಗ್ ಮಾಡುವ ಬದಲು ಸುಮ್ಮನೆ ಒಬ್ಬರ ಮುಖ ಒಬ್ಬರು ನೋಡುತ್ತಾ ಕುಳಿತುಬಿಟ್ವಿ. ಹೀಗೆ ನನ್ನ ಮುಖ ಅವಳು ಅವಳ ಮುಖ ನಾನು ನೋಡಿಕೊಂಡು ಕುಳಿತಿದ್ದರೇ ದ್ವಾರಕಾ ಹೋಟಲ್ಲೇ ದ್ವಾರಕಾ ನಗರಿ, ಒಳಗೆ ನಾನೆ ಕೃಷ್ಣ ಅವಳೇ ರಾಧೆ.(ಕೊಳಲೊಂದು ಮಿಸ್ಸಿಂಗ್) ಹೀಗೆ ಇಮಾಜಿನೇಷನ್ನಲ್ಲಿ ಇರುವಾಗಲೇ ಕಂಸನಂತಿದ್ದ ಒಬ್ಬ ವೇಟರ್ ಬಂದು ‘ಏನ್ ಬೇಕು?’ ಅಂದ.

ಮೆನು ಅಲ್ಲೇ ಇದ್ದರೂ, ಸುಮ್ಮನೆ ಏನೇನಿದೆ ಎಂದು ಕೇಳಿದೆ. ಅವನು ಸೆಂಟರ್‌ಫ್ರಷ್ ತಿಂದವನಂತೆ ರಪರಪನೆ ಇಷ್ಟುದ್ದದ ಲಿಸ್ಟ್ ಹೇಳಿದ. ಹೋಟಲ್ಲಿನಲಿ ನಳಮಹರಾಜನ ನಳಪಾಕವೇ ಇದ್ದರೂ ನಂದು ಬೈ ಡಿಫಾಲ್ಟ್ ಮಸಾಲೆ ದೋಸೆ. ಅದನ್ನೇ ಹೇಳಿದೆ. ಅವಳು ಕೂಡ ನಾನಿಟ್ಟ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಸತಿ ಸಾವಿತ್ರಿಯಂತೆ ಅದನ್ನೇ ಹೇಳಿದಳು. ವೇಟರ್ ಅಲ್ಲಿಂದಲೇ ಜೋರಾಗಿ ಎರಡು ಮಸಾಲೆ ದೋಸೆ ಎಂದು ಹೇಳಿ ಮುಂದಿನ ಟೇಬಲ್ಲಿಗೆ ಹೋದ.

ಅವನು ಹೋದಮೇಲೆ ನಮ್ಮ ಮಾತು, ಕಥೆ, ನಗು ನಾಚಿಕೆ ಮತ್ತೆ ಶುರುವಾಯಿತು. ನಾನೊಬ್ಬನೆ ಮಾತನಾಡುತ್ತಿದ್ದೆ. ಅವಳು ಸುಮ್ಮನೆ ನೋಡಿ ನಗುತ್ತಿದ್ದಳು. ನಾನೇನಾದರು ನಕ್ಕು ಅವಳ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದರೆ ಹಳೆ ಸಿನಿಮಾ ಹೀರೋಯಿನ್‍ಗಳ ತರಹ ನಾಚಿಕೊಂಡು ಕತ್ತು ಬಗ್ಗಿಸುತ್ತಿದ್ದಳು. ಪೋನಿನಲ್ಲಿ ಮಾತನಾಡುತ್ತಾ ಅಷ್ಟೊಂದು ಜೋರು ಮಾಡುವ ಬಜಾರಿ ಇವಳೇನಾ ಎನ್ನಿಸಿತು. ‘ಇದ್ಯಾಕೆ ಹೀಗೆ’ ಎಂದು ಕೇಳಿದರೆ, ‘ನೀನೆದುರುಗಿದ್ದರೆ ನಂಗೆ ಹಾಗೆ’ ಎಂದು ಹೇಳಿ ಮತ್ತೆ ‘ನಾಚಿಕೆ ಮೋಡ್’ ಆನ್ ಮಾಡಿಬಿಟ್ಟಳು.

ಅಷ್ಟರಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ಬಂತು. ಅವಳು ಹಾಸ್ಟಲಿನಲ್ಲಿ ಒಂದು ರೌಂಡ್ ಬಾರಿಸಿ ಬಂದಿದ್ದಳೇನೋ ಸುಮ್ಮನೆ ಪ್ಲೇಟ್ ಮುಂದೆ ಇಟ್ಟುಕೊಂಡು ಕೂತಳು. ನಾನು ದೊಡ್ಡ ಟಾರ್ಗೆಟ್ ಚೇಸ್ ಮಾಡುವ ಓಪನಿಂಗ್ ಬ್ಯಾಟ್ಸ್‍ಮನ್ ತರಹ ಬ್ಯಾಟಿಂಗ್ ಶುರು ಮಾಡಿದೆ. ಇದ್ದಕ್ಕಿದ್ದಂತೆ ಜೋರಾಗಿ ನಗತೊಡಗಿದಳು ‘ಏನಾಯ್ತೇ ಲೂಸು’ ಎಂದು ಕೇಳಿದರೆ ಮತ್ತೆ ಮತ್ತೆ ನಗತೊಡಗಿದಳು. ನನಗೇನು ಕಾಮಿಡಿ ಅಂತ ಅರ್ಥವಾಗಲಿಲ್ಲ. ‘ಲೋ ಕೋತಿ, ದೋಸೆ ತಿನ್ನೋದು ಹಾಗಲ್ಲ ಕಣೋ’ ಎಂದಳು. ನನಗೆ ಅರ್ಥವಾಗಲಿಲ್ಲ? ಮುಖವೆಲ್ಲಾ ಕ್ವಶ್ಚನ್ ಮಾರ್ಕ್ ಮಾಡಿಕೊಂಡು ಅವಳನ್ನು ನೋಡಿದೆ. ಮತ್ತೆ ನಕ್ಕಳು.

ನಕ್ಕು ಸಾಕಾಯ್ತೇನೋ ನಿಧಾನವಾಗಿ ವಿವರಿಸತೊಡಗಿದಳು. ‘ನೋಡು ಮಸಾಲೆ ದೋಸೆಯ ಒಳಗೆ ಪಲ್ಯ ಇರುತ್ತಲ್ವಾ? ಅದಕ್ಕೆ ಹೀಗೆ ಮಧ್ಯದಲ್ಲಿ ಮುರ್ಕೊಂಡು ಹೀಗೆ..’ ಎಂದು ದೋಸೆಯ ಜೊತೆಗೆ ‘ತಿನ್ನಬೇಕು’ ಎನ್ನುವ ಪದವನ್ನು ನುಂಗಿದಳು. ದೋಸೆ ಅಗಿಯುತ್ತಾ ‘ನಿನ್ನ ಹಾಗೆ ತಿಂದರೆ ಲಾಸ್ಟಲ್ಲಿ ಪಲ್ಯ ಹಾಗೆ ಉಳಿಯುತ್ತೆ ಗೂಬೆ’ ಎಂದು ಅಸ್ಪಷ್ಟವಾಗಿ ಹೇಳಿದಳು. ನನಗೆ ಆಶ್ಚರ್ಯವಾಯಿತು. ಅಲ್ಲಿಯವರೆಗೂ ನನಗದು ಗೊತ್ತಿರಲೂ ಇಲ್ಲ, ಯಾರು ಹೇಳಿಕೊಟ್ಟಿರಲೂ ಇಲ್ಲ. ಇವಳು ಸ್ಕೂಲಿನಲ್ಲಿ ಮಕ್ಕಳಿಗೆ ಹೇಳಿಕೊಟ್ಟ ಹಾಗೆ ಹೇಳುವುದನ್ನು ಕೇಳಿ ನಗು ಬಂತು. ಒಂದು ಕ್ಷಣ ಅವಳು ಹೇಳಿದ್ದು ಸರಿ ಎನ್ನಿಸಿದರೂ ಅವಳ ಮುಂದೆ ಸೋಲಬಾರದೆಂದು ‘ಹೇಗೆ ತಿಂದರೂ ಹೊಟ್ಟೆಗೆ ಹೋಗೋದು ತಾನೆ, ಸುಮ್ಮನೆ ತಿನ್ನೇ’ ಎಂದು ಹೇಳಿದೆ. ಆದರೂ ಅವಳು ಬಿಡದೆ ದೋಸೆಯನ್ನು ಮಧ್ಯಕ್ಕೆ ಮುರಿಸಿ ತಿನ್ನಿಸಿದಳು. ಜೊತೆಗೆ ತನಗೆ ಹಸಿವಿಲ್ಲವೆಂದು ಅವಳ ದೋಸೆಯನ್ನು ನನಗೆ ತಿನ್ನಿಸಿದಳು. (ಕಡೆಯಲ್ಲಿ ಬಿಲ್ ಕೊಟ್ಟಿದ್ದು ನಾನೆ ಎಂದು ಬೇರೆ ಹೇಳಬೇಕಿಲ್ವಲಾ?)

ಕಮಿಂಗ್ ಬ್ಯಾಕ್ ಟು ರಿಯಾಲಿಟಿ ಈಗ ಅವಳಿಲ್ಲ. ಆದರೆ ನಾ ತಿನ್ನುವ ಪ್ರತಿ ಮಸಾಲೆ ದೋಸೆಯ ಜೊತೆಗೂ ಅವಳ ನೆನಪಿದೆ. ಅವಳು ಹೇಳಿದ್ದನ್ನು ನೆನಪಿನಲ್ಲಿಟ್ಟುಕೊಂಡು ಅಂದಿನಿಂದ ದೋಸೆಯನ್ನು ಮಧ್ಯಕ್ಕೆ ಮುರಿದು ತಿನ್ನುತ್ತೇನೆ. ಮತ್ತೆ ಅವಳೊಡನೆ ದೋಸೆ ತಿನ್ನುವ ದಿನಕ್ಕಾಗಿ ಕಾಯುತ್ತಿದ್ದೇನೆ.

- ತ್ರಿವಿಕ್ರಮ

Monday, June 19, 2017

ಬ್ಯಾಕ್ ಸ್ಪೇಸ್ ಬೆನ್ನೇರಿ




ಇದ್ದಕ್ಕಿದ್ದ ಹಾಗೆ ಅವನು ಬರೆಯಲು ಕೂರುತ್ತಾನೆ. ಬರೆಯುವುದೆಂದರೆ ಬರೆಯುವುದಲ್ಲ. ಲ್ಯಾಪ್ ಟಾಪಿನ ಪರದೆಯ ಮೇಲಿನ ಅಸ್ತಿತ್ವವಿಲ್ಲದ ಕಾಗದದ ಮೇಲೆ ಕೀಬೋರ್ಡು ಕುಟ್ಟಿ ಪದಗಳ ಮೂಡಿಸುವುದು.. ಕೈಗೆ ಪೆನ್ನು ಕೊಟ್ಟು ಬರೆಯಪ್ಪ ರಾಜ ಅಂದರೆ ನಾಲ್ಕು ಸಾಲು ಬರೆಯುವುದರಲ್ಲಿ ಕೈ ಸೋತು ಅಕ್ಷರಗಳು ಅತ್ತಿತ್ತ ವಾಲತೊಡಗುತ್ತವೆ. ಪೆನ್ನು ಹಿಡಿದು ಬರೆವ ಅಭ್ಯಾಸ ಎಂದೋ ತಪ್ಪಿ ಹೋಗಿದೆ. ಆದರೆ ಲ್ಯಾಪ್ ಟಾಗು ತೆಗೆದಿಟ್ಟುಕೊಟ್ಟರೆ ಮಾತ್ರ ಕೈಬೆರಳುಗಳು ಕುದುರೆಗಳಾಗುತ್ತವೆ. ಕುಂಟೇಬಿಲ್ಲೆ  ಆಟವಾಡತ್ತಿರುವ ಪುಟ್ಟ ಹುಡುಗಿಯ ಕಾಲುಗಳಂತೆ ಅವನ ಕೈಬೆರಳುಗಳು ಆ ಕೀ ಇಂದ ಈ ಕೀಗೆ ನೆಗೆನೆಗೆದು ಖುಷಿಪಡುತ್ತವೆ. ಆ ಕೀಬೋರ್ಡಿನ ಟಪಟಪ ಸದ್ದು ಕೇಳುವುದೆಂದರೆ ಅವನ ಕಿವಿಗೊಂತರ ಹಿತ. ಇದಕ್ಕೆ ಮೊದಲು ಹಾಳೆಯ ಮೇಲೆ ಬರೆಯುತ್ತಿದ್ದಾಗ ಪೆನ್ನಿಂಕಿನ ವಾಸನೆ ಮೂಗಿಗೆ ಹಿತವಾಗುತ್ತಿದ್ದ ಹಾಗೆ.

ಕೀಬೋರ್ಡಿನಲ್ಲಿ ಅಷ್ಟೆಲ್ಲಾ ಪದಗಳಿದ್ದರೂ ಆಗೊಮ್ಮೆ ಈಗೊಮ್ಮೆ ಬಳಸುವ ಬರೆದಿದ್ದನ್ನೆಲ್ಲ ಅಳಿಸುವ ಬ್ಯಾಕ್ ಸ್ಪೇಸು ಕೀ ಬೋರ್ಡಿನಲ್ಲೇ ಅವನಿಗೆ ಬಹಳ ಇಷ್ಟವಾದ ಕೀ. ಈಗ ತಾನೆ ತಾನು ಬರೆದದ್ದನ್ನು ಬರೆದೇ ಇಲ್ಲವೆಂಬಂತೆ ಅಳಿಸಿಬಿಡಬಹುದು. ಮೈಮರೆತು ಮಾಡಿದ ತಪ್ಪುಗಳನ್ನು ಅಳಿಸಿ ಸರಿಮಾಡಿಬಿಡಬಹುದು. ಹೀಗೆ ಹಿಂದೆ ಮಾಡಿದ ತಪ್ಪುಗಳನ್ನು ಅಳಿಸಿ ತಿದ್ದಿಕೊಳ್ಳುವ ಭಾಗ್ಯವನ್ನು ಮತ್ಯಾರು ಕೊಟ್ಟಾರು? ಆದರೆ ಅದೊಂದು ಬ್ಯಾಕ್ ಸ್ಪೇಸ್ ಇಲ್ಲದಿದ್ದರೆ? ಅವನು ಯೋಚಿಸುತ್ತಾ ಕೂರುತ್ತಾನೆ. ಡಾಕ್ಯುಮೆಂಟಿನ ಹಾಳೆಗಳು ತಪ್ಪು ಸರಿ ಪದಗಳಿಂದ ತುಂಬಿ ತುಳುಕುತ್ತಿರುತ್ತು. ಓದುವವರಿಗೆ ಸರಿ ಯಾವುದು ತಪ್ಪು ಯಾವುದು ತಿಳಿಯದೆ ಗೊಂದಲಕ್ಕೀಡಾಗುತ್ತಿದ್ದರು. ಸಾವಿರ ತಪ್ಪುಗಳಿದ್ದರೂ ಹೊಟ್ಟೆಗೆ ಹಾಕಿಕೊಂಡು ಸರಿಯಾದುದನ್ನು ಮಾತ್ರ ಉಳಿಸುತ್ತದೆ ಈ ಬ್ಯಾಕ್ ಸ್ಪೇಸ್. ಅಂದರೆ ತಾನು ಇದುವರೆಗು ಬರೆದ ಪದಗಳೆಷ್ಟಿದೆಯೋ ಅದರ ಹತ್ತರಷ್ಟು ನೂರರಷ್ಟು ಪದಗಳನ್ನು ಈ ಬ್ಯಾಕ್ ಸ್ಪೇಸ್ ನುಂಗಿಕೊಂಡಿದೆ.

ಇದ್ದಕ್ಕಿದ್ದಂತೆ ಅವನ ಕಣ್ಣಿಗೆ ಬ್ಯಾಕ್ ಸ್ಪೇಸ್ ವಿಕಾರ ಹಸಿವಿನ ಪದಭಕ್ಷಕನಂತೆ ಕಾಣತೊಡಗಿತು. ಸರಿಯಾದ ಪದಗಳೋ, ತಪ್ಪು ಪದಗಳೋ ಅಂತೂ ಪದಗಳು ಪದಗಳೇ ತಾನೆ? ಹೀಗೆ ಪದಗಳನ್ನು ನುಂಗುವ ಅಧಿಕಾರ ಈ ಬ್ಯಾಕ್ ಸ್ಪೇಸಿಗೆ ಕೊಟ್ಟವರ್ಯಾರು? ತಾನೋ? ಅಥವಾ ಕಂಪ್ಯೂಟರನ್ನು ಕಂಡುಹಿಡಿದ ವಿಜ್ಞಾನಿಯೋ? ಈ ಬ್ಯಾಕ್ ಸ್ಪೇಸು ನುಂಗಿದ ಪದಗಳಲ್ಲಿ ಒಂದಷ್ಟನ್ನು ಅನ್ ಡೂ ಮಾಡಿ ಕಕ್ಕಿಸಬಹುದು. ಆದರೆ ಮಿಕ್ಕ ಪದಗಳೆಲ್ಲಾ ಎಲ್ಲಿ ಹೋದವು?

ಛೆ..! ತನ್ನ ಕಥೆ ಕವಿತೆಗಳಲ್ಲಿ ತುಂಬಿಸಿದ್ದ ಆದರೆ ಆ ಕ್ಷಣಕ್ಕೆ ಹೊಂದದ ಎಷ್ಟೋ ಪದಗಳನ್ನು ಈ ಬ್ಯಾಕ್ ಸ್ಪೇಸ್ ನುಂಗಿ ನೀರು ಕುಡಿದಿತ್ತೋ? ತನ್ನ ಹಿಂದಿನ ಕಥೆಯಲ್ಲಿ ಊರಿಗೆ ಹೊರಟ ಸುಖೇಶ ಹಿಂತಿರುಗಿ ನೋಡಲು ಜಾನಕಿ ಕಣ್ಣೀರು ಒರೆಸಿಕೊಂಡಳೆಂದು ಬರೆದಿದ್ದನ್ನು ಮುಲಾಜಿಲ್ಲದೆ ಅಳಿಸಿದ ಬ್ಯಾಕ್ ಸ್ಪೇಸು ರಸ್ತೆ ತಿರುವಿನಲ್ಲಿದ್ದ ಊರಿನ ಬೋರ್ಡನ್ನು ನೋಡುವಂತೆ ಮಾಡಿತು. ಇದರಿಂದ ಪಾಪ ಸುಖೇಶನಿಗೆ ಜಾನಕಿಯ ಪ್ರೀತಿ ಆ ಕ್ಷಣಕ್ಕೆ ತಿಳಿಯಲೇ ಇಲ್ಲ. ಹೀಗೆ ಎಷ್ಟು ಕಥೆಗಳ, ಎಷ್ಟು ಪಾತ್ರಗಳ ದಿಕ್ಕನ್ನು ಬದಲಾಯಿಸಿದೆ. ಕಥೆಯ ಪಾತ್ರಗಳೇಕೆ? ನಾನೇ ಇಲ್ಲವೆ? ನನ್ನ ಜೀವನದ ದಿಕ್ಕನ್ನೂ ಬದಲಾಯಿಸಿತು ಇದು.  ಪೀಯೂಸಿಯಲ್ಲಿದ್ದಾಗ ಅವಳಿಗೆ ಬರೆದಿದ್ದ ಇಮೇಲು ಇತ್ತಲ್ಲ? ನೇರವಾಗಿ ಹೇಳಲಾಗದ ಎಷ್ಟೋ ಮಾತುಗಳನ್ನು ಇಮೇಲಿನಲ್ಲಿ ತುಂಬಿಸಿದ್ದೆ. ಆದರೆ ನಾ ಬರೆದಂತೆ ಬರೆದಂತೆ ಅದನ್ನೆಲ್ಲಾ ಏನೋ ಮಹಾ ತಪ್ಪುಗಳೆಂಬಂತೆ ಅಳಸಿಹಾಕುತ್ತಿತ್ತು ಈ ಬ್ಯಾಕ್ ಸ್ಪೇಸ್. ಇದು ಇರದಿದ್ದರೆ ಅಂದೇ ನಾನವಳಿಗೆ ಎಲ್ಲಾ ಹೇಳಿ ಇಷ್ಟು ಹೊತ್ತಿಗೆ….

ಹೀಗೆ ಯೋಚನೆಗಳು ಹರಿಯತೊಡಗಿದಂತೆ ಅವನಿಗೆ ಬ್ಯಾಕ್ ಸ್ಪೇಸಿನ ಮೇಲೆ ದ್ವೇಷ ಹುಟ್ಟತೊಡಗಿತು. ಇನ್ನೆಂದು ತನಗೆ ಅದರ ಸಹವಾಸ ಬೇಡವೆಂದು ನಿರ್ಧರಿಸಿದ. ಬ್ಯಾಕ್ ಸ್ಪೇಸ್ ಒತ್ತುವುದನ್ನೇ ಬಿಟ್ಟುಬಿಟ್ಟ. ತಪ್ಪಿಗಳ ಮೇಲೆ ತಪ್ಪುಗಳಾಗತೊಡಗಿದವು. ಆದರೆ ಅಪ್ಪಿತಪ್ಪಿಯೂ ಪಿ ಅಕ್ಷರದ ತನ್ಅಕ ಹೋದ ಅವನ ಕೈ ಬ್ಯಾಕ್ ಸ್ಪೇಸಿನ ಬೆನ್ನು ಸವರಲಿಲ್ಲ. ತಪ್ಪಾದರೆ ಆಗಲಿ. ಅವಳಿಗೆ ಎಲ್ಲಾ ಹೇಲದೆ ನಾನು ಮಾಡಿದ ತಪ್ಪಿನ ಮಿಂದೆ ಈ ತಪ್ಪುಗಳೆಲ್ಲ ಚಿಕ್ಕವೆನಿಸತೊಡಡಗಿತು. ಆ ತಪ್ಪು ಮಾಡಿಸಿದ್ದು ಿದದೇ ಬ್ಯಾಕ್ ಸ್ಪೇಸ್. ಇಂದು ಆಕೆ ಮತ್ತೊಬ್ಬನ ಪಾಲಾಗಿದ್ದಕ್ಕೆ ಈ ಬ್ಯಾಕ್ ಸ್ಪೇಸೆ ಕಾರಣವೆಂದು ತನಗೆ ತಾನೇ ಹೇಳಿಕೊಂಡ. ಅದರ ಮೇಲೆ ಸೇಡು ತೀರಿಸಿಕೊ್ಳ್ಳುವನಿದ್ದ. ಻ದನ್ನು ಕೀ ಬೋರ್ಟಿನಿಂದ ಕಿತ್ತು ತೆಗೆಯುವನಿದ್ದ. ಪದಭಕ್ಷಕನ ಶಿಕ್ಷಿಸುವನಿದ್ದ.

-ತ್ರಿವಿಕ್ರಮ